ಮಾರಣಾಂತಿಕ ‘ಕೋವಿಡ್-19’ ಸೋಂಕು ತಡೆಯಲು ವಿಧಿಸಲಾಗಿದ್ದ ಲಾಕ್ ಡೌನ್ ಅನ್ನು ಎರಡನೇ ಅವಧಿಗೆ ವಿಸ್ತರಿಸಲಾಗಿದೆ. ಮೇ 3ರವರೆಗೆ ಕೆಲವು ಷರತ್ತುಬದ್ಧ ಸಡಿಲಿಕೆಗಳೊಂದಿಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ನಿತ್ಯದ ಸೋಂಕು ಪೀಡಿತರ ಸಂಖ್ಯೆ ನಾಲ್ಕಂಕಿಗೆ ಏರಿರುವುದರಿಂದ ಲಾಕ್ ಡೌನ್ ವಿಸ್ತರಣೆಯ ಹೊರತಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮುಂದೆ ಯಾವುದೇ ಪರ್ಯಾಯ ಮಾರ್ಗಗಳು ಇರಲಿಲ್ಲ. ಅಲ್ಲದೇ ಆರೋಗ್ಯವಲಯದ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿರುವ ಭಾರತಕ್ಕೆ ದೇಶಾದ್ಯಂತ ವ್ಯಾಪಕವಾಗಿ ಪರೀಕ್ಷೆ ನಡೆಸಲು ಸಾಧ್ಯವೂ ಇಲ್ಲ.
‘ಕೋವಿಡ್-19’ ಸೋಂಕು ಭಾರತಕ್ಕೆ ಬರುವ ಮುನ್ನವೇ ದೇಶದ ಆರ್ಥಿಕ ಆರೋಗ್ಯ ತೀಕ್ಷ್ಣವಾಗಿ ಕ್ಷೀಣಿಸಿತ್ತು. ಜಿಡಿಪಿ ಶೇ.5ರ ಕೆಳಕ್ಕೆ ಇಳಿದು 2008ರ ನಂತರ ಅತಿ ಕಡಿಮೆ ಆರ್ಥಿಕ ಅಭಿವೃದ್ಧಿ ದಾಖಲಿಸಿದ ಹೆಗ್ಗಳಿಕೆಯನ್ನು ಪ್ರಧಾನಿ ಮೋದಿ ಸರ್ಕಾರ ಪಡೆದಿತ್ತು. ಮೊದಲೇ ರೋಗ ಪೀಡಿತವಾಗಿದ್ದ ಆರ್ಥಿಕತೆಗೆ ‘ಕೋವಿಡ್-19’ ಸೋಂಕು ತಗುಲಿ ಪಾರ್ಶ್ವವಾಯು ಬಡಿದಂತಾಗಿದೆ. ತತ್ಪರಿಣಾಮ ದೇಶದ ಆರ್ಥಿಕಾಭಿವೃದ್ಧಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೂನ್ಯ ಸಾಧನೆ ಮಾಡುವ ಸಾಧ್ಯತೆ ಇದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಆರ್ಥಿಕ ಅಭಿವೃದ್ಧಿ ಶೂನ್ಯ ಸಾಧನೆ ಇರಲಿ, ಋಣಾತ್ಮಕ ಅಭಿವೃದ್ಧಿ ದಾಖಲಿಸುವ ಅಪಾಯವೂ ಇದೆ.
ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಲಾಕ್ ಡೌನ್ ವಿಸ್ತರಿಸಿದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಆಗಬಹುದಾದ ನಷ್ಟಾನಷ್ಟಗಳ ಬಗ್ಗೆ ಲೆಕ್ಕಾಚಾರ ನಡೆದಿದೆ. ಈಗಾಗಲೇ ಮಾಡಲಾದ ಮುನ್ನಂದಾಜುಗಳ ಪ್ರಕಾರ, ಮೊದಲ ಹಂತದ ಲಾಕ್ ಡೌನ್ ನಿಂದಾಗಿ ದೇಶದಲ್ಲಿ ಆಗಬಹುದಾದ ಆರ್ಥಿಕ ನಷ್ಟವು ಸುಮಾರು 9 ಲಕ್ಷ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿತ್ತು. ಈಗ ಲಾಕ್ ಡೌನ್ ವಿಸ್ತರಣೆಯಾಗಿರುವುದರಿಂದ ನಷ್ಟದ ಪ್ರಮಾಣವು ದುಪ್ಪಟ್ಟು ಅಥವಾ ಮೂರುಪಟ್ಟು ಆಗಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಈ ನಡುವೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನವು (ಜಿಡಿಪಿ) ಪ್ರಸಕ್ತ ವಿತ್ತೀಯ ವರ್ಷದಲ್ಲಿ ಅಂದರೆ 2020-21ನೇ ಸಾಲಿನಲ್ಲಿ ಶೇ.1.9ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ಮುನ್ನಂದಾಜು ಮಾಡಿದೆ. ಈ ಹಿಂದೆ ಶೇ.5.8ರಷ್ಟು ಎಂದು ಮುನ್ನಂದಾಜು ಮಾಡಿದ್ದನ್ನು ಶೇ.4ರಷ್ಟು ತಗ್ಗಿಸಿದೆ. ಸಾಮಾನ್ಯವಾಗಿ ಜಿಡಿಪಿ ಮುನ್ನಂದಾಜುಗಳನ್ನು ಶೇ.0.50ರಿಂದ ಶೇ.1.50ರಷ್ಟು ಮಾತ್ರ ಪರಿಷ್ಕರಿಸಲಾಗುತ್ತದೆ. ಶೇ.2.5ನ್ನು ಮೀರಿದ ಪರಿಷ್ಕರಣೆ ಮಾಡುವುದು ತೀರಾ ಅಪರೂಪ. ಆದರೆ, ‘ಕೋವಿಡ್-19’ ಹಾವಳಿ ಎಷ್ಟಾಗಿದೆ ಎಂದರೆ ಐಎಂಎಫ್ ಈಗ ಶೇ.4ರಷ್ಟು ಮುನ್ನಂದಾಜನ್ನು ಪರಿಷ್ಕರಿಸಿದೆ. ಮಾರ್ಚ್ 31ಕ್ಕೆ ಅಂತ್ಯಗೊಂಡ 2019-20ನೇ ಸಾಲಿನ ವಿತ್ತೀಯ ವರ್ಷದ ಜಿಡಿಪಿಯನ್ನು ಕೇಂದ್ರ ಸರ್ಕಾರದ ಸಾಂಖ್ಯಿಕ ಇಲಾಖೆಯ ಶೇ.5ರಷ್ಟರ ಮುನ್ನಂದಾಜಿಗೆ ವ್ಯತಿರಿಕ್ತವಾಗಿ ಶೇ.4.2ರಷ್ಟು ಎಂದು ಅಂದಾಜಿಸಿದೆ.

‘ಕೋವಿಡ್-19’ ಹಾವಳಿಯೊತ್ತರ ಜಾಗತಿಕ ಆರ್ಥಿಕ ಪರಿಸ್ಥಿತಿಯು ಊಹಿಸಲಾರದಷ್ಟರ ಮಟ್ಟಿಗೆ ಹಿಂಜರಿತಕ್ಕೆ ಜಾರಲಿದೆ. ಐಎಂಎಫ್ ತನ್ನ ಇತ್ತೀಚಿನ ‘ದ್ವೈವಾರ್ಷಿಕ ವಿಶ್ವ ಆರ್ಥಿಕ ಮುನ್ನೋಟ’ದ ವರದಿಯಲ್ಲಿ ಜಾಗತಿಕ ಆರ್ಥಿಕ ಅಭಿವೃದ್ಧಿಯು 2020ನೇ ಸಾಲಿನಲ್ಲಿ ಶೇ.3ರಷ್ಟು ಕುಸಿಯುವ ಮುನ್ನಂದಾಜು ಮಾಡಿದೆ. ‘ಕೋವಿಡ್-19’ಸೋಂಕಿನಿಂದಾಗಿ ಸ್ಥಗಿತಗೊಂಡಿರುವ ಆರ್ಥಿಕ ಚಟುವಟಿಕೆಗಳ ವ್ಯತಿರಿಕ್ತ ಪರಿಣಾಮವು ಹಿಂದೆಂದೂ ಕಂಡು ಕೇಳರಿಯಲಾರದಷ್ಟು ಆಗಲಿದ್ದು, 1930ರ ಮಹಾ ಆರ್ಥಿಕ ಕುಸಿತದ ನಂತರದ ಅತಿದೊಡ್ಡ ಹಿಂಜರಿತವಾಗಲಿದೆ. ಭಾರತದ ಮಟ್ಟಿಗೆ 2008 ಜಾಗತಿಕ ಆರ್ಥಿಕತ ಕುಸಿತದ ಪರಿಸ್ಥಿತಿಗಿಂತಲೂ ಕಠಿಣವಾದ ಆರ್ಥಿಕ ಬಿಕ್ಕಟ್ಟು ಎದುರಾಗಲಿದೆ ಎಂಬುದು ಐಎಂಎಫ್ ಅಂದಾಜು. ಇದರ ಜತೆಗೆ ಐಎಂಎಫ್ ನೀಡಿರುವ ಒಂದೇ ಸಿಹಿ ಸುದ್ದಿ ಎಂದರೆ ಭಾರತದ ಆರ್ಥಿಕತೆಯು ಅಷ್ಟೇ ತ್ವರಿತವಾಗಿ ಚೇತರಿಸಿಕೊಳ್ಳುತ್ತದೆ ಎಂಬುದು. ಐಎಂಎಫ್ ಅಂದಾಜಿನ ಪ್ರಕಾರ 2022ನೇ ಸಾಲಿನಲ್ಲಿ ಭಾರತದ ಜಿಡಿಪಿಯು ಶೇ.7.4ರ ಆಜುಬಾಜಿನಲ್ಲಿರಲಿದೆ. ಅದು ಸಾಧ್ಯವಾಗುತ್ತದಾ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಐಎಂಎಫ್ ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಶೇ.1.9ರಷ್ಟೆಂದು ಮುನ್ನಂದಾಜು ಮಾಡಿದ್ದರೂ ವಿವಿಧ ಆರ್ಥಿಕ ತಜ್ಞರು ಈಗಾಗಲೇ ಶೇ.-2ರಷ್ಟಕ್ಕೆ ಕುಗ್ಗಬಹುದು ಎಂದು ಮುನ್ನಂದಾಜಿಸಿದ್ದಾರೆ. ಜಾಗತಿಕವಾಗಿ ಹೂಡಿಕೆ ಮಾಡುತ್ತಿರುವ ಇನ್ವೆಸ್ಟ್ಮೆಂಟ್ ಬ್ಯಾಂಕ್ ಬರ್ಕ್ಲೇಸ್ ಜಿಡಿಪಿ ಶೂನ್ಯಮಟ್ಟಕ್ಕೆ ಇಳಿಯಲಿದೆ ಎಂದು ಮುನ್ನಂದಾಜಿಸಿದೆ. ಈ ಹಿಂದೆ ಜಿಡಿಪಿ ಶೇ.2.5ರಷ್ಟೆಂದು ಮುನ್ನಂದಾಜಿಸಿತ್ತು. ಲಾಕ್ ಡೌನ್ ನಿಂದಾಗಿ ದೇಶದ ಆರ್ಥಿಕತೆಗೆ ಆಗುವ ನಷ್ಟವು ಜಿಡಿಪಿಯ ಶೇ.8ರಷ್ಟು ಅಥವಾ 234.4 ಬಿಲಿಯನ್ ಡಾಲರ್ (ರುಪಾಯಿ ಲೆಕ್ಕದಲ್ಲಿ 16,45,000 ಕೋಟಿ ರುಪಾಯಿಗಳು) ಎಂದು ಅಂದಾಜಿಸಿದೆ. ರೇಟಿಂಗ್ ಏಜೆನ್ಸಿ ಇಕ್ರಾ (ICRA) ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಶೇ.-1ರಿಂದ ಶೇ.1ರಷ್ಟು ಎಂದು ಮುನ್ನಂದಾಜಿಸಿದೆ. ಪ್ರಸಕ್ತ ವಿತ್ತೀಯ ವರ್ಷದ ಜೂನ್ ತ್ರೈಮಾಸಿಕದ ಜಿಡಿಪಿಯು ಶೇ.10-15ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ICRA ಹೇಳಿದೆ.
ಮೇ 3 ರ ನಂತರವೂ ಲಾಕ್ ಡೌನ್ ವಿಸ್ತರಿಸಬೇಕಾದ ಅನಿವಾರ್ಯತೆ ಎದುರಾದರೆ ಭಾರತದ ಮಹಾಸಂಕಷ್ಟಗಳು ಬರೀ ಆರ್ಥಿಕತೆಯಷ್ಟೇ ಆಗಿರದೇ ಬಹು ಆಯಾಮಗಳನ್ನು ಪಡೆದುಕೊಳ್ಳುತ್ತವೆ. ಈಗಾಗಲೇ ನಿತ್ಯ ನಾಲ್ಕಂಕಿ ದಾಟಿರುವ ಸೋಂಕು ಎಷ್ಟು ತ್ವರಿತವಾಗಿ ನಿಯಂತ್ರಣಕ್ಕೆ ಬರುತ್ತದೆ ಎಂಬುದು ಉಳಿದೆಲ್ಲ ಸಮಸ್ಯೆಗಳ ಸ್ವರೂಪವನ್ನು ನಿರ್ಧಾರಿಸುತ್ತದೆ. ಸದ್ಯಕ್ಕೆ ಭಾರತದ ಸಮಸ್ಯೆ ಇರುವುದು ನಿರ್ವಹಣೆಯಲ್ಲಿ. ಭಾರತ ಆಹಾರ ನಿಗಮದ ಗೋದಾಮುಗಳಲ್ಲಿ 80 ದಶಲಕ್ಷ ಟನ್ನುಗಳಷ್ಟು ಆಹಾರ ಧಾನ್ಯ ದಾಸ್ತಾನು ಇದೆ. ಇದನ್ನು ಹಸಿದ ಜನರಿಗೆ ವ್ಯವಸ್ಥಿತವಾಗಿ ತಲುಪಿಸುವುದು ಮೋದಿ ಸರ್ಕಾರದ ಮುಂದಿರುವ ದೊಡ್ಡ ಸವಾಲು. ಮೋದಿ ಸರ್ಕಾರದ ತರ್ಕರಹಿತ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ (RBI) 480 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಮೀಸಲು ಹೊಂದಿದೆ. ಇದು ರುಪಾಯಿ ಲೆಕ್ಕದಲ್ಲಿ 36,48,000 ಕೋಟಿ ರೂಪಾಯಿಗಳು. ಸರ್ಕಾರಕ್ಕೆ ನಿಜಕ್ಕೂ ಜನರ ಬಗ್ಗೆ ಕಾಳಜಿ ಇದ್ದರೆ ಈ “ಧನ-ಧಾನ್ಯ” ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಅಷ್ಟಕ್ಕೂ ಜನರ ಸಂಕಷ್ಟಕ್ಕೆ ಬಳಕೆ ಆಗದಿದ್ದರೆ ಎಷ್ಟೇ “ಧನ-ಧಾನ್ಯ” ಗಳ ದಾಸ್ತಾನು ಇದ್ದರೇನು ಪ್ರಯೋಜನ? ಲಭ್ಯವಿರುವ ಧನ-ಧಾನ್ಯ ಹೇಗೆ ಬಳಕೆ ಮಾಡಿಕೊಳ್ಳುತ್ತಾರೆ ಎಂಬುದರ ಮೇಲೆ ಪ್ರಧಾನಿ ಮೋದಿಯ ಆಡಳಿತಾತ್ಮಕ ಮುತ್ಸದ್ಧಿತನ ಸಾಬೀತಾಗಲಿದೆ.