ವನದೇವಿ ನಮಿಸುವೆವು ಪ್ರೇಮದಲಿ ಕಾಯೆ
ಗಿಡಮರದಿ ಲತೆಸುಮದಿ ನೆಲೆಸಿರುವ ತಾಯೆ.
ಚಂದದಾ ಹೂಗಳಲಿ ಸೂಸುತ್ತ ಗಂಧ
ಬೆಸೆಯಮ್ಮ ಮಕ್ಕಳಲಿ ಭಾವದಾ ಬಂಧ
– ವನರಾಗ ಶರ್ಮ
ಪ್ರಕೃತಿ ಭಾರತೀಯ ಗ್ರಾಮೀಣರ ಜನಜೀವನದಲ್ಲಿ ಸಹಜವಾಗಿ ಮಿಳಿತಗೊಂಡಿದೆ. ಪಂಚಭೂತಗಳು ಆಧಾರವಾಗಿರುವ ಬದುಕಿನ ಮೂಲ ಕಲ್ಪನೆಯ ಅರಿವು ಗ್ರಾಮೀಣರಿಗಿತ್ತು. ಜಾಗತೀಕರಣದ ಸೂಕ್ಷ್ಮ ಪರಿಣಾಮಗಳು ನಮ್ಮನ್ನು ನಿಧಾನವಾಗಿ ಪರಿಸರದ ಒಳಗಿನಿಂದ ದೂರ ಮಾಡುತ್ತಿವೆ. ದೇವರ ಕಾಡು ಅರಣ್ಯ ರಕ್ಷಣೆಯ ಗುರಾಣಿಯಾಗಿತ್ತು. ಮನುಷ್ಯನಲ್ಲಿದ್ದ ದೇವರ ಕುರಿತ ಭಕ್ತಿ, ಪಾಪ, ಭಯಗಳು ಮರಗಳನ್ನು ರಕ್ಷಿಸುತ್ತಿದ್ದವು. ಬೆಳೆಸುತ್ತಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಲೆನಾಡಿನ ಉತ್ತರ ಕನ್ನಡದ ಹಲವು ತಾಲೂಕುಗಳಲ್ಲಿ ಪೂಜಿಸುವ ಜಟಕ, ಚೌಡಿ, ಹುಲಿಯಪ್ಪ, ವನದೇವಿಗಳು ಪರಿಸರದ ಸಂಕೇತಗಳೇ. ಅವುಗಳ ನೆಲೆವೀಡು ಕಾಡು. ಚೌಡಿಯ ಮೇಲಿನ ಭಕ್ತಿ ಚೌಡಿವನದ ರಕ್ಷಣೆ ಮಾಡುತ್ತಿತ್ತು. ಯಲ್ಲಾಪುರದ ಬಳಗಾರ, ಶೇವ್ಕಾರ, ಡಬ್ಗುಳಿ ಮುಂತಾದ ಊರುಗಳಲ್ಲಿ ಮಣ್ಣಿನಮೇಲೆ ಸಹಜವಾಗಿ ಏಳುವ ‘ಮೊಗೆ’ ಅಥವಾ ಮಡಕೆಯ ಆಕೃತಿಗಳು ದೇವಿಮನೆಗಳಾಗಿ ಪರಿಸರದ ಜೊತೆ ಸ್ಥಳಿಯರ ಸಂಬಂಧದ ಗಂಟನ್ನು ಬಿಗಿಗೊಳಿಸುತ್ತಿವೆ. ಸಾಕಿದ ದನಕರುಗಳ ರಕ್ಷಣೆಯ ಹೊಣೆ ಹುಲಿಯಪ್ಪನದು. ದೊಡ್ಡಹಬ್ಬ ದೀಪಾವಳಿಯ ಸಮಯದಲ್ಲಿ ಹುಲಿಯಪ್ಪನಿಗೆ ಪೂಜೆ. ಮೇಯಲು ಬಿಟ್ಟ ದನ ಕೊಟ್ಟಿಗೆಗೆ ಮರಳದಿದ್ದರೆ ಮನಸಿನಲ್ಲೇ ಹುಲಿಯಪ್ಪನಿಗೆ ಹರಕೆ ಮಾಡಿಕೊಳ್ಳುತ್ತಿದ್ದರು. ಗೋಪಾಲಕ ತನ್ನ ಕಾಣೆಯಾದ ದನದ ಜವಾಬ್ದಾರಿಯನ್ನು ದನಗಳ ಶಿಕಾರಿ ಮಾಡುವ ಹುಲಿಗೆ ವಹಿಸುತ್ತಿದ್ದ! ಹರಕೆಗೆ ದನ ಮರಳಿ ಬಂದ ಸೋದಾಹರಣೆಗಳು ಹಳ್ಳಿಗರ ಬಾಯಲ್ಲಿ ನಲಿದಾಡುತ್ತವೆ.ಅವು ಕಾಕತಾಳೀಯವಾಗಿರಬಹುದಾದರೂ ನಂಬಿಕೆಯನ್ನು ಕಡೆಗಣಿಸುವಂತಿಲ್ಲ. ಈಗ ದನಕರುಗಳನ್ನು ಮೇಯಲು ಹೊರಗೆ ಬಿಡುವ ರೂಡಿ ಕಡಿಮೆಯಾಗಿದೆ. ಕೊಟ್ಟಿಗೆಯಲ್ಲಿ ಇಡೀ ದಿನ ಕೊಟ್ಟಿಗೆಯೊಳಗಿರುವ ಅವುಗಳು ಹುಲಿಯ ಬಾಯಿಗೆ ಆಹಾರವಾಗುವ ಸಂಖ್ಯೆ ತಗ್ಗಿದೆ. ಭಾರತದ ಗ್ರಾಮಗಳಿಗೆ ಜಾಗತೀಕರಣ ನೀಡಿದ ಹೊಡೆತಗಳನ್ನು ಬಹು ಸೂಕ್ಷ್ಮವಾಗಿ ಗಮನಿಸಿದರೆ ಅದು ವನದೇವಿ, ಹುಲಿಯಪ್ಪಗಳ ಹೆಸರಲ್ಲಿ ಪರೋಕ್ಷವಾಗಿ ಪೂಜಿಸಲ್ಪಡುವ ಪರಿಸರದ ಜೊತೆ ಕಡಿಮೆಯಾದ ಗ್ರಾಮೀಣರ ಸಂಬಂಧವನ್ನು ವಿವರಿಸುತ್ತದೆ. ಸಮುದಾಯವನ್ನು ಒಗ್ಗೂಡಿಸುವ ಪರಿಸರದ ಆರಾಧನೆಗಳ ಪ್ರಮಾಣ ಮತ್ತು ಪ್ರಭಾವ ಕಡಿಮೆಯಾಗಿರುವುದು ಇದರ ಸೂಚನೆ.
ಯಲ್ಲಾಪುರದ ಜಕ್ಕಂಬೆ ಜಾತ್ರೆಯೆಂದರೆ ತೊಟ್ಟಿಲು, ಮಿಠಾಯಿ, ಝಗಝಗಿಸುವ ಬಣ್ಣಗಳಿಂದ ಕೂಡಿದ ಚಿತ್ತಾರವಲ್ಲ. ಜಕ್ಕಂಬೆಯ ಸಾಲು ಗುಡ್ಡದ ಬುಡದಲ್ಲಿ ಕಲ್ಲುಕಟ್ಟೆಯ ಮೇಲೆ ನಿತ್ಯ ಹರಿದ್ವರ್ಣದ ನೆರಳಲ್ಲಿ ಆಸೀನಳಾದ ‘ವನದೇವಿ’ಯ ವಾರ್ಷಿಕ ಪರಿಸರ ಹಬ್ಬ. ಯಾವ ಗುಡಿಯಿಲ್ಲ; ಯಾವ ಕಟ್ಟಳೆಯಿಲ್ಲ. ಪಟ್ಟಣಗಳ ಜಾತ್ರೆಯಂತೆ ಸದ್ದುಗದ್ದಲವಿಲ್ಲ. ಶಾಂತ ಪ್ರಕೃತಿಯ ಆರಾಧನೆಯೇ ಈ ಜಾತ್ರೆಯ ಪರಮಗುರಿ. ಬಾನೆತ್ತರಕ್ಕೆ ಬೆಳೆದುನಿಂತ ಬೃಹತ್ ಮರಗಳೇ ವನದೇವಿಯ ಮೇಲ್ಛಾವಣಿ. ಸನಿಹದಲ್ಲೇ ಸದಾ ಕಾಲ ಜುಳುಜುಳು ನಾದಗೈಯುವ ಝರಿ. ಹಸಿರು ಸೂಸುವ ವಾತಾವರಣವೇ ದೇವಿಯ ಆವಾಸ.

ಇಂತಹ ವಿಶಿಷ್ಟ ವನದೇವಿ ನೆಲೆಸಿರುವುದು ಯಲ್ಲಾಪುರ ತಾಲೂಕಿನ ಗಡಿಭಾಗವಾದ ಕೊಡ್ಳಗದ್ದೆ ಗ್ರಾಮದಲ್ಲಿ. ಮಲೆನಾಡಿನ ಹಲವು ಹಳ್ಳಿಗಳಲ್ಲಿ ವನದೇವಿಯ ಹೆಸರಲ್ಲಿ ಪ್ರಕೃತಿ ಪೂಜೆ ಅನಾದಿ ಕಾಲದಿಂದ ನಡೆದುಬಂದ ವಾಡಿಕೆ. ಆದರೆ ಕೊಡ್ಲಗದ್ದೆಯ ಜಕ್ಕಂಬೆಯ ವನದೇವಿ ಹಬ್ಬ ಜನಜನಿತವಾದದ್ದು ‘ವನದೇವಿ ಜಾತ್ರೆ’ಯೆಂದೇ.
ವಿಭಿನ್ನ ಆಚರಣೆ
ಗೊತ್ತುಪಡಿಸಿದ ಹಿಂದಿನ ದಿನವೇ ಊರಜನರೆಲ್ಲ ಒಟ್ಟಾಗಿ ಜಕ್ಕಂಬೆ ಜಾತ್ರೆಯ ಅಂಗಳವನ್ನು ಸ್ವಚ್ಛಗೊಳಿಸಿ, ಗೋಮಯ ಹಾಕಿ ಸಾರಿಸಿ, ಪುಟ್ಟದೊಂದು ರಂಗೋಲಿ ಬಿಡಿಸಿ, ಮಾವಿನ ತೋರಣ ಕಟ್ಟುತ್ತಿದ್ದರು. ಒಂದೊಂದು ಮನೆಯಿಂದ ಒಂದೊಂದು ಬಗೆಯ ಅಡಿಗೆ ಸಾಮಾನು,ಪಾತ್ರೆಗಳನ್ನೂ ಹೊತ್ತು ತರುತ್ತಿದ್ದರು. ಹೆಂಗಳೆಯರೆಲ್ಲ ಸೇರಿ ಅಡಿಗೆ ತಯಾರಿಸುತ್ತಿದ್ದರು. ನಂತರ ಊರ ಹಿರಿಕರೊಬ್ಬರಿಂದ ವನದೇವಿಗೆ ಪೂಜೆ. ಪಕ್ಕದಲ್ಲೆ ಒಲೆ ಹೂಡಿ ಅಡಿಗೆ ತಯಾರಿ. ಎಲ್ಲರೂ ಒಟ್ಟಾಗಿ ಕುಳಿತು ಉಣ್ಣುತ್ತಿದ್ದರು. ಸಂಜೆಯವರೆಗೆ ಜಕ್ಕಂಬೆಯಲ್ಲೆ ಉಳಿದು ಸಲ್ಲಾಪಗೈಯುತ್ತಿದ್ದರು. ವನದೇವಿ ಜಾತ್ರೆಯ ನೆಪದಲ್ಲಿ ಊರ ಮಂದಿ ಒಮ್ಮೆಡೆ ಸೇರಲು ಅವಕಾಶವಾಗುತ್ತಿತ್ತು. ಸಮೀಪದ ಕಟ್ಟಿನಹಕ್ಲ ಶಾಲೆಗಂತೂ ಅಂದು ಅಘೋಶಿತ ರಜೆ. ಎಲ್ಲ ಚಿನಕುರುಳಿಗಳೂ ಬೆಳಿಗ್ಗೆಯಿಂದಲೇ ಜಕ್ಕಂಬೆಯಲ್ಲಿ ಸೇರಿ ಪರಿಸರದ ಸೊಗಡನ್ನು ಅನುಭವಿಸುತ್ತಿದ್ದರು.

ಈಗ ಅದೆಲ್ಲ ನೆನಪು
1984 ರಲ್ಲಿ ಸ್ಥಳೀಯರಾದ ಶಂಕರ ಹೆಗಡೆಯವರಿಗೆ ಜಕ್ಕಂಬೆಯಲ್ಲಿ ವನದೇವಿ ಜಾತ್ರೆ ಏರ್ಪಡಿಸುವಂತೆ ಕನಸಾಯಿತಂತೆ. ಹಲವು ವರ್ಷ ವನದೇವಿ ಪೂಜೆಯನ್ನು ಆಯೋಜಿಸಿದರು. ಕೇರಿಯ ಎಲ್ಲ ಮನೆಗಳ ಸಕ್ರಿಯ ಪಾಲ್ಗೊಳ್ಳುವಿಕೆ ಇರುತ್ತಿತ್ತು. ಅವರು ಮೈಸೂರಿಗೆ ವಲಸೆಹೋದ ನಂತರ ಸುಧಾಕರ ಭಟ್ಟರು ಜಾತ್ರೆ ನಡೆಸುವ ನೊಗ ಹೊತ್ತರು.ಆದರೆ ಕೆಲ ವರ್ಷದ ಹಿಂದೆ ಅವರು ಕಾಲವಷವಾದರು. ನಂತರ ಜಕ್ಕಂಬೆ ವನದೇವಿ ಜಾತ್ರೆಯ ಪರಂಪರೆ ಪೂಜೆಗಷ್ಟೇ ಸೀಮಿತವಾಯಿತು.
ಪ್ರಕೃತಿಯ ಹೆಸರಲ್ಲಿ ಸಾಮುದಾಯಿಕ ಒಗ್ಗೂಡುವಿಕೆಯನ್ನು ನಮ್ಮ ಪೂರ್ವಜರು ವನದೇವಿ ಪೂಜೆಯ ಹೆಸರಲ್ಲಿ ನಡೆಸಿಕೊಂಡು ಬರುತ್ತಿದ್ದರು. ಅಲ್ಲೇ ಅಡಿಗೆ ತಯಾರಿಸಿ ವನಭೋಜನ ಮಾಡುವ ಮೂಲಕ ಪಂಚಭೂತಗಳೇ ಆಧಾರವಾಗಿರುವ ಬದುಕಿನ ಮೂಲ ಗುಣದ ಕಲ್ಪನೆಯೂ ಇತ್ತು. ಒಂದು ಕೇರಿ ಅಥವಾ ಊರ ಜನ ಒಂದೆಡೆ ಸೇರುವುದೇ ಅನಾರೋಗ್ಯಕ್ಕೆ ಗುರಿಮಾಡಬಹುದಾದ ಬದಲಾದ ಪರಿಸ್ಥಿತಿ ಮನುಷ್ಯ ಪ್ರಕೃತಿಯಿಂದ ಎಷ್ಟು ದೂರ ಸಾಗಿದ್ದಾನೆ ಎಂಬುದನ್ನು ತಿಳಿಸುತ್ತಿದೆ.
‘ಸಾಂಪ್ರದಾಯಿಕ ಮಕರ ತಿಂಗಳಲ್ಲಿ ನಡೆಯಬೇಕಾದ ಜಾತ್ರೆ ವೈಯಕ್ತಿಕವಾಗಿ ಪೂಜೆ ನಡೆಸುವುದಕ್ಕಷ್ಟೇ ಸೀಮಿತವಾಗುತ್ತಿದೆ. ಧಾರ್ಮಿಕ ಆಚರಣೆಗಿಂತ ಊರವರು ಪರಿಸರವೊಂದರಲ್ಲಿ ಒಗ್ಗೂಡುವಿಕೆಯ ಆಶಯದಲ್ಲಿ ಆಸಕ್ತಿ ಕುಂದಿದೆ. ಜಕ್ಕಂಬೆಯ ಹೆಸರಲ್ಲಿ ಸಮುದಾಯವೊಂದರ ಕೂಡುವಿಕೆ ಕನಸಿನಂತೆ ಕಾಣುತ್ತದೆ. ಇದು ಬರೀ ಜಕ್ಕಂಬೆಯೊಂದೇ ಅಲ್ಲ. ಉತ್ತರ ಕನ್ನಡದ ಹಲವೆಡೆ ಇಂಥ ಪರಿಸರ ಜಾತ್ರೆಗಳು ಬಹು ಕಾಲದಿಂದಲೂ ನಡೆದುಬಂದಿವೆ. ವಿಶಾಲವಾದ ಅಶ್ವತ್ಥ ಕಟ್ಟೆಯ ಮೇಲೆ ಕುಳಿತು ವನಭೋಜನ ಮಾಡುವ ಸಾಂಪ್ರದಾಯಿಕ ಆಚರಣೆಗಳು ಈಗಲೂ ಅಲ್ಲಲ್ಲಿ ಕಾಣಸಿಗುತ್ತವೆ. ಕಾನು ರಕ್ಷಣೆಯ ಹೊಣೆ ಹೊತ್ತ ಅರಣ್ಯ ಇಲಾಖೆ ಇಂತಹ ವಿಶಿಷ್ಟ ಪರಿಸರ ಹಬ್ಬದತ್ತ ಗಮನ ಹರಿಸಬೇಕು. ತನ್ನ ಸರ್ಕಾರಿ ಚೌಕಟ್ಟಿನಿಂದ ಹೊರ ನಿಂತು ಪ್ರಾದೇಶಿಕ ಆಚರಣೆಗಳ ಮೂಲಕ ಅರಣ್ಯ ರಕ್ಷಣೆ ಇನ್ನಷ್ಟು ಬಲಗೊಳ್ಳುವುದರಲ್ಲಿ ಸಂಶಯವಿಲ್ಲ. ಜೊತೆಗೆ ಗ್ರಾಮೀಣ ಜನತೆಯ ಸಹಜ ಒಡನಾಡಿ ಕಾಡಿನ ರಕ್ಷಣೆ ಬಿಗಿಯಾದ ಕಾನೂನುಗಳಿಗಿಂತ ಪ್ರೀತಿಯಿಂದ ಆಗಬೇಕಾದದ್ದು ಎಂಬುದು ನೆನಪಿಡಬೇಕು.







