ಮಲ್ಲಿಕಾರ್ಜುನ ಖರ್ಗೆ. ರಾಜ್ಯದ ಅತಿ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರು. 1972ರಲ್ಲಿ ವಿಧಾನಸಭೆಗೆ ಗುರುಮಿಟ್ಕಲ್ ಕ್ಷೇತ್ರದಿಂದ ಆಯ್ಕೆಯಾಗಿ ರಾಜಕಾರಣ ಪ್ರವೇಶಿಸಿ 2019ರಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಾಣುವವರೆಗೆ ಕಾಂಗ್ರೆಸ್ಸಿನಲ್ಲಿ ಗೆಲುವಿನ ಸರದಾರ ಎಂದು ಕರೆಸಿಕೊಂಡವರು. ವಿವಿಧ ಮುಖ್ಯಮಂತ್ರಿಗಳಡಿ ಸಚಿವರಾಗಿ, ಕೇಂದ್ರ ಸಚಿವರಾಗಿ, ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ಯಶಸ್ವಿ ಎನಿಸಿಕೊಂಡರು. ಕಾಂಗ್ರೆಸ್ಸಿನಲ್ಲಿ ಅತಿ ಹಿರಿಯರಾಗಿದ್ದರೂ ದಲಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ, ಇದೀಗ ಅದೇ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸಿಕೊಂಡು ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿದೆ.
ಇದಕ್ಕೆ ಖರ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಪಟ್ಟ ಬೇಡ. ಪದೇಪದೇ ದಲಿತ ನಾಯಕ ಎಂದು ಏಕೆ ಕರೆಯುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಮೀಸಲಾತಿ ಇಲ್ಲ. ದಲಿತ ಸಿಎಂ ಆಗಬೇಕು ಅನ್ನೋದಾದ್ರೆ ಐ ಫೀಲ್ ವೆರೀ ಬ್ಯಾಡ್. ಕಳೆದ 50 ವರ್ಷಗಳಿಂದ ಕಾಂಗ್ರೆಸ್ನಲ್ಲಿ ಇದ್ದೇನೆ. ಇಷ್ಟು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದರೂ ದಲಿತ ಮುಖ್ಯಮಂತ್ರಿ ಎನಿಸಿಕೊಳ್ಳಬೇಕೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆಯೂ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಪ್ರಸ್ತಾಪ ಬಂದಿತ್ತು. ಆ ವೇಳೆ ದಲಿತ ಎಂಬ ಕಾರಣಕ್ಕೆ ಕೊಡುವುದಾದರೆ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ನಿರಾಕರಿಸಿದ್ದೆ. ಈಗಲೂ ಅದೇ ಮಾತು ಹೇಳುತ್ತೇನೆ ಎಂದಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಹೇಳುವುದರಲ್ಲೂ ಅರ್ಥವಿದೆ. ಕಾಂಗ್ರೆಸ್ ಪಕ್ಷದಲ್ಲಿ 1972ರಿಂದ ಸತತ 9 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಖರ್ಗೆ ಅವರಿಗೆ ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ ಅವರಿಗಿಂತ ಮುಂಚೆಯೇ ಮುಖ್ಯಮಂತ್ರಿ ಸ್ಥಾನ ಸಿಗಬೇಕಿತ್ತು. ಅಂತಹ ಅರ್ಹತೆಯೂ ಅವರಲ್ಲಿತ್ತು. ಶಾಸಕರಾಗಿ ನಾಲ್ಕೇ ವರ್ಷದಲ್ಲಿ (1976) ರಾಜ್ಯ ಖಾತೆ ಸಚಿವರಾದರು. 1980ರಲ್ಲಿ ಸಂಪುಟ ದರ್ಜೆ ಸಚಿವರಾಗಿ ನೇಮಕಗೊಂಡರು. ತಾವು ಯಾವೆಲ್ಲಾ ಖಾತೆಗಳನ್ನು ನಿಭಾಯಿಸಿದ್ದರೋ ಅಲ್ಲೆಲ್ಲಾ ಅತ್ಯುತ್ತಮ ಆಡಳಿತಗಾರ ಎಂಬ ಹೆಸರು ಪಡೆದಿದ್ದರು. ಆದರೆ, ಅವರು ದಲಿತ ಸಮುದಾಯದವರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ದಕ್ಕಲಿಲ್ಲ.
1999ರಲ್ಲಿ ಎಸ್.ಎಂ.ಕೃಷ್ಣ ಅವರ ಕಾರಣದಿಂದ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು. 2004ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮುಖ್ಯಮಂತ್ರಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಹೆಸರೇ ಮಲ್ಲಿಕಾರ್ಜುನ ಖರ್ಗೆಯವರದ್ದು. ಆದರೆ, ಮೇಲ್ವರ್ಗದವರ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದರಿಂದ ದಲಿತ ಸಮುದಾಯದ ಖರ್ಗೆಯವರು ಅವಕಾಶವಂಚಿತರಾಗಬೇಕಾಯಿತು.
ಇದಾದ ಬಳಿಕ ಮೈತ್ರಿ ಸರ್ಕಾರ ಉರುಳಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. 2008ರಲ್ಲಿ ನಡೆದ ಚುನಾವಣೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದರೂ ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾದರು. ಇದರಿಂದ ಬೇಸತ್ತ ಖರ್ಗೆಯವರು ರಾಜ್ಯದ ಸಹವಾಸವೇ ಬೇಡ ಎಂದು 2009ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಎನ್ ಡಿಎ ಸರ್ಕಾರದಲ್ಲಿ ಅವರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಮತ್ತು ಕಾರ್ಮಿಕ ಖಾತೆ ಸಚಿವರಾಗಿ ಕೆಲಸ ಮಾಡಿದರು. ಈ ಅವಧಿಯಲ್ಲೂ ಅವರು ಹೆಸರು ಗಳಿಸಿದ್ದರು.
2013ರಲ್ಲಿ ದೇಶಾದ್ಯಂತ ಕಾಂಗ್ರೆಸ್ ನೆಲಕಚ್ಚಿದಾಗಲೂ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಖರ್ಗೆ ಅವರು ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾದರು. ಇದರೊಂದಿಗೆ ಖರ್ಗೆ ಅವರು ಮತ್ತೆಂದೂ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ ಎನ್ನುವಂತಾಗಿತ್ತು. 2018ರಲ್ಲಿ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಲು ಖರ್ಗೆ ಅವರಿಗೆ ಸಣ್ಣ ಅವಕಾಶವಿತ್ತಾದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ದಾನ ಮಾಡಿದ್ದರಿಂದಾಗಿ ಅಲ್ಲೂ ನಿರಾಶೆ ಅನುಭವಿಸಬೇಕಾಯಿತು.
ಇದೀಗ ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರಲಾರಂಭಿಸಿದೆ. ಅದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ನ ಕೆಲವು ಮುಖಂಡರು ಖರ್ಗೆ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆ. ಅದರಲ್ಲೂ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ. ಉಪ ಚುನಾವಣೆ ಬಳಿಕ ಬಿಜೆಪಿ ಸರ್ಕಾರ ಉರುಳಿದರೆ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂದು ಹೇಳುತ್ತಿದ್ದಾರೆ.
ದಲಿತ ಎಂಬ ಕಾರಣಕ್ಕೆ ಸಿಎಂ ಸ್ಥಾನ ಬೇಡ ಎನ್ನಲು ಕಾರಣವೇನು?
2009ರಲ್ಲಿ ಲೋಕಸಭೆಗೆ ಆಯ್ಕೆಯಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಿದ್ದ ಮಲ್ಲಿಕಾರ್ಜು ಖರ್ಗೆ ಬಳಿಕ ರಾಜ್ಯದ ಬಗ್ಗೆ ಗಮನಹರಿಸಿದ್ದು ಕಡಿಮೆಯೆ. ಕನಿಷ್ಠ ಕೆಪಿಸಿಸಿ ಕಚೇರಿಗೂ ಹೋಗುತ್ತಿರಲಿಲ್ಲ. ಬಹುತೇಕ ರಾಜ್ಯ ರಾಜಕಾರಣದ ಸಹವಾಸವೇ ಬೇಡ ಎನ್ನುತ್ತಿದ್ದರು. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಸೋತ ಬಳಿಕ ರಾಜ್ಯ ರಾಜಕಾರಣಕ್ಕೆ ಬರಲು ಕಾಯುತ್ತಿದ್ದರು. ಅದಕ್ಕೆ ಸರಿಯಾಗಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕೂಗು ಕೇಳಿಬಂದಾಗ ಕಾಯುತ್ತಿದ್ದ ಅವಕಾಶ ಸಿಕ್ಕಿದಂತಾಯಿತು.
ಆದರೆ, ಮಲ್ಲಿಕಾರ್ಜುವ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಬೇಕು ಎನ್ನುತ್ತಿರುವವರು ಅವರ ಮೇಲಿನ ಪ್ರೀತಿಯಿಂದೇನೂ ಈ ಮಾತು ಹೇಳುತ್ತಿಲ್ಲ. ಕಾಂಗ್ರೆಸ್ ನಲ್ಲಿ ಮುಂಚೂಣಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಬಲ ವ್ಯಕ್ತಿಯೊಬ್ಬರನ್ನು ಎತ್ತಿಕಟ್ಟಬೇಕು ಎಂಬ ಕಾರಣಕ್ಕೆ ಖರ್ಗೆಯವರ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಮತ್ತು ಅದಕ್ಕೆ ದಲಿತ ಎಂಬ ಟ್ರಂಪ್ ಕಾರ್ಡ್ ಬಳಸುತ್ತಿದ್ದಾರೆ.
ಇದು ಖರ್ಗೆಯವರಿಗೆ ಗೊತ್ತಿಲ್ಲದ ಸಂಗತಿಯೇನೂ ಅಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರನ್ನು ದೂರವಿಡಬೇಕಾದರೆ ಮೇಲ್ವರ್ಗದವರ ಹೆಸರು ಪ್ರಸ್ತಾಪಿಸಿದರೆ ಸಮಸ್ಯೆಯಾಗಬಹುದು. ಅದರ ಬದಲು ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದು ಹೇಳಿದರೆ ಈ ಸಮುದಾಯದ ಬೆಂಬಲ ಸಿಗುತ್ತದೆ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ತೇಲಿಬಿಡುತ್ತಿದ್ದಾರೆ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಿದೆ. ಈ ಕಾರಣಕ್ಕಾಗಿಯೇ ಅವರು ದಲಿತ ಎಂಬ ಕಾರಣಕ್ಕೆ ನನಗೆ ಮುಖ್ಯಮಂತ್ರಿ ಸ್ಥಾನ ಬೇಡ ಎನ್ನುವ ಮೂಲಕ ನನ್ನ ಅರ್ಹತೆ, ಪಕ್ಷನಿಷ್ಠೆ ಮತ್ತು ಪಕ್ಷದ ಸೇವೆ ಪರಿಗಣಿಸಿ ಮುಖ್ಯಮಂತ್ರಿ ಸ್ಥಾನ ಕೊಡುವುದಾದರೆ ಸ್ವೀಕರಿಸಲು ಸಿದ್ಧ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಏಕೆಂದರೆ, ಇದುವರೆಗೆ ದಲಿತ ಎಂಬ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು. ಇದೀಗ ಮತ್ತೆ ದಲಿತ ಎಂಬ ಕಾರಣಕ್ಕೆ ತಮ್ಮ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಪ್ರಸ್ತಾಪಿಸಿದರೂ ಹುದ್ದೆ ಸಿಗುತ್ತದೆ ಎಂಬ ಕಡೇ ಕ್ಷಣದಲ್ಲಿ ತಪ್ಪಿಸಬಹುದು. ಅದರ ಬದಲು ಜಾತಿಯ ಹಂಗಿಲ್ಲದೆ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬುದು ಖರ್ಗೆಯವರ ಮಾತಿನ ಇಂಗಿತ. ಹಾಗೆ ಮಾಡಿದರೆ ಹಿಂದೆ ತಪ್ಪಿಸಿದಂತೆ ಮುಂದಿನ ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ದಲಿತ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ಬೇಡ ಎಂದು ಹೇಳಿದ್ದಾರೆಯೇ ಹೊರತು ಆ ಹುದ್ದೆಯ ಬಗ್ಗೆ ಇರುವ ನಿರಾಸಕ್ತಿಯಿಂದ ಅಲ್ಲ.