ಪ್ರಸಕ್ತ ವಿತ್ತೀಯ ವರ್ಷದ ದ್ವಿತೀಯ ತ್ರೈಮಾಸಿಕದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ.-7.5ರಷ್ಟು ದಾಖಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಶೇ.-23.9ರಷ್ಟು ಕುಸಿತ ದಾಖಲಿಸಿದ್ದ ಜಿಡಿಪಿ, ಸದ್ಯಕ್ಕೆ ಕೊಂಚ ಚೇತರಿಕೆ ಕಂಡಂತಿದೆ. ಈ ಚೇತರಿಕೆಯು ಬರುವ ತ್ರೈಮಾಸಿಕಗಳಲ್ಲಿ ಮತ್ತಷ್ಟು ಉತ್ತೇಜನಕಾರಿಯಾಗಿರಲಿದೆ ಎಂಬ ಮುನ್ನಂದಾಜು ಮಾಡಲಾಗುತ್ತಿದೆ.
ಆದರೆ, ಮೊದಲ ತ್ರೈಮಾಸಿಕದ(ಏಪ್ರಿಲ್-ಜೂನ್) ಮತ್ತು ದ್ವಿತೀಯ ತ್ರೈಮಾಸಿಕದ (ಜುಲೈ-ಸೆಪ್ಟೆಂಬರ್) ನಡುವಿನ ಕುಸಿತದ ಅಂತರವು ಗಣನೀಯವಾಗಿ ತಗ್ಗಿದೆ. ಶೇ.-23.9 ರಷ್ಟಿದ್ದದ್ದು ಶೇ.-7.5ಕ್ಕೆ ಇಳಿದಿರುವುದು ಕುಸಿತದ ಹಾದಿಯಲ್ಲೂ ಸುಧಾರಣೆ ಕಂಡಿರುವುದು ಸ್ಪಷ್ಟವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮೋದಿ ಸರ್ಕಾರ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿದರೂ ಇಡೀ ಉದ್ಯಮ ವಲಯವು ಅನುಮಾನದಿಂದಲೇ ನೋಡುತ್ತದೆ. ಆ ಹಿನ್ನೆಲೆಯಲ್ಲಿ ಪ್ರಕಟಿತ ಅಂಕಿಅಂಶಗಳ ಪೈಕಿ ಉತ್ಪಾದನಾ ವಲಯವು ಶೇ.0.5ರಷ್ಟು ಅಭಿವೃದ್ಧಿ ದಾಖಲಿಸಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ ವಿವಿಧ ರೇಟಿಂಗ್ ಏಜೆನ್ಸಿಗಳು, ಬ್ಯೂಸಿನೆಸ್ ಚಾನಲ್ ಗಳು ನಡೆಸಿದ್ದ ಸಮೀಕ್ಷೆ ಮತ್ತು ಮುನ್ನಂದಾಜಿನ ಪ್ರಕಾರ, ಉತ್ಪಾದನಾ ವಲಯದ ಕುಸಿತವು ಶೇ.-8ರಷ್ಟು ದಾಖಲಾಗಬೇಕಿತ್ತು. ಆದರೆ, 0.5ರಷ್ಟು ಧನಾತ್ಮಕವಾಗಿ ಅಭಿವೃದ್ಧಿ ದಾಖಲಿಸಿರುವುದು ಅಚ್ಚರಿ ಮೂಡಿಸಿರುವುದಷ್ಟೇ ಅಲ್ಲ ಆ ಬಗ್ಗೆ ಅನುಮಾನವೂ ಇದ್ದೇ ಇದೆ.
Also Read: ದೇಶದ ಆರ್ಥಿಕತೆ ಹಳ್ಳಹಿಡಿದಿದ್ದರೂ, ಷೇರುಪೇಟೆ ಜಿಗಿಯುತ್ತಿದೆ, ಪ್ರಧಾನಿ ಮೋದಿಗೆ ಇದಿಷ್ಟೇ ಸಾಕು!
ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕೃಷಿ ವಲಯವು ಶೇ.3.4ರಷ್ಟು ಅಭಿವೃದ್ಧಿ ದಾಖಲಿಸಿದೆ. ಲಾಕ್‌ಡೌನ್ ಅವಧಿಯಲ್ಲೂ ಕೃಷಿ ಚಟುವಟಿಕೆಗಳು ಎಂದಿನಂತೆ ನಡೆದಿದ್ದವು. ಹೀಗಾಗಿ ಕೃಷಿ ವಲಯವೇ ಇಡೀ ಆರ್ಥಿಕತೆಯು ಭಾರಿ ಕುಸಿತವಾಗುವುದನ್ನು ತಡೆದಿದೆ ಮತ್ತು ಧನಾತ್ಮಕ ಅಭಿವೃದ್ಧಿ ದಾಖಲಿಸಿದೆ. ಅಭಿವೃದ್ಧಿ ದಾಖಲಿಸಿದ ಮತ್ತೊಂದು ವಲಯ ಎಂದರೆ ವಿದ್ಯುತ್. ಎರಡನೇ ತ್ರೈಮಾಸಿಕದಲ್ಲಿ ವಿದ್ಯುತ್ ವಲಯವು ಶೇ.4ರಷ್ಟು ಧನಾತ್ಮಕ ಅಭಿವೃದ್ಧಿ ದಾಖಲಿಸಿದೆ. ಲಾಕ್‌ಡೌನ್ ಮುಗಿದ ನಂತರದಲ್ಲಿ ಉತ್ಪಾದನಾ ವಲಯಕ್ಕೆ ವಿದ್ಯುತ್ ಪೂರೈಕೆ ಪುನಾರಂಭವಾಗಿದ್ದಲ್ಲದೇ, ಗೃಹ ಬಳಕೆ ವಿದ್ಯುತ್ ಸಾಧರಣವಾಗಿದ್ದರಿಂದ ಧನಾತ್ಮಕ ಅಭಿವೃದ್ಧಿ ದಾಖಲಾಗಿದೆ.
Also Read: ದೇಶದ ಆರ್ಥಿಕತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ ಸುಳ್ಳುಗಳೇನು ಗೊತ್ತೇ?
ಉತ್ಪಾದನಾ ವಲಯದ ಹೊರತಾಗಿ ಉಳಿದೆಲ್ಲಾ ವಲಯಗಳಲ್ಲೂ ಋಣಾತ್ಮಕ ಅಬಿವೃದ್ಧಿ ದಾಖಲಾಗಿರುವುದನ್ನು ಅಂಕಿಅಂಶಗಳು ಹೇಳುತ್ತಿವೆ. ಉತ್ಪಾದನಾ ವಲಯ ಧನಾತ್ಮಕ ಅಭಿವೃದ್ಧಿಗೆ ವ್ಯತಿರಿಕ್ತವಾಗಿ ಸೇವಾ ವಲಯವು ನಿರೀಕ್ಷೆ ಮೀರಿ ಋಣಾತ್ಮಕ ಅಭಿವೃದ್ಧಿ ದಾಖಲಿಸಿದೆ. ಪ್ರಮುಖ ವಲಯಗಳಾದ, ಗಣಿಗಾರಿಕೆ, ಹೊಟೇಲ್ ಮತ್ತು ವ್ಯಾಪಾರ, ಹಣಕಾಸು, ವಿಮಾ ಮತ್ತು ರಿಯಲ್ ಎಸ್ಟೇಟ್, ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಲಯವು ಋಣಾತ್ಮಕ ಅಭಿವೃದ್ಧಿ ದಾಖಲಿಸಿವೆ. ಗಣಿಗಾರಿಕೆ ಶೇ.-8.6, ಹೊಟೇಲ್ ಮತ್ತು ವ್ಯಾಪಾರ ಶೇ.-15.6, ಹಣಕಾಸು, ವಿಮಾ ಮತ್ತು ರಿಯಲ್ ಎಸ್ಟೇಟ್ ಶೇ.-8.1 ಸಾರ್ವಜನಿಕ ಆಡಳಿತ ಮತ್ತು ರಕ್ಷಣಾ ವಲಯವು ಶೇ.-12.2ರಷ್ಟು ಕುಸಿತ ದಾಖಲಿಸಿವೆ.
Also Read: ಕಾರ್ಪೊರೆಟ್ ಕುಳಗಳಿಗೆ ನೆರವಾಗಲಿರುವ ನರೇಂದ್ರ ಮೋದಿ ಸರ್ಕಾರದ ಮೂರ್ಖತನದ ಹೊಸ ಬ್ಯಾಂಕಿಂಗ್ ನೀತಿ
ಈ ಅಭಿವೃದ್ಧಿಯು ಬರುವ ತ್ರೈಮಾಸಿಕಗಳಲ್ಲಿ ಮತ್ತಷ್ಟು ಚೇತರಿಕೆ ಕಾಣಲಿದೆಯೇ? ಈ ಬಗ್ಗೆ ಅನುಮಾನಗಳಿವೆ. ಸಾಂಖಿಕ ಮತ್ತು ಕಾರ್ಯಕ್ರಮ ಅನುಷ್ಟಾನ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿ ಅಂಶಗಳಲ್ಲಿ ಕೆಲವು ಅಚ್ಚರಿಗಳಿವೆ. ಆರ್ಥಿಕತೆಯ ಚೇತರಿಕೆಗೆ ಹೆಚ್ಚಿನ ಪಾಲು ನೀಡುವ ಎಂಟು ಪ್ರಮುಖ ಉದ್ಯಮಗಳ ಅಭಿವೃದ್ಧಿ ಏರುಪೇರಾಗಿದೆ. ಅಂದರೆ, ಈ ಎಂಟು ಉದ್ಯಮಗಳ ಅಕ್ಟೋಬರ್ ತಿಂಗಳ ಉತ್ಪಾದನೆಯು ಶೇ.-2.5ರಷ್ಟಾಗಿದೆ. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಈ ಪ್ರಮಾಣವು ಶೇ.-0.8ರಷ್ಟಿತ್ತು. ಅಂದರೆ, ಸೆಪ್ಟೆಂಬರ್ ತಿಂಗಳಿಗಿಂತಲೂ ಅಕ್ಟೋಬರ್ ತಿಂಗಳಲ್ಲಿನ ಅಭಿವೃದ್ಧಿಯು ಹೆಚ್ಚಿನ ಕುಸಿತದ ಹಾದಿಯಲ್ಲಿದೆ. ಅದಕ್ಕೆ ಸ್ಪಷ್ಟ ಕಾರಣಗಳೇನೂ ಎಂಬುದನ್ನು ಸಚಿವಾಲಯ ನೀಡಿಲ್ಲ. ಒಟ್ಟಾರೆ ಪ್ರಸಕ್ತ ವಿತ್ತೀಯ ವರ್ಷದ ಮೊದಲಾರ್ಧದಲ್ಲಿ ಎಂಟು ಪ್ರಮುಖ ಉದ್ಯಮಗಳ ಅಭಿವೃದ್ಧಿಯು ಶೇ.-13ರಷ್ಟಿದೆ. ಇದು ಕಳೆದ ವಿತ್ತೀಯ ವರ್ಷದ ಇದೇ ಅವಧಿಯಲ್ಲಿ ಶೇ. 0.3ರಷ್ಟಿತ್ತು.
Also Read: ಸರ್ಕಾರಿ ಕಂಪನಿಗಳ ‘ಅಪಮೌಲ್ಯ’ಗೊಳಿಸುವ ಮೋದಿ ಸರ್ಕಾರದ ಅಜೆಂಡಾ ಯಶಸ್ವಿ
ಇಡೀ ದೇಶವು ಬಹುತೇಕ ಲಾಕ್‌ಡೌನ್ ನಿಂದ ಹೊರಬಂದಿದೆ. ಆದರೆ, ಜನಜೀವನ ಸ್ಥಿತಿ ಸಾಧಾರಣಾ ಸ್ಥಿತಿಗೆ ಮರಳಿಲ್ಲ. ಸಂಘಟಿತ ವಲಯದ ಉದ್ಯಮಗಳು ಸಾಧಾರಣ ಸ್ಥಿತಿಗೆ ಬಂದಿದ್ದರೆ, ಅಸಂಘಟಿತ ವಲಯದಲ್ಲಿನ ಸ್ಥಿತಿ ಸುಧಾರಿಸಬೇಕಿದೆ. ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಅಸಂಘಟಿತ ವಲಯವು ಸಾಧಾರಣ ಸ್ಥಿತಿಗೆ ಮರಳಿದ ನಂತರವಷ್ಟೇ ದೇಶದ ಆರ್ಥಿಕತೆಯು ಧನಾತ್ಮಕ ಅಭಿವೃದ್ಧಿ ದಾಖಲಿಸಲು ಸಾಧ್ಯ. ಅದು ಸಾಧ್ಯವಾಗಲು ಇನ್ನೂ ಎರಡರಿಂದ ಮೂರು ತ್ರೈಮಾಸಿಕಗಳ ಕಾಲಾವಕಾಶ ಬೇಕಿದೆ. ಆದರೆ, ಲಾಕ್‌ಡೌನ್ ಮತ್ತು ಲಾಕ್‌ಡೌನ್ ನಂತರದ ಅವಧಿಯಲ್ಲಿ ಋಣಾತ್ಮಕ ಅಭಿವೃದ್ಧಿ ದಾಖಲಾಗಿದ್ದರಿಂದ ಆಗಿರುವ ಆರ್ಥಿಕ ನಷ್ಟವನ್ನು ಭರ್ತಿ ಮಾಡಿಕೊಳ್ಳಲು ಕನಿಷ್ಠ ಎರಡು ವರ್ಷಗಳೇ ಬೇಕಾಗುತ್ತದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಿಡಿಪಿ ಕುಸಿತವು ಶೇ.-10ರಷ್ಟು ಎಂದಾದರೆ, ಮುಂದಿನ ಎರಡು ವರ್ಷಗಳ ಕಾಲ ಆರ್ಥಿಕತೆಯು ಶೇ.6-8ರಷ್ಟು ಪ್ರಮಾಣದಲ್ಲಿ ಧನಾತ್ಮಕ ಅಭಿವೃದ್ಧಿ ದಾಖಲಿಸಿದರೆ, ಈ ಅವಧಿಯಲ್ಲಿ ಈ ನಷ್ಟವನ್ನು ಸರಿದೂಗಿಸಬಹುದಾಗಿದೆ.
ದ್ವಿತೀಯ ತ್ರೈಮಾಸಿಕದ ಜಿಡಿಪಿ ಅಂಕಿಅಂಶಗಳು ಇದುವರೆಗಿನ ಪ್ರಕಟಿತ ಮುನ್ನಂದಾಜುಗಳಿಗಿಂತ ಮೇಲ್ಮಟ್ಟದಲ್ಲಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಶೇ.-12.5, ಕೇರ್ ರೇಟಿಂಗ್ಸ್ ಶೇ.-9.9, ಐಸಿಆರ್ಎ ಶೇ.-9.5, ಕ್ರಿಸಿಲ್ ಶೇ.-12 ಎಂದು ಅಂದಾಜು ಮಾಡಿದ್ದವು. ವಿವಿಧ ಆರ್ಥಿಕ ತಜ್ಞರೊಂದಿಗೆ ಸಮಾಲೋಚಿಸಿದ್ದ ಸಿಎನ್ಬಿಸಿ ಟಿವಿ18 ಶೇ.-8.9ರಷ್ಟು ಕುಸಿತದ ಮುನ್ನಂದಾಜು ಮಾಡಿತ್ತು. ಆದರೆ, ಸಾಂಖಿಕ ಸಚಿವಾಲಯವು ಬಿಡುಗಡೆ ಮಾಡಿರುವ ಅಂಕಿಅಂಶಗಳು ಎಲ್ಲಾ ಮುನ್ನಂದಾಜುಗಳನ್ನು ತಳಕೆಳಕು ಮಾಡಿದ್ದು, ಆರ್ಥಿಕತೆ ಕುಸಿತವು ಶೇ.7.5ರಷ್ಟು ಮಾತ್ರ ಎಂದು ಹೇಳಿದೆ.
Also Read: ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಮೋದಿ ಸರ್ಕಾರ
ಅಕ್ಟೋಬರ್ ತಿಂಗಳಲ್ಲಿ ವಾಹನಗಳು ಮಾರಾಟವಾದ ಪ್ರಮಾಣ ಮತ್ತು ಆದಾಯ ತೆರಿಗೆ ಸಂಗ್ರಹ, ಸರಕು ಮತ್ತು ಸೇವಾ ತೆರಿಗೆ ಸಂಗ್ರಹದ ಪ್ರಮಾಣವು ಆರ್ಥಿಕತೆಯು ಚೇತರಿಕೆಯ ಹಾದಿಯಲ್ಲಿರುವ ಮುನ್ಸೂಚನೆಯನ್ನು ನೀಡಿತ್ತು. ಅಕ್ಟೋಬರ್ ತಿಂಗಳ ಉತ್ಪದನಾ ಸೂಚ್ಯಂಕವು (ಪಿಎಂಐ) ಶೇ.58.9ಕ್ಕೆ ಜಿಗಿದಿತ್ತು. ಇದು ಅಚ್ಚರಿ ಮೂಡಿಸಿದ್ದರೂ ಆರ್ಥಿಕತೆಯು ಚೇತರಿಕೆ ಹಾದಿಯಲ್ಲಿದೆ ಎಂಬುದರ ಮುನ್ಸೂಚನೆ ನೀಡಿತ್ತು. ಮೊದಲ ತ್ರೈಮಾಸಿಕದಲ್ಲಿ ಕೃಷಿ ವಲಯದ ಶೇ.3.4ರಷ್ಟು ಅಭಿವೃದ್ಧಿ ದಾಖಲಿಸಿದ್ದರ ಹೊರತಾಗಿ ಉಳಿದೆಲ್ಲವೂ ಋಣಾತ್ಮಕ ಅಬಿವೃದ್ಧಿ ದಾಖಲಿಸಿದ್ದವು. ನಿರ್ಮಾಣ ವಲಯ ಶೇ.-50.3, ಉತ್ಪಾದನಾ ವಲಯ ಶೇ.-39.3, ಗಣಿಗಾರಿಕೆ ಶೇ.-23.3 ಮತ್ತು ವ್ಯಾಪಾರ, ಸಾರಿಗೆ ಮತ್ತು ಸೇವಾ ವಲಯವು ಶೇ.-47ರಷ್ಟು ಋಣಾತ್ಮಕ ಅಭಿವೃದ್ಧಿ ದಾಖಲಿಸಿದ್ದವು.
ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿದೆ. ತೆರಿಗೆ ಸಂಗ್ರವೂ ಹೆಚ್ಚುತ್ತಿದೆ. ಆದ್ದರಿಂದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ನೀಡಬೇಕಾದ ತೆರಿಗೆ ಪಾಲನ್ನು ತ್ವರಿತವಾಗಿ ನೀಡುತ್ತದೆಯೇ ಮತ್ತು ಬಜೆಟ್ ನಲ್ಲಿ ಘೋಷಿತ ಯೋಜನೆಗಳಿಗೆ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಘೋಷಿತ ಪ್ಯಾಕೇಜುಗಳಿಗೆ ಹಣಕಾಸು ಬಿಡುಗಡೆ ಮಾಡುತ್ತದೆಯೇ ಎಂಬುದು ಟ್ರಿಲಿಯನ್ ಡಾಲರ್ ಪ್ರಶ್ನೆ!