ಮುಂಬಯಿ ಮೂಲದ ಶಿಪ್ಪಿಂಗ್ ಕಂಪೆನಿ Mercator Ltd ತನ್ನ ಸಿಬ್ಬಂದಿಗೆ ಆರೇಳು ತಿಂಗಳಿನಿಂದ ವೇತನ ನೀಡಿಲ್ಲ. ಈ ವರ್ಷ 529 ಕೋಟಿ ರೂಪಾಯಿ ನಷ್ಟ ಮಾಡಿಕೊಂಡಿದೆ. ಸಾಲಗಾರರಿಗೆ 1,288 ಕೋಟಿ ರೂಪಾಯಿ ಸಾಲ ಬಾಕಿ ಇದೆ. ಒಂದು ಡ್ರೆಡ್ಜರ್ ಹಡಗು ಮಂಗಳೂರಿನ ತಣ್ಣೀರುಬಾವಿ ತೀರದಲ್ಲಿ ಮುಳುಗಿದೆ. ಮತ್ತೊಂದು ಹಡಗು ಸುರತ್ಕಲ್ ಬೀಚ್ ನಲ್ಲಿ ದಡ ಸೇರಿದೆ.
ಇತ್ತೀಚೆಗೆ ನವಮಂಗಳೂರು ಬಂದರು ಸಮೀಪ 2.5 ನಾಟಿಕಲ್ ಮೈಲು ದೂರದಲ್ಲಿ ತ್ರಿದೇವ್ ಪ್ರೇಮ್ ಎಂಬ ಡ್ರೆಡ್ಜರ್ ಸಮುದ್ರದ ನೀರಿನಲ್ಲಿ ಮುಳುಗಡೆ ಆಗಿತ್ತು. ಕೋಸ್ಟ್ ಗಾರ್ಡ್ ಯೋಧರು ಅದರಲ್ಲಿದ್ದ 13 ಮಂದಿ ಮತ್ತು ಏಳು ಮಂದಿ ರಿಪೇರಿ ಕಾರ್ಮಿಕರನ್ನು ಅದಕ್ಕೆ ಮುನ್ನ ಬಚಾವ್ ಮಾಡಿದ್ದರು. ಇದು ನಡೆದಿರುವುದು ಸೆಪ್ಟೆಂಬರ್ ತಿಂಗಳ ಮೊದಲ ವಾರ.
ಅಕ್ಟೋಬರ್ ತಿಂಗಳ ಅಂತ್ಯದ ವೇಳೆಗೆ ಭಗವತಿ ಪ್ರೇಮ್ ಎಂಬ ಮತ್ತೊಂದು ಡೆಡ್ಜಿಂಗ್ ಹಡಗು ಮುಳುಗಡೆ ಆಗುವುದರಲ್ಲಿತ್ತು. ನವಮಂಗಳೂರು ಬಂದರು ಮಂಡಳಿಯವರು ಈ ಹಡಗನ್ನು ಸುರತ್ಕಲ್ ಸಮುದ್ರ ತೀರದಲ್ಲಿ ತಂದು ನಿಲ್ಲಿಸಿದ್ದಾರೆ.
ಬಂದರು ಮಂಡಳಿಯ ಈ ಕ್ರಮವನ್ನು ಸ್ಥಳೀಯ ಮೀನುಗಾರ ಮುಖಂಡರು ವಿರೋಧಿಸಿದರು. ತಮ್ಮ ಕಮ್ಣು ತಪ್ಪಿಸಿ ರಾತ್ರಿ ವೇಳೆ ಡ್ರೆಡ್ಜರನ್ನು ದಡ ಸೇರಿಸಿದ್ದಾರೆ ಎಂದು ಆಪಾದಿಸಲಾಗಿತ್ತು. ಮಾತ್ರವಲ್ಲದೆ, ವಿಮಾ ಹಣಕ್ಕಾಗಿ ಮಂಗಳೂರು ಸಮುದ್ರ ತೀರಕ್ಕೆ ತಂದು ಹಡಗುಗಳನ್ನು ಮುಳುಗಿಸಲಾಗುತ್ತದೆ ಎಂಬ ಗಂಭೀರ ಆರೋಪಗಳು ಕೂಡ ಕೇಳಿ ಬಂದಿತ್ತು.
ಮಂಗಳೂರಿನ ಸುರತ್ಕಲ್ ಬೀಚಿನಲ್ಲಿರುವ ಮತ್ತು ಸಮುದ್ರದಲ್ಲಿ ಮುಳುಗಿರುವ ಎರಡೂ ಹಡಗುಗಳು ಕೂಡ ಮುಂಬಯಿಯ Mercator ಕಂಪೆನಿಗೆ ಸೇರಿದ್ದಾಗಿವೆ. ಎಲ್ಲರಂತೆ, ಕಗಳೆದ ಕೆಲವು ವರ್ಷಗಳಿಂದ Mercator ಕಂಪೆನಿಯ ಆರ್ಥಿಕ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ. ಇತ್ತೀಚೆಗೆ ತನ್ನಲ್ಲಿದ್ದ ಬಹುದೊಡ್ಡ ಹಡಗೊಂದನ್ನು ಕೈಯಲ್ಲಿ ಕಾಸಿಲ್ಲದ ಪರಿಣಾಮ, ಸಾಲದ ಬಡ್ಡಿ ತೀರಿಸಲು ಮಾರಾಟ ಮಾಡಿತ್ತು.
ಕಂಪೆನಿಯ ಶೇರು ಬೆಲೆ ಕೆಲವು ತಿಂಗಳು 26 ರೂಪಾಯಿ ಇದ್ದರೆ, ಇದೀಗ ಅದು ಮೂರು ರೂಪಾಯಿಗೆ ದೊರೆಯುತ್ತದೆ. ಈ ಮಧ್ಯೆ, ವೇತನ ನೀಡಿಲ್ಲ, ಭವಿಷ್ಯ ನಿಧಿ ವಂತಿಕೆಯನ್ನು ಪಾವತಿ ಮಾಡಿಲ್ಲ ಎಂದು ಕಾರ್ಮಿಕರು ನ್ಯಾಯ ಪ್ರಾಧಿಕಾರದ ಮೊರೆ ಹೋಗಿದ್ದಾರೆ.
ಕಂಪೆನಿಯು ಮೂರು ಸರಕು ಸಾಗಾಟ ಹಡಗು ಮತ್ತು ಐದು ಹೂಳೆತ್ತುವ ಡ್ರೆಡ್ಜರ್ ಹೊಂದಿದೆ. ಆದರೆ, ಈಗ ಕೇವಲ ಎರಡೇ ಡ್ರೆಡ್ಜರ್ ಕೆಲಸ ಮಾಡುತ್ತಿದೆ. ಕಾಕಿನಾಡ ಬಂದರು ಸಮೀಪ ದರ್ಶಿನಿ ಪ್ರೇಮ್ ಡ್ರೆಡ್ಜರಿನ ರಿಪೇರಿ ಕೆಲಸ ಸ್ಥಗಿತಗೊಂಡಿದೆ. ಏಕೆಂದರೆ, ಸ್ಥಳೀಯ ಸಂಸ್ಥೆಗಳಿಗೆ ವಿದ್ಯುತ್ ಮತ್ತು ನೀರಿನ ಬಿಲ್ ಪಾವತಿ ಮಾಡಿಲ್ಲ ಎಂದು ಸಂಪರ್ಕ ಕಡಿತ ಮಾಡಲಾಗಿದೆ.
ಇತ್ತ ಮಂಗಳೂರಿನಲ್ಲಿ ಮುಳುಗಿರುವ ತ್ರಿದೇವ್ ಹಡಗನ್ನು ಸಮುದ್ರದಿಂದ ಎತ್ತಿ ಹೊರಹಾಕುವಂತೆ ಕಂಪೆನಿಗೆ ಆದೇಶ ನೀಡಲಾಗಿದೆ. ಹಾಗೇ, ಸುರತ್ಕಲ್ ಬೀಚಿನಲ್ಲಿ ದಿಕ್ಕು ದೆಸೆ ಇಲ್ಲದೆ ಬಿದ್ದಿರುವ ಭಗವತಿ ಪ್ರೇಮ್ ಹಡಗನ್ನು ತೆರವು ಮಾಡುವಂತೆ ನವಮಂಗಳೂರು ಬಂದರು ಮಂಡಳಿ ಮಾರ್ಕೆಟರ್ ಕಂಪೆನಿ ಮತ್ತು Directorate General of Shipping ನೋಟೀಸು ನೀಡಿದೆ. ಆದರೆ, ಕಂಪೆನಿಯ ಕೈಯಲ್ಲಿ ಸಿಬ್ಬಂದಿಗೆ ಊಟ ಒದಗಿಸಲು ಗತಿ ಇಲ್ಲದಂತಾಗಿದೆ.
ಶಿಪ್ಪಿಂಗ್ ಡಿಜಿ ಕೆಲಸ ಮಾಡಿದರೆ ಎರಡು ಹಡಗುಗಳು ಕರ್ನಾಟಕ ಕರಾವಳಿಯಿಂದ ತೆರವು ಆಗುತ್ತದೆ. ಆದರೆ, ಮುಂಬಯಿಯಲ್ಲಿ ಕಚೇರಿ ಹೊಂದಿರುವ ಶಿಪ್ಪಿಂಗ್ ಡಿಜಿ ಕೆಲಸ ನಿಧಾನವಾಗಿದೆ.
ಇತ್ತ ನವಮಂಗಳೂರು ಬಂದರು ಮಂಡಳಿ ಈಗಾಗಲೇ ಭಗವತಿ ಪ್ರೇಮ್ ಡ್ರೆಡ್ಜರನ್ನು ತೆರವು ಮಾಡುವಂತೆ ಸೂಚನೆ ನೀಡಿದೆ. ಸೂಕ್ತ ಕಾಲಾವಧಿಯಲ್ಲಿ ತೆರವು ಮಾಡದಿದ್ದಲ್ಲಿ ನ್ಯಾಯಾಲಯದ ಅನುಮತಿ ಪಡೆದು, ಪಬ್ಲಿಕ್ ನೊಟೀಸು ನೀಡಿ ಹಡಗನ್ನು ಹರಜು ಹಾಕಲಾಗುವುದು ಎಂದು ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ಎ.ವಿ.ರಮಣ ಪ್ರತಿಧ್ವನಿಗೆ ತಿಳಿಸಿದ್ದಾರೆ.
ಬಂದರು ಮಂಡಳಿ The Merchant Shipping Act, 1958 ಮತ್ತು 2015ರ ತಿದ್ದುಪಡಿ ಪ್ರಕಾರವೇ ಅಪಾಯದಲ್ಲಿದ್ದ ಭಗವತಿ ಪ್ರೇಮ್ ಹಡಗನ್ನು ಚಂಡಮಾರುತದ ಮಧ್ಯದಿಂದ ತಂದು ಸನಿಹದ ಬೀಚಿನಲ್ಲಿ ನಿಲ್ಲಿಸಿದೆ. ಹಡಗಿನಲ್ಲಿ 50 ಟನ್ ತೈಲ ಮತ್ತು ಏಳು ಮಂದಿ ಸಿಬ್ಬಂದಿ ಇದ್ದ ಕಾರಣ ರಕ್ಷಿಸುವುದು ಅನಿವಾರ್ಯ ಆಗಿತ್ತು. ಅರಬಿ ಸಮುದ್ರದಲ್ಲಿ ಈ ಅವಧಿಯಲ್ಲಿ ಐದು ಬಾರಿ ವಾಯುಭಾರ ಕುಸಿತ ಇತ್ತು. ಎರಡು ಚಂಡಮಾರುತಗಳ ನಡುವೆ ಹಡಗನ್ನು ತಡಕ್ಕೆ ತರಲಾಗಿದೆ ಎಂದು ರಮಣ ವಿವರಿಸಿದರು.
ಹಡಗನ್ನು ತಡ ಸೇರಿಸಿದ ಪರಿಣಾಮ ಸಂಭಾವ್ಯ ಪರಿಸರ ಮಾಲಿನ್ಯ ನಿಯಂತ್ರಣವಾಗಿದೆ. ಮಾತ್ರವಲ್ಲದೆ, ಹಡಗು ಮುಳುಗಿದರೆ ಅದನ್ನು ವಿಲೇವಾರಿ ಮಾಡುವುದು ಬೀಚ್ ಮಾಡಿದ ಹಡಗಿಗಿಂದ ಕಷ್ಟಕರ ಮತ್ತು ವೆಚ್ಚದಾಯಕ ಎಂದು ಹೇಳಿದರು.
ಹಡಗುಗಳನ್ನು ಮಾರಾಟ ಮಾಡಿಯಾದರು ಕಂಪೆನಿಯ ಆರ್ಥಿಕ ಸಂಕಷ್ಟವನ್ನು ಸುಧಾರಿಸಬೇಕಾಗಿದೆ ಎನ್ನುತ್ತಾರೆ ಕಂಪೆನಿ ಅಧಿಕಾರಿಗಳು. ಕಂಪೆನಿಯ ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ನವಮಂಗಳೂರು ಬಂದರು ಮಂಡಳಿ ಸಮೀಪ ಮುಳುಗಿದ ತ್ರೀದೇವ್ ಮತ್ತು ದಿಕ್ಕೆಟ್ಟು ನಿಂತ ಭಗವತಿಯನ್ನುರಕ್ಷಿಸುವುದು ಅಸಾಧ್ಯವಾಗಿದೆ. ಬಂದರು ಮಂಡಳಿ ಆದಷ್ಟು ಬೇಗ ಕಾನೂನು ಕ್ರಮ ಕೈಗೊಳ್ಳುವುದೇ ಉತ್ತಮ ಮಾರ್ಗವಾಗಿದೆ.