ಭಾರತವನ್ನು ತೊರೆದು ಮಾರ್ಚ್ 2, 2016 ರಂದು ಬ್ರಿಟನ್ ಗೆ ಪಲಾಯನ ಮಾಡಿದ ವಿಜಯ್ ಮಲ್ಯ ದೇಶದ 17 ಬ್ಯಾಂಕುಗಳಿಂದ ಒಂಬತ್ತು ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅಂದಿನಿಂದ ಇಂದಿನ ವರೆಗೆ ಅವರನ್ನು ಭಾರತಕ್ಕೆ ಕರೆತರುವ ಕೆಲಸ ನಡೆಯುತ್ತಲೇ ಇದೆ.
ಭಾರತದಲ್ಲಿ ಬ್ಯಾಂಕುಗಳಿಗೆ ಮೋಸ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೋರ್ಟ್‌ನಿಂದ ʼಆರ್ಥಿಕ ಅಪರಾಧಿʼ ಎಂದು ಕರೆಯಲ್ಪಟ್ಟ ಮೊದಲ ವ್ಯಕ್ತಿ ವಿಜಯ ಮಲ್ಯ. ಇವರನ್ನು ʼಆರ್ಥಿಕ ಅಪರಾಧಿʼ ಎಂದು ಘೋಷಿಸಲೇಬೇಕು ಎಂಬ ಪಣ ತೊಟ್ಟಿದ್ದ ಕೇಂದ್ರ ಸರ್ಕಾರ ಈ ಸಂಬಂಧ ಕಾನೂನಿನಲ್ಲಿ ಹಲವಾರು ತಿದ್ದುಪಡಿಯನ್ನು ಮಾಡಿತ್ತು. ಅಲ್ಲದೆ, ಇವರನ್ನು ಸುಪರ್ದಿಗೆ ತೆಗೆದುಕೊಳ್ಳಲು ಲಂಡನ್ ನ್ಯಾಯಾಲಯದ ಮೊರೆ ಹೊಗಿತ್ತು.
Also Read: ನೀರವ್ ಮೋದಿ, ಮೆಹುಲ್ ಚೋಕ್ಸಿಯ 8,084 ಕೋಟಿ ರುಪಾಯಿ ಸಾಲ ಮನ್ನಾ ಮಾಡಿದ ಮೋದಿ ಸರ್ಕಾರ!
Also Read: 5 ವರ್ಷದಲ್ಲಿ ಸಾರ್ವಜನಿಕ ಬ್ಯಾಂಕುಗಳು ಕೈಬಿಟ್ಟ ಸಾಲದ ಮೊತ್ತ 5.5 ಲಕ್ಷ ಕೋಟಿ!
ಅಸಲಿ ನಾಟಕ ಶುರುವಾಗಿದ್ದೆ ಇಲ್ಲಿಂದ. ಭಾರತ ಸರ್ಕಾರ ಮತ್ತು ಸಿಬಿಐ-ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವಾಗ ಮಲ್ಯ ಅವರನ್ನು ಸುಪರ್ದಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಅಂಶ ಮಲ್ಯ ಗಮನಕ್ಕೆ ಬಂತೋ, ಅಂದಿನಿಂದ ಮಲ್ಯ “ತಾನು ಸಾಲವಾಗಿ ಪಡೆದ ಹಣವನ್ನು ಬಡ್ಡಿ ಸಮೇತ ನೀಡಲು ಸಿದ್ದನಿದ್ಧೇನೆ ದಯವಿಟ್ಟು ಬಂದು ಪಡೆದುಕೊಳ್ಳಿ”ಎಂದು ಭಾರತ ಸರ್ಕಾರದ ಎದುರು ಸತತವಾಗಿ ಮನವಿ ಸಲ್ಲಿಸುತ್ತಲೇ ಇದ್ದಾರೆ ಮಲ್ಯ.

ಆದರೆ, ಭಾರತ ಸರ್ಕಾರ ಈವರೆಗೆ ಈ ಕುರಿತು ಮೌನ ಮುರಿಯಲೇ ಇಲ್ಲ. ಅಲ್ಲದೆ, ಮತ್ತೊಂದೆಡೆ ಮಲ್ಯ ಅವರನ್ನು ಸುಪರ್ದಿಗೆ ತೆಗೆದುಕೊಳ್ಳಲು ಅಧಿಕಾರಿಗಳು ಕೆಲಸ ಮುಂದುವರೆಸಿಯೇ ಇದ್ದರು. ಕೊನೆಗೂ ಅಧಿಕಾರಿಗಳ ಈ ಪ್ರಯತ್ನ ಫಲ ನೀಡಿದೆ. ಶೀಘ್ರದಲ್ಲಿ ಮಲ್ಯ ಭಾರತಕ್ಕೆ ಬರಲಿದ್ದಾರೆ. ಆದರೆ, ಅವರು ಹಣ ನೀಡಲು ಮುಂದಾದರೂ ಸರ್ಕಾರ ಅದನ್ನು ನಿರಾಕರಿಸುತ್ತಿರುವುದುದೇಕೆ? ಭಾರತಕ್ಕೆ ಕರೆತಂದು ಅವರನ್ನು ಎಲ್ಲಿ ಇರಿಸಲಿದ್ದಾರೆ? ಮುಂದಿನ ಕಾನೂನು ಕುಣಿಕೆ ಹೇಗಿರುತ್ತದೆ? ಇಲ್ಲಿದೆ ಉತ್ತರ.
ಪ್ರಕರಣದ ಹಿನ್ನೆಲೆ!:
ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂದು 2018ರಲ್ಲೇ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಲಂಡನ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ವಿರೋಧಿಸಿ ವಿಜಯ ಮಲ್ಯ ಸಹ ಅರ್ಜಿ ಸಲ್ಲಿಸಿದ್ದರು.
2018 ರ ಆಗಸ್ಟ್‌ನಲ್ಲಿ ಮಲ್ಯ ಅವರ ಮನವಿಯನ್ನು ಆಲಿಸಿದ್ದ ಯುಕೆ ನ್ಯಾಯಾಲಯ ಜೈಲಿನ ವಿವರಗಳನ್ನು ಹಂಚಿಕೊಳ್ಳಲು ಭಾರತೀಯ ತನಿಖಾ ಸಂಸ್ಥೆಗಳಿಗೆ ಸೂಚಿಸಿತ್ತು. ಹೀಗಾಗಿ ಮಲ್ಯ ಅವರನ್ನು ಬಂಧಿಸುವ ಮುಂಬೈನ ಆರ್ಥರ್ ರೋಡ್ ಜೈಲಿನ ಕೋಣೆಯನ್ನು ಸಿಬಿಐ ಅಧಿಕಾರಿಗಳು ವಿಡಿಯೋ ಮಾಡಿ ಕಳುಹಿಸಿದ್ದರು. ಅಲ್ಲದೆ, ಮಲ್ಯ ಹಸ್ತಾಂತರದ ನಂತರ ಅವರನ್ನು ಇರಿಸಿಕೊಳ್ಳಲು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದರು.
ಆರ್ಥರ್ ರಸ್ತೆಯ ಎರಡು ಎರಡು ಅಂತಸ್ತಿನ ಜೈಲು ಕಟ್ಟಡದಲ್ಲಿ ಮಲ್ಯ ಅವರನ್ನು ಉನ್ನತ ಭದ್ರತಾ ಬ್ಯಾರಕ್‌ಗಳಲ್ಲಿ ಇರಿಸಲಾಗುವುದು ಎಂದು ಏಜೆನ್ಸಿಗಳು ಯುಕೆ ನ್ಯಾಯಾಲಯಕ್ಕೆ ತಿಳಿಸಿದ್ದವು. ಈ ಪ್ರಕರಣವನ್ನು ಸತತ ಎರಡು ವರ್ಷ ವಿಚಾರಣೆ ನಡೆಸಿದ್ದ ಯುಕೆ ನ್ಯಾಯಾಲಯ ಕೊನೆಗೂ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿ ಸೂಚಿಸಿದೆ.
ಈ ನಡುವೆ ಇದನ್ನು ಖಂಡಿಸಿದ್ದ ಮಲ್ಯ ಲಂಡನ್‌ನ ಉನ್ನತ ನ್ಯಾಯಾಲಯಕ್ಕೆ ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿ ಕಳೆದ ಮೇ.14ರಲ್ಲಿ ವಜಾ ಆಗಿತ್ತು. ಹೀಗಾಗಿ ಉದ್ಯಮಿ ವಿಜಯ ಮಲ್ಯ ಅವರನ್ನು ಲಂಡನ್ ಸರ್ಕಾರ ಭಾರತಕ್ಕೆ ಹಸ್ತಾಂತರಿಸುವುದು ಖಚಿತವಾಗಿದೆ.
ಇದೀಗ ಮಲ್ಯ ಯಾವುದೇ ಸಂದರ್ಭದಲ್ಲಿ ಭಾರತದ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಿಬಿಐ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ಗೆ ಸ್ಪಷ್ಟಪಡಿಸಿವೆ.
ಮಲ್ಯ ಹಣ ನೀಡುತ್ತೇನೆ ಎಂದರೂ ಸರ್ಕಾರ ಹಿಂದೇಟು ಹಾಕಿದ್ದು ಏಕೆ?
ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ವಿಜಯ ಮಲ್ಯ ಭಾರತ ಸರ್ಕಾರವನ್ನು ಅಭಿನಂದಿಸುತ್ತಾ, “ತಾನು ಬಾಕಿ ಹಣವನ್ನು ಮರುಪಾವತಿ ಮಾಡುತ್ತೇನೆಂದು ಪದೇ ಪದೇ ಹೇಳಿದರೂ ನನ್ನ ಮಾತನ್ನು ನಿರ್ಲಕ್ಷಿಸಲಾಗಿದೆ” ಎಂದು ವಿಷಾದಿಸಿದ್ದರು.
“ಕರೋನಾ ಪರಿಹಾರ ಪ್ಯಾಕೇಜ್ ಗಾಗಿ ಸರ್ಕಾರಕ್ಕೆ ಅಭಿನಂದನೆಗಳು. ಅವರು ಬಯಸಿದಷ್ಟು ಕರೆನ್ಸಿಯನ್ನು ಮುದ್ರಿಸಬಹುದು ಆದರೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸಾಲಗಳ 100% ಮರುಪಾವತಿಯನ್ನು ನೀಡುವ ನನ್ನಂತಹ ಸಣ್ಣ ಕೊಡುಗೆದಾರರನ್ನು ನಿರಂತರವಾಗಿ ನಿರ್ಲಕ್ಷಿಸಬೇಕೇ?” ಎಂದು ಅವರು ಟ್ವೀಟ್ ನಲ್ಲಿ ತನ್ನ ಅಳಲನ್ನು ತೋಡಿಕೊಂಡಿದ್ದರು.
Congratulations to the Government for a Covid 19 relief package. They can print as much currency as they want BUT should a small contributor like me who offers 100% payback of State owned Bank loans be constantly ignored ? Please take my money unconditionally and close.
— Vijay Mallya (@TheVijayMallya) May 14, 2020
ಆದರೆ, ವಿಜಯ ಮಲ್ಯ ತಾನು ಬ್ಯಾಂಕುಗಳಿಂದ ಸಾಲವಾಗಿ ಪಡೆದ ಹಣವನ್ನು ಹಿಂದಿರುಗಿಸಲು ಸಿದ್ದನಿದ್ದೇನೆ ಎಂದು ಹೇಳುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಹತ್ತಾರು ಬಾರಿ ಈ ಕುರಿತು ಟ್ವೀಟ್ ಮಾಡುವ ಮೂಲಕ ಅವರು ತಮ್ಮ ಮನದ ಇಂಗಿತವನ್ನು ತಿಳಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರವಾಗಲಿ ಯಾವುದೇ ಬ್ಯಾಂಕುಗಳಾಗಲಿ ಇದಕ್ಕೆ ಕ್ಯಾರೇ ಎಂದಿರಲಿಲ್ಲ.
ಏಕೆಂದರೆ ಮಲ್ಯ ವಿರುದ್ಧ ಮುಂಬೈನ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಮಲ್ಯ ಹಣ ನೀಡಿದರೂ ಸಹ ಕಾನೂನಾತ್ಮಕವಾಗಿ ಈ ಪ್ರಕರಣವನ್ನು ಇತ್ಯರ್ಥಪಡಿಸಲು ಮಲ್ಯ ಅವರನ್ನು ಸ್ವತಃ ದೇಶಕ್ಕೆ ಕರೆ ತರಲೇಬೇಕಾದ ಒತ್ತಡ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲಿತ್ತು. ಅಲ್ಲದೆ, ಭವಿಷ್ಯದಲ್ಲಿ ಆರ್ಥಿಕ ಅಪರಾಧದಲ್ಲಿ ತೊಡಗುವವರಿಗೆ ಮಲ್ಯ ಪ್ರಕರಣದ ಮೂಲಕ ಖಡಕ್ ಎಚ್ಚರಿಕೆ ಸಂದೇಶ ರವಾನಿಸುವ ಉಮೇದು ಕೇಂದ್ರ ಸರ್ಕಾರಕ್ಕೂ ಇತ್ತು. ಇದೇ ಕಾರಣಕ್ಕೆ ಮಲ್ಯ ಹಣ ನೀಡಲು ಮುಂದಾದರೂ ಅದನ್ನು ಸ್ವೀಕರಿಸಲು ಸರ್ಕಾರ ಮುಂದಾಗಿಲ್ಲ ಎನ್ನಲಾಗುತ್ತಿ
Also Read: ಮಲ್ಯ ಎಂಬ ಹುಲಿ ತೋರಿಸಿ ಇಲಿ ಹಿಡಿದೀತೆ ಕೇಂದ್ರ ಸರ್ಕಾರ..?
ಮುಂದೇನು?
ಮಲ್ಯ ಮುಂಬೈ ವಿಮಾನ ನಿಲ್ಧಾಣಕ್ಕೆ ಆಗಮಿಸುತ್ತಿದ್ದಂತೆ ಸಿಬಿಐ ಅವರನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಿದೆ. ಈ ವೇಳೆ ಮಿನಿ ಲಾಂಡರಿಂಗ್ ಸೇರಿದಂತೆ ಹಲವಾರು ವಿಚಾರಗಳ ಕುರಿತು ವಿಚಾರಣೆ ನಡೆಯಲಿದೆ. ಅಲ್ಲದೆ, ಕೋರ್ಟ್ ಮೂಲಕ ಬ್ಯಾಂಕುಗಳು ಮಲ್ಯ ಅವರಿಂದ ಸಾಲವನ್ನು ವಾಪಸ್ ಪಡೆದರೂ ಸಹ ಆರ್ಥಿಕ ಅಪರಾಧದ ಮೇಲೆ ಉದ್ಯಮಿ ಮಲ್ಯ ಅವರಿಗೆ ಕಾನೂನಿನಂತೆ ಕನಿಷ್ಟ 5 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಆರ್ಥರ್ ರಸ್ತೆಯ ಇತಿಹಾಸವೇನು ಗೊತ್ತಾ?
ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಿಜಯ ಮಲ್ಯ ಅವರನ್ನು ಬಂಧಿಸಿದರೆ ಅವರನ್ನು ಮುಂಬೈನಲ್ಲಿರುವ ಆರ್ಥರ್ ರಸ್ತೆಯಲ್ಲಿರುವ ಜೈಲಿನಲ್ಲಿಟ್ಟು ವಿಚಾರಣೆ ನಡೆಸಲಿದೆ. ಆದರೆ, ಭಾರತದ ಕ್ರೈಂ ಲೋಕದಲ್ಲಿ ಈ ಜೈಲಿಗೆ ಒಂದು ನಟೋರಿಯಸ್ ಹಿನ್ನೆಲೆ ಇದೆ.
ಆರ್ಥರ್ ರಸ್ತೆ ಕಾರಾಗೃಹ ಭೂಗತ ಮತ್ತು ಭಯೋತ್ಪಾದಕ ಸಂಘಟನೆಗಳ ಖೈದಿಗಳನ್ನು ಬಂಧಿಸಲು ಹೆಸರು ವಾಸಿಯಾಗಿದ್ದು, ಇದೇ ಕಾರಣಕ್ಕೆ ಈ ಕಾರಾಗೃಹ ಕುಖ್ಯಾತಿಯನ್ನೂ ಗಳಿಸಿದೆ. 26/11 ಮುಂಬೈ ದಾಳಿ ಆರೋಪದ ಮೇಲೆ ಬಂಧಿಸಲ್ಪಟ್ಟ ಏಕೈಕ ಭಯೋತ್ಪಾದಕ ಅಜ್ಮಲ್ ಕಸಬ್ ನನ್ನು ಇದೇ ಕಾರಾಗೃಹದಲ್ಲಿ ಉನ್ನತ ಮಟ್ಟದ ಭದ್ರತೆಯಲ್ಲಿ ಇರಿಸಲಾಗಿತ್ತು. ಇದಲ್ಲದೆ. ಅಬು ಸೇಲಂ, ಚೋಟಾ ರಾಜನ್, ಮುಸ್ತಫಾ ದೋಸಾ, ಪೀಟರ್ ಮುಖರ್ಜಿಯಾ ಮತ್ತು 13,500 ಕೋಟಿ ರೂ.ಗಳ ಪಿಎನ್‌ಬಿ ವಂಚನೆ ಆರೋಪಿ ವಿಪುಲ್ ಅಂಬಾನಿ ಅವರನ್ನು ಅಲ್ಲಿಯೇ ಇರಿಸಲಾಗಿದೆ.
ಬಹುತೇಕ ಭೂಗತ ಪಾತಕಿಗಳನ್ನು ಭಯೋತ್ಪಾದಕರನ್ನು ಮಾತ್ರ ಬಂಧಿಸುವ ಈ ಕಾರಾಗೃಹದಲ್ಲಿ ಒಂದು ಕಾಲದ ಬಹುಕೋಟಿ ಉದ್ಯಮಿ ವಿಜಯ ಮಲ್ಯ ಅವರನ್ನು ಬಂಧಿಸುತ್ತಿರುವುದು ದೇಶದಲ್ಲಿ ಇಂತಹ ವಂಚನೆಗೆ ಮುಂದಾಗಲು ಇಚ್ಚಿಸುವ ಇತರರಿಗೆ ಒಂದು ಪಾಠವಾಗಲಿ.










