ಭಾರತ ಸ್ವಾತಂತ್ಯ್ರಗೊಂಡು ದೇಶ ವಿಭಜನೆಯಾಗಿದ್ದ ಕಾಲದಲ್ಲಿ ಮೊದಲ ಭಾರಿಗೆ ಇಡೀ ದೇಶ ಅತ್ಯಂತ ದೊಡ್ಡ ಕೋಮು ಗಲಭೆಗೆ ಸಾಕ್ಷಿಯಾಗಿತ್ತು. ಪೂರ್ವ ಭಾರತ ಸಂಪೂರ್ಣವಾಗಿ ಕೋಮು ಜ್ವಾಲೆಗೆ ತತ್ತರಿಸಿ ಹೋಗಿತ್ತು. ಸ್ವತಃ ಮಹಾತ್ವಾ ಗಾಂಧಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಪಾದಯಾತ್ರೆ ನಡೆಸುವ ಮೂಲಕ ಕೋಮು ಸಾಮರಸ್ಯವನ್ನು ಮತ್ತೆ ಮೂಡಿಸುವಲ್ಲಿ ಸಫಲರಾಗಿದ್ದರು. ಆದರೆ, ಇದೇ ಕೋಮು ಹಿಂಸಾಚಾರ ಕೊನೆಗೆ ಮಹಾತ್ಮನ ಪ್ರಾಣವನ್ನೇ ಕಸಿದಿದ್ದು ದುರಂತ.
ಗಾಂಧಿ ಹತ್ಯೆಯ ನಂತರವೂ ಭಾರತದಲ್ಲಿ ಅಸಂಖ್ಯಾತ ಕೋಮು ಗಲಭೆಗಳು ನಡೆದಿವೆ. 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರ ಉಂಟಾದ ಕೋಮು ಹಿಂಸಾಚಾರ, 2002ರ ಗೋಧ್ರಾ ಹತ್ಯಾಕಾಂಡ ಮತ್ತು ತೀರಾ ಇತ್ತೀಚಿನ ಮುಜಾಫರಾಬಾದ್ ಕೋಮು ಗಲಭೆಯನ್ನು ಹಾಗೂ ಈ ಗಲಭೆಯಲ್ಲಿ ಪ್ರಾಣ ತ್ಯಜಿಸಿದ ಅಸಂಖ್ಯಾತ ಅಮಾಯಕರ ಕೊಲೆಯನ್ನು ಭಾಗಶಃ ಭಾರತೀಯರು ಮರೆತಿರಲಿಕ್ಕಿಲ್ಲ. ಇಂತಹ ಭೀಭತ್ಸ ಕೋಮು ಗಲಭೆಗಳ ಸಾಲಿಗೆ ಇದೀಗ ದೆಹಲಿ ಕೋಮು ಗಲಭೆಯೂ ಸೇರ್ಪಡೆಯಾಗಿದೆ.
ಸಾಮಾನ್ಯವಾಗಿ ಭಾರತದಂತಹ ರಾಷ್ಟ್ರದಲ್ಲಿ ಕೋಮು ಗಲಭೆ ಅಚಾನಕ್ಕಾಗಿ ನಡೆಯುವುದು ಸಾಧ್ಯವೇ ಇಲ್ಲ. ಅದಕ್ಕೆ ನೂರೆಂಟು ಕಾರಣಗಳು ಇರುತ್ತವೆ. ಎಲ್ಲೆ ಕೋಮು ಗಲಭೆ ಆದರೂ ಪ್ರಭುತ್ವ ಸ್ವತಃ ಮುಂದೆ ನಿಂತು ಶಾಂತಿ ಕಾಪಾಡುತ್ತದೆ. ಆದರೆ, ಪ್ರಭುತ್ವವೇ ಮುಂದೆ ನಿಂತು ಕೋಮು ಗಲಭೆಯ ಆರಂಭಕ್ಕೆ ಕಾರಣವಾಗುತ್ತದೆ ಮತ್ತು ಹಿಂದೆ ನಿಂತು ಪೋಷಿಸುತ್ತದೆ ಎಂದರೆ ಸುಮ್ಮನೆ ಮಾತಲ್ಲ.
ಭಾರತದ ಮಟ್ಟಿಗೆ ಹೀಗೆ ಇಡೀ ಪ್ರಭುತ್ವವೇ ಹಿಂದೆ ನಿಂತು ಪೋಷಿಸಿದ ಕೋಮು ಗಲಭೆ ಪೈಕಿ ಮೊದಲನೇಯದು 2002ರ ಗುಜರಾತ್ ಗೋಧ್ರಾ ಹತ್ಯಾಕಾಂಡವಾದರೆ, ಎರಡನೇಯದು ದೆಹಲಿ ಕೋಮು ಹತ್ಯಾಕಾಂಡ. ವಿಪರ್ಯಾಸವೆಂದರೆ ಈ ಹತ್ಯಾಕಾಂಡದ ಹಿಂದೆ ಇದ್ದದ್ದು ಇದೇ ಬಿಜೆಪಿ ಸರ್ಕಾರ ಮತ್ತು ಈ ಸಂದರ್ಭದಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ವ್ಯಕ್ತಿ ಸನ್ಮಾನ್ಯ ಪ್ರಧಾನಿ ನರೇಂದ್ರ ಮೋದಿ.
ಸುಮಾರು 50ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಮತ್ತು 300ಕ್ಕೂ ಹೆಚ್ಚು ಜನ ಗಾಯಾಳುಗಳಾಗಲು ಕಾರಣವಾದ ದೆಹಲಿ ಹತ್ಯಾಕಾಂಡದ ಹಿಂದೆ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ಕೈವಾಡ ಇದೆ ಎಂದು ಸುಮ್ಮನೆ ಹೇಳುತ್ತಿಲ್ಲ. ಬದಲಾಗಿ ಇದಕ್ಕೆ ಸಾಕಷ್ಟು ಸಾಕ್ಷಿಗಳನ್ನು ಮುಂದಿಡಲಾಗುತ್ತಿದೆ.
ದೆಹಲಿ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಪೊಲೀಸರು 783 FIR ದಾಖಲಿಸಿದ್ದಾರೆ. 630 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಇತ್ತೀಚೆಗೆ ಕೋರ್ಟ್‌ಗೆ ಚಾರ್ಜ್‌ಶೀಟ್ ಅನ್ನೂ ಸಹ ಸಲ್ಲಿಸಿದ್ದಾರೆ. ಈ ನಡುವೆ ಪೊಲೀಸರ ವಿಚಾರಣೆಯ ಜೊತೆಗೆ ಆಂಗ್ಲ ಸುದ್ದಿ ಮಾಧ್ಯಮವಾದ “ದಿ ಕ್ಯಾರವಾನ್” ಸಹ ಈ ಪ್ರಕರಣದ ತನಿಖೆಗೆ ಬೆನ್ನು ಬಿದ್ದಿದೆ.
ಹೀಗಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್, ಕೆಲವು ಪ್ರಮುಖ ಘಟನೆಗಳು ಮತ್ತು ಕೇಸ್ ಫೈಲ್, ಅಲ್ಲದೆ, ಕೋಮು ಹಿಂಸಾಚಾರದ ತನಿಖೆಯಲ್ಲಿ “ದಿ ಕ್ಯಾರವಾನ್” ಬಯಲಿಗೆ ಎಳೆದ ಕೆಲವು ಸತ್ಯಗಳನ್ನು ಮುಂದಿಟ್ಟು ದೆಹಲಿಯ ಕೋಮು ಗಲಭೆಯ ಹಿಂದೆ ಪ್ರಭುತ್ವದ ಕೈವಾಡ ಇತ್ತೇ? ಎಂಬ ಪ್ರಮುಖ ಪ್ರಶ್ನೆಯೆ ಸಿಕ್ಕುಗಳನ್ನು ಬಿಡಿಸಲು “ಪ್ರತಿಧ್ವನಿ” ಮುಂದಾಗಿದೆ.
ಶಾಂತಿಯುತ CAA ಹೋರಾಟಕ್ಕೆ ಕಿಡಿ ಹೊತ್ತಿದ್ದು ಎಲ್ಲಿ?
ಅಸಲಿಗೆ CAA-NRC-NPR ವಿರುದ್ಧ ಕಳೆದ ಆಗಸ್ಟ್ ತಿಂಗಳಿನಿಂದ ಭಾರತದಲ್ಲಿ ದೊಡ್ಡ ಪ್ರಮಾಣದ ಹೋರಾಟ ನಡೆದಿತ್ತು. 2014ರಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟದ ನಂತರ ಭಾರತದಲ್ಲಿ ನಡೆದ ಮತ್ತೊಂದು ದೊಡ್ಡ ಹೋರಾಟ CAA ಮತ್ತು NRC ವಿರೋಧಿ ಹೋರಾಟ. ಈ ಹೋರಾಟ ಆರಂಭವಾದ ದಿನದಿಂದ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಶಾಂತಿಯುತವಾಗಿಯೇ ನಡೆಯುತ್ತಿತ್ತು
ಆದರೆ, ಈ ಹೋರಾಟಕ್ಕೆ ಇದ್ದಕ್ಕಿದ್ದಂತೆ ಕಿಡಿ ಹೊತ್ತಿದ್ದು ಎಲ್ಲಿ? ಎಂದು ಹುಡುಕುತ್ತಾ ಬಿಜೆಪಿ ನಾಯಕರು ಹಾಗೂ ಈ ನಾಯಕರ ಹಿಂದೆ ಸ್ವತಃ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸ್ ಇಲಾಖೆ ಬಂಡೆಯಂತೆ ನಿಂತಿರುವುದು ಸ್ಪಷ್ಟವಾಗುತ್ತಿದೆ.
ಕೇಂದ್ರದ ಕೈವಾಡ-1:
ದೆಹಲಿ ಕೋಮು ಗಲಭೆ ಸಂಬಂಧಿಸಿದಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ ಚಾರ್ಜ್‌ಶೀಟ್ ನಲ್ಲಿ ದೆಹಲಿ ಕೋಮು ಗಲಭೆಯನ್ನು ಕಾಲಾನಕ್ರಮಣಿಕೆಯಲ್ಲಿ ಉಲ್ಲೇಖಿಸಲಾಗಿದ್ದು, ಡಿಸೆಂಬರ್ 13 ರಿಂದ ಫೆಬ್ರವರಿ 25 ರವರೆಗೆ ನಡೆದ ಘಟನೆಗಳನ್ನು ಪಟ್ಟಿ ಮಾಡಲಾಗಿದೆ. ಆದರೆ, ಈ ಪಟ್ಟಿಯಲ್ಲಿ ಶಾಸಕ ಕಪಿಲ್ ಮಿಶ್ರಾ ಸೇರಿದಂತೆ ಬಿಜೆಪಿ ನಾಯಕರ ದ್ವೇಷದ ಭಾಷಣಗಳನ್ನು ಪೊಲೀಸರು ಎಲ್ಲಿಯೂ ಉಲ್ಲೇಖಿಸಿಲ್ಲ.
ಚಾರ್ಜ್‌ಶೀಟ್‌ನಲ್ಲಿ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಾಹೀನ್ ಬಾಗ್ ಮತ್ತು ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಸ್ಥಳದಲ್ಲಿದ್ದ ಪ್ರತಿಭಟನಾಕಾರರ ಬಗ್ಗೆ ಮಾತ್ರ ಉಲ್ಲೇಖಿಸಲಾಗಿದೆ.
ಕೋಮುವಾದಿ ಮತ್ತು ದ್ವೇಷದ ಟ್ವೀಟ್ಗಳಿಗೆ ಹೆಸರುವಾಸಿಯಾದ ಕಪಿಲ್ ಮಿಶ್ರಾ ಫೆಬ್ರವರಿ 23 ರಂದು ಈಶಾನ್ಯ ದೆಹಲಿಯ ಜಾಫ್ರಾಬಾದ್ ಬಳಿಯ ಮೌಜ್ಪುರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ರ್ಯಾಲಿಯನ್ನು ನಡೆಸಿದ್ದರು. ಅದೇ ಸ್ಥಳದಲ್ಲಿ ಸಿಎಎ ವಿರೋಧಿ ಹೋರಾಟ ಸಹ ನಡೆಯುತ್ತಿತ್ತು.
ಈ ವೇಳೆ ಪೊಲೀಸರಿಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದ ಕಪಿಲ್ ಮಿಶ್ರಾ, “ಮೂರು ದಿನಗಳೊಳಗೆ ಪೊಲೀಸರು ಇಲ್ಲಿನ ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕು. ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೆಹಲಿಯಲ್ಲಿ ಇರುವವರೆಗೂ ಮಾತ್ರ ನಾವು ತಾಳ್ಮೆ ವಹಿಸುತ್ತೇವೆ. ಆದರೆ, ಆನಂತರವೂ ಇಲ್ಲಿನ ರಸ್ತೆಗಳನ್ನು ತೆರವುಗೊಳಿಸದಿದ್ದರೆ ನಾವು ಪೊಲೀಸರನ್ನು ಕೇಳುವುದಿಲ್ಲ, ನಾವೇ ಬೀದಿಗಿಳಿಯಬೇಕಾಗುತ್ತದೆ” ಎಂದು ಪೊಲೀಸ್ ಅಧಿಕಾರಿಗಳ ಎದುರಿಗೆ ಕಪಿಲ್ ಮಿಶ್ರಾ ಆಡಿದ್ದ ಉದ್ಧಟ ತನದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದವು.
ಕೆಲವು ಗಂಟೆಗಳ ನಂತರ ಸಿಎಎ ವಿರೋಧಿ ಮತ್ತು ಪರ ಎಂಬ ಎರಡು ಗುಂಪುಗಳ ನಡುವೆ ಘರ್ಷಣೆಗಳು ಭುಗಿಲೆದ್ದವು. ನೋಡ ನೋಡುತ್ತಿದ್ದಂತೆ ದೆಹಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಟ 50ಕ್ಕೂ ಹೆಚ್ಚು ಮುಸ್ಲಿಮರು ಕೊಲ್ಲಲ್ಪಟ್ಟಿದ್ದರು.
ದೆಹಲಿ ಹಿಂಸಾಚಾರದ ಬೆನ್ನಿಗೆ ಕಪಿಲ್ ಮಿಶ್ರಾ ಅವರ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿದ್ದವು. ದೆಹಲಿ ಹೈಕೋರ್ಟ್ ಬಿಜೆಪಿ ನಾಯಕರ ವಿರುದ್ಧದ ನಿಷ್ಕ್ರಿಯತೆಯ ಬಗ್ಗೆ ಪೊಲೀಸರನ್ನು ಪ್ರಶ್ನಿಸಿತ್ತು. ಬಿಜೆಪಿಯ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ವಿರುದ್ಧ ಪ್ರಕರಣಗಳನ್ನು ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.
ಆದರೆ, ಈ ಎಲ್ಲಾ ಘಟನೆಗಳನ್ನು ಪ್ರಸ್ತುತ ಚಾರ್ಜ್‌ಶೀಟ್‌ನಲ್ಲಿ ಕೈಬಿಡಲಾಗಿದೆ. ಈ ಹಿಂದೆ ವಿಚಾರಣೆಯೊಂದರಲ್ಲಿ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರು ಕೋಪಗೊಂಡು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು. “ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರು ಸೇರಿದಂತೆ ಮೂರು ಬಿಜೆಪಿ ನಾಯಕರ ವಿರುದ್ಧ ಏಕೆ ಎಫ್ಐಆರ್ ಹಾಕಿಲ್ಲ? ಅವರ ದ್ವೇಷ ಭಾಷಣಗಳನ್ನು ಪ್ರಕರಣದಲ್ಲಿ ನೀವು ಏಕೆ ನೋಂದಾಯಿಸುತ್ತಿಲ್ಲ? ಅಪರಾಧ ನಡೆದಿದೆ ಎಂಬುದನ್ನು ಅಂಗೀಕರಿಸಲು ಸಹ ನೀವು ಬಯಸುವುದಿಲ್ಲವೇ?” ಎಂದು ಪ್ರಶ್ನಿಸಿದ್ದರು.
ಆದರೆ ಎರಡೇ ದಿನದಲ್ಲಿ ಆ ನ್ಯಾಯಾಧೀಶರನ್ನು ದೆಹಲಿಯಿಂದ ಹರಿಯಾಣಕ್ಕೆ ವರ್ಗಾಯಿಸಲಾಯಿತು, ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು.
ಇಲ್ಲಿಯವರೆಗೆ ಪೊಲೀಸರು ದಾಖಲಿಸಿದ ಎಫ್ಐಆರ್ ಮತ್ತು ಬಂಧನಗಳ ಪ್ರಕಾರ ಗಲಭೆಯ ಸಂಚುಕೋರರು ಸಾಮಾಜಿಕ ಕಾರ್ಯಕರ್ತರು ಅಥವಾ ಸಿಎಎ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿರುವ ಮುಸ್ಲಿಂ ವಿದ್ಯಾರ್ಥಿ ಮುಖಂಡರೇ ಆಗಿದ್ದಾರೆ.
ಈವರೆಗೆ ಗಲಭೆ ಪ್ರಕರಣಗಳಲ್ಲಿ ಪೊಲೀಸರು 783 ಎಫ್ಐಆರ್ ಮತ್ತು 70 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದ್ದಾರೆ. 90 ದಿನಗಳ ಗಡುವನ್ನು ಗಮನದಲ್ಲಿಟ್ಟುಕೊಂಡು ಈಗ ಚಾರ್ಜ್‌ಶೀಟ್ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪೊಲೀಸರಿಂದ ಪ್ರಕರಣದ ಸಂಬಂಧ ಹೆಚ್ಚಿನ ಕ್ರಮವನ್ನು ನಿರೀಕ್ಷಿಸಲಾಗಿದೆ ಎನ್ನಲಾಗುತ್ತಿದೆ.
ಕೋಮು ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ ನಡವಳಿಕೆ ಮತ್ತು ಚಾರ್ಜ್‌ಶೀಟ್ ಅನ್ನು ಒಮ್ಮೆ ಗಮನಿಸಿದರೆ ಈ ಕೋಮು ಗಲಭೆ ತಾನಾಗಿಯೇ ನಡೆದದ್ದಲ್ಲ ಬದಲಿಗೆ ಇದೊಂದು ಪೂರ್ವ ನಿಯೋಜಿತ ಧಂಗೆ ಎಂಬುದು ಸ್ಪಷ್ಟವಾಗುತ್ತದೆ. ಮತ್ತು ಪೊಲೀಸರು ಹೇಗೆ ಪ್ರಭುತ್ವದ ಪರ ನಿಂತು ಕೆಲಸ ನಿರ್ವಹಿಸಿದ್ದಾರೆ. ಸುಮಾರು 50 ಜನ ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ ಎಂಬುದು ವೇದ್ಯವಾಗುತ್ತದೆ.
ಆದರೆ, ಇದು ದೆಹಲಿ ಕೋಮು ಗಲಭೆಯ ಆರಂಭದ ಕಿಡಿ ಅಷ್ಟೇ. ಅಸಲಿಗೆ ಕೋಮು ಗಲಭೆ ನಡೆದ ದಿನಗಳಲ್ಲಿ ಪೊಲೀಸರು ನಡೆದುಕೊಂಡ ರೀತಿ ಮತ್ತು ದೆಹಲಿಯ ಬೀದಿಗಳಲ್ಲಿ ಧರ್ಮದ ಮತ್ತು ಸಿಎಎ ವಿರೋಧಿ ಹೋರಾಟದ ಕಾರಣಕ್ಕೆ ಬಿದ್ದ ಒಂದೊಂದು ಹೆಣಗಳ ಹಿಂದೆಯೂ ಹತ್ತಾರು ಹೃದಯ ವಿದ್ರಾವಕ ಕಥೆಗಳಿವೆ. ಈ ಎಲ್ಲಾ ಘಟನೆಗಳ ಹಿಂದೆಯೂ ಪೂರ್ವ ನಿಯೋಜಿತ ದಾಳಿಯೂ ಕೆಲಸ ಮಾಡಿದೆ. ಈ ಎಲ್ಲಾ ಘಟನೆಗಳ ನೈಜ ವರದಿಗಳನ್ನು ಪ್ರತಿಧ್ವನಿ ಮುಂದಿನ ಸಂಚಿಕೆಯಲ್ಲಿ ನೀಡಲಿದೆ.