ದೇಶದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ವರ್ಷದಲ್ಲೇ ನರೇಂದ್ರ ಮೋದಿ ಅವರು ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾ ಎಂಬ ಯೋಜನೆಯನ್ನು ಪ್ರಕಟಿಸಿದರು. ಭಾರತದಲ್ಲೇ ಉತ್ಪಾದನೆಗೆ ಪ್ರೋತ್ಸಾಹವನ್ನು ನೀಡುವುದು ಮತ್ತು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವನ್ನಾಗಿ ಮಾಡುವುದು ಈ ಯೋಜನೆಯ ಮೂಲ ಗುರಿ ಆಗಿತ್ತು.
ಆದರೆ ಈ ಉದ್ದೇಶವನ್ನೇ ಬುಡಮೇಲು ಮಾಡುವಂತೆ ಕೇಂದ್ರ ಸರ್ಕಾರದ ಭಾರತೀಯ ಹವಾಮಾನ ಇಲಾಖೆ ಫಿನ್ಲೆಂಡ್ ಮೂಲದ ಕಂಪೆನಿಯೊಂದರಿಂದ ಹವಾಮಾನ ಗ್ರಹಿಕೆ ಉಪಕರಣ ಖರೀದಿಸಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ. ದೃಷ್ಟಿ ಎಂದು ಹೆಸರಿಸಲಾದ ಉಪಕರಣವೊಂದನ್ನು ದೇಶೀಯವಾಗೇ ಅಭಿವೃದ್ದಿಪಡಿಸಲಾಗಿದ್ದು ಇದು ವಿಮಾನದ ಪೈಲಟ್ ಗಳಿಗೆ ವಿಮಾನವನ್ನು ಹಾರಿಸಲು ಮತ್ತು ಇಳಿಸಲು ಅನುಕೂಲವಾಗುವಂತೆ ಗೋಚರತೆಗಾಗಿ ವಿಮಾನ ನಿಲ್ದಾಣಗಳಲ್ಲಿ ಅಳವಡಿಸುವ ಉಪಕರಣವಾಗಿದ್ದು ಇದನ್ನು ಈಗ ದೇಶದ 21 ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದೆ ಮತ್ತು ಇವೆಲ್ಲವೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಟ್ಟ ಹವಾಮಾನದಲ್ಲೂ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ದೃಷ್ಟಿ ಉಪಕರಣಕ್ಕೆ ಒಟ್ಟು 10 ರಾಷ್ಟ್ರಮಟ್ಟದ ಪ್ರಶಸ್ತಿಗಳೂ ದೊರೆತಿವೆ. ಈಗ ಹವಾಮಾನ ಇಲಾಖೆ ಇವುಗಳನ್ನು ಬದಲಿಸಿ ವಿದೇಶಿ ಹವಾಮಾನ ಉಪಕರಣಗಳನ್ನು ಅಳವಡಿಸಲು ಯೋಜನೆ ಹಾಕಿಕೊಂಡಿದೆ. ಪ್ರಸ್ತುತ ದೇಶದಲ್ಲಿ 101 ದೃಷ್ಟಿ ಹವಾಮಾನ ಉಪಕರಣಗಳು ಕಾರ್ಯ ನಿರ್ವಹಿಸುತಿದ್ದು 47 ಉಪಕರಣಗಳನ್ನು ದೇಶದ ವಿವಿಧ 21 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಅಳವಡಿಸಲಾಗಿದ್ದು 54 ಉಪಕರಣಗಳನ್ನು 18 ಭಾರತೀಯ ವಾಯುಪಡೆಯ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿದೆ.
2014 ರಲ್ಲಿ ದೃಷ್ಟಿ ಹವಾಮಾನ ಉಪಕರಣಗಳನ್ನು ಸರಬರಾಜು ಮಾಡುವ ಕುರಿತು ಕೇಂದ್ರೀಯ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಸ್ಐಆರ್ ) ಅಧೀನ ಸಂಸ್ಥೆ ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ (ಎನ್ಎಎಲ್ ) ಮತ್ತು ಭಾರತೀಯ ಹವಾಮಾನ ಇಲಾಖೆಯ ಜತೆ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಅದರಂತೆ ತಲಾ 18 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ದೃಷ್ಟಿ ಉಪಕರಣಗಳನ್ನು ಅಭಿವೃದ್ದಿಪಡಿಸಲಾಗಿದ್ದು ಇವುಗಳ ಗೋಚರೆತೆಯ ನಿಖರತೆ 20 ಮೀಟರ್ ನಿಂದ 2000 ಮೀಟರ್ ಗಳವರೆಗೂ ಇರುವಂತೆ ಗುಣಮಟ್ಟವನ್ನು ರೂಪಿಸಲಾಗಿತ್ತು ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ದೃಷ್ಟಿ ಉಪಕರಣಗಳ ಯಶಸ್ವಿ ಪರೀಕ್ಷೆಯ ನಂತರ ಈ ಉಪಕರಣಗಳನ್ನು ವಿದೇಶಕ್ಕೂ ರಫ್ತು ಮಾಡಲು ಯೋಜಿಸಲಾಗಿತ್ತು. ಆದರೆ ಹವಾಮಾನ ಇಲಾಖೆಯ ಅಧಿಕಾರಿಗಳು ಯೂ ಟರ್ನ್ ಹೊಡೆದಿದ್ದು ಇದೀಗ ಫಿನ್ಲೆಂಡ್ ಮೂಲದ ವೈಸಾಲ ಎಂಬ ಹವಾಮಾನ ಉಪಕರಣವನ್ನು ತಲಾ 70 ಲಕ್ಷ ರೂಪಾಯಿಗಳಿಗೆ ಖರೀದಿಸಲು ಸಿದ್ದತೆ ನಡೆಸುತಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಒಟ್ಟು ನೂರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹವಾಮಾನ ಉಪಕರಣಗಳನ್ನು ಖರೀದಿಸಲು ನಿವೃತ್ತ ಮಹಾ ನಿರ್ದೇಶಕ ಡಾ ಅಜಿತ್ ತ್ಯಾಗಿ ಅವರ ನೇತೃತ್ವದ ಸಮಿತಿ ಮುಂದಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಡಾ.ತ್ಯಾಗಿ, ದೃಷ್ಟಿ ಉಪಕರಣ ಉತ್ತಮವೇ ಆಗಿದ್ದರೂ ಇದನ್ನು ಮೇಲ್ದರ್ಜೆಗೆ ಏರಿಸಬೇಕಿದೆ. ವಿಶ್ವದ ಇತರ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿರುವ ಹವಾಮಾನ ಉಪಕರಣಗಳಿಗೆ ಹೋಲಿಸಿದರೆ ಭಾರತದ ವಿಮಾನ ನಿಲ್ದಾಣಗಳಲ್ಲಿ ಬಳಸಲಾಗುತ್ತಿರುವ ಉಪಕರಣಗಳ ಕ್ಷಮತೆ ಕಡಿಮೆಯದ್ದಾಗಿದೆ ಎಂದು ಹೇಳಿದರು. ಹೆಚ್ಚುತ್ತಿರುವ ವಿಮಾನ ದಟ್ಟಣೆಯನ್ನು ನಿರ್ವಹಿಸಲು ದೇಶದ ವಿಮಾನ ನಿಲ್ದಾಣಗಳನ್ನು ವ್ಯವಸ್ತಿತವಾಗಿ ಸಜ್ಜುಗೊಳಿಸುವಲ್ಲಿ ಸಮಿತಿಯು ಕಾರ್ಯೋನ್ಮುಖವಾಗಿದೆ ಎಂದ ಅವರು ವಿಶ್ವ ದರ್ಜೆಯ ವಾಣಿಜ್ಯ ಸೇವೆಗಳನ್ನು ಒದಗಿಸುವಲ್ಲಿ ನಾವು ಹಿಂದೆ ಬೀಳಬೇಕಾಗುತ್ತದೆ ಎಂದರು.
ನಮ್ಮ ವಿಜ್ಞಾನಿಗಳು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಮೇಲ್ಮಟ್ಟಕ್ಕೆ ಉಪಕರಣಗಳ ತಯಾರಿಕೆಯನ್ನು ಮಾಡುವುದಿಲ್ಲ. ಹಾಗಾಗಿ ನಾವು ಮುಂದಿನ ಎರಡು-ಮೂರು ವರ್ಷಗಳಲ್ಲಿ ಆಧುನಿಕ ಹೊಸ ಹವಾಮಾನ ಉಪಕರಣಗಳನ್ನು ವಿಮಾನ ನಿಲ್ದಾಣಗಳಿಗೆ ಅಳವಡಿಸಲು ಯೋಜಿಸಿದ್ದೇವೆ ಎಂದು ಹೇಳಿದ್ದಾರೆ.
2019 ರ ಜನವರಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ಎಲ್ಲ ಇಲಾಖೆಗಳಿಗೂ ಸುತ್ತೋಲೆಯೊಂದನ್ನು ಹೊರಡಿಸಿದ್ದು ದೇಶದಲ್ಲಿ ಲಭ್ಯವಿರುವ ಯಂತ್ರೋಪಕರಣಗಳಿದ್ದರೆ ಆಮದು ಮಾಡಿಕೊಳ್ಳುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಬಾರದು ಎಂದು ಹೇಳಿದೆ.
ಹೆಸರನ್ನು ಬಹಿರಂಗಪಡಿಸಲು ಇಚ್ಚಿಸದ ನವದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು, ಈಗ ವಿದೇಶೀ ಹವಾಮಾನ ಉಪಕರಣಗಳ ಖರೀದಿಗೆ ಟೆಂಡರ್ ಸಿದ್ದಪಡಿಸುವ ಕೆಲಸ ಆಗುತಿದ್ದು ಇದರಲ್ಲಿ ಬರೇ ವಿದೇಶೀ ಕಂಪೆನಿಗಳು ಟೆಂಡರ್ ಪಡೆದುಕೊಳ್ಳುವಂತೆ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು. ಇದರ ಜತೆಗೇ ಅಧಿಕಾರಿಗಳು ವಿದೇಶೀ ಫಾರ್ವರ್ಡ್ ಸ್ಕ್ಯಾಟರ್ ಮೀಟರ್ ಗಳನ್ನೂ ಅಮದು ಮಾಡಿಕೊಳ್ಳಲು ಉದ್ದೇಶಿಸಿದ್ದು ಇವುಗಳು ಭಾರತೀಯ ಹವಾಗುಣಕ್ಕೆ ಕೆಲಸ ಮಾಡುವುದಿಲ್ಲ ಎಂದೂ ಹೇಳಿದರು.
ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ ರನ್ ವೇ ಗಳಲ್ಲಿ ಅಳವಡಿಸಲಾಗುವ ದೃಷ್ಟಿ ಉಪಕರಣಕ್ಕೆ ಸಮನಾದ 60 ಹವಾಮಾನ ಉಪಕರಣಗಳನ್ನು ತಲಾ ಒಂದು ಕೋಟಿ ರೂಪಾಯಿಗಳ ವೆಚ್ಚದಲ್ಲಿಯೂ, 76 ಹವಾಮಾನ ಉಪಕರಣಗಳನ್ನು ತಲಾ 20 ರಿಂದ 22 ಲಕ್ಷ ರೂಪಾಯಿಗಳ ವೆಚ್ಚದಲ್ಲಿಯೂ , ತೀವ್ರ ಹಿಮ ಹಾಗೂ ಮಂಜು ಇದ್ದಾಗ ಕಾರ್ಯ ನಿರ್ವಹಿಸಲು 60 ಫಾರ್ವರ್ಡ್ ಸ್ಕ್ಯಾಟರ್ ಮೀಟರ್ ಗಳನ್ನು ತಲಾ 20 ರಿಂದ 22 ಲಕ್ಷ ರೂಪಾಯಿಗಳ ವೆಚ್ಚದಲ್ಲಿ , ಮತ್ತು 17 ವಿಂಡ್ ಪ್ರೊಫೈಲರ್ಸ್ ಗಳನ್ನು ತಲಾ 30 ರಿಂದ 35 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಖರೀದಿಸಲು ಸಚಿವಾಲಯ ಸಿದ್ದತೆ ನಡೆಸಲಾಗಿದೆ.
ಜೆಟ್ ಏರ್ ವೇಸ್ ನ ಆಪರೇಷನ್ ಅಧಿಕಾರಿಯೊಬ್ಬರ ಪ್ರಕಾರ ಕಳೆದ 8 ವರ್ಷಗಳಿಂದ ದೃಷ್ಟಿ ಉಪಕರಣಗಳು ಉತ್ತಮ ಕಾರ್ಯ ಕ್ಷಮತೆ ತೋರಿದ್ದು ಬಹುತೇಕ ಶೂನ್ಯ ನಿರ್ವಹಣೆ ಮತ್ತು ಶೂನ್ಯ ರಿಪೇರಿ ವೆಚ್ಚದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ. ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ ಸಿದ್ದಪಡಿಸಿರುವ ಈ ಉಪಕರಣ ವ್ಯವಸ್ಥೆಯು ಗಾಳಿಯ ವೇಗ, ಗಾಳಿಯ ದಿಕ್ಕು, ತಾಪಮಾನ, ವಾಯು ಒತ್ತಡ, ಆರ್ದ್ರತೆ, ಇಬ್ಬನಿ ಬಿಂದು, ಎನ್ಎಎಲ್ ಅಭಿವೃದ್ಧಿಪಡಿಸಿದ ಹವಾಮಾನ-ಮೇಲ್ವಿಚಾರಣಾ ವ್ಯವಸ್ಥೆಯ ನೆರವಿನೊಂದಿಗೆ ವಾಯು ಕಾರ್ಯಾಚರಣೆಗೆ ಅಗತ್ಯವಾದ ಗೋಚರತೆ ಮುಂತಾದ ಎಲ್ಲಾ ಹವಾಮಾನ ನಿಯತಾಂಕಗಳನ್ನು ಅಳೆಯುತ್ತದೆ ಎಂದು ಅವರು ಹೇಳಿದರು.
“ಕೆಟ್ಟ ಹವಾಮಾನ ಅಥವಾ ಕಡಿಮೆ ಗೋಚರತೆಯಿಂದಾಗಿ ರದ್ದಾಗುವ ವಿಮಾನಗಳ ಸಂಖ್ಯೆ ನಮ್ಮ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿಯೂ ತೀವ್ರವಾಗಿ ಕಡಿಮೆಯಾಗಿದೆ” ಎಂದು ಮೂಲಗಳು ಹೇಳುತ್ತವೆ.
ಜಿಎಂಆರ್ ಸಮೂಹದ ಸಿಇಒ ಪ್ರಭಾಕರ ರಾವ್ ಅವರು 2015 ರಲ್ಲಿ ನೀಡಿದ ಪ್ರತಿಕ್ರಿಯೆ ಪತ್ರದ ಪ್ರಕಾರ, “ಎರಡು ವರ್ಷಗಳ ಹಿಂದೆ, ಹಳೆಯ ಫ್ಲೆಮಿಂಗೊ ವ್ಯವಸ್ಥೆಗಳನ್ನು ಬದಲಿಸಲು ನಾವು ನಮ್ಮ ಮುಖ್ಯ ರನ್ ವೇಯಲ್ಲಿ ದೃಷ್ಟಿಯನ್ನು ಸ್ಥಾಪಿಸಿದ್ದೇವೆ. ಇಲ್ಲಿಯವರೆಗೆ, ಕಡಿಮೆ ಗೋಚರತೆಯ ಪರಿಸ್ಥಿತಿಗಳ ಅತ್ಯಂತ ಪ್ರಯತ್ನದ ಸಂದರ್ಭಗಳಲ್ಲಿ ಈ ವ್ಯವಸ್ಥೆಗಳ ಯಾವುದೇ ವೈಫಲ್ಯಗಳು ಕಂಡುಬಂದಿಲ್ಲ. ಇದು ನಿಜವಾದ ಮೇಕ್-ಇನ್ ಇಂಡಿಯಾ ಉತ್ಪನ್ನವಾಗಿದೆ.
ರನ್ ವೇ ಗೋಚರತೆ ಮಾಪನಕ್ಕೆ ದೃಷ್ಟಿ ಅತ್ಯುತ್ತಮ ಉತ್ಪನ್ನವಾಗಿದೆ ಎಂದು ಹವಾಮಾನ ಇಲಾಖೆಯ ಮಾಜಿ ಡಿಜಿ ಡಾ.ಕೆ.ಜೆ.ರಮೇಶ್ ಹೇಳಿದರು. ಇದೇ ರೀತಿಯ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಸುರಕ್ಷಿತ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಗಳಿಗೆ ಸಹಾಯ ಮಾಡುವ ಇತರ ವೀಕ್ಷಣಾ ವ್ಯವಸ್ಥೆಗಳನ್ನು ಸಂಗ್ರಹಿಸಲು ಯೋಜನೆಗಳು ನಡೆಯುತ್ತಿರುವಾಗ ದೃಷ್ಟಿಯನ್ನು ಬದಲಿಸಲು ಯಾವುದೇ ನೀತಿ ನಿರ್ಧಾರವಿಲ್ಲ ಎಂದು ಅವರು ಗಮನಸೆಳೆದರು. ಸ್ಥಳೀಯ ಐಟಿ ಪರಿಹಾರ ಒದಗಿಸುವವರ ಮೂಲಕ ವ್ಯವಸ್ಥೆಗಳನ್ನು ತಂದ ನಂತರ ಅವುಗಳನ್ನು ಸ್ಥಳೀಯವಾಗಿ ಸಂಯೋಜಿಸಬೇಕಾಗಿರುವುದರಿಂದ ಸಮಗ್ರ ವ್ಯವಸ್ಥೆಯನ್ನು ಆಮದು ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಸಿಎಸ್ಐಆರ್ ನ ಡಿಜಿ ಡಾ.ಶೇಖರ್ ಮಾಂಡೆ ರಿಗೆ, “ದೃಷ್ಟಿ ಜಾಗತಿಕವಾಗಿ ಮಾನದಂಡ ಮತ್ತು ಉತ್ತಮ ಉತ್ಪನ್ನವಾಗಿದೆ. ಅದನ್ನು ಸ್ಕ್ರ್ಯಾಪ್ ಮಾಡುವ ಯಾವುದೇ ಯೋಜನೆಗಳ ಬಗ್ಗೆ ನನಗೆ ತಿಳಿದಿಲ್ಲ ಎನ್ನುತ್ತಾರೆ.
ಆದರೆ ಈಗ ಅಧಿಕಾರಿಗಳ ದರ್ಬಾರ್ ನಲ್ಲಿ ಉತ್ತಮ ದೇಶೀಯ ಉತ್ಪನ್ನವೊಂದು ವಿದೇಶಕ್ಕೆ ರಫ್ತಾಗುವ ಅವಕಾಶದಿಂದ ವಂಚಿತವಾಗಿ ದೇಶದಲ್ಲೂ ಬಳಕೆಯಾಗದೆ ಮೂಲೆಗುಂಪಾಗುತ್ತಿರುವುದು ನಿಜಕ್ಕೂ ವಿಷಾದನೀಯ.