ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಗಳವಾರ ಚುನಾವಣಾ ಫಲಿತಾಂಶ ಹೊರಬೀಳುವ ಮುಹೂರ್ತಕ್ಕಾಗಿ ಆತಂಕದಲ್ಲಿ ಕಾದಿರುವುದು ಕೇವಲ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಮಾತ್ರವಲ್ಲ; ಬದಲಾಗಿ ಮಂತ್ರಿಗಿರಿಯ ಮೇಲೆ ಕಣ್ಣಿಟ್ಟಿರುವ ಬಿಜೆಪಿಯ ಸಾಲುಸಾಲು ನಾಯಕರು ಫಲಿತಾಂಶ ಹೊರಬೀಳುವುದನ್ನೇ ಕಾದಿದ್ದಾರೆ ಎಂಬುದು ವಿಶೇಷ.
ಹೌದು, ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶದ ಬಳಿಕ ದೆಹಲಿಗೆ ಹೋಗಿ ವರಿಷ್ಠರೊಂದಿಗೆ ಮಾತುಕತೆ ನಡೆಸಿ ದೀಪಾವಳಿಗೆ ಮುನ್ನವೇ ಸಂಪುಟ ಪುನರ್ ರಚನೆ ಮಾಡಲಾಗುವುದು. ಒಂದು ವೇಳೆ ವರಿಷ್ಠರು ಕೇವಲ ಸಂಪುಟ ವಿಸ್ತರಣೆಗೆ ಮಾತ್ರ ಅವಕಾಶ ನೀಡಿದರೆ, ಖಾಲಿ ಇರುವ ಸ್ಥಾನಗಳಿಗೆ ಹೊಸಬರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಬಿಜೆಪಿಯ ಸಚಿವ ಸ್ಥಾನ ಆಕಾಂಕ್ಷಿಗಳ ದಿಲ್ಲಿ ದೌಡು ಬಿರುಸುಗೊಂಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈಗಾಗಲೇ ವಲಸಿಗ ಬಿಜೆಪಿಗರು ಮತ್ತು ಮೂಲ ಬಿಜೆಪಿಗರ ನಡುವೆ ಸಚಿವ ಸ್ಥಾನಕ್ಕಾಗಿ ಭಾರೀ ಪೈಪೋಟಿ ಆರಂಭವಾಗಿದ್ದು, ಒಂದು ಕಡೆ ಬಸವರಾಜ್ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಮುಂತಾದವರ ನೇತೃತ್ವದಲ್ಲಿ ಒಂದು ಬಣ ಆತಂರಿಕ ಮತ್ತು ಬಾಹ್ಯ ಬಂಡಾಯ ಮೊಳಗಿಸಿದೆ. ಮತ್ತೊಂದು ಕಡೆ ಎಚ್ ವಿಶ್ವನಾಥ್, ಆರ್ ಶಂಕರ್ ನೇತೃತ್ವದಲ್ಲಿಆಪರೇಷನ್ ಕಮಲ ಫಲಾನುಭವಿ ವಲಸಿಗರು ತಮ್ಮ ಹಕ್ಕು ಸ್ಥಾಪಿಸಲು ಸೆಣೆಸುತ್ತಿದ್ದಾರೆ. ಆ ನಿಟ್ಟಿನಲ್ಲಿ ವಿಶ್ವನಾಥ್ ಮತ್ತು ಶಂಕರ್ ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನು ಭೇಟಿಯಾಗಲು ಕಾದಿದ್ದಾರೆ.
ಈ ನಡುವೆ, ಆರ್ ಆರ್ ನಗರದಲ್ಲಿ ಗೆಲುವು ಪಡೆದರೆ ಮುನಿರತ್ನ ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗುತ್ತಾರೆ. ಜೊತೆಗೆ ಎಂಟಿಬಿ ನಾಗರಾಜ್ ಕೂಡ ವಲಸಿಗರ ಕೋಟಾದಲ್ಲಿ ತಳ್ಳಿ ಹಾಕಲಾಗದ ಆಕಾಂಕ್ಷಿ. ಈಗ ದೆಹಲಿಯಲ್ಲಿ ಬೀಡುಬಿಟ್ಟಿರುವ ವಿಶ್ವನಾಥ್ ಮತ್ತು ಶಂಕರ್ ಜೊತೆಗೆ, ರಮೇಶ್ ಜಾರಕಿಹೊಳಿ ಮತ್ತಿತರ ‘ಮಾಜಿ ಸಮಾನಮನಸ್ಕರು’ ಕೂಡ ಸಂಪುಟ ವಿಸ್ತರಣೆಯಲ್ಲಿ, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಮೂಲ ಕಾರಣವಾಗಿರುವ ಮತ್ತು ಅದಕ್ಕಾಗಿ ಹಿಂದಿನ ತಮ್ಮ ಸಚಿವ, ಶಾಸಕ ಸ್ಥಾನ ತ್ಯಾಗ ಮಾಡಿ, ಉಪ ಚುನಾವಣೆಯ ಹೋರಾಟಗಳನ್ನೂ ಮಾಡಿರುವ ಅವರಿಗೆ ಅಂದು ಕೊಟ್ಟ ಮಾತಿನಂತೆ ಸಚಿವ ಸ್ಥಾನ ನೀಡುವುದು ನ್ಯಾಯ ಎಂಬ ವಕಾಲತ್ತು ವಹಿಸಿದ್ದಾರೆ.
ಒಂದು ವೇಳೆ ವರಿಷ್ಠರು ಸಂಪುಟ ಪುನರ್ ರಚನೆ ಬದಲಿಗೆ ಕೇವಲ ವಿಸ್ತರಣೆಗೆ ಅವಕಾಶ ನೀಡಿದರೆ, ಸದ್ಯಕ್ಕೆ ಸಿ ಟಿ ರವಿ ರಾಜೀನಾಮೆಯಿಂದಾಗಿ ತೆರವಾಗಿರುವ ಸ್ಥಾನವೂ ಸೇರಿದಂತೆ ಖಾಲಿ ಇರುವ ಒಟ್ಟು ಏಳು ಸಚಿವ ಸ್ಥಾನಗಳ ಪೈಕಿ ಐದು ಸ್ಥಾನಗಳನ್ನು ಮಾತ್ರ ತುಂಬಿಕೊಳ್ಳಲಾಗುವುದು ಎಂದು ಸಿಎಂ ಹೇಳಿರುವ ಹಿನ್ನೆಲೆಯಲ್ಲಿ, ಐದು ಸ್ಥಾನಗಳ ಪೈಕಿ ನಾಲ್ಕು ಸ್ಥಾನಕ್ಕೆ ವಲಸಿಗರೇ ಟವೆಲ್ ಹಾಸಿದ್ದಾರೆ. ಅದಕ್ಕೆ ಬದಲಾಗಿ, ಸಂಪೂರ್ಣ ಪುನರ್ ರಚನೆಗೆ ಅವಕಾಶ ನೀಡಿದರೆ, ಆಗ ಬಹುತೇಕ ಆಕಾಂಕ್ಷಿಗಳಿಗೆ ಸ್ಥಾನ ಸಿಗಲಿದೆ.
ಹಾಗಾಗಿ ಈಗ ವಲಸಿಗರನ್ನೂ ಸಂತೃಪ್ತಿಗೊಳಿಸುವ ಮತ್ತು ಸಚಿವ ಸ್ಥಾನಕ್ಕಾಗಿ ದೆಹಲಿ ಮಟ್ಟದಲ್ಲಿ ಪ್ರಬಲ ಲಾಬಿ ನಡೆಸುತ್ತಿರುವ ಮೂಲ ಬಿಜೆಪಿಗರನ್ನೂ ಸಂಭಾಳಿಸುವ ಸವಾಲು ಕೇವಲ ಸಿಎಂ ಯಡಿಯೂರಪ್ಪ ಅವರಿಗೆ ಮಾತ್ರವಲ್ಲ; ಸ್ವತಃ ಪಕ್ಷದ ಹೈಕಮಾಂಡಿಗೆ ತಲೆನೋವಾಗಿದೆ.
ಮೂಲ ಬಿಜೆಪಿಗರಲ್ಲೇ ಸುಮಾರು ಒಂದು ಡಜನ್ ಗೂ ಹೆಚ್ಚು ಮಂದಿ ಸಚಿವ ಸ್ಥಾನಾಕಾಂಕ್ಷಿಗಳಿದ್ದಾರೆ. ಅಷ್ಟೇ ಅಲ್ಲ; ಆ ಪೈಕಿ ಬಹುತೇಕ ಮಂದಿ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದು, ಬಿ ಎಲ್ ಸಂತೋಷ್ ಮೂಲಕ ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ. ಆ ಪೈಕಿ ಸದ್ಯಕ್ಕೆ ಮಂಚೂಣಿಯಲ್ಲಿ ಯತ್ನಾಳ್ ಮತ್ತು ಉಮೇಶ್ ಕತ್ತಿ ಹೆಸರು ಕೇಳಿಬರುತ್ತಿದ್ದರೂ, ಮುರುಗೇಶ್ ನಿರಾಣಿ, ತಿಪ್ಪಾರೆಡ್ಡಿ, ಸುನಿಲ್ ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಅರವಿಂದ ಲಿಂಬಾವಳಿ, ನರಸಿಂಹನಾಯಕ, ರಾಮದಾಸ್ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.
ಮುಖ್ಯವಾಗಿ ಈಗಾಗಲೇ ಸಚಿವರಾಗಿರುವ ಬಹುತೇಕ ಮಂದಿ ತಮ್ಮ ಖಾತೆಗಳ ನಿರ್ವಹಣೆಯ ವಿಷಯದಲ್ಲಾಗಲೀ, ಪಕ್ಷದ ಸಂಘಟನೆಯನ್ನು ಬಲಪಡಿಸುವ ವಿಷಯದಲ್ಲಾಗಲೀ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆ ಪೈಕಿ ಕೆಲವರಂತೂ ಬಹುತೇಕ ನಿಷ್ಕ್ರಿಯರಾಗಿದ್ದು, ಅವರಿಂದ ಜನರ ಕೆಲಸವೂ ಆಗುತ್ತಿಲ್ಲ; ಇತ್ತ ಪಕ್ಷದ ಕಾರ್ಯಕರ್ತರಿಗೂ ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಅಂತಹ ಸಚಿವರನ್ನು ಕಿತ್ತುಹಾಕಿ ಕೆಲಸ ಮಾಡುವ ಛಾತಿ ಮತ್ತು ಅನುಭವವೂ ಇರುವ ಹಿರಿಯ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು. ಮುಖ್ಯವಾಗಿ ಸಂಪುಟದಲ್ಲಿ ಯಡಿಯೂರಪ್ಪ ಮತ್ತು ಸಂತೋಷ್ ಬಣಗಳ ನಡುವೆ ಸಮತೋಲನ ಸಾಧಿಸುವುದು ಕೂಡ ಮುಖ್ಯ. ಹಾಗಾಗಿ ಸಂಪುಟ ವಿಸ್ತರಣೆಯಿಂದ ಆಕಾಂಕ್ಷಿಗಳ ನಿರೀಕ್ಷೆಯನ್ನೂ ತಣಿಸಲಾಗದು ಮತ್ತು ಸರ್ಕಾರದ ನಿಷ್ಕ್ರಿಯತೆಯನ್ನೂ ಸರಿಪಡಿಸಲಾಗದು. ಆ ಹಿನ್ನೆಲೆಯಲ್ಲಿ ಸಂಪುಟ ಪುರನ್ ರಚನೆ ಸದ್ಯಕ್ಕೆ ಜಾಣ ನಡೆ. ಆ ಮೂಲಕ ಮೂಲ ಬಿಜೆಪಿಗರಿಗೂ, ವಲಸಿಗರಿಗೂ ಏಕ ಕಾಲಕ್ಕೆ ಸಮಾಧಾನಕರ ವ್ಯವಸ್ಥೆ ಮಾಡುವುದು ಸಾಧ್ಯವಿದೆ ಎಂಬ ಲೆಕ್ಕಾಚಾರ ವರಿಷ್ಠರದ್ದು ಎನ್ನಲಾಗುತ್ತಿದೆ.
ಆದರೆ, ಮುಖ್ಯವಾಗಿ ಸಮಸ್ಯೆ ಇರುವುದು ದೆಹಲಿಗೆ ಹೋಗುವಾಗ ಸಿಎಂ ಯಡಿಯೂರಪ್ಪ ಕೈಯಲ್ಲಿರುವ ಪಟ್ಟಿಯಲ್ಲಿ ಯಾವೆಲ್ಲಾ ಹೆಸರುಗಳಿವೆ ಎಂಬುದರಲ್ಲಿ. ಸಂಪುಟದಿಂದ ಕೈಬಿಡಬೇಕಾದವರು ಮತ್ತು ಸೇರಿಸಿಕೊಳ್ಳಬೇಕಾದವರು ಯಾರು ಯಾರು ಎಂಬುದನ್ನು ಒಳಗೊಂಡ ಆ ಮ್ಯಾಜಿಕ್ ಪಟ್ಟಿಯಲ್ಲಿರುವ ಹೆಸರುಗಳ ಮೇಲೆ ವರಿಷ್ಠರು ಸಂಪುಟ ವಿಸ್ತರಣೆಗೆ ಅಸ್ತು ಎನ್ನುವರೇ ಅಥವಾ ಕೇವಲ ವಿಸ್ತರಣೆಗೆ ಬ್ರೇಕ್ ಹಾಕುವರೇ ಎಂಬುದು ನಿಂತಿದೆ. ಆ ಪಟ್ಟಿಯ ಹೆಸರುಗಳ ಮಾಹಿತಿ ಪಡೆದು, ಅಳೆದು ತೂಗಿ, ವರಿಷ್ಠರಿಗೆ ಮುಂದಿನ ನಿರ್ಧಾರದ ಕುರಿತ ಸೂಚನೆ ನೀಡುವುದು ಮಾತ್ರ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳೇ ಎಂಬುದು ದೆಹಲಿ ವಲಯದಲ್ಲಿ ಕೇಳಿಬರುತ್ತಿರುವ ಮಾತು!
ಹಾಗಾಗಿ ರಾಜ್ಯ ಸಚಿವ ಸಂಪುಟ ಕೇವಲ ವಿಸ್ತರಣೆ ಕಾಣುವ ಮೂಲಕ ಕೆಲವೇ ಮಂದಿ(ಅದರಲ್ಲೂ ಬಹುತೇಕ ವಲಸಿಗರು)ಗೆ ಮಂತ್ರಿಗಿರಿ ಒಲಿಯುವುದೇ? ಅಥವಾ ಪುನರ್ ರಚನೆಯ ಮೂಲಕ ಮೂಲ ಬಿಜೆಪಿಗರ ಬಹುದಿನಗಳ ಕನಸು ನನಸಾಗುವುದೇ ಎಂಬುದು ಅಂತಿಮವಾಗಿ ದೆಹಲಿ ವಿಮಾನ ಏರುವ ಹೊತ್ತಿಗೆ ಸಿಎಂ ಕೈಯಲ್ಲಿರುವ ಪಟ್ಟಿಯ ಮೇಲೆ ನಿಂತಿದೆ!