ಸರ್ಕಾರ ನಡೆಸಿದ ಸೀಮಿತ ಪರೀಕ್ಷೆಗಳಿಂದ ಈವರೆಗೆ ದೇಶದಲ್ಲಿ ಹನ್ನೊಂದೂವರೆ ಲಕ್ಷ ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಆದರೆ, ಇದು ವಾಸ್ತವವಾಗಿ ದೇಶದಲ್ಲಿ ಇರುವ ಸೋಂಕಿತರ ಪ್ರಮಾಣದಲ್ಲಿ ತೀರಾ ನಗಣ್ಯ ಪ್ರಮಾಣ ಎಂಬ ವಾದ ಆರಂಭದಿಂದಲೂ ಇತ್ತು. ಇದೀಗ ದೇಶದಲ್ಲಿ ವಾಸ್ತವವಾಗಿ ಸುಮಾರು 18 ಕೋಟಿ ಮಂದಿಗೆ ಸೋಂಕು ತಗಲಿದೆ ಎಂದು ಹೊಸ ಸಮೀಕ್ಷೆಯೊಂದು ದೃಢಪಡಿಸಿದೆ!
ಆ ಮೂಲಕ ಸೋಂಕು ಈವರೆಗೆ ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂದು ಪಟ್ಟು ಹಿಡಿದಿರುವ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳ ವಾದ ಎಷ್ಟು ಪೊಳ್ಳು ಎಂಬುದನ್ನು ಮತ್ತು ಅದೇ ಹೊತ್ತಿಗೆ, ದೇಶದಲ್ಲಿ ಕರೋನಾ ಮಹಾಮಾರಿ ತೀರಾ ಆತಂಕ ಪಡುವ ಪ್ರಮಾಣದಲ್ಲಿ ಜೀವ ಹಾನಿ ಮಾಡುತ್ತಿಲ್ಲ ಎಂಬ ಆಶಾದಾಯಕ ಸಂಗತಿಯನ್ನೂ ಆ ಹೊಸ ಸಮೀಕ್ಷೆ ಬಯಲಿಗೆ ತಂದಿದೆ. ಖಾಸಗೀ ಲ್ಯಾಬೊರೇಟರಿ ನಡೆಸಿದ ಈ ಸಮೀಕ್ಷೆಯ ಇದೀಗ ಟ್ವಿಟರ್ ಮೂಲಕ ಸಾರ್ವಜನಿಕವಾಗಿದ್ದು, ದೇಶದಲ್ಲಿ ಈಗಾಗಲೇ ಸುಮಾರು 18 ಕೋಟಿ ಮಂದಿಗೆ ಕರೋನಾ ಸೋಂಕು ತಗುಲಿದ್ದು, ಸೋಂಕಿತರಲ್ಲಿ ಈ ವೈರಾಣು ವಿರುದ್ಧ ಹೋರಾಡಲು ವೈರಾಣು ನಿರೋಧಕ ಆಂಟಿಬಾಡಿಗಳು ಅಭಿವೃದ್ಧಿಯಾಗಿವೆ ಎಂದಿದೆ.
ಥೈರೋಕೇರ್ ಲ್ಯಾಬೊರೇಟರಿ ದೇಶದ ವಿವಿಧ 600 ಪ್ರದೇಶಗಳ(ಪಿನ್ ಕೋಡ್) ವ್ಯಾಪ್ತಿಯಲ್ಲಿ ಸುಮಾರು 20 ದಿನಗಳ ಅವಧಿಯಲ್ಲಿ ನಡೆಸಿದ 60,000 ಆಂಟಿಬಾಡಿ ಟೆಸ್ಟ್ಗಳ ಮೂಲಕ ಈ ಸಂಗತಿ ಬಯಲಾಗಿದ್ದು, ಆ ಅಂದಾಜಿನ ಪ್ರಕಾರ ದೇಶದ ಶೇ.15ರಷ್ಟು ಜನಸಂಖ್ಯೆ ಈಗಾಗಲೇ ಕರೋನಾ ಸೋಂಕಿಗೆ ಒಳಗಾಗಿದೆ ಎಂದು ಥರೋಕೇರ್ ಮುಖ್ಯಸ್ಥ ಡಾ ಎ ವೇಲುಮಣಿ ಟ್ವೀಟ್ ಮಾಡಿದ್ದಾರೆ.
“ನಮ್ಮದು ಬಹಳ ಶೀಘ್ರಗತಿಯ ಮತ್ತು ಖಚಿತ ಅಂಕಿಅಂಶ ಆಧಾರಿತ ಅಂದಾಜು. ಅತ್ಯಂತ ವ್ಯವಸ್ಥಿತವಾಗಿ, ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರವ್ಯಾಪಿ ನಡೆಸಿದ ಆಂಟಿಬಾಡಿಎಕ್ಸಿಟ್ ಪೋಲ್ ಇದಾಗಿದ್ದು, ಶೇ.3ರಷ್ಟು ವ್ಯತ್ಯಯವಿರಬಹುದಾದರೂ, ನಾವು ನಡೆಸಿದ 60,000 ಮಂದಿಯ ಆಂಟಿಬಾಡಿ ಟೆಸ್ಟ್ ನಲ್ಲಿ ಶೇ.15ರಷ್ಟು ಮಂದಿಗೆ ಕರೋನಾ ವೈರಾಣು ನಿರೋಧಕ ಆಂಟಿಬಾಡಿಗಳು ಪತ್ತೆಯಾಗಿವೆ ಎಂದು ಡಾ ವೇಲುಮಣಿ ಹೇಳಿದ್ದಾರೆ.
ಜೂನ್ ಮೊದಲ ವಾರದಲ್ಲಿ ಐಸಿಎಂಆರ್ ನಡೆಸಿದ ಸೀರೋಪ್ರಿವಿಲೆನ್ಸ್ ಪರೀಕ್ಷೆಯ ಫಲಿತಾಂಶಕ್ಕೆ ಥೈರೋಕೇರ್ ನ ಈ ಸಮೀಕ್ಷೆ ಸಾಮ್ಯತೆ ಹೊಂದಿದ್ದು, ಇದೊಂದು ಅಧಿಕೃತ ಸಮೀಕ್ಷೆಯಲ್ಲದೇ ಇದ್ದರೂ ದೇಶದಲ್ಲಿ ಕರೋನಾ ಸೋಂಕಿನ ವ್ಯಾಪಕತೆಯ ವಿಷಯದಲ್ಲಿ ಮತ್ತು ಅದನ್ನು ಆಧರಿಸಿದ ಸಮುದಾಯದ ಮಟ್ಟದಲ್ಲಿ ವೈರಾಣು ಪ್ರಸರಣ ಆಗುತ್ತಿದೆಯೇ ಇಲ್ಲವೇ ಎಂಬ ಜಿಜ್ಞಾಸೆಯ ಹಿನ್ನೆಲಯಲ್ಲಿ ಈ ಸಮೀಕ್ಷೆ ಮಹತ್ವ ಪಡೆದುಕೊಂಡಿದೆ. ಐಸಿಎಂಆರ್ ತನ್ನ ಸೀರೋಫ್ರಿವಿಲೆನ್ಸ್ ಪರೀಕ್ಷೆಯ ಮಾಹಿತಿಯನ್ನು ಅಧಿಕೃತವಾಗಿ ಬಹಿರಂಗಪಡಿಸದೇ ಹೋದರೂ, ವಿವಿಧ ಮೂಲಗಳ ಮೂಲಕ ಸೋರಿಕೆಯಾದ ಮಾಹಿತಿ ಪ್ರಕಾರ, ಜೂನ್ ಮೊದಲ ವಾರದ ಹೊತ್ತಿಗೇ ದೇಶದ ಶೇ.15-20ರಷ್ಟು ಮಂದಿಯಲ್ಲಿ ಕರೋನಾ ವೈರಾಣು ನಿರೋಧಕ ಆಂಟಿಬಾಡಿಗಳು ಪತ್ತೆಯಾಗಿವೆ ಎನ್ನಲಾಗಿತ್ತು. ಅಂದರೆ, ಅಷ್ಟು ಪ್ರಮಾಣದ ಜನಸಂಖ್ಯೆ ಅದಾಗಲೇ ಕರೋನಾ ಸೋಂಕಿಗೆ ಒಳಗಾಗಿತ್ತು ಎಂದು ಹೇಳಲಾಗಿತ್ತು!
ಆದರೆ, ತನ್ನ ಆ ಸಮೀಕ್ಷೆ ಆಳುವ ಸರ್ಕಾರಕ್ಕೆ ಇರಿಸು ಮುರಿಸು ತರಲಿದೆ ಎಂಬ ಹಿನ್ನೆಲೆಯಲ್ಲಿ ಸರ್ಕಾರದ ಅಂಗವಾದ ಐಸಿಎಂಆರ್ ಆ ಸಮೀಕ್ಷೆಯ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ, ಇದೀಗ ಥೈರೋಕೇರ್ ನಡೆಸಿದ ಸಮೀಕ್ಷೆಯಲ್ಲಿ ಮತ್ತೊಮ್ಮೆ ದೇಶದ ಕರೋನಾ ಮಹಾಮಾರಿಯ ಅಟ್ಟಹಾಸದ ಕುರಿತ ವೈಜ್ಞಾನಿಕ ವಿವರಗಳು ಬಹಿರಂಗವಾಗಿವೆ.
ಆಂಟಿಬಾಡಿ ಪರೀಕ್ಷೆ ಆಧಾರಿತ ಈ ಸಮೀಕ್ಷೆಯ ಪ್ರಕಾರ ದೇಶದ ಥಾಣೆಯಲ್ಲಿ ಪರೀಕ್ಷೆಗೊಳಗಾದ ವ್ಯಕ್ತಿಗಳ ಪೈಕಿ ಶೇ.44ರಷ್ಟು ಮಂದಿಯಲ್ಲಿ ಆಂಟಿಬಾಡಿಗಳು ಪತ್ತೆಯಾಗಿವೆ. ಅದೇ ರೀತಿ ಬೆಂಗಳೂರಿನ ಪೀಣ್ಯ ದಾಸರಹಳ್ಳಿ ಪ್ರದೇಶದಲ್ಲಿಯೂ ಅಷ್ಟೇ ಪ್ರಮಾಣದಲ್ಲಿ ಆಂಟಿಬಾಡಿ ಪತ್ತೆಯಾಗಿದೆ. ಅಂದರೆ, ಈ ಎರಡು ಪ್ರದೇಶದಲ್ಲಿ(ಪರೀಕ್ಷೆ ನಡೆಸಿದ ಪ್ರದೇಶಗಳ ಪೈಕಿ) ಅತಿ ಹೆಚ್ಚು ಕರೋನಾ ಸೋಂಕಿತರು ಇರುವುದು ದೃಢಪಟ್ಟಿದೆ. ಕಾಕತಾಳೀಯವೆಂದರೆ; ದೇಶದ ಕರೋನಾ ಸೋಂಕಿತರ ಅಧಿಕೃತ ಮಾಹಿತಿಯ ಪ್ರಕಾರವೂ ಈ ಪ್ರದೇಶಗಳಲ್ಲಿ ಅತಿ ಹೆಚ್ಚು ಸೋಂಕು ಇದೆ. ನಂತರ ದೆಹಲಿಯ ಆನಂದ ವಿಹಾರ್(ಶೇ.37.7), ಹೈದರಾಬಾದಿನ ಜ್ಯುಬಿಲಿಹಿಲ್(ಶೇ.37.3), ಥಾಣೆಯ ದಹಿಸರ್(36.7) ಮತ್ತು ಮುಂಬೈನ ಘಾಟ್ ಕೋಪ್ಕರ್(36.7) ಪ್ರಮಾಣದಲ್ಲಿ ಆಂಟಿಬಾಡಿಗಳು ಕಂಡುಬಂದಿವೆ ಎಂದು ವರದಿ ಹೇಳಿದೆ. ಈ ಎಲ್ಲಾ ಪ್ರದೇಶಗಳು ಈಗಾಗಲೇ ಕಂಟೈನ್ ಮೆಂಟ್ ಅಥವಾ ರೆಡ್ ಝೋನ್ ವಲಯದಲ್ಲಿವೆ ಮತ್ತು ಈ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳು ದೇಶದ ಅತಿ ಹೆಚ್ಚು ಸೋಂಕಿತ ರಾಜ್ಯಗಳಾಗಿವೆ ಎಂಬುದು ಗಮನಾರ್ಹ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಲ್ಲದೆ, ದೇಶದಲ್ಲಿ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿದೆ ಎಂಬುದನ್ನು ಈ ಸಮೀಕ್ಷೆಯ ಕೆಲವು ನಿರ್ದಿಷ್ಟ ಪ್ರಕರಣಗಳು ತೋರಿಸಿಕೊಟ್ಟಿದ್ದು, ಉದಾಹರಣೆಗೆ ನೋಯ್ಡಾದ ಒಂದು ಕುಟುಂಬದ 15 ಮಂದಿಯ ಪೈಕಿ ಯಾರೊಬ್ಬರೂ ಯಾವುದೇ ಸೋಂಕಿತ ವ್ಯಕ್ತಿಗಳೊಂದಿಗೆ ಯಾವುದೇ ರೀತಿಯ(ನೇರ ಅಥವಾ ಪರೋಕ್ಷ) ಸಂಪರ್ಕ ಹೊಂದದೇ ಇದ್ದರೂ ನಾಲ್ವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಅಲ್ಲದೆ ನೋಯ್ಡಾದಲ್ಲಿ ನಡೆಸಿದ ಪರೀಕ್ಷೆಗಳ ಪೈಕಿ ಶೇ.23.7ರಷ್ಟು ಪ್ರಕರಣಗಳಲ್ಲಿ ಕರೋನಾ ವೈರಾಣು ಸೋಂಕಿಗೆ ಒಳಗಾಗಿರುವುದು ಆಂಟಿಬಾಡಿ ಪರೀಕ್ಷೆಯಿಂದ ದೃಢಪಟ್ಟಿದೆ. ಆ ಮೂಲಕ ನೋಯ್ಡಾದಲ್ಲಿನ ಸೋಂಕಿನ ವ್ಯಾಪಕತೆ ಮತ್ತು ಸೋಂಕಿತರೊಂದಿಗೆ ಸಂಪರ್ಕವಿರದವರಲ್ಲೂ ಅಲ್ಲಿ ಸೋಂಕು ಪತ್ತೆಯಾಗಿರುವುದು ದೇಶದಲ್ಲಿ ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ಹರಡುತ್ತಿಲ್ಲ ಎಂದು ವಾದ ಮಂಡಿಸುವ ಸರ್ಕಾರದ ವರಸೆ ಎಷ್ಟು ಪೊಳ್ಳು ಎಂಬುದಕ್ಕೆ ಒಂದು ನಿದರ್ಶನ ಕೂಡ!
ಈ ನಡುವೆ, ತಮ್ಮ ಈ ಪರೀಕ್ಷೆಗಳು ಒಂದು ವರ್ಗ, ಪ್ರದೇಶ ಮತ್ತು ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಡಾ ವೇಲುಮಣಿ, “ಯಾರನ್ನು ಪರೀಕ್ಷೆಗೊಳಪಡಿಸಬೇಕು ಎಂಬುದನ್ನು ನಾವು ನಿರ್ಧರಿಸಿಲ್ಲ. ತಾವಾಗಿಯೇ ಪರೀಕ್ಷೆಗೆ ಸ್ವಯಂಪ್ರೇರಿತರಾಗಿ ಬಂದವರ ಮೇಲೆ ನಡೆಸಿದ ಪರೀಕ್ಷೆಯ ಮಾಹಿತಿಯನ್ನು ಆಧರಿಸಿ ಈ ಸಮೀಕ್ಷೆಯನ್ನು ನಡೆಸಲಾಗಿದೆ. ಪರೀಕ್ಷೆಗೊಳಗಾದವರ ಪೈಕಿ ಶೇ.80ರಷ್ಟು ವಿವಿಧ ಕಾರ್ಪೊರೇಟ್ ಕಂಪನಿಗಳಿಗೆ ಸಂಬಂಧಿಸಿದವರು, ಶೇ.15ರಷ್ಟು ಮಂದಿ ವಿವಿಧ ವಸತಿ ಸಮುಚ್ಛಯಗಳಿಗೆ ಸೇರಿದವರು ಮತ್ತು ಉಳಿದ ಶೇ.5ರಷ್ಟು ಮಂದಿ ವ್ಯಕ್ತಿಗತವಾಗಿ ಸ್ವಯಂಪ್ರೇರಣೆಯಿಂದ ಪರೀಕ್ಷೆಗೆ ಬಂದವರು” ಎಂದೂ ಹೇಳಿದ್ದಾರೆ.
ಇನ್ನು ನಿರ್ದಿಷ್ಟವಾಗಿ ಸೋಂಕಿನ ಸಮುದಾಯ ಮಟ್ಟದ ಪ್ರಸರಣದ ವಿಷಯದಲ್ಲಿ ಕೂಡ ತಮ್ಮ ಸಮೀಕ್ಷೆ ಐಸಿಎಂಆರ್ ಸಮೀಕ್ಷೆಗಿಂತ ಹೆಚ್ಚು ನಂಬಿಕಾರ್ಹ. ಏಕೆಂದರೆ, ಐಸಿಎಂಆರ್ ನಂತೆ ನಮ್ಮದು ಕೆಲವೇ ಕೆಲವು ಪ್ರದೇಶಗಳಿಗೆ ಸೀಮಿತವಾಗಿ ಮತ್ತು ಹಲವು ಹತ್ತು ಲ್ಯಾಬ್ ಗಳ ಭಿನ್ನ ಪರೀಕ್ಷಾ ಮಾದರಿಯ ಮೂಲಕ ನಡೆದ ಪರೀಕ್ಷೆಯಲ್ಲ. ಬದಲಾಗಿ ಒಂದೇ ಲ್ಯಾಬ್ ಮತ್ತು ಪದ್ಧತಿಯ ಮೂಲಕ ದೇಶದ ಬೇರೆಬೇರೆ ಕಡೆ ನಡೆಸಿದ ಪರೀಕ್ಷೆಗಳ ಫಲಿತಾಂಶ ಎಂದೂ ಥೈರೋ ಕೇರ್ ಮುಖ್ಯಸ್ಥರು ಹೇಳಿದ್ದಾರೆ.
ಆ ಹಿನ್ನೆಲೆಯಲ್ಲಿ, ‘ಐಸಿಎಂಆರ್ ಎರಡನೇ ಸಮೀಕ್ಷೆ ಕೂಡ ದೇಶದಲ್ಲಿ ಶೇ.20ರಷ್ಟು ಮಂದಿಗೆ ಕರೋನಾ ಸೋಂಕು ಇರಬಹುದು ಎನ್ನಲಾಗಿತ್ತು. ಆ ಪ್ರಕಾರವೇ ಆದರೂ, ದೇಶದ ಒಟ್ಟು ಜನಸಂಖ್ಯೆ 140 ಕೋಟಿ ಎಂದರೆ; ಸದ್ಯ ಸುಮಾರು 28 ಕೋಟಿ ಮಂದಿಗೆ ಸೋಂಕು ತಗಲಿದೆ ಎಂದರ್ಥ. ಐಸಿಎಂಆರ್ ಮೊದಲ ಸಮೀಕ್ಷೆ ಪ್ರಕಾರ ಕೂಡ, ಏಪ್ರಿಲ್ ನಲ್ಲಿಯೇ ಶೇ.0.73ರಷ್ಟು ಮಂದಿಗೆ ಸೋಂಕು ತಗಲಿದೆ ಎನ್ನಲಾಗಿತ್ತು. ಅಂದರೆ ಆಗ ಒಂದು ಕೋಟಿ ಜನರಿಗೆ ಸೋಂಕು ತಗಲಿತ್ತು. ಸರ್ಕಾರದ ಅಂದಾಜಿನ ಪ್ರಕಾರವೇ ಸೋಂಕಿತ ಸಂಖ್ಯೆ ದುಪ್ಪಟ್ಟಾಗಲೂ 20 ದಿನಗಳ ಕಾಲಾವಕಾಶ ಬೇಕು ಎಂದುಕೊಂಡರೂ ಇದೀಗ ಸೋಂಕಿತರ ಪ್ರಮಾಣ 16 ಕೋಟಿಯಷ್ಟಾಗಿರಬೇಕು. ಹಾಗಾಗಿ, ಹೇಗೇ ಅಂದಾಜಿಸಿದರೂ ಸದ್ಯ ದೇಶದಲ್ಲಿ ಸೋಂಕಿತರ ಪ್ರಮಾಣ 15-20 ಕೋಟಿಯ ಆಸುಪಾಸಿನಲ್ಲೇ ಇದೆ. ಆದಾಗ್ಯೂ ದೇಶದಲ್ಲಿ ಕರೋನಾ ಸಾವಿನ ಪ್ರಮಾಣ ಏರಿಕೆಯಾಗಿಲ್ಲ ಎಂಬುದು ಸದ್ಯಕ್ಕೆ ಸಮಾಧಾನಪಟ್ಟುಕೊಳ್ಳಬೇಕಾದ ಸಂಗತಿ’ ಎಂದು ವೆಲ್ ಕಮ್ ಟ್ರಸ್ಟ್ ಡಿಬಿಟಿ ಇಂಡಿಯಾ ಅಲೆಯನ್ಸ್ ಸಿಇಒ ಪ್ರೊ ಶಾಹಿದ್ ಜಮೀಲ್ ವಿಶ್ಲೇಷಿಸಿದ್ದಾರೆ(ದ ಕ್ವಿಂಟ್).
ಒಟ್ಟಾರೆ, ಕರೋನಾ ಸೋಂಕು ಸಮುದಾಯದ ಮಟ್ಟದಲ್ಲಿ ಪ್ರಸರಣವಾಗುತ್ತಿಲ್ಲ ಎಂದು ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳು ಯಾವುದೇ ನಿಖರ ಮಾಹಿತಿ, ಅಧ್ಯಯನ, ವಿಶ್ಲೇಷಣೆಗಳ ಬಲವಿಲ್ಲದೆ ಪೊಳ್ಳು ಸಮರ್ಥನೆಗೆ ಇಳಿದಿರುವಾಗ, ದೇಶದ ವಿವಿಧ ಮೂಲಗಳಿಂದ ನಿಖರ ಅಧ್ಯಯನ, ಪರೀಕ್ಷೆ, ಸಮೀಕ್ಷೆಗಳ ಫಲಿತಾಂಶಗಳು ವಾಸ್ತವಾಂಶ ಬೇರೆಯೇ ಇದೆ ಎನ್ನುತ್ತಿವೆ.
ವಾಸ್ತವಾಂಶಗಳನ್ನು ಮುಚ್ಚಿಡುವುದರಲ್ಲಿ, ಸುಳ್ಳು-ಪೊಳ್ಳುಗಳ ಮೂಲಕ ಜನರನ್ನು ದಿಕ್ಕುತಪ್ಪಿಸುವ ಕಲೆಯಲ್ಲಿ ಪಳಗಿರುವ ಸರ್ಕಾರ, ಕರೋನಾದ ವಿಷಯದಲ್ಲಿ ಕೂಡ ಜನರ ಕಣ್ಣಿಗೆ ಮಂಕು ಬೂದಿ ಎರಚುತ್ತಿದೆ ಮತ್ತು ಸೋಂಕು ತಡೆಯ ನೆಪದಲ್ಲಿ ಲಾಕ್ ಡೌನ್ ಹೇರಿಕೆಯಂತಹ ಕ್ರಮಗಳ ಮೂಲಕ ಸರ್ಕಾರಿ ವ್ಯವಸ್ಥೆಯ ಖಾಸಗೀಕರಣ, ಕೃಷಿ ಕಾರ್ಪರೇಟೀಕರಣ, ಜನಸಾಮಾನ್ಯರ ಕಲ್ಯಾಣ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬುಡಮೇಲು ಮಾಡುವಂತಹ ಕೃತ್ಯಗಳನ್ನು ಯಶಸ್ವಿಯಾಗಿ ಜಾರಿಗೊಳಿಸುತ್ತಿದೆ ಎಂಬುದು ಕಟುವಾಸ್ತವ. ಜನವಿರೋಧಿ ನೀತಿಗಳನ್ನು ಜಾರಿಗೊಳಿಸಲು ಸರ್ಕಾರ ಪಾಲಿಗೆ ಕರೋನಾ ಮತ್ತು ಲಾಕ್ ಡೌನ್ ರಕ್ಷಣಾತ್ಮಕ ಗುರಾಣಿಗಳಾಗಿ ಒದಗಿಬಂದಿವೆ ಎಂಬುದು ಈಗ ಮುಚ್ಚಿಡಲಾಗದ ಸತ್ಯ ಸಂಗತಿ!