ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಕಾಶ್ಮೀರ ಕಣಿವೆಯಲ್ಲಿ ಪ್ರವಾಸೋದ್ಯಮ ತುಂಬಾ ಕುಸಿತ ಕಂಡಿದ್ದರೂ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವರು ಈ ಕುರಿತು ಸಂಸತ್ತಿನಲ್ಲಿ ಸುಳ್ಳು ಹೇಳಿಕೆ ನೀಡಿರುವುದು ಖಚಿತವಾಗಿದೆ.
ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿ ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿಯನ್ನು ಹಿಂಪಡೆದದ್ದರಿಂದ ಇಲ್ಲಿನ ಪ್ರವಾಸೋದ್ಯಮಕ್ಕೆ ಯಾವುದೇ ಹಿನ್ನಡೆ ಉಂಟಾಗಿಲ್ಲ ಎಂದು ಹೇಳಿದ್ದಾರೆ.
ಆದರೆ, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದಿರುವ ಮಾಹಿತಿಯನ್ವಯ 370 ಯನ್ನು ರದ್ದು ಮಾಡಿದ ದಿನದಿಂದ ಅಂದರೆ ಆಗಸ್ಟ್ ನಿಂದ ಕಾಶ್ಮೀರ ಕಣಿವೆಯಲ್ಲಿ ನಡೆದ ನಿರಂತರ ಪ್ರತಿಭಟನೆಗಳು, ಚಳವಳಿಗಳು, ಬಂದ್ ನಿಂದಾಗಿ ಕಣಿವೆಯಲ್ಲಿ ಪ್ರವಾಸೋದ್ಯಮ ಕುಂಠಿತಗೊಂಡಿದೆ ಎಂಬ ಅಂಶವನ್ನು ಪ್ರವಾಸೋದ್ಯಮ ಇಲಾಖೆ ಒಪ್ಪಿಕೊಂಡಿದೆ.
ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಕಣಿವೆಯಲ್ಲಿ ಗಣನೀಯ ಪ್ರಮಾಣದಲ್ಲಿ ಪ್ರವಾಸೋದ್ಯಮ ಕುಂಠಿತಗೊಂಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಆರ್ ಟಿಐನಲ್ಲಿ ಹೇಳಿದ್ದರೆ, ರಾಜ್ಯಸಭೆಯಲ್ಲಿ ಸಿಪಿಐನ ಎಲ್ಲಾಮರಮ್ ಕರೀಂ ಅವರು ಕೇಳಿದ ಪ್ರಶ್ನೆಗೆ ಪ್ರವಾಸೋದ್ಯಮ ಸಚಿವ ಪಟೇಲ್ ಅವರು, ಅಂತಹದ್ದೇನೂ ಆಗಿಲ್ಲ. ಪ್ರವಾಸೋದ್ಯಮ ಎಂದಿನಂತೆ ನಡೆಯುತ್ತಿದೆ ಎಂದಿದ್ದಾರೆ.
ಆರ್ ಟಿಐ ಮೂಲಕ ಕಾಶ್ಮೀರದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಜಮ್ಮು & ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯಿಂದ ಮಾಹಿತಿ ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಇಲಾಖೆಯು ಕಾಶ್ಮೀರ ಕಣಿವೆಯಲ್ಲಿ 370 ವಿಧಿಯನ್ನು ತೆಗೆದುಹಾಕಿದ ನಂತರ ಆರ್ಥಿಕ ಹಿಂಜರಿಕೆ ಉಂಟಾಗಿದೆ ಎಂದು ಸ್ಪಷ್ಟಪಡಿಸಿದೆ.
ಇತ್ತೀಚಿನ ಬೆಳವಣಿಗೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಮೇಲೆ ಪರಿಣಾಮ ಬೀರಿವೆಯೇ ಎಂದು ಕರೀಂ ಅವರು ಪ್ರಶ್ನಿಸಿದ್ದರು.
ಇದಕ್ಕೆ ನವೆಂಬರ್ 15, 2019 ರಂದು ಉತ್ತರ ಕಳುಹಿಸಿರುವ ಪ್ರವಾಸೋದ್ಯಮ ಇಲಾಖೆಯು, ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಪ್ರವಾಸೋದ್ಯಮದಲ್ಲಿ ಕುಂಠಿತವಾಗುತ್ತಿದೆ. ಪ್ರವಾಸಿಗರು ಆಗಮಿಸುತ್ತಿರುವುದು ಕಡಿಮೆಯಾಗುತ್ತಿದೆ. ಹೊಟೇಲ್ ಗಳು, ಹಟ್ ಗಳು, ಅತಿಥಿ ಗೃಹಗಳು, ಪೇಯಿಂಗ್ ಗೆಸ್ಟ್ ಹೌಸ್ ಗಳು ಮತ್ತು ಹೌಸ್ ಬೋಟ್ ಗಳ ವ್ಯವಹಾರದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ. ಇಲ್ಲಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗುತ್ತಿದೆ. ದೂರ ಸಂಪರ್ಕ ಪದೇ ಪದೆ ಕಡಿತಗೊಳ್ಳುತ್ತಿರುವುದರಿಂದ ಸಂಪರ್ಕ ವ್ಯವಸ್ಥೆಗೆ ತೀವ್ರ ರೀತಿಯ ಹಿನ್ನಡೆ ಉಂಟಾಗಿದೆ. ಇದರಿಂದ ಸಂಪರ್ಕ ಕಡಿತಗೊಂಡು ಪ್ರವಾಸಿಗರು ಕಾಶ್ಮೀರ ಕಣಿವೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದೆ.
ಆದರೆ, ಈ ಅಂಶಗಳನ್ನು ಕೈಬಿಟ್ಟಿರುವ ಪ್ರವಾಸೋದ್ಯಮ ಸಚಿವ ಪಟೇಲ್ ಅವರು ಸಂಸತ್ತಿನಲ್ಲಿ, ಕಾಶ್ಮೀರದಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ಹಿನ್ನಡೆ ಉಂಟಾಗಿಲ್ಲ ಎಂದು ಹೇಳಿ ಕೈತೊಳೆದುಕೊಂಡಿದ್ದಾರೆ.
ಈ ಪ್ರದೇಶಕ್ಕೆ 2019 ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಎಷ್ಟು ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಮತ್ತು 2017 ಮತ್ತು 2018 ರ ಇದೇ ಅವಧಿಯಲ್ಲಿ ಎಷ್ಟು ಪ್ರವಾಸಿಗರು ಬಂದು ಹೋಗಿದ್ದಾರೆ ಎಂದು ಕರೀಂ ಪ್ರಶ್ನೆ ಹಾಕಿದ್ದರು.
ಆದರೆ, ಇದಕ್ಕೆ ಪ್ರವಾಸೋದ್ಯಮ ಸಚಿವರು ಮೊದಲ ಪ್ರಶ್ನೆ ಮತ್ತು ಎರಡನೇ ಪ್ರಶ್ನೆಗೆ ಒಟ್ಟುಗೂಡಿಸಿ ಉತ್ತರ ನೀಡಿದ್ದಾರೆಯೇ ಹೊರತು ಯಾವ ಯಾವ ಸಂದರ್ಭದಲ್ಲಿ ಪ್ರವಾಸಿಗರು ಬಂದು ಹೋಗಿದ್ದಾರೆ ಎಂಬ ಮಾಹಿತಿಯನ್ನು ಸಂಸತ್ತಿಗೆ ನೀಡಿಲ್ಲ. ಅಲ್ಲದೇ, ಸಚಿವರು ಇಂತಹ ನಿರ್ಣಾಯಕವಾದ ಪ್ರಶ್ನೆಗೆ ಉತ್ತರ ನೀಡದೇ ಜಾರಿಕೊಂಡಿದ್ದಾರೆ.
ಸಾಮಾನ್ಯವಾಗಿ ಕಾಶ್ಮೀರ ಕಣಿವೆಗೆ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ಮಾಸಗಳಲ್ಲಿ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ವಿಶೇಷವಾಗಿ ಜಮ್ಮುವಿನಲ್ಲಿರುವ ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಹೆಚ್ಚು ಭಕ್ತರು ಆಗಮಿಸುತ್ತಾರೆ.
ಅಂತಿಮವಾಗಿ ಕರೀಂ ಅವರು, 2019 ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಆದಾಯದಲ್ಲಿ ಶೇಕಡಾ ಎಷ್ಟು ಪ್ರಮಾಣದಲ್ಲಿ ಕುಂಠಿತ ಉಂಟಾಗಿದೆ ಎಂಬ ಪ್ರಶ್ನೆಯನ್ನು ಕೇಳಿದ್ದರು. ಆದರೆ ಇದಕ್ಕೆ ಪ್ರತ್ಯುತ್ತರವಾಗಿ ಪಟೇಲ್ ಅವರು ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನು ಸಂಗ್ರಹಿಸಿಲ್ಲ ಎಂದು ಹೇಳಿದ್ದಾರೆ.
ಆದರೆ, ಜಮ್ಮು & ಕಾಶ್ಮೀರದ ಪ್ರವಾಸೋದ್ಯಮ ಇಲಾಖೆಯು ಆರ್ ಟಿಐ ನಡಿ ಕೇಳಲಾದ ಇಂತಹದ್ದೇ ಪ್ರಶ್ನೆಗೆ 2019 ರ ಆಗಸ್ಟ್, ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರವಾಸೋದ್ಯಮ ಆದಾಯದಲ್ಲಿ ಶೇ.71 ರಷ್ಟು ಇಳಿಕೆಯಾಗಿದೆ ಎಂದು ಸ್ಪಷ್ಟಪಡಿಸುವ ಮೂಲಕ ಪ್ರವಾಸೋದ್ಯಮ ಸಚಿವ ಪಟೇಲ್ ಅವರು ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆಂಬುದನ್ನು ಖಾತರಿಪಡಿಸಿದೆ.
ಈ ಬಗ್ಗೆ ಸಚಿವ ಪಟೇಲ್ ಅವರ ಇಲಾಖೆಗೆ ಇಮೇಲ್ ಮೂಲಕ ಪ್ರಶ್ನಾವಳಿಗಳು ಮತ್ತು ಆರ್ ಟಿಐನ ಮಾಹಿತಿಗಳನ್ನು ಕಳುಹಿಸಿ, ಸಚಿವರು ಸಂಸತ್ತಿನಲ್ಲಿ ಈ ವಿಚಾರಗಳನ್ನು ಏಕೆ ಮರೆಮಾಚಿದ್ದಾರೆ ಎಂದು ಪ್ರಶ್ನೆ ಕೇಳಿದ್ದೆವು. ಆದರೆ, ಇದುವರೆಗೆ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರೀಂ ಅವರು, ನಮ್ಮ ಪ್ರಶ್ನೆಗೆ ನೀಡಿರುವ ಉತ್ತರಗಳೆಲ್ಲವೂ ದೊಡ್ಡ ಸುಳ್ಳಿನ ಕಂತೆಗಳಾಗಿವೆ. ಈಗ ಆರ್ ಟಿಐನಿಂದ ಪಡೆದಿರುವ ಮಾಹಿತಿಗಳು ಸರ್ಕಾರದ ಸುಳ್ಳನ್ನು ಸಾಕ್ಷೀಕರಿಸುವಂತಿವೆ. ಈ ಮೂಲಕ ಸರ್ಕಾರ ರಾಜಾರೋಷವಾಗಿ ಸಂಸತ್ತು ಮತ್ತು ದೇಶದ ಜನರಿಗೆ ಸುಳ್ಳನ್ನು ಹೇಳುತ್ತಿದೆ. ಇದರ ವಿರುದ್ಧ ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದಿದ್ದಾರೆ.
ಲೋಕಸಭೆಯ ಮಾಜಿ ಸೆಕ್ರೆಟರಿ ಜನರಲ್ ಪಿಡಿಟಿ ಆಚಾರಿ ಅವರು ಪ್ರವಾಸೋದ್ಯಮ ಸಚಿವ ಪಟೇಲ್ ಅವರ ಸುಳ್ಳಿನ ಕಂತೆಗೆ ಪ್ರತಿಕ್ರಿಯಿಸಿ, ಸಚಿವರು ಉದ್ದೇಶಪೂರ್ವಕವಾಗಿಯೇ ಮಾಹಿತಿಯನ್ನು ಮರೆಮಾಚಿ ಸಂಸತ್ತಿಗೆ ಸುಳ್ಳನ್ನು ಹೇಳಿದ್ದಾರೆ. ಇದು ಅಕ್ಷಮ್ಯವಾಗಿದ್ದು, ಹಕ್ಕುಚ್ಯುತಿ ಮಂಡನೆಗೆ ಹೇಳಿಮಾಡಿಸಿದ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.
ಸಂವಿಧಾನದ 75 ನೇ ವಿಧಿ ಪ್ರಕಾರ ಸಚಿವರಾದವರು ಶಾಸಕರು ಅಥವಾ ಸಂಸದರ ಎಲ್ಲಾ ಪ್ರಶ್ನೆಗಳಿಗೆ ಪರಿಪೂರ್ಣವಾದ ಮತ್ತು ಸರಿಯಾದ ಉತ್ತರಗಳನ್ನು ನೀಡಲೇಬೇಕು. ಇದು ಅವರ ಜವಾಬ್ದಾರಿಯೂ ಹೌದು ಎಂದಿದ್ದಾರೆ ಆಚಾರಿ.
ಕೃಪೆ: ದಿ ವೈರ್