ಭಾರತದಲ್ಲಿ ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ವಿರುದ್ದ ತಾರತಮ್ಯ ನಡೆಯುತ್ತಿದೆ ಎಂಬ ಅಮೆರೀಕ ಸರ್ಕಾರದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎತ್ತಿ ಹಿಡಿದು ಯುಎಸ್ ಸರ್ಕಾರ ವರದಿಯನ್ನು ನೀಡಿತ್ತು.
ವರದಿಗೆ ಪ್ರತಿಕ್ರಿಯಿಸಿದ ಭಾರತದ ವಿದೇಶಾಂಗ ಇಲಾಖೆ, ಭಾರತವು ಅಲ್ಪಸಂಖ್ಯಾತರಿಗೆ ನೀಡಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ಅಮೇರಿಕ ಸರ್ಕಾರ ಕಡೆಗಣಿಸಿದೆ ಎಂದು ಅಭಿಪ್ರಾಯಪಟ್ಟಿದೆ.
“ವಿದೇಶಿಯ ಸಂಸ್ಥೆಗಳಿಗೆ ಭಾರತದ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಕುರಿತು ಪ್ರಶ್ನಿಸುವ ಯಾವುದೇ ಮಾನ್ಯತೆ ಇಲ್ಲ,” ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.
ಭಾರತದಲ್ಲಿರುವ ಸಾಂವಿಧಾನಿಕ ಸಂಸ್ಥೆಗಳು ನಾಗರೀಕರ ಹಕ್ಕುಗಳ ರಕ್ಷಣೆಗೆ ಕಟಿಬದ್ದವಾಗಿವೆ. ಇವು ಧಾರ್ಮಿಕ ಸ್ವಾತಂತ್ರ್ಯವನ್ನು ಕೂಡಾ ರಕ್ಷಣೆ ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
ಇನ್ನು, ʼಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿ-2019ʼ ಎಂಬ ಶೀರ್ಷಿಕೆಯಡಿಯಲ್ಲಿ ಅಮೇರಿಕ ಸರ್ಕಾರ ವರದಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ 370ನೇ ವಿಧಿ ರದ್ದು ಮಾಡಿದ್ದು, ಸಿಎಎ-ಎನ್‌ಆರ್‌ಸಿ ವಿರುದ್ದದ ಹೋರಾಟಗಳನ್ನು ಉಲ್ಲೇಖಿಸಲಾಗಿತ್ತು.
