ದೇಶಾದ್ಯಂತ ದಾಖಲಾಗುತ್ತಿರುವ ದೇಶದ್ರೋಹ ಪ್ರಕರಣಗಳ ಸಂಖ್ಯೆ ವಿಪರೀತ ಏರುತ್ತಿದೆ. 2019 ರಲ್ಲಿ ದೇಶದ್ರೋಹ ಪ್ರಕರಣಗಳ ಸಂಖ್ಯೆಯಲ್ಲಿ ಶೇಕಡಾ 25 ರಷ್ಟು ಏರಿಕೆಯಾಗಿದೆಯೆಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಅದಾಗ್ಯೂ, ಕಳೆದ ವರ್ಷ ವಿಚಾರಣೆ ಮುಕ್ತಾಯಗೊಂಡ 30 ಪ್ರಕರಣಗಳಲ್ಲಿ ಕೇವಲ ಒಂದು ಪ್ರಕರಣದಲ್ಲಿ ಮಾತ್ರ ದೇಶದ್ರೋಹ ಆರೋಪ ಸಾಬೀತುಪಡಿಸಲು ತನಿಖಾಧಿಕಾರಿಗಳಿಗೆ ಸಾಧ್ಯವಾಗಿದೆ.
ದೇಶದ್ರೋಹ ಸಾಬೀತಾದ ಏಕೈಕ ಪ್ರಕರಣದಲ್ಲಿ ಇಬ್ಬರನ್ನು ಜೈಲಿಗೆ ಕಳುಹಿಸಲಾಗಿದ್ದು, ನ್ಯಾಯಾಲಯದಲ್ಲಿ ಆರೋಪಗಳನ್ನು ಸಾಬೀತುಪಡಿಲಾಗದ ಕಾರಣ 29 ಪ್ರಕರಣಗಳನ್ನು ಕೈಬಿಡಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2015 ಮತ್ತು 2019 ರ ನಡುವೆ 283 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು, 56 ಪ್ರಕರಣಗಳು ವಿಚಾರಣೆಗೆ ಒಳಪಟ್ಟಿವೆ, ಅದರಲ್ಲಿ 51 ಪ್ರಕರಣಗಳು ಖುಲಾಸೆಗೊಂಡಿದ್ದು ಕನಿಷ್ಠ 55 ಜನರನ್ನು ಆರೋಪಮುಕ್ತಗೊಳಿಸಲಾಗಿದೆ. ಈ ಅವಧಿಯಲ್ಲಿ ಐದು ಪ್ರಕರಣಗಳು ಮಾತ್ರ ಆರೋಪ ಸಾಬೀತಾಗಿದ್ದು, ಅದರಲ್ಲಿ ಒಂಬತ್ತು ಜನರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
2018ರಲ್ಲಿ 13 ಪ್ರಕರಣಗಳ ವಿಚಾರಣೆ ಮುಕ್ತಾಯಗೊಂಡಿದ್ದರೆ, 2017 ರಲ್ಲಿ ಆರು, 2016 ರಲ್ಲಿ ಮೂರು, 2015 ರಲ್ಲಿ ನಾಲ್ಕು ಪ್ರಕರಣಗಳ ವಿಚಾರಣೆ ಮುಕ್ತಾಯಗೊಂಡಿದೆ. 2015 ರಲ್ಲಿ ಯಾವುದೇ ಆರೋಪಗಳೂ ಸಾಬೀತಾಗಿಲ್ಲ. 2016 ಮತ್ತು 2017 ರಲ್ಲಿ ತಲಾ ಒಂದೊಂದು ಪ್ರಕರಣಗಳು ಸಾಬೀತಾಗಿದ್ದರೆ, 2018 ರಲ್ಲಿ ಎರಡು ಪ್ರಕರಣಗಳಲ್ಲಿ ದೇಶದ್ರೋಹ ಆರೋಪ ಸಾಬೀತಾಗಿದೆ. 2019 ರಲ್ಲಿ 3.33% ಪ್ರಕರಣಗಳಲ್ಲಿ ಮಾತ್ರ ಆರೋಪ ಸಾಬೀತಾಗಿದ್ದು ಕಳೆದ ಕೆಲವು ನಾಲ್ಕು ವರ್ಷಗಳಿಗೆ ಹೋಲಿಸಿದರೆ ಇದು ಅತೀ ಕಡಿಮೆ. 2018 ರಲ್ಲಿ 15.40%, 2017 ರಲ್ಲಿ 16.70% ಹಾಗೂ 2016 ರಲ್ಲಿ 33.30% ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ.
Also Read: ಕನ್ಹಯ್ಯ ಕುಮಾರ್ to ಅಮೂಲ್ಯ; ದೇಶದ್ರೋಹ ಪ್ರಕರಣ ಮತ್ತು ಭಾರತೀಯ ದಂಡ ಸಂಹಿತೆ!
ಕಳೆದ ವರ್ಷ ದೇಶಾದ್ಯಂತ 93 ದೇಶದ್ರೋಹ ಪ್ರಕರಣಗಳು ದಾಖಲಾಗಿದ್ದು ಪ್ರಕರಣಗಳ ಸಂಖ್ಯೆಯಲ್ಲಿ 25% ಏರಿಕೆಯಾಗಿದೆ, ಕರ್ನಾಟಕ ಒಂದರಲ್ಲೇ 2018ರಲ್ಲಿ ಕೇವಲ ಎರಡು ಇದ್ದ ಪ್ರಕರಣಗಳ ಸಂಖ್ಯೆ 2019ರ ವೇಳೆಗೆ 22 ಕ್ಕೇರಿದೆ. ಅಸ್ಸಾಮಿನಲ್ಲಿ 17 ಪ್ರಕರಣಗಳು ದಾಖಲಾದರೆ, ಜಮ್ಮು ಕಾಶ್ಮೀರದಲ್ಲಿ11, ಉತ್ತರ ಪ್ರದೇಶದಲ್ಲಿ 10 ದೇಶದ್ರೋಹ ಪ್ರಕರಣಗಳು ದಾಖಲಾಗಿದೆ. 2018 ರಲ್ಲಿ 70 ದೇಶದ್ರೋಹ ಪ್ರಕರಣಗಳ ಸಂಖ್ಯೆ ದಾಖಲಾಗಿದ್ದು ಜಾರ್ಖಂಡಲ್ಲಿ 18 ಪ್ರಕರಣಗಳು ದಾಖಲಾಗಿವೆ. ಬಿಹಾರದಲ್ಲಿ 17 ಮತ್ತು ಜಮ್ಮು ಕಾಶ್ಮೀರದಲ್ಲಿ 12 ಪ್ರಕರಣಗಳು ದಾಖಲಾಗಿತ್ತು.

ಹಿಂದಿನ ವರ್ಷಗಳ ಪ್ರಕರಣಗಳನ್ನು ಒಳಗೊಂಡಂತೆ 229 ಪ್ರಕರಣಗಳಲ್ಲಿ ಪೊಲೀಸರು 70 ಪ್ರಕರಣಗಳಲ್ಲಷ್ಟೇ ತನಿಖೆ ಮುಕ್ತಾಯಗೊಳಿಸಿದ್ದು 69.43% ಪ್ರಕರಣಗಳು ಇನ್ನೂ ಬಾಕಿ ಉಳಿದಿವೆ. ಕಳೆದ ವರ್ಷ 116 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿದ್ದು, 30 ಪ್ರಕರಣಗಳಲ್ಲಿ ವಿಚಾರಣೆ ಮುಕ್ತಾಯಗೊಂಡಿದೆ ಹಾಗೂ ಅದರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ದೇಶದ್ರೋಹ ಆರೋಪ ಸಾಬೀತಾಗಿದೆ. ಕಳೆದ ವರ್ಷದ ಅಂತ್ಯದ ವೇಳೆಗೆ 74.1% ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದೆ. 2017 ರಲ್ಲಿ 89.7% ಹಾಗೂ 2018 ರಲ್ಲಿ 85.6% ಪ್ರಕರಣಗಳು ಇತ್ಯರ್ಥವಾಗದೆ ಉಳಿದಿದ್ದವು.
Also Read: ದೇಶದ್ರೋಹ ಎಂದರೇನು? ಬದಲಾಯಿತೇ ದೇಶದ್ರೋಹದ ವ್ಯಾಖ್ಯಾನ?
ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124 (ಎ) ಅನ್ನು ರದ್ದುಪಡಿಸುವಂತೆ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಪ್ರಸ್ತುತ ಕಾನೂನನ್ನು ರದ್ದುಗೊಳಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ. ʼರಾಷ್ಟ್ರ ವಿರೋಧಿ, ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕʼ ಅಂಶಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ನಿಬಂಧನೆ ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.
Also Read: ಯಾವುದು ಪ್ರಚೋದನೆ? ಯಾವುದು ದೇಶದ್ರೋಹ? ದೇಶದಲ್ಲಿ ಶುರುವಾಯ್ತಾ ಭಯದ ವಾತಾವರಣ?
“ದೇಶದ್ರೋಹದ ಅಪರಾಧವನ್ನು ನಿಭಾಯಿಸುವ ಈ ನಿಬಂಧನೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ರಾಷ್ಟ್ರ ವಿರೋಧಿ, ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಅಂಶಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಈ ನಿಬಂಧನೆಯನ್ನು ಉಳಿಸಿಕೊಳ್ಳುವ ಅವಶ್ಯಕತೆಯಿದೆ” ಎಂದು ಗೃಹ ವ್ಯವಹಾರಗಳ ಸಚಿವಾಲಯ ಕಳೆದ ವರ್ಷ ಸಂಸತ್ತಿನಲ್ಲಿ ತಿಳಿಸಿತ್ತು.
Also Read: ಹೆಚ್ಚುತ್ತಿದೆ `ದೇಶದ್ರೋಹ’ ಪ್ರಕರಣಗಳು – ರಾಷ್ಟ್ರೀಯ ಅಪರಾಧ ವರದಿ
2016ರಲ್ಲಿ, ದೇಶದ್ರೋಹದ ಕಾನೂನುಗಳಿಗೆ ತಿದ್ದುಪಡಿ ಅಗತ್ಯ ಎಂದು ನರೇಂದ್ರ ಮೋದಿ ಸರ್ಕಾರ ಹೇಳಿತ್ತು. ಆಗಿನ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ಅವರು, ಜೆಡಿಯು ಸಂಸದ ಶರದ್ ಯಾದವ್ ಅವರ ಸಲಹೆಯನ್ನು ಸ್ವೀಕರಿಸಿ ಸರ್ವ ಪಕ್ಷ ಸಭೆಯನ್ನು ಕರೆಯುವ ಭರವಸೆ ನೀಡಿದ್ದರು. ಆದರೆ, ಕಾನೂನು ಆಯೋಗ ಅದರ ವರದಿಯನ್ನು ಸಲ್ಲಿಸುವವರೆಗೂ ಕಾಯುವಂತೆ ಸೂಚಿಸಲಾಗಿತ್ತು.