ಸುಶಾಂತ್ ಸಿಂಗ್ ರಜಪೂತ್. ಸದ್ಯ ದೇಶದಲ್ಲಿ ಕೋವಿಡ್-19 ಅನಾಹುತಗಳನ್ನೂ ಮೀರಿ ಸಾಮಾಜಿಕ ಜಾಲತಾಣದ ಬಿಸಿ ಚರ್ಚೆಯ ವಿಷಯವಾಗಿರುವ ವ್ಯಕ್ತಿ. ಸುಶಾಂತ್ ಸಿಂಗ್ ಸಾವು ಸದ್ಯ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾಗಿದ್ದು, ಪ್ರಕರಣದ ಹಿಂದಿನ ಕಾರಣ ಮತ್ತು ತನಿಖೆಯ ಕುರಿತು ಪರಸ್ಪರ ಕೆಸರೆರಚಾಟದ ವಿಷಯವಾಗಿ ಬದಲಾಗಿದೆ.
ಕಳೆದ ಜೂನ್ 14ರಂದು ಮುಂಬೈನ ಬಾಂದ್ರಾದ ತನ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ನಟನ ನೀಗೂಢ ಸಾವಿನ ಹಿಂದೆ ಯಾರಿದ್ದಾರೆ? ಏನೆಲ್ಲಾ ಸಂಗತಿಗಳಿವೆ ಎಂಬುದು ಘಟನೆಯ ಒಂದೂವರೆ ತಿಂಗಳ ಬಳಿಕವೂ ರಹಸ್ಯವಾಗಿಯೇ ಉಳಿದಿದೆ. ಈ ನಡುವೆ, ಸಾವಿನ ಪ್ರಕರಣ ಹಲವು ತಿರುವು ಪಡೆದುಕೊಂಡಿದ್ದು, ಹವಾಲಾ ಹಣಕಾಸು ದಂಧೆಯ ಕರಿನೆರಳು ಕೂಡ ಚಾಚಿದೆ. ಆ ಮೂಲಕ ಬಾಲಿವುಡ್ ರಹಸ್ಯ ಸಾವುಗಳ ಸರಣಿಗೆ ಸುಶಾಂತ್ ಸಿಂಗ್ ದುರ್ಘಟನೆ ಕೂಡ ಸೇರಿದ್ದು, ಇದೀಗ ಘಟನೆಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಿಹಾರ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿಹಾರದ ಪಾಟ್ನಾ ಪೊಲೀಸರಿಗೆ ಸುಶಾಂತ್ ತಂದೆ ನೀಡಿದ ದೂರಿನ ಮೇರೆಗೆ ಬಿಹಾರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಈಗಾಗಲೇ ಬಿಹಾರ್ ಡಿಜಿಪಿಯವರು ಸುಶಾಂತ್ ತಂದೆಯೊಂದಿಗೆ ಸಿಬಿಐ ತನಿಖೆಗೆ ನೀಡುವ ಕುರಿತು ಚರ್ಚಿಸಿದ್ದು, ಅವರು ಆ ಬಗ್ಗೆ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ತಮ್ಮ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಸ್ವತಃ ಸಿಎಂ ನಿತೀಶ್ ಕುಮಾರ್ ಮಂಗಳವಾರ ಬೆಳಗ್ಗೆ ಘೋಷಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, ಸುಶಾಂತ್ ತಂದೆ ಕೆ ಕೆ ಸಿಂಗ್ ನೀಡಿದ ದೂರಿನ ಮೇಲೆ ನಟನ ಗೆಳತಿ ರಿಯಾ ಚಕ್ರವರ್ತಿಯನ್ನು ವಿಚಾರಣೆಗೊಳಪಡಿಸಲು ಮುಂಬೈಗೆ ಆಗಮಿಸಿದ್ದ ಪಾಟ್ನಾ ಪೊಲೀಸರನ್ನೇ ಒತ್ತಾಯಪೂರ್ವಕ ಕ್ವಾರಂಟೈನ್ ಗೆ ಒಳಪಡಿಸಿದ ಮುಂಬೈ ಪೊಲೀಸರ ಕ್ರಮ ಸೋಮವಾರ ಇಡೀ ದಿನ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಪುತ್ರನ ಕೊಲೆಯ ಹಿಂದೆ ರಿಯಾ ಕೈವಾಡವಿದೆ. ಆತನ ಬ್ಯಾಂಕ್ ಖಾತೆಯಿಂದ 15 ಕೋಟಿಯಷ್ಟು ಭಾರಿ ಮೊತ್ತವನ್ನು ರಿಯಾ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ. ಹಾಗಾಗಿ ಆಕೆಯ ತನಿಖೆ ನಡೆಸಿದರೆ ಆತನ ಆತ್ಮಹತ್ಯೆಯ ಹಿಂದಿನ ಸತ್ಯ ಬಯಲಾಗಲಿದೆ ಎಂದು ಕೆ ಕೆ ಸಿಂಗ್ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಹಾರ ಎಸ್ ಐಟಿ ಮುಖ್ಯಸ್ಥ ವಿನಯ್ ತಿವಾರಿ ಅವರು ರಿಯಾ ವಿಚಾರಣೆಗಾಗಿ ಮುಂಬೈಗೆ ಆಗಮಿಸಿದ್ದರು. ಈ ವೇಳೆ, ಮುಂಬೈ ಪೊಲೀಸರು ತಿವಾರಿ ಅವರ ಕರ್ತವ್ಯಕ್ಕೆ ಅವಕಾಶ ನೀಡಿದೆ, ಕೋವಿಡ್ ನೆಪವೊಡ್ಡಿ ಕ್ವಾರಂಟೈನ್ ಗೆ ಒಳಪಡಿಸಿದ್ದರು. ಮುಂಬೈ ಪೊಲೀಸರ ಈ ವರ್ತನೆ ಉಭಯ ರಾಜ್ಯಗಳ ಪೊಲೀಸರು ಮತ್ತು ರಾಜಕೀಯ ನೇತಾರರ ನಡುವಿನ ಜಟಾಪಟಿಗೆ ಕಾರಣವಾಗಿತ್ತು.
ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಅಸಮಾಧಾನ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ತನಿಖೆಯಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದರು. ಸಿಎಂ ಕೋರಿಕೆಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ, ಪ್ರಕರಣದ ತನಿಖೆಯ ಪ್ರಗತಿಯ ಕುರಿತು ವರದಿ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟೀಸ್ ನೀಡಲಿದೆ. ಕಾನೂನು ಮತ್ತು ಸುವ್ಯವಸ್ಥೆ ಎಂಬುದು ರಾಜ್ಯಗಳ ಹೊಣೆಯಾದರೂ, ಈ ಪ್ರಕರಣದ ವಿಷಯದಲ್ಲಿ ಎರಡು ರಾಜ್ಯಗಳ ಪೊಲೀಸರ ನಡುವೆ ಜಟಾಪಟಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಪ್ರಕರಣದ ಸಂಪೂರ್ಣ ವಿವರ ಕೋರಿ ನೋಟೀಸ್ ನೀಡಲಿದೆ ಎನ್ನಲಾಗಿತ್ತು.
ಜೊತೆಗೆ ಮುಂಬೈ ಪೊಲೀಸರ ಈ ಕ್ರಮದ ಹಿಂದೆ ಪ್ರಕರಣದ ತನಿಖೆಯನ್ನು ತಡೆಯುವ ಮೂಲಕ ಕಾಣದ ಕೈಗಳ ರಕ್ಷಣೆಯ ಉದ್ದೇಶವಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಅದೇ ಹೊತ್ತಿಗೆ, ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್, “ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಿಂಗ್ ಸಾವಿನ ಜೊತೆ ತಮ್ಮ ಹೆಸರು ತಳಕುಹಾಕಿಕೊಂಡಿದ್ದರ ಬಗ್ಗೆ ಸುಶಾಂತ್ ಸಿಂಗ್ ಹೆಚ್ಚು ಚಿಂತೆಗೀಡಾಗಿದ್ದರು, ಸಾವಿನ ದಿನ ಕೂಡ ಅವರು ದಿಶಾ ಮತ್ತು ತಮ್ಮ ಕುರಿತ ವರದಿಗಳನ್ನು ಗೂಗಲ್ ನಲ್ಲಿ ಹುಡುಕಾಡಿದ್ದರು ಮತ್ತು ನೋವಿಲ್ಲದೆ ಸಾಯುವ ವಿಧಾನಗಳ ಕುರಿತೂ ಗೂಗಲ್ ಸರ್ಚ್ ಮಾಡಿದ್ದರು. ಹಾಗೇ ಅವರಿಗೆ ಬೈಪೋಲಾರ್ ಡಿಸಾರ್ಡರ್ ಎಂಬ ಮಾನಸಿಕ ನ್ಯೂನತೆ ಕೂಡ ಇತ್ತು ಮತ್ತು ಅದಕ್ಕಾಗಿ ಅವರು ನಿಯಮಿತವಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂಬುದು ತಮ್ಮ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಯಾವುದೇ ರಾಜಕಾರಣಿಯ ಹೆಸರೂ ಕೇಳಿಬಂದಿಲ್ಲ ಮತ್ತು ಯಾವುದೇ ರಾಜಕಾರಣಿಯ ವಿರುದ್ಧವೂ ಸಾಕ್ಷ್ಯ ಸಿಕ್ಕಿಲ್ಲ. ನಮ್ಮ ತನಿಖೆ ನಿಷ್ಪಕ್ಷಪಾತವಾಗಿ ಸಾಗುತ್ತಿದೆ” ಎಂದು ಸ್ಪಷ್ಟನೆ ನೀಡಿದ್ದರು.
ಜೊತೆಗೆ, ಸುಶಾಂತ್ ಸಿಂಗ್ ತಂದೆಯ ದೂರಿನ ಕುರಿತು ಪ್ರತಿಕ್ರಿಯಿಸುತ್ತಾ, ಅವರ ತಂದೆ ಹೇಳುವಂತೆ ಸುಶಾಂತ್ ಸಿಂಗ್ ಖಾತೆಯಲ್ಲಿ 18 ಕೋಟಿ ಹಣವಿದ್ದದ್ದು ಹೌದು. ಆ ಪೈಕಿ ಈಗ ಕೇವಲ 4.5 ಕೋಟಿ ರೂ ಮಾತ್ರ ಬಾಕಿ ಇದೆ. ಆದರೆ, ಉಳಿದ ಹಣ ರಿಯಾ ಖಾತೆಗೆ ನೇರವಾಗಿ ವರ್ಗಾವಣೆಯಾಗಿರುವುದು ಪತ್ತೆಯಾಗಿಲ್ಲ ಎಂದೂ ಮುಂಬೈ ಕಮೀಷನರ್ ಹೇಳಿದ್ದರು.
ಈ ನಡುವೆ ಹವಾಲಾ ದಂಧೆಯ ನೆರಳು ಕುರಿತು ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ, ಸುಶಾಂತ್ ಬ್ಯಾಂಕ್ ಖಾತೆಯ ವಹಿವಾಟಿನ ಆಧಾರದ ಮೇಲೆ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಸೋಮವಾರ ಅವರ ಲೆಕ್ಕಾಧಿಕಾರಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ನಡುವೆ, ಸಾಕಷ್ಟು ಭರವಸೆಯ ಚಿತ್ರಗಳನ್ನು ನೀಡಿದ್ದ ನಟನ ದಿಢೀರ್ ಆತ್ಮಹತ್ಯೆಯ ಪ್ರಕರಣದ ತನಿಖೆ ರಾಜಕೀಯ ಆಯಾಮ ಪಡೆದುಕೊಂಡಿದ್ದು, ಮುಂಬೈ ಮತ್ತು ಬಿಹಾರ ರಾಜ್ಯಗಳೆರಡರಲ್ಲೂ ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಪ್ರಕರಣವನ್ನು ಬಳಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬರುತ್ತಿವೆ. ಅದೇ ಹೊತ್ತಿಗೆ, ಮುಂಬೈ ಪೊಲೀಸರು ಕೆಲವು ಪ್ರಭಾವಿಗಳ ಒತ್ತಡಕ್ಕೊಳಗಾಗಿ ಪ್ರಕರಣದ ಹಿಂದಿನ ತೆರೆಮರೆಯ ಕೈಗಳನ್ನು ರಕ್ಷಿಸುತ್ತಿದ್ದಾರೆ ಎಂದು ಬಿಜೆಪಿ ಮತ್ತು ಅದರ ಸಾಮಾಜಿಕ ಜಾಲತಾಣದ ಟ್ರೋಲ್ ಪಡೆ ಹೇಳುತ್ತಿದೆ.
ಅದರಲ್ಲೂ ಮುಖ್ಯವಾಗಿ ಬಿಹಾರ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಸುಶಾಂತ್ ಸಾವಿನ ಪ್ರಕರಣವನ್ನೇ ಬಿಹಾರದ ಮಗನಿಗೆ ಆದ ಅನ್ಯಾಯ ಎಂದು ಬಿಂಬಿಸಿ ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲು ತಂತ್ರ ರೂಪಿಸಿವೆ. ಆ ಹಿನ್ನೆಲೆಯಲ್ಲಿ ಸಾವಿನ ತತಕ್ಷಣದಲ್ಲಿ ಸಾವಿನ ಕುರಿತ ದೊಡ್ಡ ಮಟ್ಟದ ಅನುಮಾನ, ಶಂಕೆಗಳು ವ್ಯಕ್ತವಾಗದೇ ಇದ್ದರೂ, ಈಗ ತಿಂಗಳ ಬಳಿಕ ಪ್ರಕರಣ ಸಾಮಾಜಿಕ ಜಾಲತಾಣ ಮತ್ತು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ.
ಸುಶಾಂತ್ ಸಾವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳಲು ಬಿಜೆಪಿ ತಿಂಗಳ ಹಿಂದೆಯೇ ನಿರ್ಧರಸಿತ್ತು. ಬಿಹಾರ ಚುನಾವಣೆಯವರೆಗೆ ವಿಷಯವನ್ನು ಸಾರ್ವಜನಿಕ ಚರ್ಚೆಯಲ್ಲಿಡಲು ಅದು ತನ್ನ ಟ್ರೋಲ್ ಪಡೆಗಳನ್ನು ಬಳಸಿಕೊಳ್ಳುತ್ತಿದೆ. ಜೊತೆಗೆ ಮಗನ ಸಾವಿನ ಬಳಿಕ ಮುಂಬೈ ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ ಮೇಲೆ ಶಂಕೆ ಇಲ್ಲ ಎಂದಿದ್ದ ಸುಶಾಂತ್ ತಂದೆ, ಆ ಬಳಿಕ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರಿಗೆ ಹವಾಲಾ ವಹಿವಾಟು ಮತ್ತು ರಿಯಾ ಕುರಿತು ದೂರು ನೀಡುವ ಬದಲು, ಪಾಟ್ನಾ ಪೊಲೀಸರಿಗೆ ದೂರು ನೀಡಿರುವುದರ ಹಿಂದೆಯೂ ಬಿಜೆಪಿಯ ತಂತ್ರಗಾರಿಕೆ ಕೆಲಸ ಮಾಡಿರುವ ಸಾಧ್ಯತೆ ಇದೆ. ಆ ಕಾರಣದಿಂದಲೇ ಬಿಹಾರ ಪೊಲೀಸ್ ಮುಖ್ಯಸ್ಥರು ಕೂಡ ರಾಜಕೀಯ ಒತ್ತಡದ ಕಾರಣಕ್ಕೆ ಪ್ರಕರಣದ ತನಿಖೆಗೆ ಪ್ರತ್ಯೇಕ ಎಸ್ ಐಟಿ ರಚಿಸಿ ಅವರನ್ನು ಮುಂಬೈಗೆ ಕಳಿಸಿದ್ದಾರೆ ಎಂಬ ಮಾತೂ ಇದೆ.
ಆ ಹಿನ್ನೆಲೆಯಲ್ಲಿ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಅವರ ಟ್ವೀಟ್ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದ್ದು, ಹಲವು ಸುದ್ದಿ ಜಾಲತಾಣಗಳ ವರದಿಗಳನ್ನು ಉಲ್ಲೇಖಿಸಿದ್ದ ಸಾಕೇತ್, ಸರಣಿ ಟ್ವೀಟ್ ಮಾಡಿದ್ದು, ಬಿಹಾರದ ಚುನಾವಣೆಯ ಹಿನ್ನೆಲೆಯಲ್ಲಿ; ಈ ಮುನ್ನ ಬಹುತೇಕ ಬದಿಗೆ ಸರಿದಿದ್ದ ಸುಶಾಂತ್ ಪ್ರಕರಣ ಹೇಗೆ ದಿಢೀರನೇ ಮುಖ್ಯವಾಹಿನಿ ಚರ್ಚೆಯಾಗಿ ಬದಲಾಗಿದೆ ಎಂಬ ಬಗ್ಗೆ ಗಮನ ಸೆಳೆದಿದ್ದರು. ಈ ನಡುವೆ, ಮಹಾರಾಷ್ಟ್ರ ಆಡಳಿತ ಮೈತ್ರಿಯ ಎನ್ ಸಿಪಿ ಕೂಡ, ಪ್ರಕರಣ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ. ಮುಂಬೈ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಕೆಲವು ಶಕ್ತಿಗಳು ಬಿಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದೆ.
ಕಾಕತಾಳೀಯ ಎಂಬಂತೆ ಸುಶಾಂತ್ ತಂದೆಯ ದೂರಿನ ನೆಪವಿಟ್ಟುಕೊಂಡು ಬಿಹಾರ ಸರ್ಕಾರ ಪ್ರಕರಣದಲ್ಲಿ ಇನ್ನಿಲ್ಲದ ಆಸಕ್ತಿ ಪ್ರದರ್ಶಿಸುತ್ತಿದ್ದು, ಸೋಮವಾರ ನಡೆದ ಬಿಹಾರ ವಿಧಾನಸಭಾ ವಿಶೇಷ ಕಲಾಪದಲ್ಲಿ ಕೂಡ ಈ ವಿಷಯ ಸಾಕಷ್ಟು ಚರ್ಚೆಯಾಗಿದೆ. ಪಕ್ಷಬೇಧ ಮರೆತು ಬಿಹಾರದ ಎಲ್ಲಾ ಶಾಸಕರು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಆಗ್ರಹಿಸಿವೆ. ಆಡಳಿತ ಪಕ್ಷ ಬಿಜೆಪಿಯ ಶಾಸಕ ಹಾಗೂ ಸುಶಾಂತ್ ಸೋದರ ಸಂಬಂಧಿ ನೀರಜ್ ಕುಮಾರ್ ಸಿಂಗ್ ಕಲಾಪದಲ್ಲಿ ವಿಚಾರ ಪ್ರಸ್ತಾಪಿಸಿ ಸಿಬಿಐ ತನಿಖೆಗೆ ಶಿಫಾರಸು ಮಾಡಲು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಅದರ ಬೆನ್ನಲ್ಲೇ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ, ಸಿಬಿಐ ತನಿಖೆಗೆ ಆರ್ ಜೆಡಿ ಮೊದಲೇ ಆಗ್ರಹಿಸಿತ್ತು ಎಂದು ದನಿಗೂಡಿಸಿದರು. ಅಲ್ಲದೆ, ರಾಜ್ಯದ ರಾಜ್ ಗಿರಿಯಲ್ಲಿ ತಲೆಎತ್ತುತ್ತಿರುವ ಫಿಲಂಸಿಟಿಗೆ ಸುಶಾಂತ್ ಸಿಂಗ್ ಹೆಸರಿಡುವಂತೆಯೂ ತೇಜಸ್ವಿ ಆಗ್ರಹಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಸಿಬಿಐ ತನಿಖೆಗೆ ಒತ್ತಾಯಿಸಿ ನಿರ್ಣಯ ಅಂಗೀಕರಿಸುವಂತೆ ವಿಧಾನಸಭೆಯಲ್ಲಿ ಒತ್ತಾಯಿಸಿದರು.
ಅಷ್ಟರಮಟ್ಟಿಗೆ, ಸುಶಾಂತ್ ಸಿಂಗ್ ಸಾವಿನ ಪ್ರಕರಣ ಬಿಹಾರದಲ್ಲಿ ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಈಡಾಗಿದ್ದು, ಚುನಾವಣೆಯ ಕಣದಲ್ಲಿ ಸಾವಿನ ಲಾಭ ಪಡೆಯಲು ಈಗಾಗಲೇ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪೈಪೋಟಿಗೆ ಚಾಲನೆ ನೀಡಿದೆ. ಈ ನಡುವೆ, ರಾಜಕೀಯ ಲಾಭನಷ್ಟದ ಕೆಸರೆರಚಾಟದಲ್ಲಿ ಬಿಹಾರ ಮತ್ತು ಮುಂಬೈ ಪೊಲೀಸರು ದಾಳವಾಗಿದ್ದು, ಸಿಬಿಐ ತನಿಖೆಗೆ ಕೇಂದ್ರ ಆದೇಶಿಸಿದಲ್ಲಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗುವುದು ನಿಶ್ಚಿತ!