ವಾಟ್ಸಾಪ್ ಗ್ರೂಪ್‌ನಲ್ಲಿ ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ರೂಪೇಶ್ ಅವರಿಗೆ ಜೀವ ಬೆದರಿಕೆ ಹಾಕಿದ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದ ಮೂಡಬಿದಿರೆ ಥಾಣಾ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ. ಗೋಸಾಗಾಟ ನಡೆಸುವವರ ಮೇಲೆ ಹಲ್ಲೆ ನಡೆಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಧೂ ರೂಪೇಶ್ ಅವರು ಎಚ್ಚರಿಕೆ ನೀಡಿದ ಕಾರಣಕ್ಕಾಗಿ ಅವರಿಗೆ ಕೊಲೆ ಬೆದರಿಕೆಯನ್ನು ಹಾಕಲಾಗಿತ್ತು.
ಈ ಕುರಿತಾಗಿ ದಕ್ಷಿಣ ಕನ್ನಡದಾದ್ಯಂತ ತೀವ್ರವಾದ ಆಕ್ಷೇಪಣೆ ಕೇಳಿಬಂದಿದ್ದು, ಓರ್ವ ಜಿಲ್ಲಾಧಿಕಾರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದವರ ವಿರುದ್ದ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ರಾಮ್ ಸೇನಾ ಎಂಬ ವಾಟ್ಸಾಪ್ ಗುಂಪಿನಲ್ಲಿ ʼಮೊದಲು ಜಿಲ್ಲಾಧಿಕಾರಿಯನ್ನು ಕೊಲೆಮಾಡಬೇಕುʼ ಎಂಬ ಅರ್ಥ ಬರುವಂತೆ ತುಳು ಭಾಷೆಯಲ್ಲಿ ಬೆದರಿಕೆಯನ್ನು ಹಾಕಲಾಗಿತ್ತು. ಈಗ ಪೊಲೀಸರು ರಂಜಿತ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಈ ಎಲ್ಲದರ ಮಧ್ಯೆ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರನ್ನು ವರ್ಗಾವಣೆಗೊಳಿಸಿರುವುದು ಕೂಡಾ ಅಲ್ಲಿನ ಸ್ಥಳೀಯರಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ. ಸದ್ಯಕ್ಕೆ ಸಿಂಧೂ ರೂಪೇಶ್ ಅವರನ್ನು ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯದ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಅವರ ಜಾಗಕ್ಕೆ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾಗಿ ನೇಮಿಸಲಾಗಿದೆ.












