ಕೋವಿಡ್ 19 ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ವಿಶ್ವದ ಎಲ್ಲ ದೇಶಗಳು ಕೂಡ ಈ ಮಾರಿಯ ವಿರುದ್ದ ಹೋರಾಡಲು ಸಮರೋಪಾದಿಯ ಸಿದ್ದತೆ ಮಾಡಿಕೊಂಡಿವೆ. ಈ ಹೋರಾಟದಲ್ಲಿ ಮುಖ್ಯವಾಗಿ ಆರೋಗ್ಯ ಸೇವಾ ಕ್ಷೇತ್ರವನ್ನು ಬಲಪಡಿಸುವುದು ಅತ್ವವಶ್ಯಕ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಮಾಡಬೇಕೆಂಬ ಕೂಗು ಬಹಳ ವರ್ಷಗಳಿಂದ ಇದ್ದರೂ ಆ ಬಗ್ಗೆ ಇಲ್ಲಿಯವರೆಗೆ ನಮ್ಮನ್ನಾಳಿದ ಯಾವುದೇ ಸರ್ಕಾರಗಳೂ ತಲೆ ಕೆಡಿಸಿಕೊಂಡಿಲ್ಲ. ಹಾಗಾಗಿ ಇಂದಿಗೂ ದೇಶದಲ್ಲಿ ಇವೆರಡೂ ಬಡವರ ಪಾಲಿನ ಗಗನ ಕುಸುಮಗಳೇ ಆಗಿವೆ.
ಈಗಲೂ ಆರ್ಥಿಕ ವಾಗಿ ಶ್ರೀಮಂತರು ಕೋವಿಡ್ 19 ಸೋಂಕಿತರು ಖಾಸಗೀ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಷ್ಟೇ ಅಲ್ಲ ನಮ್ಮ ಮಂತ್ರಿ, ಶಾಸಕರೂ ಕೂಡ ಖಾಸಗೀ ಆಸ್ಪತ್ರೆಗಳಿಗೇ ಹೋಗುತಿದ್ದಾರೆ. ನಮ್ಮದೆ ಸರ್ಕಾರಗಳು ನಡೆಸುವ ಆಸ್ಪತ್ರೆಗಳಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ಲಭ್ಯವಿದೆ ಎಂದು ಭಾಷಣ ಮಾಡುವ ರಾಜಕಾರಣಿಗಳು ಅಪ್ಪಿ ತಪ್ಪಿಯೂ ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡುವುದಿಲ್ಲ ಎಂದರೆ ಇವುಗಳ ಗುಣಮಟ್ಟ ನಮಗೆ ಅರಿವಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರ ಬಡವರ ಆರೋಗ್ಯ ರಕ್ಷಣೆಗಾಗಿ ಅಯುಷ್ಮಾನ್ ಭಾರತ್ ಎಂಬ ಯೋಜನೆಯನ್ನು ಪರಿಚಯಿಸಿದೆ. ಇಡೀ ದೇಶದಲ್ಲಿ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ಕೋವಿಡ್ 19 ಸೋಂಕು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಘೋಷಿಸಲಾಯಿತು. ಆಗ ಖಾಸಗೀ ಅಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಕಡಿಮೆ ಇತ್ತು. ಆದರೆ ಲಾಕ್ ಡೌನ್ ನಂತರ ಕೋವಿಡ್ 19 ಸೋಂಕಿತರ ಚಿಕಿತ್ಸೆ ಪ್ರಮಾಣ ಖಾಸಗೀ ಆಸ್ಪತ್ರೆಗಳಲ್ಲಿ ಗಣನೀಯವಾಗಿ ಹೆಚ್ಚಾಗಿದೆ ಎಂದು ಕ್ರೋಢೀಕರಿಸಿದ ಅಂಕಿ ಅಂಶಗಳು ಸ್ಪಷ್ಟಪಡಿಸಿವೆ. ಈ ಯೋಜನೆಯಡಿಯಲ್ಲಿ ದೇಶದ 10.74 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂಪಾಯಿಗಳ ವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಲು ಅನುವು ಮಾಡಿಕೊಡಲಾಗಿದೆ. ಇದು ದೇಶದ ಒಟ್ಟು ಶೇಕಡಾ 40 ರಷ್ಟು ಜನಸಂಖ್ಯೆ ಅಗಿದೆ.
ಆಯುಷ್ಮಾನ್ ಭಾರತ್ ಯೋಜನೆಯ ಉಸ್ತುವಾರಿ ನೋಡಿಕೊಳ್ಳುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ವಿಶ್ಲೇಷಣೆಯ ಪ್ರಕಾರ ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲು ನೋಂದಾಯಿಸಿಕೊಂಡಿರುವ ಖಾಸಗೀ ಅಸ್ಪತ್ರೆಗಳ ಸಂಖ್ಯೆ ಕೋವಿಡ್ ಸೋಂಕು ಸ್ಪೋಟದ ನಂತರ ಭಾರೀ ಹೆಚ್ಚಳವಾಗಿದೆ. ಅಲ್ಲದೆ ಗುಣಮುಖರಾಗುವವರ ಸಂಖ್ಯೆ ಖಾಸಗೀ ಆಸ್ಪತ್ರೆಗಳಲ್ಲಿ ಶೇಕಡಾ 99 ರಷ್ಟು ಇದ್ದು ಸರ್ಕಾರಿ ಆಸ್ಪತ್ರೆಗಳಲ್ಲಿ ಇದು ಶೇಕಡಾ 63 ರಷ್ಟಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಮಾಹಿತಿಯ ಪ್ರಕಾರ ತಮಿಳುನಾಡಿನ ಖಾಸಗೀ ಅಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ ಯೋಜನೆಯ ಕ್ಲೇಮು ಕಳೆದ ಫೆಬ್ರುವರಿಯಲ್ಲಿ ಶೇಕಡಾ 42 ರಷ್ಟು ಇದ್ದುದ್ದು ಜುಲೈ ತಿಂಗಳಿನಲ್ಲಿ ಶೇಕಡಾ 68 ಕ್ಕೆ ಜಿಗಿದಿದೆ. ಮಧ್ಯ ಪ್ರದೇಶದಲ್ಲೂ ಇದು ಶೇಕಡಾ 41 ರಿಂದ ಶೇಕಡಾ 67 ಕ್ಕೆ ಏರಿಕೆ ದಾಖಲಿಸಿದೆ. ಬಿಹಾರದಲ್ಲೂ ಶೇಕಡಾ 48 ರಿಂದ 67 ಕ್ಕೆ ಏರಿದೆ. ಇಡೀ ದೇಶದ ಎಲ್ಲ ರಾಜ್ಯಗಳಲ್ಲೂ ಈ ಏರಿಕೆ ದಾಖಲಾಗಿದೆ. ಮೂಲಗಳ ಪ್ರಕಾರ ಈ ಯೋಜನೆಯಡಿಯಲ್ಲಿ ಖಾಸಗೀ ಅಸ್ಪತ್ರೆಗಳ ನೋಂದಾವಣೆ ನೀತಿಯನ್ನು ಕೋವಿಡ್ 19 ರೋಗಿಗಳ ಹಿತ ದೃಷ್ಟಿಯಿಂದ ಸಡಿಲಗೊಳಿಸಲಾಯಿತು. ಆದರ ಫಲವಾಗಿ ಈ ಏರಿಕೆ ದಾಖಲಾಗಿದೆ. ಈ ನೀತಿಯಲ್ಲಿ ಖಾಸಗೀ ಅಸ್ಪತ್ರೆಗಳು ಕನಿಷ್ಟ ದಾಖಲೆ ಮತ್ತು ಮಾಹಿತಿಯೊಂದಿಗೆ ತಾತ್ಕಾಲಿಕವಾಗಿ ನೋಂದಾಯಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ.
ಕಳೆದ ಫೆಬ್ರುವರಿಯಲ್ಲಿ ಆಯುಷ್ಮಾನ್ ಯೋಜನೆಯಡಿಯಲ್ಲಿ ಗುಜರಾತ್ ರಾಜ್ಯದಿಂದ ಸಲ್ಲಿಸಲಾದ ಒಟ್ಟು 98,260 ಕ್ಲೇಮ್ ಗಳಲ್ಲಿ ಶೇಕಡಾ 68 ರಷ್ಟು ಖಾಸಗೀ ಆಸ್ಪತ್ರೆಗಳದ್ದಾಗಿದೆ. ಜುಲೈ ನಲ್ಲಿ ಈ ಕ್ಲೇಮುಗಳ ಶೇಕಡಾವಾರು 70 ಕ್ಕೆ ಏರಿಕೆ ಆಗಿದೆ. ಕೇರಳ ರಾಜ್ಯದಲ್ಲಿ ಖಾಸಗೀ ಆಸ್ಪತ್ರೆಗಳ ಈ ಕ್ಲೇಮುಗಳ ಸಂಖ್ಯೆ 70,484 ರಿಂದ 90,591 ಕ್ಕೆ ಏರಿಕೆ ಆಗಿದೆ. ಇದೇ ಅವಧಿಯಲ್ಲಿ ಕೇರಳದ ಸರ್ಕಾರಿ ಅಸ್ಪತ್ರೆಗಳ ಕ್ಲೇಮುಗಳ ಸಂಖ್ಯೆ ಇಳಿಕೆ ದಾಖಲಿಸಿದ್ದು ಫೆಬ್ರುವರಿಯಲ್ಲಿ 69,755 ಇದ್ದುದು ಜುಲೈನಲ್ಲಿ 52,863 ಕ್ಕೆ ಇಳಿಕೆ ಆಗಿದೆ. ಇದರ ಜತೆಯೇ ಖಾಸಗೀ ಅಸ್ಪತ್ರೆಗಳಲ್ಲಿ ಚಿಕಿತ್ಸೆಯಿಂದ ಗುಣಮುಖರಾಗುವ ಪ್ರಮಾಣ ಕೂಡ ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಫೆಬ್ರುವರಿಯಲ್ಲಿ 31,978 ಕ್ಲೇಮುಗಳು ದಾಖಲಾಗಿದ್ದರೆ ಈ ಸಂಖ್ಯೆ ಜುಲೈನಲ್ಲಿ 46,584 ಕ್ಕೆ ಏರಿಕೆ ಆಗಿದೆ. ಇದೇ ವೇಳೆ ಮಧ್ಯ ಪ್ರದೇಶದ ಕ್ಲೇಮುಗಳ ಸಂಖ್ಯೆ 18,621 ರಿಂದ 11,244 ಕ್ಕೆ ಕುಸಿತ ಕಂಡಿದೆ. ಲಾಕ್ ಡೌನ್ ಅವಧಿಯಲ್ಲಿ ಈ ಏರಿಕೆ ದಾಖಲಾಗಿಲ್ಲ ಎಂಬುದು ಕಂಡು ಬಂದಿದೆ.
ಕೋವಿಡ್ 19 ಸೋಂಕಿಗೆ ಈತನಕವೂ ಯಾವ ದೇಶದಲ್ಲಿಯೂ ಕೂಡ ನಿಖರವಾದ ಮದ್ದನ್ನು ಕಂಡು ಹಿಡಿದಿಲ್ಲ. ವಿವಿಧ ದೇಶಗಳ ಲ್ಯಾಬೊರೇಟರಿಗಳಲ್ಲಿ ಸಂಶೋಧಿಸಲಾಗುತ್ತಿರುವ ಬಹುತೇಕ ಲಸಿಕೆಗಳು ಇನ್ನೂ ಪ್ರಯೋಗದ ಹಂತದಲ್ಲೇ ಇವೆ. ಆದರೂ ಕೂಡ ಖಾಸಗೀ ಅಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ 3 ರಿಂದ 20 ಲಕ್ಷ ರೂಪಾಯಿಗಳವರೆಗೂ ಬಿಲ್ ಮಾಡಿರುವುದು ಮಾದ್ಯಮಗಳಲ್ಲಿ ದೊಡ್ಡ ಸುದ್ದಿ ಆಗಿದೆ. ಬಡ ಮತ್ತು ಮದ್ಯಮ ವರ್ಗದ ಜನರಂತೂ ಖಾಸಗೀ ಆಸ್ಪತ್ರೆಗಳ ಬಿಲ್ ಹೊಡೆತ ತಾಳಲಾರದೇ ಕಂಗಾಲಾಗಿ ಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಬೆಡ್ ಗಳು ಖಾಲಿ ಇಲ್ಲ ಎಂಬ ಸಿದ್ದ ಉತ್ತರ ನೀಡಿ ಕಳಿಸಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ರೋಗಿಗಳು 3-4 ಆಸ್ಪತ್ರೆಗಳಿಗೆ ಅಲೆದೂ ಅಲೆದೂ ಆಂಬುಲೆನ್ಸ್ ನಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನೊಂದು ಮೂಲದ ಪ್ರಕಾರ ಖಾಸಗೀ ಅಸ್ಪತ್ರೆಗಳಲ್ಲಿ ಯಾರೇ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರೂ ಕೂಡ ರಿಸಲ್ಟ್ ಪಾಸಿಟಿವ್ ಬರುತ್ತಿದೆ. ಇದೂ ಕೂಡ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು.
ಎಲ್ಲ ಖಾಸಗೀ ಆಸ್ಪತ್ರೆಗಳೂ ಈ ರೀತಿ ಮಾಡದಿದ್ದರೂ ಕೆಲವು ಆಸ್ಪತ್ರೆಗಳು ಹಗಲು ದರೋಡೆ ಮಾಡುತ್ತಿರುವುದು ಈಗ ಬಹಿರಂಗಗೊಂಡಿರುವ ಸಂಗತಿ ಅಗಿದೆ. ನೆಗೆಟಿವ್ ಇರುವ ರೋಗಿಯನ್ನು ಪಾಸಿಟಿವ್ ಎಂದು ಆಸ್ಪತ್ರೆಗೆ ಸೇರಿಸಿಕೊಂಡು 10 ದಿನಗಳ ಚಿಕಿತ್ಸೆ ನೀಡಿ ಲಕ್ಷಾಂತರ ರೂಪಾಯಿಗಳ ಬಿಲ್ ಜಡಿಯುತ್ತಿರುವುದು ಕೂಡ ಬಹಿರಂಗಗೊಂಡಿದೆ. ಈ ರೀತಿಯ ಪ್ರಕರಣಗಳಿಂದಾಗಿಯೇ ಅಯುಷ್ಮಾನ್ ಭಾರತ್ ಯೋಜನೆಯ ಕ್ಲೇಮ್ಗಳ ಸಂಖ್ಯೆ ಜಾಸ್ತಿ ಅಗಿದೆಯೇ ಎಂಬ ಅನುಮಾನವೂ ಮೂಡುತ್ತಿದೆ. ಏಕೆಂದರೆ ಖಾಸಗೀ ಅಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದಕ್ಕೂ ಮುನ್ನ ವಿಮೆ ಇದೆಯೇ ಎಂದು ಕೇಳಿಕೊಂಡು ನಂತರ ಬಿಲ್ ಮಾಡಲಾಗುತ್ತದೆ. ಸರ್ಕಾರವೇ ಕೋವಿಡ್ ಸೋಂಕಿತ ಪ್ರಕರಣಗಳಿಗೆ ಶುಲ್ಕ ನಿಗದಿಪಡಿಸಿದ್ದರೂ ಕೂಡ ಖಾಸಗಿ ಅಸ್ಪತ್ರೆಗಳು ಲಕ್ಷಾಂತರ ಬಿಲ್ ವಸೂಲಿ ಮಾಡಿ ನಂತರ ಹಿಂತಿರುಗಿಸಿದ ಪ್ರಕರಣಗಳೂ ಇವೆ. ಕೋವಿಡ್ ಟಾಸ್ಕ್ ಫೋರ್ಸ್ ನಲ್ಲಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮತ್ತು ಅಧಿಕಾರಿಗಳ ತಂಡ ಈ ರೀತಿ ಲಕ್ಷಾಂತರ ರೂಪಾಯಿ ಶುಲ್ಕ ವಿಧಿಸಿದ್ದನ್ನು ಆಸ್ಪತ್ರೆಗಳಿಂದ ರೋಗಿಗಳಿಗೆ ಹಿಂತಿರುಗಿ ಕೊಡಿಸಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.