ಆಗಸ್ಟ್ 5 – ದೇಶವನ್ನು ಆಳುವ ಕೆಲವೇ ಮಂದಿ ದೇಶದ ಜನರನ್ನು ಇಲ್ಲಿನ ಸಂವಿಧಾನವನ್ನು ಅಪಮಾನಕ್ಕೀಡು ಮಾಡಿದ ದಿನ. ಇದು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ಆಗಸ್ಟ್ 15ರ ಸ್ವಾತಂತ್ರ್ಯವನ್ನು ಪಡೆಯುವಲ್ಲಿ ಯಾವುದೇ ರೀತಿಯ ಹೋರಾಟ ಮಾಡದಂತಹ ಜನರಿಂದ ರೂಪಿತವಾದ ಸಂಚು. ಈ ದಿನ ಇತಿಹಾಸದಲ್ಲಿ ನವೀಕರಣ ಹಾಗೂ ಪುನರುಜ್ಜೀವನದ ವಿರುದ್ದ ವಿಧ್ವಂಸಕತೆಯ ಹಾಗೂ ಸರ್ವನಾಶದ, ಕಾನೂನು ಮತ್ತು ನ್ಯಾಯದ ವಿರುದ್ದ ಅಪರಾಧ ಮತ್ತು ಅನ್ಯಾಯದ ಹಾಗೂ ಸತ್ಯ ಮತ್ತು ವಾಸ್ತವದ ಮೇಲೆ ಕಟ್ಟು ಕತೆಗಳ ಮತ್ತು ಸುಳ್ಳು ಜಯ ಸಾಧಿಸಿದ ದಿನವೆಂದು ಪರಿಗಣಿಸಲಾಗುವುದು.
ಸರಿಯಾಗಿ ಒಂದು ವರ್ಷದ ಹಿಂದೆ ಕಾಶ್ಮೀರದ ಜನರು ಮಲಗಿ ಏಳುವ ಸಮಯದಲ್ಲಿ ಕರ್ಫ್ಯೂವನ್ನು ನೋಡುತ್ತಾ ಎದ್ದರು. ಈ ಘಟನೆಯ ಒಂದು ವರ್ಷದ ನಂತರ ಕೆಲವೇ ಜನರು ಅಯೋಧ್ಯೆಯಲ್ಲಿ ಜೊತೆ ಸೇರಿ ಅವರ ಮಂದಿರವನ್ನು ನಿರ್ಮಾಣ ಮಾಡಲು ಶಿಲಾನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಿದರು. ಅವರ ಮಂದಿರ, ರಾಮನ ಅಥವಾ ದೇಶದ ಮಂದಿರವಂತೂ ಖಂಡಿತಾ ಅಲ್ಲ. ನಾಲ್ಕು ಶತಮಾನಗಳ ಕಾಲ ಅಸ್ಥಿತ್ವದಲ್ಲಿದ್ದಂತಹ ಮಸೀದಿಯೊಂದನ್ನು ಧ್ವಂಸಗೊಳಿಸಲು ಯೋಜನೆ ರೂಪಿಸಿದ ಹಾಗೂ ಆ ವಿಧ್ವಂಸಕ ಕೃತ್ಯವನ್ನು ಕಾರ್ಯರೂಪಕ್ಕೆ ಇಳಿಸಿದ ಕಾರಣಕ್ಕೆ ಜೈಲು ವಾಸ ಅನುಭವಿಸ ಬೇಕಾದವರು 2020ರ ಆಗಸ್ಟ್ 5ರಂದು ಸ್ವತಂತ್ರವಾಗಿ ಪೂಜೆ ನೆರವೇರಿಸುತ್ತಿದ್ದರು.
ಭಾರತದ ಕೆಲವು ಅತ್ಯಂತ ಪ್ರಭಾವಿ ಮಾಧ್ಯಮಗಳು ಬಿಜೆಪಿಯ ಎರಡು ಪ್ರಮುಖ ಸುಳ್ಳುಗಳನ್ನು ಸತ್ಯವೆಂದು ನಂಬಿಸುವಲ್ಲಿ ಸಫಲವಾದವು. ಮೊದಲನೇಯದು, RSSನ, RSSನಿಂದ ಮತ್ತು RSSಗಾಗಿ ಕಟ್ಟಲ್ಪಡುತ್ತಿರುವ ಮಂದಿರವನ್ನು ʼಹಿಂದುʼಗಳ ಮಂದಿರವೆಂದು, ಇದಕ್ಕೂ ಮಿಗಿಲಾಗಿ ಇದು ರಾಷ್ಟ್ರದ ಮಂದಿರವೆಂದು ಬಿಂಬಿಸುವಲ್ಲಿ ಸಫಲವಾದವು. ಎರಡನೇಯದು, ಸಂವಿಧಾನದ 370ನೇ ಮತ್ತು 35A ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆಯನ್ನು ಕಿತ್ತೊಗೆದ ಘಟನೆಯನ್ನು ಭಯೋತ್ಪಾದನೆಯ ವಿರುದ್ದ ಹೂಡಿದ ಯುದ್ದ, ಆರ್ಥಿಕತೆಯ ಅಭಿವೃದ್ದಿಗಾಗಿ ಹಾಗೂ ಅಲ್ಲಿನ ಜನರನ್ನು ನಿಜವಾದ ಭಾರತೀಯರನ್ನಾಗಿಸುವ ಪ್ರಯತ್ನ ಎಂದು ಬಿಂಬಿಸಲಾಯಿತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿ ಅಲ್ಲಿ ರಾಮ ಮಂದಿರವನ್ನು ಕಟ್ಟುವ ಯೋಜನೆ ಯಾವತ್ತಿದ್ದರೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಯೋಜನೆ. 80ರ ದಶಕದ ಮಧ್ಯ ಭಾಗದಿಂದ ಹಿಡಿದು ಡಿಸೆಂಬರ್ 6, 1992ರವರೆಗೆ ಬಿಜೆಪಿಯು ಆರ್‌ಎಸ್‌ಎಸ್ ಅನ್ನು ಬಳಸಿಕೊಂಡು ತನ್ನ ಮಹತ್ತರವಾದ ಆಂದೋಲನವನ್ನು ಜಾರಿಗೊಳಿಸಿತು. ಈ ಧರ್ಮ ಆಧಾರಿತ ರಾಜಕಾರಣ ಬಿಜೆಪಿಯ ಪಾಲಿಗೆ ವರವಾಗಿ ಪರಿಣಮಿಸಿತು. 1984ರಲ್ಲಿದ್ದ ಎರಡು ಸೀಟುಗಳಿಂದ 1989ರಲ್ಲಿ 85 ಸೀಟುಗಳನ್ನು ಪಡೆಯುವಲ್ಲಿ ಬಿಜೆಪಿ ಸಫಲವಾಯಿತು. ಇದಾಗಿ ಒಂದು ದಶಕದ ನಂತರ 182 ಸೀಟುಗಳನ್ನು ಪಡೆಯುವಲ್ಲಿ ವರೆಗೂ ಬಿಜೆಪಿ ಬೆಳೆಯಿತು. ಮತ್ತೊಂದು ದಶಕ ಕಳೆದ ನಂತರ ಪಕ್ಷದ ಶೇಕಡಾವಾರು ಮತಗಳು ಸಂಖ್ಯೆ 18%ಕ್ಕೆ ಇಳಿಯಿತು ಇದಾದ ನಂತರ 2019ರಲ್ಲಿ ನರೇಂದ್ರ ಮೋದಿ ಅದನ್ನು 37%ಕ್ಕೆ ಏರಿಸಿದರು. 2019ರಲ್ಲಿ ನಮಗೆ ಮತ ಹಾಕಿದರೆ ನೀವು ನಮ್ಮವರು ಇಲ್ಲವಾದಲ್ಲಿ ಅಲ್ಲ ಎಂಬ ಭಾವನೆಯನ್ನು ನೇರವಾಗಿ ಜನರಿಗೆ ತಲುಪಿಸಿ ಒಡೆದು ಆಳುವ ನೀತಿಯನ್ನು ಸ್ಪಷ್ಟವಾಗಿ ದೇಶದೆದುರು ಬಿಚ್ಚಿಟ್ಟರು.
ಇಲ್ಲಿ ಶೇಕಡಾವರು ಮತಗಳನ್ನು ನೀಡಿದ ಉದ್ದೇಶವೇನೆಂದರೆ, ಇಷ್ಟು ಶೇಕಡಾ ಜನರು ಮಾತ್ರ ರಾಮ ಮಂದಿರ ಬೇಕೆಂದು ಮತ ಹಾಕಿದವರು. ಆದರೂ, ಪ್ರತೀ ಬಾರಿ ರಾಮ ಮಂದಿರದ ವಿಚಾರ ತಲೆ ಎತ್ತಿದಾಗ, ಬಿಜೆಪಿ, ಆರ್‌ಎಸ್‌ಎಸ್ ಮತ್ತು ಮಾಧ್ಯಮಗಳು ರಾಮ ಮಂದಿರವನ್ನು ʼದೇಶದʼ ಜನರ ಬಹು ವರ್ಷಗಳ ಬೇಡಿಕೆಯೆಂದು ಉಸಿರುಗಟ್ಟಿಸುವಂತೆ ಹೇಳುತ್ತಲೇ ಬಂದಿದ್ದಾರೆ.

ಸಂಘದ ಕೇವಲ 35 ವರ್ಷಗಳ ಹೋರಾಟವನ್ನು ಕ್ಷಣ ಮಾತ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಶತಮಾನಗಳ ಹೋರಾಟವೆಂದು ಬಿಂಬಿಸಿದರು. “ಇಂದಿನ ದಿನವನ್ನು ನೋಡಲು ನಾವು ಬದುಕಿರುತ್ತೇವೆ ಎಂಬ ಆಲೋಚನೆಯನ್ನು ಕೂಡಾ ಮಾಡಲು ಸಾಧ್ಯವಾಗದೇ ಇರುವ ನೂರಾರು ಜನರಿದ್ದಾರೆ,” ಎಂದು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಹೇಳಿದಾಗ ಹೇಳಲು ಮರೆತ ಒಂದು ವಿಚಾರವೇನೆಂದರೆ ಈ ದಿನವನ್ನು ನೋಡಲು ಇನ್ನೂ ಸಾವಿರಾರು ಜನರು ಬದುಕಿರಬೇಕಿತ್ತು, ಆದರೆ, ಸಂಘಿಗಳ ಮಂದಿರ ಆಂದೋಲನದಿಂದ ಉಂಟಾದ ಹಿಂಸಾಚಾರದಲ್ಲಿ ಸಾವನ್ನಪ್ಪಿದ್ದರು.
ಪ್ರಧಾನಿ ಹುದ್ದೆಯ ಅವಕಾಶವನ್ನು ಪಡೆದ ನಂತರ ದಶಕಗಳ ಕಾಲ ನ್ಯಾಯಾಲಯದಲ್ಲಿ ಇದ್ದಂತಹ ಅಯೋಧ್ಯೆ ವಿವಾದವನ್ನು ಅತ್ಯಂತ ಶೀಘ್ರವಾಗಿ ಇತ್ಯರ್ಥಗೊಳಿಸಿ, ತಮ್ಮ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಸಿಬಿಐ ಮೇಲೆ ಒತ್ತಡ ಹೇರಿ, ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆಯನ್ನು ನಿಧಾನವಾಗಿಸಿ, ಇನ್ನೂ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರಿಂನಿಂದ ತೀರ್ಪು ಬರುವಂತೆ ಮಾಡಿಯೇಬಿಟ್ಟರು ನರೇಂದ್ರ ಮೋದಿ. ಸುಪ್ರಿಂ ತನ್ನ ತೀರ್ಪಿನಲ್ಲಿಯೂ, ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಹಾಗೂ ಇಷ್ಟು ವರ್ಷಗಳ ಕಾಲ ಮುಸ್ಲಿಮರು ಅಯೋಧ್ಯೆಯನ್ನು ತಮ್ಮ ವಶದಲ್ಲಿಟ್ಟುಕೊಂಡದ್ದು ಕೂಡಾ ಅಪರಾಧ ಎಂದು ಹೇಳಿದ ಕೋರ್ಟ್ ಇನ್ನೂ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವವರಿಗೆ ಅಯೋಧ್ಯೆಯನ್ನು ಒಪ್ಪಿಸಿದರು.
ಈ ತೀರ್ಪಿನ ನಂತರ ರಾಮ ಮಂದಿರವನ್ನು ನಿರ್ಮಿಸಲು ಟ್ರಸ್ಟ್‌ನ ನಿರ್ಮಾಣವನ್ನೂ ಸರ್ಕಾರ ಮಾಡಿತು. ಆದರೆ, ಇಲ್ಲಿಯೂ ತಮ್ಮ ಅಜೆಂಡಾವನ್ನು ಪ್ರತಿಪಾದಿಸಲು ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಹಾಗೂ ಅವರ ಮೇಲೆ ತಪ್ಪು ಸಾಬೀತಾದರೆ ಜೈಲು ಪಾಲಾಗುವ ಭೀತಿಯಲ್ಲಿಯೂ ಇರುವಂತಹ ನೃತ್ಯ ಗೋಪಾಲ ದಾಸ್ ಮತ್ತು ಚಂಪತ್ ರೈ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
ಈ ರಾಮ ಮಂದಿರ ಶೀಲಾನ್ಯಾಸ ಕಾರ್ಯಕ್ರಮವನ್ನು ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಹಾಗೂ ಅವರ ಸುತ್ತಲಿನ ಮಾಧ್ಯಮಗಳು ಯಾವ ರೀತಿ ವೈಭವೀಕರಿಸಿದವೆಂದರೆ, ಇದು ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರದಿಂದ ಹಿಂದೂ ರಾಷ್ಟ್ರ ಮಾಡುವ ಎಲ್ಲಾ ಹುನ್ನಾರದಿಂದ ಅಡಗಿತ್ತು. ಆಗಸ್ಟ್ 5ರ ಎರಡು ಘಟನೆಗಳು ಆರ್‌ಎಸ್‌ಎಸ್‌ನ ಹಿಂದೂ ರಾಷ್ಟ್ರ ಯೋಜನೆಗೆ ಇನ್ನಷ್ಟು ಬಲ ತಂದುಕೊಟ್ಟಿದ್ದು, ಮುಂದಿನ ತಿಂಗಳು ಅಥವಾ ವರ್ಷಗಳಲ್ಲಿ ಇದು ಇನ್ನಷ್ಟು ವೇಗವನ್ನು ಪಡೆದುಕೊಳ್ಳುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿಗೆ ಅಧಿಕಾರಕ್ಕೆ ಏರಿದಾಗ ತ್ತ್ರಿವಳಿ ತಲಾಕ್‌ಗಿಂತಲೂ ಹೆಚ್ಚಿನ ಶೃದ್ದೆ ಇರಿಸಿ ಸಂವಿಧಾನಕ್ಕೆ ಕೊಡಲಿ ಏಟು ನೀಡಿದ್ದು, ಜಮ್ಮು ಕಾಶ್ಮೀರದ ವಿಚಾರದಲ್ಲಿ. ಆ ಘಟನೆಗೆ ಒಂದು ವರ್ಷವಾದ ನಂತರ ಈಗ ಸ್ಪಷ್ಟವಾದ ವಿಚಾರವೇನೆಂದರೆ ಜಮ್ಮು ಕಾಶ್ಮೀರದ ಏಕೀಕರಣದಿಂದ ಅಲ್ಲಿನ ಜನರು ತಮ್ಮ ಹಕ್ಕುಗಳಿಂದ ವಂಚಿತರಾದರಷ್ಟೇ ಹೊರತು, ಬೇರೇನಲ್ಲ. ಸದ್ಯದ ಪರಿಸ್ಥಿತಿಯಲ್ಲಂತೂ, ದೇಶದಲ್ಲಿ ಸಂವಿಧಾನದ ಪರವಾಗಿ ಮಾತನಾಡುವವರು ಯಾರೂ ಇಲ್ಲದ ಕಾರಣ, ಕ್ರಮೇಣ ದಿನಗಳಲ್ಲಿ ಕಾಶ್ಮೀರದಲ್ಲಿ ನಡೆದಂತಹ ಏಕೀಕರಣಕ್ಕೆ ದೇಶದ ಮೂಲೆ ಮೂಲೆಗಳಲ್ಲಿನ ಜನರು ಹೊಂದಿಕೊಂಡು ಹೋಗುತ್ತಾರೆ. ಈ ಆಗಸ್ಟ್ 5ರ ದಿನಾಂಕ ನರೇಂದ್ರ ಮೋದಿ ದೇಶದ ಜನತೆಗಾಗಿ ಯೋಚಿಸಿರುವ ಭವಿಷ್ಯದ ಹಾದಿಯನ್ನು ತೋರಿಸುತ್ತದೆ.
1990ರ ಕೊನೆಯಲ್ಲಿ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಿ ಭಾರತಕ್ಕೆ ಬಂದಿದ್ದ ಯುಗೋಸ್ಲಾವಿಯಾದ ನಾಗರಿಕ ಫಿಯೊದೊರ್ ಸ್ಟಾರ್‌ಚೆವಿಕ್, 2003ರಲ್ಲಿ ನಿವೃತ್ತಿ ಹೊಂದಿ ಭಾರತದಿಂದ ವಾಪಾಸ್ಸು ಮರಳುವಾಗ ಹೇಳಿದ ಮಾತುಗಳೇನೆಂದರೆ, ನಾನು ಯಾವ ದೇಶಕ್ಕೆ ಮರಳುತ್ತಿದ್ದೇನೆಂದು ನನಗೇ ತಿಳಿದಿಲ್ಲ, ಎಂದು. ಏಕೆಂದರೆ, 1990ರ ಆರಂಭದಿಂದಲೇ ಯುಗೋಸ್ಲಾವಿಯಾದ ನಾಯಕರು, ಜಾತಿ, ಧರ್ಮ ಹಾಗೂ ವರ್ಗಗಳಿಗೂ ಮೀರಿ ಎಲ್ಲಾ ನಾಗರಿಕರಿಗೂ ಸಮಾನವಾದ ಹಕ್ಕುಗಳನ್ನು ನೀಡುವ ಯೋಜಿತ ರಾಷ್ಟ್ರವನ್ನು ರೂಪಿಸುವ ನಿರ್ಧಾರದಿಂದ ಹಿಂದೆ ಸರಿದರು. ಹಾಗಾಗಿ ಇಂದು ಕೊಸೋವೊ (ಒಂದಾನೊಂದು ಕಾಲದಲ್ಲಿ ಇದ್ದಂತಹ ರಾಷ್ಟ್ರ)ವನ್ನು ಸೇರಿಸಿದರೆ, ಏಳು ಪ್ರತ್ಯೇಕ ರಾಷ್ಟ್ರಗಳು ಅಥವಾ ವಸಾಹತುಗಳು ನಿರ್ಮಾಣವಾಗಿವೆ.
ಫಿಯೊದೊರ್ ಸ್ಟಾರ್‌ಚೆವಿಕ್ ಭಾರತದಿಂದ ಮರಳುವಾಗ ಭಾರತವು 2002ರ ಗೋದ್ರಾ ಹತ್ಯಾಕಾಂಡದ ಆಘಾತದಿಂದ ಚೇತರಿಸಿಕೊಳ್ಳುತ್ತಿತ್ತು ಅಷ್ಟೇ. ಅಂತಹ ಸಂದರ್ಭದಲ್ಲಿ ದೇಶವನ್ನು ಬಿಟ್ಟು ಹೋಗುತ್ತಿದ್ದ ಸ್ಟಾರ್‌ಚೆವಿಕ್ ತಮ್ಮ ವಿದಾಯ ಭಾಷಣದಲ್ಲಿ, ರಾಷ್ಟ್ರವೊಂದು ಏನು ಮಾಡಬಾರದು ಎಂಬುದನ್ನು ಕಲಿಯಲು ಯುಗೋಸ್ಲಾವಿಯಾವನ್ನು ನೋಡಿ ಕಲಿಯಬೇಕು, ಎಂದು ಹೇಳಿದ್ದರು.
ಆದರೆ, ಈಗಿನ ಭಾರತದ ಪರಿಸ್ಥಿತಿಯಲ್ಲಿ ಆರ್‌ಎಸ್‌ಎಸ್ ತನ್ನ ಮಾತನ್ನಷ್ಟೇ ಹೊರತು ಬೇರೆ ಏನನ್ನೂ ಕೇಳಲು ಸಿದ್ದವಿಲ್ಲ. ಆಗಸ್ಟ್ 5ರಂದು ಮೋದಿ ನೆರವೇರಿಸಿದ ಶಿಲಾನ್ಯಾಸ ಕಾರ್ಯಕ್ರಮದ ಕಟ್ಟಡ ಸುಳ್ಳು, ಮೋಸ, ಹಿಂಸೆ ಮತ್ತು ರಕ್ತಪಾತದಿಂದ ಕಟ್ಟುವಂತದ್ದು. ಅವರು ಅದನ್ನು ಮಂದಿರವೆಂದು ಕರೆಯಬಹುದು. ದೇಶದ ಲಕ್ಷಾಂತರ ಜನರನ್ನು ನಂಬಿಸಬಹುದು. ಆದರೆ, ತಮ್ಮ ರಾಜಕಾರಣದುದ್ದಕ್ಕೂ, ಕಾನೂನುಗಳನ್ನು ಮುರಿಯುತ್ತಾ, ನೈತಿಕತೆ ಮತ್ತು ಒಗ್ಗಟ್ಟನ್ನು ಒಡೆಯುತ್ತಾ ಬಂದಿರುವ ವ್ಯಕ್ತಿಯಿಂದ ಆ ಕಟ್ಟಡದಲ್ಲಿ ಪರಿಶುದ್ದವಾದ ಆದ್ಯಾತ್ಮವನ್ನು ತುಂಬಲು ಎಂದಿಗೂ ಸಾಧ್ಯವಾಗಲಾರದು.
ಕೃಪೆ: ದ ವೈರ್