ಕಪ್ಪು ಬಂಗಾರ ಎಂದೇ ಹೊಗಳಿಸಿಕೊಳ್ಳುತಿದ್ದ ಕಾಳು ಮೆಣಸನ್ನು ರಾಜ್ಯದ ಮಲೆನಾಡು ಪ್ರಾಂತ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿರುವ ಈ ಕಾಳು ಮೆಣಸಿನ ಬಳ್ಳಿಯನ್ನು ಕಾಫಿ ತೋಟಗಳಲ್ಲಿನ ಮರಗಳು , ಅಡಿಕೆ ಮರಗಳು ತೆಂಗಿನ ಮರಗಳಿಗೆ ಹಬ್ಬಿಸುವ ಮೂಲಕ ಬೆಳೆಯಲಾಗುತ್ತಿದೆ. ಈ ಬೆಳೆಗೆ ಹೆಚ್ಚಿನ ಖರ್ಚು ಮತ್ತು ನಿರ್ವಹಣೆಯೂ ಕಡಿಮೆ ಇರುವುದರಿಂದ ಮಲೆನಾಡಿನ ಚಿಕ್ಕಮಗಳೂರು , ಕೊಡಗು , ಹಾಸನ ಜಿಲ್ಲೆಗಳ ತೋಟ ಬೆಳೆಗಾರರು ಇದನ್ನು ಬೆಳೆಸುತಿದ್ದಾರೆ.
ಇಂದು ಕಾಳು ಮೆಣಸಿನ ಉತ್ಪಾದನೆಯಲ್ಲಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಮೊದಲ ಸ್ಥಾನದಲ್ಲಿದ್ದ ಕೇರಳ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ರಾಜ್ಯದ ವಾರ್ಷಿಕ ಮೆಣಸು ಉತ್ಪಾದನೆ 50 ಸಾವಿರ ಟನ್ ಗಳಷ್ಟಾಗಿದ್ದು ದೇಶದ ಒಟ್ಟು ಉತ್ಪಾದನೆ 1.25 ಲಕ್ಷ ಟನ್ ಗಳಷ್ಟಿದೆ.
ಮರಗಳ ಕಾಂಡಕ್ಕೆ ಹಬ್ಬಿಸಲಾಗುವ ಕಾಳು ಮೆಣಸಿನ ಬಳ್ಳಿಯು 40-50 ಅಡಿಗಳ ವರೆಗೂ ಎತ್ತರವಾಗಿರುತ್ತದೆ. ಇದನ್ನು ಕೊಯ್ಲು ಮಾಡುವುದು ಕೊಂಚ ಅಪಾಯಕಾರಿಯೂ ಹೌದು. ಏಕೆಂದರೆ ಕೊಯ್ಲು ಮಾಡುವಾಗ ಗಂಟೆಗಟ್ಟಲೆ ಒಂಟಿ ಕಾಲಿನಲ್ಲಿ ಸಿಂಗಲ್ ಏಣಿಯ ಮೇಲೆ ನಿಲ್ಲಬೇಕಾಗುತ್ತದೆ. ಎಚ್ಚರ ತಪ್ಪಿದರೆ ಏಣಿಯ ಮೇಲಿಂದ ಕೆಳಗೆ ಬೀಳಬೇಕಾಗುತ್ತದೆ.
ಸುಮಾರು 20 ವರ್ಷಗಳ ಹಿಂದೆಲ್ಲ ಕಾಳು ಮೆಣಸಿನ ಕೊಯ್ಲಿಗೆ ಬೆಳೆಗಾರರು ಬಿದಿರಿನ ಏಣಿಗಳನ್ನೇ ಅವಲಂಬಿಸಿದ್ದರು. ಕೊಡಗಿನ ಕಾಡುಗಳಲ್ಲಿ ಹೇರಳವಾಗಿ ಬಿದಿರು ಬೆಳೆಯುತ್ತಿತ್ತು. ಆದರೆ ಬಿದಿರಿಗೆ ಕಟ್ಟೆ ರೋಗ ಬಂದು ಬಿದಿರು ಸಂಪೂರ್ಣ ನಾಶವಾಯಿತು. ಇದರಿಂದ ಕಾಡಾನೆಗಳಿಗೂ ಮೇವಿಲ್ಲದಂತಾಯಿತು. ಇಂದು ಕೊಡಗಿನ ಕಾಡುಗಳಲ್ಲಿ ಬಿದಿರಿನ ಸುಳಿವೇ ಇಲ್ಲದಂತಾಗಿದೆ. ಅದರೆ ಅರಣ್ಯ ಇಲಾಖೆ ಇತ್ತೀಚಿನ ವರ್ಷಗಳಲ್ಲಿ ಬಿದಿರಿನ ಗಿಡಗಳನ್ನು ನೆಟ್ಟು ಬೆಳೆಸುತ್ತಿದೆ.
ಬಿದಿರು ನಾಶವಾದದ್ದಕ್ಕೋ ಅಥವಾ ಅಲ್ಯುಮೀನಿಯಂನ ಬಳಕೆ ವ್ಯಾಪಕವಾಗಿ ಹೆಚ್ಚಳವಾದದ್ದಕ್ಕೋ ಬಹುತೇಕ ಎಲ್ಲ ಕಾಫಿ ಬೆಳೆಗಾರರೂ ಕೊಯ್ಲಿಗೆ ಅಲ್ಯುಮೀನಿಯಂ ನ ಏಣಿಗಳನ್ನೇ ಬಳಸತೊಡಗಿದರು. ಈ ಬಳಕೆಯಿಂದಾಗಿ ಇಂದು ಹತ್ತಾರು ಕಾರ್ಮಿಕರು ಮೆಣಸು ಕೊಯ್ಯುಲು ಏಣಿಯನ್ನು ಸಾಗಿಸುವ ಸಂದರ್ಭದಲ್ಲಿ ಪ್ರಾಣ ತೆತ್ತಿದ್ದಾರೆ. ಕೊಡಗಿನ ಕಾಫಿ ತೋಟಗಳಲ್ಲಿ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಅಲ್ಯುಮೀನಿಯಂ ಏಣಿಗಳನ್ನು ಸಾಗಿಸುವಾಗ ಕೆಳಗೆ ಜೋತಾಡಿಕೊಂಡಿರುವ ವಿದ್ಯುತ್ ತಂತಿಗಳಿಗೆ ಏಣಿ ತಗುಲಿ ಕಾರ್ಮಿಕರು ಮೃತರಾಗುತ್ತಿರುವುದು ನೋವಿನ ಸಂಗತಿಯಾಗಿದೆ.
ನೆಲ್ಯಹುದಿಕೇರಿ ಗ್ರಾಮದಲ್ಲಿ ಕಬ್ಬಿಣದ ಏಣಿ ಬಳಸಿ ಕರಿಮೆಣಸು ಕೊಯ್ಲುಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿ ತಗುಲಿ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆ ಮೂಲಕ ಈ ರೀತಿಯ ದುರಂತಕ್ಕೆ ಕೊಡಗಿನಲ್ಲಿ ಬಲಿಯಾದವರ ಸಂಖ್ಯೆ ಕಳೆದ ನಾಲ್ಕು ವರ್ಷಗಳಲ್ಲಿ 31ಕ್ಕೆ ಏರಿದಂತಾಗಿದೆ !
ಇದೇ ವರ್ಷ ಕಳೆದ ಏಪ್ರಿಲ್ ಒಂದರಂದು ಗೋಣಿಕೊಪ್ಪಲು ಸಮೀಪ ತೆಂಗಿನ ಕಾಯಿ ಕೀಳಲು ಅಲ್ಯುಮಿನಿಯಂ ಏಣಿ ಬಳಕೆ ಸಂದರ್ಭದಲ್ಲೂ ವಿದ್ಯುತ್ ತಂತಿಗೆ ಏಣಿ ತಗುಲಿ ಮೂವರು ಮೃತಪಟ್ಟಿದ್ದರು. ನಂತರ ಮೇ 19ಕ್ಕೆ ನಾಪೋಕ್ಲು ಸಮೀಪದ ದೊಡ್ಡಪುಲಿಕೋಟು ಗ್ರಾಮದಲ್ಲಿ ಮರದ ರೆಂಬೆ ಕತ್ತರಿಸಲು ಅಲ್ಯುಮಿನಿಯಂ ಏಣಿ ಬಳಸಿದ್ದ ವೇಳೆಯಲ್ಲೂವಿದ್ಯುತ್ ತಂತಿ ಸ್ಪರ್ಶಿಸಿ ಮೂವರು ಮೃತಪಟ್ಟಿದ್ದರು.
ಕೊಡಗಿನಲ್ಲಿ ವರ್ಷಕ್ಕೆ ಏನಿಲ್ಲವೆಂದರೂ 7 ರಿಂದ 8 ಮಂದಿ ವಿದ್ಯುತ್ ತಗುಲಿ ಮೃತರಾಗುತಿದ್ದಾರೆ. ಈ ಕುರಿತು ಕಾಫಿ ಬೆಳೆಗಾರರ ಸಂಘದ ಅದ್ಯಕ್ಷ ಮೋಹನ್ ಬೋಪಣ್ಣ ಅವರನ್ನು ಪ್ರತಿಧ್ವನಿ ಮಾತಾಡಿಸಿದಾಗ ಬಿದಿರಿನ ಏಣಿ ಲಭ್ಯವಿಲ್ಲದಿರುವ ಹಿನ್ನೆಲೆಯಲ್ಲಿ ಬೆಳೆಗಾರರು ಅಲ್ಯುಮೀನಿಯಂ ಏಣಿಗಳನ್ನೇ ಬಳಸುತಿದ್ದು ಇದು ಸಾಗಿಸಲು ಸುಲಭವಾಗಿದೆ. ಅದರೆ ಬೆಳೆಗಾರರರು ಮುನ್ನೆಚ್ಚರಿಕೆ ವಹಿಸದಿರುವುದೇ ದುರಂತ ಸಾವಿಗೆ ಕಾರಣವಾಗುತ್ತಿದೆ ಎಂದರು.
ಸೋಮವಾರಪೇಟೆಯ ಕಾಫಿ ಬೆಳೆಗಾರ ರಾಜೀವ್ ಕುಶಾಲಪ್ಪ ಅವರೊಂದಿಗೆ ಮಾತನಾಡಿದಾಗ ಅಲ್ಯುಮೀನಿಯಂ ಏಣಿಗಳನ್ನು ಸಾಗಿಸುವಾಗ ಮುನ್ನೆಚ್ಚರಿಕೆ ವಹಿಸಲೇಬೇಕು ಅಥವಾ ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಲೈನ್ ನ್ನು ಆಫ್ ಮಾಡಿಸಿದರೆ ದುರಂತ ತಡೆಗಟ್ಟಬಹುದು ಎಂದರು. ಅಲ್ಲದೆ ಬಹುತೇಕ ಬೆಳೆಗಾರರು ತೋಟಗಳಲ್ಲಿ ಮರಗಳ ಕೊಂಬೆ ಕತ್ತರಿಸುವಾಗ ಈ ರೀತಿ ಲೈನ್ ಆಫ್ ಮಾಡಿಯೇ ಕೆಲಸ ಮಾಡುತಾರೆ ಎಂದು ನೆನಪಿಸಿದ ಅವರು ಬಿದಿರಿನ ಏಣಿಗಳು ಭಾರೀ ತೂಕವಿರುತ್ತವೆ ಮತ್ತು ಸಾಗಿಸಲು ಕಷ್ಟ ಅಲ್ಲದೆ ಕೆಲ ವರ್ಷಗಳಲ್ಲೇ ಶಿಥಿಲಾವಸ್ಥೆಗೆ ಬರುತ್ತವೆ. ಆದರೆ ಅಲ್ಯಮೀನಿಯಂ ಏಣಿಗಳು ಹಗುರವಾಗಿದ್ದು ಸುದೀರ್ಘ ಬಾಳಿಕೆ ಬರುವುದರಿಂದ ದಿನೇ ದಿನೇ ಬೆಳೆಗಾರರು ಇವುಗಳ ಬಳಕೆಯನ್ನು ಹೆಚ್ಚಿಸುತಿದ್ದಾರೆ ಎಂದರು.
ಈ ಕುರಿತು ಸಿದ್ದಾಪುರದ ಕಾರ್ಮಿಕ ಸಂಘಟನೆಯ ಮುಖಂಡ ಪಿ ಆರ್ ಭರತ್ ಅವರನ್ನು ಮಾತಾಡಿಸಿದಾಗ ಅಲ್ಯುಮೀನಿಯಂ ಏಣಿಯನ್ನು ಬಳಸುವುದನ್ನೇ ನಿಷೇಧಿಸಬೇಕು ಎಂದು ಹೇಳಿದರು. ಅರಣ್ಯ ಇಲಾಖೆಯು ಬಿದಿರಿನ ಏಣಿಗಳನ್ನು ಬಳಸುವುದಕ್ಕೆ ಇರುವ ನಿರ್ಭಂಧವನ್ನು ತೆಗೆದು ಹಾಕಬೇಕು ಇದರಿಂದ ಬಿದಿರಿನ ಏಣಿಗಳ ಬಳಕೆಯನ್ನು ಹೆಚ್ಚಿಸಬಹುದಾಗಿದೆ ಅಲ್ಲದೆ ಅಮೂಲ್ಯ ಜೀವ ನಷ್ಟ ವಾಗುವುದನ್ನೂ ತಪ್ಪಿಸಬಹುದಾಗಿದೆ ಎಂದು ಹೇಳುತ್ತಾರೆ.
ಈ ಕುರಿತು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಮಾತಾಡಿಸಿದಾಗ ಲೋಹದ ಏಣಿಗಳ ಬಳಕೆ ನಿಷೇಧ ಮಾಡುವುದು ಕಷ್ಟ. ಸಂಭವಿಸುತ್ತಿರುವ ಸಾವಿನ ಪ್ರಮಾಣ ಗಮನಿಸಿ ಅಲ್ಯುಮಿನಿಯಂ ಮತ್ತು ಕಬ್ಬಿಣದ ಏಣಿಗಳನ್ನು ಬಳಸದಂತೆ ಮನವಿ ಮಾಡಿಕೊಳ್ಳಲಾಗಿತ್ತು. ಮುಂದಿನ ದಿನಗಳಲ್ಲಿ ಬೆಳೆಗಾರರ ಸಂಘಟನೆಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಒಟ್ಟಿನಲ್ಲಿ ಸರ್ಕಾರ ಅಥವಾ ಬೆಳೆಗಾರರು ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಬಡ ಕಾರ್ಮಿಕರ ಸಾವಿನ ಸರಣಿ ಮುಂದುವರಿಯಲಿರುವುದು ಸುಳ್ಳಲ್ಲ.