ಕಳೆದ ಮೇ 12 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೋನಾ ಸೋಂಕಿನ ಕಾರಣದಿಂದ ತೀವ್ರ ಕುಸಿತಕ್ಕೀಡಾಗಿರುವ ದೇಶದ ಆರ್ಥಿಕ ಚೇತರಿಕೆಗೆ 20 ಲಕ್ಷ ಕೋಟಿ ರೂಪಾಯಿಗಳ ಉತ್ತೇಜನ ಪ್ಯಾಕೇಜ್ ಘೋಷಿಸಿದರು. ಈ ಘೋಷಣೆಯಲ್ಲಿ ದೇಶದ 130 ಕೋಟಿ ಜನಸಂಖ್ಯೆಗೂ ಅನುಕೂಲವಾಗುವಂತೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿಕೊಂಡಿದ್ದರು. ನಂತರ ಐದು ದಿನಗಳ ಕಾಲ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ವಿವಿಧ ರಂಗಗಳಿಗೆ, ವಲಯಗಳಿಗೆ ನೀಡುವ ಕುರಿತು ಪತ್ರಿಕಾ ಗೋಷ್ಟಿಯ ಮೂಲಕ ವಿವರಿಸಿದರು.
ನಿರ್ಮಲಾ ಅವರ ವಿವರಣೆಯ ನಂತರ ಏರಿಕೆ ಕಂಡಿದ್ದ ದೇಶದ ಷೇರು ಮಾರುಕಟ್ಟೆಗಳು ಕುಸಿತ ದಾಖಲಿಸಿದವು. ದೇಶದ ಬಹುತೇಕ ಆರ್ಥಿಕ ತಜ್ಞರು ಈ 20 ಲಕ್ಷ ಕೋಟಿಯ ಪ್ಯಾಕೇಜ್ ದೇಶದ ಒಟ್ಟು ಜಿಡಿಪಿಯ ಶೇಕಡಾ 1 ರಷ್ಟು ಮಾತ್ರ ಎಂಬ ವಿಷಯ ಬಹಿರಂಗಪಡಿಸುತಿದ್ದಂತೆ ಡಾಲರ್ ಎದುರು ರೂಪಾಯಿ ಕೂಡ ಕುಸಿತ ದಾಖಲಿಸಿತು. ಬಹುಶಃ ದೇಶದ ರೇಟಿಂಗ್ ಸಂಸ್ಥೆಗಳು ಜಿಡಿಪಿ ದರವನ್ನು ಇಳಿಕೆ ತೋರಿಸುತ್ತವೆ ಎಂಬ ಕಾರಣಕ್ಕೆ ಆರ್ಥಿಕ ಉತ್ತೇಜನ ಪ್ಯಾಕೇಜ್ ಘೋಷಿಸಲಾಗಿದೆ ಎನ್ನಲಾಗಿದೆ. ದೇಶವು ಒಟ್ಟು ಜಿಡಿಪಿಯ ಶೇಕಡಾ 77 ರಷ್ಟು ಆಂತರಿಕ ಸಾಲವನ್ನು ಹೊಂದಿದ್ದು ವಿತ್ತೀಯ ಕೊರತೆ ಈ ಬಾರಿ ಎರಡಂಕಿ ತಲುಪುವ ಸಾದ್ಯತೆ ನಿಚ್ಚಳವಾಗಿದೆ. ಸರಕಾರ ಈಗಾಗಲೇ ಬಾಂಡ್ ಬಿಡುಗಡೆಯ ಮೂಲಕ ಹಣ ಸಂಗ್ರಹಣೆಗೆ ಸಿದ್ದತೆ ಮಾಡಿಕೊಂಡಿದೆ.
ಹಿರಿಯ ಆರ್ಥಿಕ ತಜ್ಞ ಪ್ರಾಚಿ ಮಿಶ್ರಾ ಅವರ ಪ್ರಕಾರ ದೇಶದ ಜಿಡಿಪಿ 2020 ರ ಮಾರ್ಚ್ ವೇಳೆಗೆ ಶೇಕಡಾ 5 ರಷ್ಟು ಕುಸಿತ ದಾಖಲಿಸಿದೆ. ಈ ಋಣಾತ್ಮಕ ಹಿನ್ನಡೆ ದೇಶ ಎಂದೂ ಕಂಡಿರಲಿಲ್ಲ ಎಂದೂ ಅವರು ಹೇಳುತ್ತಾರೆ. ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ತೀವ್ರ ಅರ್ಥಿಕ ಹೊಡೆತ ಬಿದ್ದಿದ್ದು ಕೋಟಿಗಟ್ಟಲೆ ಉದ್ಯೋಗ ನಷ್ಟವಾಗಲಿದೆ. ಉದ್ಯಮಗಳು ಸರಕಾರದ ನೆರವಿಲ್ಲದೆ ಚೇತರಿಸಿಕೊಳ್ಳಲು ಸಾದ್ಯವೇ ಇಲ್ಲ ಎಂದು ಅವರು ಹೇಳಿದರು.
ಮತ್ತೋರ್ವ ತಜ್ಞ ಅಭಿಷೇಕ್ ಗುಪ್ತಾ ಅವರ ಪ್ರಕಾರ ಈಗಿನ ಕರೋನಾ ಸೋಂಕು ಭೀತಿಗಿಂತಲೂ ಮೊದಲೇ ದೇಶವು ಆರ್ಥಿಕ ಹಿಂಜರಿತವನ್ನು ಎದುರಿಸುತಿತ್ತು. ಜಿಡಿಪಿಯ ಕುಸಿತದ ನಡುವೆಯೂ ಕೇಂದ್ರ ಸರಕಾರ ಕಳೆದ ಬಜೆಟ್ ನಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 3.5 ರಷ್ಟಕ್ಕೆ ಇಳಿಸುವ ಗುರಿ ಹಾಕಿಕೊಂಡಿತ್ತು. ಇದೀಗ ಆರ್ಥಿಕ ಕುಸಿತದ ಕಾರಣದಿಂದಾಗಿ ವಿತ್ತೀಯ ಕೊರತೆ ದೇಶದ ಜಿಡಿಪಿಯ ಶೇಕಡಾ 7.4ರಷ್ಟು ಕುಸಿಯಲಿದೆ. ಇದು 1991 ರ ಮಟ್ಟವಾಗಿದೆ.
HSBC ಹೋಲ್ಡಿಂಗ್ಸ್ ಪ್ರಕಾರ ದೇಶದ ವಿತ್ತೀಯ ಕೊರತೆ ಶೇ 13.3 ಕ್ಕೆ ಕುಸಿತ ದಾಖಲಿಸಲಿದೆ. ಮೊನ್ನೆ ಘೋಷಿಸಿರುವ ಅತಿ ಸಣ್ಣ , ಸಣ್ಣ ಮತ್ತು ಮದ್ಯಮ ವರ್ಗದ ಕೈಗಾರಿಕೆಗಳ ಪುನಶ್ಚೇತನ ಪ್ಯಾಕೇಜ್ ನಲ್ಲಿ ಜಿಡಿಪಿಯ ಶೇಕಡಾ 2.1 ರಷ್ಟು ನೆರವು ಘೋಷಿಸಲಾಗಿದೆ. ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಕೈಗಾರಿಕೆಗಳಿಗೆ ನೆರವು ಸಾಲದೆ ಸಾಲದ ಸುಸ್ತಿದಾರ ಆಗಲಿವೆ. ಈ ಹಿಂದೆ ದೇಶದ ಆಂತರಿಕ ಸಾಲ ಜಿಡಿಪಿಯ ಶೇಕಡಾ 71 ರಷ್ಟಿದ್ದುದು ಕೂಡಲೇ ಶೇಕಡಾ 77 ಕ್ಕೆ ಏರಿಕೆ ದಾಖಲಿಸಿದ್ದುದನ್ನೂ ಅದು ಉಲ್ಲೇಖಿಸಿದೆ.
ಈ ರೀತಿ ದೇಶದ ಆರ್ಥಿಕ ಬೆಳವಣಿಗೆಯನ್ನು ರೇಟಿಂಗ್ ಕಂಪೆನಿಗಳು ನಕಾರಾತ್ಮಕವಾಗಿ ಬಿಂಬಿಸಿರುವುದು ಜಾಗತಿಕ ಮಟ್ಟದಲ್ಲಿ ಹೂಡಿಕೆದಾರರನ್ನು ಸೆಳೆಯುವಲ್ಲಿಯೂ ಹಿಂಜರಿಕೆ ಆಗಲಿದೆ ಎನ್ನಲಾಗಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಬುನಾದಿ ಪ್ರಬಲವಾಗಿದ್ದು ಇತರ ಅನೇಕ ದೇಶಗಳ ಆರ್ಥಿಕತೆಗಿಂತ ಉತ್ತಮವಾಗಿದೆ ಎಂದು ಹೇಳುತಿದ್ದಾರೆ.
ಸರಕಾರ ಕುಸಿದಿರುವ ಆರ್ಥಿಕತೆಯನ್ನು ಮೇಲಕ್ಕೆತ್ತಲು ರಿಸರ್ವ್ ಬ್ಯಾಂಕಿನ ಮೊರೆ ಹೋಗಿದ್ದು ಸಾಲ ಮಾರುಕಟ್ಟೆಗೆ ಹಣದ ಹರಿವನ್ನು ಹೆಚ್ಚಿಸಲು ಸರಕಾರ ಬಿಡುಗಡೆ ಮಾಡುವ ಬಾಂಡ್ ಗಳ ಖರೀದಿಗೆ ಮುಂದಾಗಬೇಕೆಂದು ಕೋರಿದೆ. ಈಗ ಸರಕಾರವು ತನ್ನ ಹಣಕಾಸು ಪರಿಸ್ಥಿತಿಯನ್ನು ಉತ್ತಮಗೊಳಿಸುವುದರ ಜತೆಗೇ ದೇಶದ ಆರ್ಥಿಕತೆ, ಉತ್ಪಾದನೆ, ಜಿಡಿಪಿ ಬೆಳವಣಿಗೆ ಮತ್ತು ಆದಾಯನ್ನೂ ಹೆಚ್ಚಿಸುವತ್ತ ಚಿಂತೆ ಮಾಡಬೇಕಿದೆ. ಆದರೆ ಇದೆಲ್ಲವನ್ನೂ ಪರಿಣಾಮಕಾರಿಯಾಗಿ ಮಾಡಬಲ್ಲಂಥ ನಿರ್ವಹಿಸಬಲ್ಲಂತ ತಜ್ಞರ ಕೊರತೆಯನ್ನು ಆಡಳಿತರೂಢ ಪಕ್ಷ ಎದುರಿಸುತ್ತಿದ್ದು ದೂರದೃಷ್ಟಿಯ ಆರ್ಥಿಕ ಪ್ಯಾಕೇಜ್ ಘೋಷಿಸಬೇಕಿದೆ.
ಮೊದಲಿಗೆ ದೇಶದ ಕೆಳ ವರ್ಗಗಳ ಅಭಿವೃದ್ದಿಗೆ ಹೆಚ್ಚಿನ ನೆರವಿನ ಅಗತ್ಯವಿದೆ. ಇಂದು ವಲಸೆ ಕಾರ್ಮಿಕರ ಬದುಕು ಅತಂತ್ರವಾಗಿದೆ. ಸಾವಿರಾರು ಕಿಲೋಮೀಟರ್ ಗಳಷ್ಟು ದೂರ ಪ್ರಯಾಣಿಸಿ ಕೆಲಸ ಮಾಡುವ ಕಾರ್ಮಿಕರಲ್ಲಿ ಇಂದು ಖರೀದಿಸುವ ಸಾಮರ್ಥ್ಯ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಇವರಲ್ಲಿ ಖರೀದಿ ಸಾಮರ್ಥ್ಯ ಹೆಚ್ಚಿಸಲು ಸರಕಾರ ಆರ್ಥಿಕ ನೆರವು ನೀಡಬೇಕಿದೆ. ಆ ಮೂಲಕ ದೇಶೀ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಬೇಕಿದೆ. ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಯಾವುದೇ ರೀತಿಯ ನೆರವನ್ನು ಇನ್ನೂ ಘೋಷಿಸಿಲ್ಲ. ಇದೂ ಕೂಡ ಚೇತರಿಕೆಗೆ ತೊಡಕಾಗಬಹುದು. ಕೇಂದ್ರ ಸರಕಾರ ಕೂಡಲೇ ಪುನಶ್ಚೇತನಕ್ಕೆ ತುರ್ತು ಕ್ರಮ ಕೈಗೊಂಡಲ್ಲಿ ಮಾತ್ರ ಈ ಹಿಂಜರಿತದಿಂದ ಹೊರಬರಲು ಸಾಧ್ಯ.