ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಕಳೆದ 14 ವಾರಗಳಲ್ಲಿ ಫೇಸ್ ಬುಕ್ ಸೇರಿದಂತೆ ಹದಿನಾಲ್ಕು ಅಂತಾರಾಷ್ಟ್ರೀಯ ಕಂಪನಿಗಳು ಹೂಡಿಕೆ ಮಾಡಿವೆ. ಇತ್ತೀಚಿನ ಸೇರ್ಪಡೆ ಎಂದರೆ ಗೂಗಲ್! ಈ ಎಲ್ಲಾ ಕಂಪನಿಗಳು ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಪ್ಲಾಟ್‌ಫಾರಂನಲ್ಲಿ ಹೂಡಿಕೆ ಮಾಡುತ್ತಿವೆ. ಗೂಗಲ್ ಮಾಡುತ್ತಿರುವ 33,737 ಕೋಟಿ ರುಪಾಯಿ ಹೂಡಿಕೆಯೂ ಸೇರಿದಂತೆ ರಿಲಯನ್ಸ್ ಜಿಯೋ ಪ್ಲಾಟ್‌ಫಾರಂಗೆ ಹರಿದು ಬಂದಿರುವ ವಿದೇಶಿ ಕಂಪನಿಗಳ ಹೂಡಿಕೆಯ ಮೊತ್ತವು 1,52,055.45 ಕೋಟಿ ರುಪಾಯಿಗಳು.
ಇದೆಲ್ಲವೂ ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿ ಕೃಪಾಕಟಾಕ್ಷದಿಂದ ನಡೆದಿದ್ದು! ದುರಂತ ನೋಡಿ, ರಿಲಯನ್ಸ್ ಜಿಯೋ 5ಜಿ ಲಾಂಚ್ ಮಾಡುವತ್ತಾ ದಾಪುಗಾಲು ಹಾಕುತ್ತಿದ್ದರೆ, ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಭಾರತ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಇನ್ನೂ 4ಜಿ ಸೇವೆಯನ್ನು ಆರಭಿಸುವ ಹಂತದಲ್ಲಿ ಇದೆ. ರಿಲಯನ್ಸ್ ಜಿಯೋ ಯಶಸ್ಸಿಗಾಗಿ ಇಡೀ ಅಧಾರ್ ಮಾಹಿತಿಯನ್ನೇ ಧಾರೆ ಎರೆದ ನರೇಂದ್ರ ಮೋದಿ ಸರ್ಕಾರವು ಈಗ ಮತ್ತಷ್ಟು ಬೆಂಬಲವನ್ನು ರಿಲಯನ್ಸ್ ಜಿಯೋಗೆ ನೀಡುತ್ತಿದೆ.
ಇಲ್ಲಿ ಮೋದಿ ಸರ್ಕಾರ ಮತ್ತು ರಿಲಯನ್ಸ್ ಕಂಪನಿಗಳು ಹೇಗೆ “ಕೊಡು-ಕೊಳ್ಳುವಿಕೆ” ಮಾಡುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕತೆಯನ್ನು ಸರಿದಾರಿಗೆ ತರುವಲ್ಲಿ ವಿಫಲವಾದ, ಚೀನಾದ ಆಕ್ರಮಣದ ವಿಷಯದಲ್ಲಿ ದೇಶಕ್ಕೇ ಸುಳ್ಳುಮಾಹಿತಿ ನೀಡಿದ ಮತ್ತು ಕರೋನಾ ನಿಯಂತ್ರಿಸುವಲ್ಲಿ ವಿಫಲವಾದ ಪ್ರಧಾನಿ ನರೇಂದ್ರ ಮೋದಿ “ಆತ್ಮನಿರ್ಭರ” ಜುಮ್ಲಾ ಘೋಷಣೆ ಮಾಡಿ ಕೈತೊಳೆದುಕೊಂಡರು.
ಇಡೀ ದೇಶವೇ “ಆತ್ಮನಿರ್ಭರ”ದ ಬಗ್ಗೆ ಕಟು ಟೀಕೆ ಮಾಡುತ್ತಿದ್ದರೆ, ಮೋದಿಯ ವೈಫಲ್ಯತೆಯ ಬಗ್ಗೆ ಕುಹಕವಾಡುತ್ತಿದ್ದರೆ, ಮುಖೇಶ್ ಅಂಬಾನಿ ಒಡೆತನದ ದೇಶದ ಅತಿದೊಡ್ಡ ಮಾಧ್ಯಮ ಸಮೂಹವಾದ ನೆಟ್ವರ್ಕ್ 18 ಮತ್ತು ಟಿವಿ18 ಬ್ರಾಡ್ಕಾಸ್ಟ್ ಆತ್ಮನಿರ್ಭರದ ಪರವಾಗಿ ವ್ಯಾಪಕ ಪ್ರಚಾರ ಅಭಿಯಾನ ನಡೆಸಿದವು. ನೆಟ್ವರ್ಕ್ 18 ಸಮೂಹದಡಿಯಿರುವ ಪ್ರಾದೇಶಿಕ ಸುದ್ದಿವಾಹಿನಿಗಳು ಸೇರಿದಂತೆ ಎರಡು ಡಜನ್ ಸುದ್ದಿವಾಹಿನಿಗಳ ಪೈಕಿ ಪ್ರಮುಖ ಆಂಕರ್ ಗಳು ಆತ್ಮನಿರ್ಭರ ಕುರಿತು ಬಣ್ಣದ ಮಾತುಗಳನ್ನಾಡಿದರು. ನೆಟ್ವರ್ಕ್ 18 ಮತ್ತು ಟಿವಿ18 ಬ್ರಾಡ್ಕಾಸ್ಟ್ ಮುಖೇಶ್ ಅಂಬಾನಿ ಒಡೆತನದ ಇಂಡಿಪೆಂಡೆಂಟ್ ಮಿಡಿಯಾ ಟ್ರಸ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ರಿಲಯನ್ಸ್ ಇಂಡಸ್ಟ್ರೀಸ್ ನ ಜಿಯೋ ಪ್ಲಾಟ್‌ಫಾರಂಗೆ ಹೂಡಿಕೆ ಹರಿದು ಬರಲು ಪ್ರಮುಖ ಕಾರಣ ಇದು ಅತ್ಯುತ್ತಮ ಕಂಪನಿ ಎಂಬುದಲ್ಲ. ಬದಲಿಗೆ, ಪ್ರಧಾನಿ ಮೋದಿ ಸರ್ಕಾರದ ಬೆಂಬಲ ಇದೆ ಎಂಬ ಕಾರಣಕ್ಕೇ! ಪ್ರದಾನಿ ಮೋದಿಯು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್, ಎಂಟಿಎನ್ಎಲ್ ಗಿಂತಲೂ ರಿಲಯನ್ಸ್ ಜಿಯೋಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಕಾರಣಕ್ಕೇ ವಿದೇಶಿ ಹೂಡಿಕೆದಾರರು ರಿಲಯನ್ಸ್ ಜಿಯೋ ಪ್ಲಾಟ್‌ಫಾರಂನಲ್ಲಿ ನಾಮುಂದು ತಾಮುಂದು ಎಂದು ಹೂಡಿಕೆ ಮಾಡುತ್ತಿದ್ದಾರೆ. ಸರ್ಕಾರದ ಕೃಪಾಕಟಾಕ್ಷ ಇರುವ ಕಂಪನಿಗಳೆಂದರೆ ಹೂಡಿಕೆದಾರರಿಗೆ ನೆಮ್ಮದಿ.
ಮೋದಿ ಸರ್ಕಾರ ರಿಲಯನ್ಸ್ ಇಂಡಸ್ಟ್ರೀಸ್ ಗೆ ಬೆಂಬಲವಾಗಿ ನಿಂತಿರುವ ಕಾರಣಕ್ಕೆ ಮೂರು ತಿಂಗಳ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ.120 ರಷ್ಟು ಏರಿಕೆ ಕಂಡಿದೆ. ಸರ್ವಕಾಲಿಕ ಗರಿಷ್ಠ ಮಟ್ಟವಾದ 1978 ರುಪಾಯಿಗೆ ಜಿಗಿದಿದೆ. ನೆಟ್ವರ್ಕ್ 18 ಕಂಪನಿಯ ಷೇರು ಮೂರು ತಿಂಗಳ ಅವಧಿಯಲ್ಲಿ ಶೇ.200ರಷ್ಟು ಜಿಗಿದಿದೆ. 15 ರುಪಾಯಿ ಇದ್ದ ಷೇರು ಬೆಲೆ ಈಗ 45ಕ್ಕೇರಿದೆ. ಮುಖ್ಯ ವಿಷಯ ಏನೆಂದರೆ- ರಿಲಯನ್ಸ್ ಜಿಯೋ 5ಜಿ ಸೇವೆ ಆರಂಭಿಸುವ ಪ್ರಸ್ತಾಪ ಮಾಡಿದೆ. ಏರ್ಟೆಲ್, ವೊಡಾಫೋನ್ ಕೂಡಾ ಆ ನಿಟ್ಟಿನಲ್ಲಿ ಯೋಜನೆ ರೂಪಿಸಿವೆ. ಆದರೆ, ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇನ್ನೂ 4ಜಿ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ಒದಗಿಸುವಲ್ಲಿ ಸಫಲವಾಗಿಲ್ಲ. ಈ ಕಾರಣಕ್ಕಾಗಿ ಬಿಎಸ್ಎನ್ಎಲ್ ಗ್ರಾಹಕರು ಜಿಯೋಗೆ ಶಿಫ್ಟ್ ಆಗುತ್ತಿದ್ದಾರೆ. ವಾಸ್ತವಿಕ ಸತ್ಯ ಏನೆಂದರೆ ಮೋದಿ ಸರ್ಕಾರಕ್ಕೆ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕಂಪನಿಗಳು ಉಳಿಯುವುದು ಬೇಕಿಲ್ಲ.
ಮೋದಿ ಸರ್ಕಾರ ಮನಸ್ಸು ಮಾಡಿದ್ದರೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಕಂಪನಿಗಳು ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ಗಿಂತಲೂ ಅತಿದೊಡ್ಡ ಮತ್ತು ಅತ್ಯುತ್ತಮ ಸೇವೆ ಒದಗಿಸುವ ಕಂಪನಿಗಳಾಗಿ ರೂಪಿಸಬಹುದಿತ್ತು. ಆದರೆ, ನಷ್ಟದ ನೆಪವೊಡ್ಡಿ, ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ನರೇಂದ್ರಮೋದಿ ಸರ್ಕಾರವು, ರಿಲಯನ್ಸ್ ಜಿಯೋಗೆ ಪ್ರತ್ಯಕ್ಷ ಪರೋಕ್ಷ ಬೆಂಬಲ ನೀಡುವ ಮೂಲಕ ದೇಶದ ಸಂಪರ್ಕದ ಕೊಂಡಿಗಳಾಗಿರುವ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಗಳ ಶವಪೆಟ್ಟಿಗೆಗೆ ಒಂದೊಂದೇ ಮೊಳೆ ಜಡೆಯುತ್ತಾ ಬಂದಿದೆ.
ಮೋದಿ ಸರ್ಕಾರ ಜನರನ್ನು ಹೇಗೆ ವಂಚಿಸುತ್ತಿದೆ ನೋಡಿ! ಸರ್ಕಾರಿ ಕಂಪನಿಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಾ ಬರುತ್ತಿರುವ ಮೋದಿ ಸರ್ಕಾರವು ಅದೇ ವೇಳೆ ತಮಗೆ ಆಪ್ತರಾದ ಕಾರ್ಪೊರೆಟ್ ಕುಳಗಳನ್ನು ಬೆಳೆಸುತ್ತಾ ಬರುತ್ತಿದೆ. ದೇಶದ ಆರ್ಥಿಕತೆ ದುಸ್ಥಿತಿಗೆ ತಲುಪಿದ್ದರೂ, ಕರೋನಾ ಸೋಂಕು ತಡೆಯುವಲ್ಲಿ ಅತ್ಯಂತ ಹೀನಾಯವಾಗಿ ಮೋದಿ ಸರ್ಕಾರ ವೈಫಲ್ಯಗೊಂಡಿದ್ದರೂ, ಜನರ ಜೀವನ ಅತ್ಯಂತ ಬರ್ಬರವಾಗತೊಡಗಿದ್ದರೂ, ಮುಖೇಶ್ ಅಂಬಾನಿಯ ಅತಿದೊಡ್ಡ ಮಾಧ್ಯಮ ಸಂಸ್ಥೆಯಡಿಯಲ್ಲಿನ ಎರಡು ಡಜನ್ ಸುದ್ದಿವಾಹಿನಗಳ ಮೂಲಕ “ಆತ್ಮನಿರ್ಭರ” ಕುರಿತ ಪ್ರೊಪಗಾಂಡ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೋದಿ ಮುಟ್ಟಿದ್ದೆಲ್ಲವೂ ವೈಫಲ್ಯತೆಯ ಪರಾಕಾಷ್ಠೆಗಿಳಿಯುತ್ತಿದ್ದರೂ ಮೋದಿ ಮುಟ್ಟಿದ್ದೆಲ್ಲವೂ ಚಿನ್ನಾ ಎಂಬಂತೆ ಬಿಂಬಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ.
ರಿಲಯನ್ಸ್ ಜಿಯೋ ಫ್ಲಾಟ್ ಫಾರಂ 14 ವಾರಗಳಲ್ಲಿ ಅದೂ ವಿಶ್ವವೇ ಸಂಕಷ್ಟದಲ್ಲಿರುವ ಕಾಲದಲ್ಲಿ 1,52,055.45 ಕೋಟಿ ರುಪಾಯಿಗಳ ಹೂಡಿಕೆಯನ್ನು ಸಂಗ್ರಹಿಸುತ್ತದೆ. ಆದರೆ, ಇದೇ ನರೇಂದ್ರ ಮೋದಿ ಸರ್ಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೇ ವಿಶ್ವದಲ್ಲೇ ಗರಿಷ್ಠ ಮತ್ತು ಕೈಗೆಟುಕದ ವೈದ್ಯಕೀಯ ವೆಚ್ಚವನ್ನು ನಿರ್ಲಜ್ಜೆಯಿಂದ ನಿಗದಿ ಮಾಡುತ್ತದೆ. ಮತ್ತಷ್ಟು ಲಜ್ಜೆಗೇಡಿತನ ಎಂದರೆ ಸ್ಯಾನಿಟೈಸರ್ ಮೇಲಿನ ಜಿಎಸ್ಟಿಯನ್ನು ಶೇ.18ಕ್ಕೇರಿಸುತ್ತದೆ. ಉಚಿತವಾಗಿ ನೀಡಬೇಕಿದ್ದ ವೈದ್ಯಕೀಯ ಸೇವೆಯನ್ನು ದುಬಾರಿ ಸೇವೆಯನ್ನಾಗಿ ಪರಿವರ್ತಿಸಿ ಖಾಸಗಿ ಔಷಧಿ ಕಂಪನಿಗಳು ಮತ್ತು ಖಾಸಗಿ ವೈದ್ಯಕೀಯ ಸೇವೆ ಒದಗಿಸುವ ಕಂಪನಿಗಳ ಬೊಕ್ಕಸವನ್ನು ತುಂಬಿಸುವ ಕಾಯಕದಲ್ಲಿ ತೊಡಗಿದೆ.
ಮುಖೇಶ್ ಅಂಬಾನಿ ಒಡೆತನದ ಕಂಪನಿಗೆ 1,52,055.45 ಕೋಟಿ ರುಪಾಯಿಗಳ ಹೂಡಿಕೆ ಹರಿದು ಬಂದಿರುವುದರ ಹಿಂದೆ ಮೋದಿ ಸರ್ಕಾರದ ಕೃಪಾಕಟಾಕ್ಷ ಇದೆ. ಇದು ಏನನ್ನು ಪ್ರತಿಬಿಂಬಿಸುತ್ತದೆ ಎಂದರೆ- ದೇಶದ ಆರ್ಥಿಕತೆ ಏನಾದರೂ ಆಗಲಿ, ಜನರ ಆರೋಗ್ಯ ಏನಾದರೂ ಆಗಲೀ ಆದರೆ, ಚುನಾವಣೆ ವೇಳೆ ದೇಣಿಗೆ ನೀಡುವ ಮತ್ತು ಅಧಿಕಾರವನ್ನು ಮತ್ತಷ್ಟು ಸುಭದ್ರಗೊಳಿಸುವ ಕಾರ್ಪೊರೆಟ್ ಧಣಿಗಳ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ಎಂಬುದನ್ನು!
ಮುಖೇಶ್ ಅಂಬಾನಿ 14 ವಾರಗಳಲ್ಲಿ 1,52,055.45 ಕೋಟಿ ರುಪಾಯಿಗಳ ಹೂಡಿಕೆ ಸಂಗ್ರಹಿಸಿದ್ದಾರೆ, ಮೋದಿ ಸರ್ಕಾರದ ವೈಫಲ್ಯದ ಪ್ರತಿಫಲವಾಗಿ ದೇಶದಲ್ಲಿ ಕರೋನಾ ಸೋಂಕು ಪೀಡಿತರ ಸಂಖ್ಯೆ ಏಳಂಕಿಯತ್ತ(ದಶಲಕ್ಷ) ದಾಪುಗಾಲು ಹಾಕುತ್ತಿದೆ! ಭಾರತದ ಎತ್ತ ಸಾಗುತ್ತಿದೆ ಎಂಬುದನ್ನು ಸಾಕ್ಷೀಕರಿಸುವ ಎರಡು ವೈರುಧ್ಯಗಳಿವು!!