ದೆಹಲಿ ಬಿದ್ದಿದ್ದ ಬೆಂಕಿ ನಿಧಾನವಾಗಿ ಆರಿದೆ. ಆದರೆ, ಆ ದ್ವೇಷದ ಬೆಂಕಿ ಆರಿದ್ದರೂ, ದ್ವೇಷದ ಹೊಗೆ ಮತ್ತು ಅಸಹನೆಯ ತಾಪ ಇನ್ನೂ ಭುಗಿಲೇಳುತ್ತಲೇ ಇದೆ. ಈ ನಡುವೆ, ಆ ಅಡೆತಡೆರಹಿತ ಹತ್ಯಾಕಾಂಡದ ಹಿಂದಿನ ಹುನ್ನಾರಗಳ ಕುರಿತ ಚರ್ಚೆಯ ಕಿಡಿ ಕೂಡ ಸಿಡಿಯುತ್ತಲೇ ಇವೆ.
ಅದು ದೆಹಲಿ ಗಲಭೆ ಹಾಗೆ ದಿಢೀರನೇ ಹೊತ್ತಿಕೊಂಡಿದ್ದು ಯಾಕೆ? ಅದೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಭೇಟಿಯ ಸಂದರ್ಭದಲ್ಲಿಯೇ ಯಾಕೆ ಜೈ ಶ್ರೀ ರಾಮ್ ಘೋಷಣೆಯ ಪಡೆಗಳು ದೆಹಲಿಗೆ ಬೆಂಕಿ ಹಚ್ಚಿದವು? ರಾಜಧಾನಿಯ ಒಂದು ಭಾಗವೇ ಹೊತ್ತಿ ಉರಿಯುತ್ತಿರುವಾಗ ಅದನ್ನು ತಹಬದಿಗೆ ತಂದು, ಅಂತಾರಾಷ್ಟ್ರೀಯ ಮಾಧ್ಯಮಗಳ ಎದುರು ಮೋದಿಯವರ ಮಾನ ಕಾಯಬೇಕಿದ್ದ ದೆಹಲಿ ಪೊಲೀಸರು ಯಾಕೆ ಸ್ವತಃ ಗಲಭೆಗೆ ತುಪ್ಪ ಸುರಿದರು? ಗಲಭೆ ನಿರಂತರವಾಗಿ ವ್ಯಾಪಿಸುತ್ತಿದ್ದರೂ ದೆಹಲಿ ಕಾನೂನು-ಸುವ್ಯವಸ್ಥೆಯ ನೇರ ನಿಯಂತ್ರಣ ಹೊಂದಿರುವ ಗೃಹ ಸಚಿವ ಅಮಿತ್ ಶಾ ಏಕೆ ಆ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ? ಮೂರು ದಿನಗಳ ಬಳಿಕ ಗೃಹ ಸಚಿವರ ಬದಲಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್ ಎಸ್ ಎ) ಅಜಿತ್ ಧೋವಲ್ ಅವರೇ ಯಾಕೆ ಜನರ ನಡುವೆ ಹೋಗಿ ಗಲಭೆ ನಿಯಂತ್ರಿಸುವ ಕೆಲಸಕ್ಕೆ ಕೈಹಾಕಿದರು?.. ಹೀಗೆ ಹತ್ತುಹಲವು ಪ್ರಶ್ನೆಗಳ ಸುತ್ತ ದೆಹಲಿಯ ಗಲಭೆಯ ಕುರಿತ ಚರ್ಚೆ ಗಿರಕಿ ಹೊಡೆಯುತ್ತಿದೆ.
ಅದರಲ್ಲೂ ದೆಹಲಿಯ ರಾಜಕೀಯ ವಲಯದಲ್ಲಿ ಬಹಳ ಕುತೂಹಲಕಾರಿ ಚರ್ಚೆ, ಲೆಕ್ಕಾಚಾರ, ವಿಶ್ಲೇಷಣೆಗಳಿಗೆ ದೆಹಲಿಯ ಬೆಂಕಿ ಕಾರಣವಾಗಿದೆ. ಹಲವು ರಾಜಕೀಯ ಥಿಯರಿಗಳು ಚಾಲ್ತಿಗೆ ಬಂದಿದ್ದು, ಆರ್ ಎಸ್ ಎಸ್ ಮತ್ತು ಹಿಂದುತ್ವ ಸಂಘಟನೆಗಳು ಅತ್ಯಂತ ಚಾಣಾಕ್ಷತನದಿಂದ ಹೆಣೆದ ಗಲಭೆ ಇದು ಎಂಬುದರಿಂದ ಹಿಡಿದು, ಮೋದಿ ಮತ್ತು ಅಮಿತ್ ಶಾ ನಡುವಿನ ಮುಸುಕಿನ ಗುದ್ದಾಟದ ಪರಿಣಾಮ ಎಂಬುದರ ವರೆಗೆ ರಾಜಧಾನಿಯ ರಾಜಕೀಯದಲ್ಲಿ ರೋಚಕ ಸಂಗತಿಗಳಾಗಿ ಮುನ್ನೆಲೆಗೆ ಬಂದಿವೆ. ರಾಜಕೀಯ ವಿಶ್ಲೇಷಕರು, ಮಾಧ್ಯಮ ಪಂಡಿತರ ನಡುವಿನ ಬಿಸಿಬಿಸಿ ಚರ್ಚೆಗೆ ರಸಗವಳವಾಗಿವೆ.
ಅದರಲ್ಲೂ ಟ್ರಂಪ್ ಗುಜರಾತ್ ಭೇಟಿ ಮತ್ತು ಬಳಿಕದ ದೆಹಲಿ ಭೇಟಿಯ ವೇಳೆಯಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಪ್ರಧಾನಿ ಮೋದಿ ಬಳಿಕದ ಎರಡನೇ ಅತಿ ಪ್ರಮುಖ ಸ್ಥಾನದಲ್ಲಿರುವ ಗೃಹ ಸಚಿವ ಅಮಿತ್ ಶಾ ಅವರು ಕಾಣಿಸಿಕೊಳ್ಳದೇ ಇರುವುದಕ್ಕೂ, ಅದೇ ಹೊತ್ತಿಗೆ ದೆಹಲಿ ಗಲಭೆಗಳು ಭುಗಿಲೇಳುವುದಕ್ಕೂ ಏನಾದರೂ ಸಂಬಂಧವಿದೆಯೇ? ಎಂಬ ಪ್ರಶ್ನೆ ಪ್ರಮುಖವಾಗಿ ಕೇಳಿಬರತೊಡಗಿದೆ. ಏಕೆಂದರೆ, ಟ್ರಂಪ್ ಭಾರತಕ್ಕೆ ಬರುವ ಹಿಂದಿನ ದಿನವಷ್ಟೇ ಬಿಜೆಪಿ ದೆಹಲಿ ನಾಯಕ ಕಪಿಲ್ ಮಿಶ್ರಾ ನೀಡಿದ್ದ ಪ್ರಚೋದನಕಾರಿ ಹೇಳಿಕೆಯಲ್ಲಿ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ದೆಹಲಿ ರಸ್ತೆಯಿಂದ ತೆರವುಗೊಳಿಸಲು ಮೂರು ದಿನಗಳ ಗಡುವು ನೀಡುವುದಾಗಿ ಪೊಲೀಸರಿಗೆ ಹೇಳಿದ್ದರು. ಅಲ್ಲದೆ, ಟ್ರಂಪ್ ಭಾರತ ಭೇಟಿಯಲ್ಲಿರುವುದರಿಂದ ಈಗ ತಾವು ತಾಳ್ಮೆ ಕಾಯ್ದುಕೊಳ್ಳುವುದಾಗಿಯೂ ಹೇಳಿದ್ದರು. ಆದರೆ, ಆ ಮಾತು ಹೇಳಿದ ಕೆಲವೇ ಕ್ಷಣಗಳಲ್ಲಿ ಈಶಾನ್ಯ ದೆಹಲಿಯಲ್ಲಿ ಅದೇ ಮಿಶ್ರಾ ಬೆಂಬಲಿಗರ ಪಡೆಗಳೇ ದಾಳಿ ಆರಂಭಿಸಿದವು ಎನ್ನಲಾಗುತ್ತಿದೆ. ಜೊತೆಗೆ ಆ ದಾಳಿಗಳಿಗೆ ದೆಹಲಿ ಪೊಲೀಸರು ಎಷ್ಟು ಬೆಂಬಲವಾಗಿ ನಿಂತಿದ್ದರು ಎಂಬುದಕ್ಕೆ ನೂರಾರು ವೀಡಿಯೋಗಳ ಸಾಕ್ಷಿಯೂ ಇದೆ.
ಹಾಗಾದರೆ, ಮೋದಿಯವರ ಮಹತ್ವಾಕಾಂಕ್ಷೆಯ ಮತ್ತು ಬಹಳ ನಿರೀಕ್ಷೆಯ ಟ್ರಂಪ್ ಭೇಟಿ ವೇಳೆಯೇ ಈ ಗಲಭೆ ಭುಗಿಲೇಳಲು ಕುಮ್ಮಕ್ಕು ನೀಡಿದ್ದು ಯಾರು? ಅಂತಾರಾಷ್ಟ್ರೀಯ ಮಾಧ್ಯಮಗಳು ದೆಹಲಿಯತ್ತ ಗಮನ ಕೇಂದ್ರೀಕರಿಸುವ ವೇಳೆ ಇಂತಹ ಗಲಭೆ ಸೃಷ್ಟಿಸುವ ಮೂಲಕ ಮೋದಿಯವರ ಅಂತಾರಾಷ್ಟ್ರೀಯ ಮುತ್ಸದ್ಧಿ, ದಿಟ್ಟ ಆಡಳಿತಗಾರ ಎಂಬ ವರ್ಚಸ್ಸಿಗೆ ಮಸಿ ಬಳಿಯುವಂತಹ ಕೃತ್ಯ ಎಸಗಲು ಹಿಂದುತ್ವವಾಗಿ ಶಕ್ತಿಗಳು ಮತ್ತು ಪೊಲೀಸರಿಗೆ ಕುಮ್ಮಕ್ಕು ನೀಡುವ ಪ್ರಭಾವಿ ಯಾರಿರಬಹುದು? ಎಂಬ ಪ್ರಶ್ನೆಗಳು ಸಹಜವಾಗೇ ಎದ್ದಿವೆ.
ಜೊತೆಗೆ ಕಳೆದ ಲೋಕಸಭಾ ಚುನಾವಣೆಯ ಭಾರೀ ಜನಾದೇಶದ ಬಳಿಕ ಬಿಜೆಪಿ ಪಕ್ಷದಲ್ಲಿ ಆಂತರಿಕವಾಗಿ ಮತ್ತು ರಾಷ್ಟ್ರರಾಜಕಾರಣದಲ್ಲಿ ಮೋದಿಯವರಿಗಿಂತ ಹೆಚ್ಚು ಪ್ರಭಾವಿಯಾಗಿ ಹೊರಹೊಮ್ಮಿರುವ ಅಮಿತ್ ಶಾ ಅವರನ್ನು, ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಬಹುತೇಕ ಪ್ರಮುಖ ವೇದಿಕೆಗಳಿಂದ ದೂರವೇ ಇಡಲಾಗಿತ್ತು. ಪಕ್ಷ ಮತ್ತು ಸರ್ಕಾರದಲ್ಲಿ ಅವರ ನಂತರದ ಸ್ಥಾನದಲ್ಲಿರುವ ನಾಯಕರಿಗೆ(ರಾಜನಾಥ್ ಸಿಂಗ್ ಸೇರಿ) ಟ್ರಂಪ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡಲಾಗಿದ್ದರೂ, ಜಾಗತಿಕ ಮಾಧ್ಯಮದ ಕಣ್ಣಳತೆಯ ಅಂತಹ ಕಾರ್ಯಕ್ರಮದಿಂದ ಶಾ ದೂರವೇ ಉಳಿದಿದ್ದರು. ಶಾ ಅವರು ಹಾಗೆ ದೂರ ಉಳಿದಿದ್ದಕ್ಕೂ, ಅದೇ ವೇಳೆ ಟ್ರಂಪ್ ಪ್ರವಾಸಕ್ಕಿಂತ ಜಾಗತಿಕಮಟ್ಟದಲ್ಲಿ ಹೆಚ್ಚು ಮಾಧ್ಯಮ ಗಮನ ಸೆಳೆದ ದೆಹಲಿ ಗಲಭೆಗೂ ಏನಾದರೂ ನಂಟಿದೆಯೇ? ಎಂಬ ಪ್ರಶ್ನೆ ಕೂಡ ಎದ್ದಿದೆ.
ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ; ಟ್ರಂಪ್ ಭಾರತಕ್ಕೆ ಕಾಲಿಡುವ ಕೆಲವೇ ಗಂಟೆಗಳು ಮುನ್ನ ಭುಗಿಲೆದ್ದ ಗಲಭೆ, ಅವರು ಭಾರತದಿಂದ ಹೊರಕ್ಕೆ ಕಾಲಿಡುತ್ತಲೇ ನಿಂತುಹೋದದ್ದರ ಅಸಂಗತ ಸಂಗತಿ ಕೂಡ ಕೇವಲ ಕಾಕತಾಳೀಯವಲ್ಲ ಎನಿಸದೇ ಇರದು. ಜೊತೆಗೆ, ಮೂರು ದಿನಗಳ ಕಾಲ ಹಿಂಸೆ ಅಡೆತಡೆಗಳಿಲ್ಲದೆ ಹಬ್ಬಿ, ಸುಮಾರು 25ಕ್ಕೂ ಹೆಚ್ಚು ಜನ ಬಲಿಯಾದರೂ ದೆಹಲಿ ಪೊಲೀಸರು ಕನಿಷ್ಠ ನಿಷೇಧಾಜ್ಞೆಯನ್ನು ಕೂಡ ಹೇರಲಿಲ್ಲ, ಮತ್ತು ಆ ಪೊಲೀಸರಿಗೆ ಆದೇಶ ನೀಡಬೇಕಿದ್ದ ಗೃಹ ಸಚಿವ ಅಮಿತ್ ಶಾ ಕೂಡ ಬಹುತೇಕ ಮೌನಕ್ಕೆ ಶರಣಾಗಿದ್ದರು ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಮಾಧ್ಯಮಗಳಿಂದ ದೂರವೇ ಉಳಿದಿದ್ದರು ಎಂಬುದು ಕೂಡ ಗಮನಾರ್ಹ.
ಒಮ್ಮೆ ಟ್ರಂಪ್ ಪ್ರವಾಸ ಮುಗಿಸಿ ವಾಪಸ್ ಪ್ರಯಾಣ ಬೆಳೆಸುತ್ತಿದ್ದಂತೆ, ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನೇ ನೇರವಾಗಿ ದೆಹಲಿ ಕಾನೂನು- ಸುವ್ಯವಸ್ಥೆಯ ಜವಾಬ್ದಾರಿ ನಿಭಾಯಿಸಲು ನಿಯೋಜಿಸಿದರು ಮತ್ತು ಧೋವಲ್ ರಂಗಪ್ರವೇಶವಾಗುತ್ತಲೇ ಪವಾಡಸದೃಷವಾಗಿ ಗಲಭೆ ಹತೋಟಿಗೆ ಬಂದಿತು ಎಂಬ ‘ಕ್ರೊನಾಲಜಿ’ ಕೂಡ ಪ್ರಧಾನಿ ಮತ್ತು ಗೃಹ ಸಚಿವರ ನಡುವಿನ ಹೊಸ ‘ಈಕ್ವೇಷನ್ಸ್’ನತ್ತ ಬೊಟ್ಟುಮಾಡುತ್ತಿದೆ.
ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿ ರದ್ದು ಕುರಿತ ನಿರ್ಧಾರವಿರಬಹುದು, ಸಿಎಎ ಜಾರಿಯ ವಿಷಯವಾಗಿರಬಹುದು, ಕಳೆದ ಒಂದು ವರ್ಷದಲ್ಲಿ ಬಿಜೆಪಿ ಸರ್ಕಾರದ ಪ್ರಭಾವಿ ಮುಖವಾಗಿ ಹೊರಹೊಮ್ಮಿರುವುದು ಅಮಿತ್ ಶಾ. ಸಂಸತ್ತಿನ ಒಳಹೊರೆಗೆ ಸರ್ಕಾರದ ನೀತಿ- ನಿಲುವುಗಳ ಸಮರ್ಥನೆ ವಿಷಯದಲ್ಲಿಯೂ ಶಾ, ಮೋದಿಯವರನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದ್ದಾರೆ. ಆ ಕಾರಣಕ್ಕೇ ಆರ್ ಎಸ್ ಎಸ್ ಗೆ ಕೂಡ ಈಗ ಪ್ರಧಾನಿಗಿಂತ ಗೃಹ ಸಚಿವರೇ ಮೆಚ್ಚಿನ ನಾಯಕರಾಗಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಅಮಿತ್ ಶಾ ಅವರೇ ಭವಿಷ್ಯದ ಪ್ರಧಾನಿ ಎಂಬ ಮಾತುಗಳು ಆರ್ ಎಸ್ ಎಸ್ ವಲಯದಲ್ಲಿ ಹರಿದಾಡುತ್ತಿವೆ. ಸಹಜವಾಗೇ ತಮ್ಮ ಮಿತ್ರನ ಈ ಬೆಳವಣಿಗೆ ಪ್ರಧಾನಿ ಮೋದಿಯವರಲ್ಲಿ ಅಸಮಧಾನ ಹುಟ್ಟುಹಾಕಿರಬಹುದು. ಆ ಹಿನ್ನೆಲೆಯಲ್ಲೇ ಟ್ರಂಪ್ ಕಾರ್ಯಕ್ರಮಗಳಲ್ಲಿ ಗೃಹ ಸಚಿವರಿಗೆ ಪ್ರಾತಿನಿಧ್ಯ ಕಡಿಮೆಯಾಗಿರಬಹುದು. ಆ ತಂತ್ರಗಾರಿಕೆಗೆ ಪ್ರತಿಯಾಗಿ ದೆಹಲಿ ಗಲಭೆಯ ಪ್ರತಿತಂತ್ರವಾಗಿರಬಹುದು ಎಂದು ‘ಸ್ಕ್ರೋಲ್ ‘ ಸೇರಿದಂತೆ ಕೆಲವು ಮಾಧ್ಯಮಗಳು ವಿಶ್ಲೇಷಿಸಿವೆ.
ಆದರೆ, ಅದು ಅಷ್ಟು ನಿಜವಿರಲಿಕ್ಕಿಲ್ಲ. ಏಕೆಂದರೆ; ಮೋದಿ ಮತ್ತು ಶಾ ಜೋಡಿ ಅಂತಹ ಅಧಿಕಾರದ ಹಪಾಹಪಿಯನ್ನು ಮೀರಿ, ವಿಸ್ತೃತ ಅಜೆಂಡಾದ ಮುಖವಾಗಿ ಕೆಲಸ ಮಾಡುತ್ತಾ ಸುಮಾರು ನಾಲ್ಕು ದಶಕಗಳೇ ಉರುಳಿವೆ. 1985ರಿಂದ ಈ ಜೋಡಿ ರಾಜಕಾರಣದ ‘ಹಕ್ಕಬುಕ್ಕ’ರಂತೆ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅವರಿಬ್ಬರಿಗೂ ಅಷ್ಟರಮಟ್ಟಿನ ಹೊಂದಾಣಿಕೆ, ‘ಈಕ್ವೇಷನ್’ ಇದೆ. ಹಾಗಾಗಿ, ಟ್ರಂಪ್ ಭೇಟಿಯ ವೇಳೆ ಗಲಭೆ ಭುಗಿಲೆದ್ದಿದ್ದಕ್ಕೂ ಮೋದಿ- ಶಾ ನಂಟಿಗೂ ಸಂಬಂಧವಿಲ್ಲ. ಬದಲಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ದೆಹಲಿಯತ್ತ ಇರುವಾಗಲೇ ಹಿಂದುತ್ವವಾದದ ಬಲಪ್ರದರ್ಶನದ ತಂತ್ರವಾಗಿಯೂ ಗಲಭೆ ಸೃಷ್ಟಿಸಿರುವ ಸಾಧ್ಯತೆ ಇರಬಹುದು. ಆ ಬಳಿಕ ಗಲಭೆ ಬಗ್ಗುಬಡಿಯದೆ ಪೊಲೀಸರ ಸಹಕಾರದಲ್ಲಿ ಮುಂದುವರಿಯಲು ಬಿಟ್ಟಿದ್ದರ ಹಿಂದೆ 2002ರ ಗುಜರಾತ್ ಮಾದರಿಯ ಪ್ರಯೋಗದ ಲೆಕ್ಕಾಚಾರವಿರಬಹುದು. ಸಿಎಎ ವಿರೋಧಿ ಹೋರಾಟಗಾರರ ವಿರುದ್ಧ ಮಡುಗಟ್ಟಿದ್ದ ಹಿಂದುತ್ವವಾದಿಗಳ ಆಕ್ರೋಶ ತೀರಿಸಿಕೊಳ್ಳಲು ಒಂದು ಅವಕಾಶ ನೀಡಿ, ಹಿಂದುತ್ವವಾದಿಗಳನ್ನು ಸಮಾಧಾನಪಡಿಸುವ ರಾಜಕೀಯ ನಡೆ ಇದಾಗಿರಬಹುದು ಎಂಬ ಮತ್ತೊಂದು ಬಗೆಯ ವಿಶ್ಲೇಷಣೆಗಳು ಹರಿದಾಡುತ್ತಿವೆ.
ಈ ನಡುವೆ, ಇಂತಹ ತಂತ್ರಗಾರಿಕೆಯ ಭಾಗವಾಗಿಯೇ ಧೋವಲ್ ಅವರನ್ನು ರಂಗಪ್ರವೇಶ ಮಾಡಿಸಲಾಯಿತು. ಆ ಮೂಲಕ ಏಕ ಕಾಲಕ್ಕೆ ದೇಶದ ಉದಾರವಾದಿಗಳ ಕಣ್ಣಲ್ಲಿ, ಅಮಿತ್ ಶಾ ನಿಷ್ಕ್ರಿಯತೆಯಿಂದ ಬೇಸತ್ತು ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಭದ್ರತಾ ಸಲಹೆಗಾರರನ್ನು ಬೀದಿಗಿಳಿಸಿ ಪರಿಸ್ಥಿತಿ ನಿಭಾಯಿಸಿದರು ಎಂಬ ಮೆಚ್ಚುಗೆಗೆ ಪಾತ್ರರಾಗಬಹುದು. ಅತ್ತ ಮತ್ತೊಂದು ಕಡೆ, ಸಿಎಎ ವಿರೋಧಿಗಳಿಗೆ(ಬಹುತೇಕ ಮುಸ್ಲಿಮರು) ಸರಿಯಾದ ಬುದ್ದಿ ಕಲಿಸಿದ ಗೃಹ ಸಚಿವ ಅಮಿತ್ ಶಾ, ಏನೇ ಆದರೂ ಹಿಂದೂಗಳನ್ನು ಬಿಟ್ಟುಕೊಡಲಿಲ್ಲ. ಅವರು ಯಾವಾಗಲೂ ಹಿಂದುತ್ವದ ಕಟ್ಟಾಳು ಎಂಬ ಅಭಿಮಾನವನ್ನು ಗಳಿಸಿಕೊಂಡರು. ಹಾಗಾಗಿ ಇದು ಆರ್ ಎಸ್ ಎಸ್ ನ ಚಾಣಾಕ್ಷ ನಡೆ ಎನ್ನಲಾಗುತ್ತಿದೆ.
‘ಏಕ ಕಾಲಕ್ಕೆ ಮೋದಿಗೆ ಉದಾರವಾದಿಗಳ ಮೆಚ್ಚುಗೆ ಮತ್ತು ಆ ಮೂಲಕ ಮುತ್ಸದ್ಧಿ ನಾಯಕ ಎಂಬ ಅಂತಾರಾಷ್ಟ್ರೀಯ ಮಟ್ಟದ ವರ್ಚಸ್ಸು ಕಾಯ್ದುಕೊಳ್ಳುವುದು ಹಾಗೂ ಅದೇ ಹೊತ್ತಿಗೆ ಕಟ್ಟರ್ ಹಿಂದುತ್ವವಾದಿ ಅಮಿತ್ ಶಾ ಎಂಬ ಹೆಗ್ಗಳಿಕೆಗೂ ಮುಕ್ಕಾಗದಂತೆ ನೋಡಿಕೊಳ್ಳಲಾಗಿದೆ. ಅದಕ್ಕಾಗಿ ಬಹಳ ಚಾಣಾಕ್ಷತೆಯಿಂದ ಎನ್ ಎಸ್ ಎ ಸ್ಥಾನವನ್ನು ಬಳಸಿಕೊಳ್ಳಲಾಗಿದೆ’ ಎಂದು ‘ದ ಪ್ರಿಂಟ್’ ವಿಶ್ಲೇಷಣೆ ಹೇಳಿದೆ.
ಒಟ್ಟಾರೆ, ಅದು ಪ್ರಧಾನಿ ಮತ್ತು ಗೃಹ ಸಚಿವರ ನಡುವಿನ ವರ್ಚಸ್ಸಿನ ಸಮರವಿರಲಿ ಅಥವಾ ಹಿಂದುತ್ವವಾದ ಮತ್ತು ಮೋದಿಯವರ ಮುತ್ಸದ್ದಿತನ ಸಮದೂಗಿಸುವ ಆರ್ ಎಸ್ ಎಸ್ ಲೆಕ್ಕಾಚಾರವೇ ಇರಲಿ; ದೆಹಲಿ ಗಲಭೆ ಉದ್ದೇಶಿತ ಕಾರ್ಯತಂತ್ರದ ಭಾಗವೆನ್ನುವುದಂತೂ ಈಗ ನಿಜವಾಗುತ್ತಿದೆ. ರಾಜಕೀಯ ಲೆಕ್ಕಾಚಾರ, ತಂತ್ರಗಾರಿಕೆಯ ಭಾಗವಾಗಿ ನಾಜೂಕಾಗಿ ಕೋಮು ಗಲಭೆಗಳನ್ನು ಹೆಣೆಯಲಾಗುತ್ತದೆ ಮತ್ತು ಸರ್ಕಾರಿ ವ್ಯವಸ್ಥೆ(ಮುಖ್ಯವಾಗಿ ಪೊಲೀಸರು)ಯನ್ನೇ ಬಳಸಿಕೊಂಡು ಅಂತಹ ತಂತ್ರಗಳನ್ನು ಜಾರಿಗೆ ತರಲಾಗುತ್ತದೆ ಎಂಬುದಕ್ಕೆ ಗುಜರಾತ್ ಗಲಭೆಯೇ ದೊಡ್ಡ ನಿದರ್ಶನವಾಗಿ ಕಣ್ಣಮುಂದಿದೆ. ಆ ಅರ್ಥದಲ್ಲಿಯೂ ದೆಹಲಿ ಗಲಭೆ, ‘ಗುಜರಾತ್ ಮಾದರಿ’ಯ ಮರುರೂಪ ಎಂದರೆ ಬಹುಶಃ ಅತಿಶಯೋಕ್ತಿಯಾಗಲಾರದು!