ದೇಶದಲ್ಲೇ ಕರ್ನಾಟಕ (Karnataka) ಅತಿ ಹೆಚ್ಚು ತಲಾದಾಯ (Per capital income) ಹೊಂದಿರುವ ರಾಜ್ಯವಾಗಿ ಹೊರಹೊಮ್ಮಿದೆ. ರಾಜ್ಯದ ತಲಾ ನಿವ್ವಳ ರಾಜ್ಯ ದೇಶಿಯ ಉತ್ಪನ್ನವು (ಎನ್‌ಎಸ್‌ಡಿಪಿ) 2,04,605 ರೂ. ಗೆ ತಲುಪಿದೆ ಎಂದು ಸಂಸತ್ತಿಗೆ ಕೇಂದ್ರ ಹಣಕಾಸು ಸಚಿವಾಲಯ ಸಲ್ಲಿಸಿದ ದತ್ತಾಂಶ ತಿಳಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ (Cm Siddaramaiah) ಸಂತಸ ವ್ಯಕ್ತಪಡಿಸಿದ್ದಾರೆ.

2014-15 ರಲ್ಲಿ ಕರ್ನಾಟಕದ ತಲಾದಾಯವು 1,05,697 ರೂ. ಇತ್ತು. ಇದೀಗ 10 ವರ್ಷಗಳಲ್ಲಿ ಶೇ.93.6 ರಷ್ಟು ಏರಿಕೆ ಕಂಡಿರುವುದು ಗಮನಾರ್ಹ ಸಂಗತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಾಧನೆಯ ಶ್ರೇಯಸ್ಸು ನಮ್ಮ ಸರ್ಕಾರ ಜಾರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳಿಗೆ ಸಲ್ಲುತ್ತದೆ. ರಾಜ್ಯದ ಪ್ರತೀ ಕುಟುಂಬಗಳಿಗೂ ತಿಂಗಳಿಗೆ 4-5 ಸಾವಿರ ರೂಪಾಯಿಯಿಂದ ವರ್ಷಕ್ಕೆ 60-70 ಸಾವಿರ ರೂಪಾಯಿ ನೇರವಾಗಿ ತಲುಪಿಸುವ ಮೂಲಕ ಪ್ರತೀ ಕುಟುಂಬವನ್ನೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿಸುತ್ತಿದ್ದೇವೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳು, ರಾಜ್ಯದ ಜನರಲ್ಲಿ ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಿ, ಅವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬಿ ಈ ಮೂಲಕ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದೇವೆ ಎಂದು, ಇದು ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಮಾಡಿದ್ದಾರೆ.