ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ʼದೆಹಲಿ ಚಲೋʼ ಪ್ರತಿಭಟನಾ ಯಾತ್ರೆಯು ಪೊಲೀಸರ ಮತ್ತು ರೈತರ ನಡುವಿನ ತೀವ್ರ ಜಟಾಪಟಿಗೆ ಸಾಕ್ಷಿಯಾಗಿದೆ. ಪಂಜಾಬಿನಿಂದ ಹೊರಟ ರೈತರ ಯಾತ್ರೆಯನ್ನು ಹರಿಯಾಣ ಗಡಿಯ ಬಳಿ ಪೊಲೀಸರು ತಡೆದಿದ್ದಾರೆ. ಈ ಹೊತ್ತಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಪ್ರತಿಭಟನಾಕಾರರ ಮೇಲೆ ಜಲ ಫಿರಂಗಿ ಹಾಗೂ ಅಶ್ರವಾಯು ಪ್ರಯೋಗಿಸಿದ್ದಾರೆ. ಪೊಲೀಸರ ಈ ನಡೆಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ನಡುವೆ, ಹರಿಯಾಣ ಗಡಿಯನ್ನು ಮುಚ್ಚಿದ ಕಾರಣಕ್ಕೆ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನು ರೈತ ಪ್ರತಿಭಟನಾಕಾರರು ನದಿಗೆ ಎಸೆದಿದ್ದಾರೆ, ಅಲ್ಲದೆ ಸಿಟ್ಟಿಗೆದ್ದ ರೈತರು ಪೊಲೀಸರ ಮೇಲೆ ಇಟ್ಟಿಗೆಗಳನ್ನು ಎಸೆದಿರುವುದಾಗಿ ವರದಿಯಾಗಿವೆ.
ರೈತರ ಪ್ರತಿಭಟನೆ ಆರಂಭವಾಗುವ ಮುನ್ನವೇ ಹರ್ಯಾಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿ ವಾಹನವನ್ನು ಕೂಡಾ ತಪಾಸಣೆಗೊಳಪಡಿಸಲಾಗಿತ್ತು. ಭದ್ರತೆಗೆಂದು ಡ್ರೋಣ್ ಕ್ಯಾಮೆರಾಗಳನ್ನು ಬಳಸಿ ಪೊಲೀಸರು ಕಣ್ಗಾವಲಿಟ್ಟಿದ್ದರು.
ಆದರೆ, ಈ ಎಲ್ಲಾ ಅಡೆತಡೆಗಳನ್ನು ಭೇಧಿಸಿ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಹರ್ಯಾಣದ ಮೂಲಕ ದೆಹಲಿಯೆಡೆಗೆ ತಮ್ಮ ಯಾತ್ರೆಯನ್ನು ಮುಂದುವರೆಸಿದ್ದಾರೆ.
ಈ ನಡುವೆ, ಯುಪಿಎ ಅವಧಿಯಲ್ಲಿ ರೈತ ಪ್ರತಿಭಟನೆ ವೇಳೆ ಪ್ರತಿಭಟನಾಕಾರರಿಗೆ ಲಾಠಿ ಚಾರ್ಜ್ ಮಾಡಿರುವುದನ್ನು ವಿರೋಧಿಸಿ ಹಾಕಿದ್ದ ಹಳೆಯ ಟ್ವೀಟ್ ಅನ್ನು ಮತ್ತೆ ರಿಟ್ವೀಟ್ ಮಾಡಿರುವ ನೆಟ್ಟಿಗರು ಬಿಜೆಪಿಯ ದ್ವಿಮುಖ ಧೋರಣೆಯನ್ನು ವ್ಯಂಗ್ಯದ ಮೂಲಕ ಖಂಡಿಸಿದ್ದಾರೆ.