ಇಂಗ್ಲೀಷ್‍ನಿಂದ ತುಳು, ಕನ್ನಡಕ್ಕೆ ಅಪಾಯ ಎಂದು ಹೇಳಲಾಗುತ್ತಿದೆ. ಆದರೆ, ಅಪಾಯವಿರುವುದು ತುಳು, ಕನ್ನಡ ಭಾಷೆಗಳಿಗೆ ಮಾತ್ರವೆ? ಅಥವಾ ಉಳಿದ ಭಾಷೆಗಳಿಗೂ ಇದೆಯೆ? ಇಂತಹ ಅಪಾಯವಿರುವುದು ಇಂಗ್ಲೀಷ್‍ನಿಂದ ಮಾತ್ರವೆ? ಅಥವಾ ರಾಷ್ಟ್ರಭಾಷೆಯೆಂದು ಹೇಳಲಾಗುತ್ತಿರುವ ಹಿಂದಿಯಿಂದಲೂ ಇದೆಯೆ? ಇವೆಲ್ಲವನ್ನು ಮೀರಿ ತ್ವರಿತವಾಗಿ ಬದಲಾಗುತ್ತಿರುವ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು, ಹೊಸ ಮಾಧ್ಯಮಗಳು ಹಾಗೂ ಆಧುನಿಕತೆಯ ಅನಿವಾರ್ಯ ಪ್ರಭಾವಕ್ಕೊಳಗಾಗಿರುವ ನಾವೇ ಇದಕ್ಕೆಲ್ಲ ಕಾರಣವಾಗುತ್ತಿದ್ದೇವೆಯೆ? ಈ ಸಂಕೀರ್ಣ ವಿಷಯಕ್ಕೆ ಸಂಬಂಧಿಸಿ ಕೆಲವು ಟಿಪ್ಪಣಿಗಳು ಇಲ್ಲಿವೆ.
ತುಳು, ಕನ್ನಡ ಭಾಷೆಗಳಿಗೆ ಅಪಾಯ ಎದುರಾಗಿದೆ ಎಂಬ ಹತಾಶೆಯ ಮಾತುಗಳನ್ನು ನಾವು ದಶಕಗಳಿಂದ ಕೇಳುತ್ತಾ ಬಂದಿದ್ದೇವೆ. ಇದು ನಿಜವೇ ಎಂದು ಕೇಳಿಕೊಂಡಾಗ, “ಹೌದು” ಎಂಬ ನಿರಾಶಾವಾದದ ಉತ್ತರದ ಜೊತೆಗೆ “ಇಲ್ಲ; ಕನ್ನಡ ಬೆಳೆಯುತ್ತಿದೆ” ಎಂಬ ಆಶಾವಾದದ ಭಾವನೆಯೂ ಕಂಡುಬರುತ್ತದೆ.
ಶಿಕ್ಷಣ ಮಾಧ್ಯಮವಾಗಿರುವ ಕನ್ನಡಕ್ಕೆ ಇರುವ ಅಪಾಯವನ್ನು ತಕ್ಷಣದಲ್ಲಿ ನಾವು ಯಾವುದರಿಂದ ಗುರುತಿಸುತ್ತೇವೆ? ಮೊದಲನೆಯದಾಗಿ, ಕನ್ನಡ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗುತ್ತಾ, ಇಂಗ್ಲೀಷ್ ಮಾಧ್ಯಮಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವುದು. ಎರಡನೆಯದಾಗಿ ರಾಜ್ಯದಲ್ಲಿ ಹೊರರಾಜ್ಯಗಳಿಂದ; ಅದರಲ್ಲೂ ಉತ್ತರ ಭಾರತದಿಂದ ಬಂದಂತಹ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದು. ಮೂರನೆಯದಾಗಿ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗಾವಕಾಶಗಳು ಕಡಿಮೆಯಾಗಿ, ಉತ್ತಮ, ಅಂದರೆ ಹೆಚ್ಚು ಸಂಬಳದ ಉದ್ಯೋಗ ಪಡೆಯುವುದಕ್ಕೆ ಇಂಗ್ಲೀಷ್ ಜ್ಞಾನ ಹೆಚ್ಚುಹೆಚ್ಚು ಅನಿವಾರ್ಯವಾಗುತ್ತಿರುವುದು. ಅಂತಿಮವಾಗಿ ದಿನನಿತ್ಯದ ವ್ಯವಹಾರದಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿರುವುದು ಮತ್ತು ಬಳಕೆಯಾದರೂ ಅದರಲ್ಲಿ ಇಂಗ್ಲೀಷ್ ಸಹಿತ ಬೇರೆ ಭಾಷೆಗಳ ಪ್ರಭಾವ, ಅದಕ್ಕಿಂತಲೂ ಬೆರಕೆ ಹೆಚ್ಚುತ್ತಿರುವುದು.
ಇವು ಮೇಲಿಂದ ಮೇಲೆ ಕಾಣುವ ವಿಷಯಗಳು ಮಾತ್ರವಾಗಿದ್ದು, ನಿಜವಾದ ಅಪಾಯ ನಮ್ಮ ಮನೋಭಾವ, ನಾವು ಆಯ್ದುಕೊಂಡಿರುವ ಅಭಿವೃದ್ಧಿಯ ನೋಟ ಮತ್ತು ದಾರಿಯಲ್ಲಿಯೇ ಇವೆ ಅನಿಸುತ್ತದೆ.
ಯಾವುದೇ ಭಾಷೆ ಮುಖ್ಯವಾಗಿ ಸಂವಹನದ ಮಾಧ್ಯಮ ಆಗಿರುವಂತೆ ಭಾವನಾತ್ಮಕವೂ ಆಗಿದೆ. ಅದು ಸಂಸ್ಕೃತಿಯ ಭಾಗ ಮತ್ತು ಕನ್ನಡಿಯೂ ಆಗಿದೆ. ಬಹುತೇಕ ಪ್ರತೀ ಮನುಷ್ಯ ಜೀವಿ ಒಂದು ಭಾಷೆಯ ಮೂಲಕ ಚಿಂತಿಸುವುದನ್ನು ನಾವು ಗಮನಿಸಬಹುದು. ಅಮೂರ್ತ ಚಿಂತನೆಗಳು ಎಲ್ಲರಿಗೂ ಒಗ್ಗುವಂತದ್ದಲ್ಲ. ಒಬ್ಬನೇ ಮನುಷ್ಯ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಚಿಂತಿಸುವುದು ಸಾಧ್ಯವಿದೆ.
ಉದಾಹರಣೆಗಾಗಿ ತುಳು ಮಾತೃಭಾಷೆಯಾಗಿರುವ ಒಬ್ಬ ವಿದ್ಯಾವಂತ ದಕ್ಷಿಣ ಕನ್ನಡಿಗನ ಉದಾಹರಣೆ ತೆಗೆದುಕೊಳ್ಳೋಣ. ಆತ ತನ್ನ ನಿತ್ಯದ ಕೌಟುಂಬಿಕ ಮತ್ತು ಸಾಮಾಜಿಕ ವ್ಯವಹಾರಗಳ ಕುರಿತು ತುಳುವಿನಲ್ಲೂ, ಸಾಹಿತ್ಯಿಕ ಅಥವಾ ಆಧ್ಯಾತ್ಮಿಕದಂತಹ ಉನ್ನತವಾದ ಮತ್ತು ಹೆಚ್ಚು ಸಂಕೀರ್ಣವಾದ ವಿಚಾರಗಳನ್ನು ಕನ್ನಡದಲ್ಲೂ., ವೈಜ್ಞಾನಿಕ ಮತ್ತು ತಾಂತ್ರಿಕ ವಿಚಾರಗಳನ್ನು ಇಂಗ್ಲೀಷಿನಲ್ಲೂ ಚಿಂತಿಸಬಹುದು. ಅಥವಾ ಕೆಲವು ವಿಚಾರಗಳನ್ನು ಇವೆಲ್ಲಾ ಭಾಷೆಗಳನ್ನು ಒಳಗೊಂಡಂತಹ ಒಂದು ಮಿಶ್ರ ಮಾನಸಿಕ ಭಾಷೆಯಲ್ಲಿ ಚಿಂತಿಸಬಹುದು.
ಕೆಲವು ಭಾಷೆಗಳಲ್ಲಿ ಕೆಲವೊಂದು ವಸ್ತು, ವಿಚಾರಗಳಿಗೆ, ಮುಖ್ಯವಾಗಿ ಪರಕೀಯವಾದವುಗಳಿಗೆ ಸೂಕ್ತ ಮತ್ತು ಸರಳವಾದ ಪದ ಅಥವಾ ಅಭಿವ್ಯಕ್ತಿ ಇರುವುದಿಲ್ಲ. ಆಗ ಹೊರಗಿನ ಶಬ್ದದ ಪ್ರವೇಶವಾಗುತ್ತದೆ. ಒಬ್ಬ ಮನುಷ್ಯ ಯಾವ ಭಾಷೆಯಲ್ಲಿ ಹೆಚ್ಚು ಚಿಂತಿಸುತ್ತಾನೋ ಅದೇ ಆತನ ಮಾತೃಭಾಷೆಯಾಗಿ ರೂಪಾಂತರಗೊಳ್ಳುತ್ತದೆ. ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಭಾಷೆಯನ್ನಾಡುವ ಕುಟುಂಬದಲ್ಲಿ ಹುಟ್ಟಿದ ಮಾತ್ರಕ್ಕೆ ಅದು ಆತನ/ಆಕೆಯ ಮುಖ್ಯಭಾಷೆಯಾಗಿ ಸದಾ ಕಾಲ ಉಳಿಯಬೇಕೆಂದೇನಿಲ್ಲ.
ಉದಾಹರಣೆಗಾಗಿ, ಒಂದು ರಾಜ್ಯದಿಂದ ಹೊರರಾಜ್ಯ ಅಥವಾ ಹೊರದೇಶಗಳಿಗೆ ಹೋಗಿ ಹಲವಾರು ವರ್ಷಗಳ ಕಾಲ ಇದ್ದು ಮರಳಿದವರು- ಒಂದೋ ತಮ್ಮ ಮೂಲಭಾಷೆಯನ್ನು ಮರೆತೇಬಿಟ್ಟಿರಬಹುದು ಆಥವಾ ಮಾತನಾಡಲು ಕಷ್ಟಪಡಬಹುದು, ಮಾತನಾಡಿದರೂ ಅವರು ಈಗ ವಾಸವಾಗಿರುವ ಪ್ರದೇಶದ ಭಾಷೆಯ ಪದಗಳು, ಅಭಿವ್ಯಕ್ತಿಗಳು ಮಾತಿನೊಳಗೆ ಅರಿವೇ ಇಲ್ಲದಂತೆ ನುಸುಳಬಹುದು. ಅದೇ ರೀತಿ ಕೆಲವು ತಲೆಮಾರುಗಳ ಹಿಂದೆ ಮಲಯಾಳಂ ಮಾತೃಭಾಷೆಯಾಗಿರುವ ಕುಟುಂಬವೊಂದು ದಕ್ಷಿಣ ಕನ್ನಡಕ್ಕೆ ಬಂದು ನೆಲೆಸಿ ಇಲ್ಲಿನ ತುಳು, ಕನ್ನಡ ಮುಂತಾಗಿ ಭಾಷೆಗಳನ್ನೂ ಸಲೀಸಾಗಿ ಮಾತನಾಡಿ ಅವುಗಳಲ್ಲೇ ಚಿಂತಿಸುತ್ತಾರೆ ಎಂದಾದಾಗ, ಅವರು ಮನೆಯಲ್ಲಿ ಮಾತ್ರ ಮಾತನಾಡುವ ಹಲವಾರು ವರ್ಷಗಳ ಕಾಲ ಸ್ಥಗಿತಗೊಂಡ ಮಲಯಾಳಂ ಅವರ ಮುಖ್ಯಭಾಷೆಯಾಗಿ ಉಳಿಯುತ್ತದೆಯೆ? ಇದು ಎಲ್ಲಾ ಭಾಷೆಗಳಿಗೂ ಅನ್ವಯಿಸುವ ವಿಚಾರ.
ಆದುದರಿಂದ, ಒಬ್ಬ ವ್ಯಕ್ತಿ ತನ್ನ ನಿತ್ಯಜೀವನದಲ್ಲಿ ಚಿಂತನೆ ಮತ್ತು ಅಭಿವ್ಯಕ್ತಿಗೆ ಹೆಚ್ಚಾಗಿ ಬಳಸುವ ಭಾಷೆ ಆತನ/ಆಕೆಯ ಮಾತೃಭಾಷೆಯ ಜಾಗದಲ್ಲಿ ಒಂದು ಸ್ಥಾನವನ್ನು ಪಡೆಯುತ್ತದೆ. ಉದಾಹರಣೆಗೆ, ಕನ್ನಡ ಅಥವಾ ತುಳು ಮಾತನಾಡುವ ಒಬ್ಬ ಹಳ್ಳಿಗ ತನ್ನ ದಿನನಿತ್ಯದ ವ್ಯವಹಾರಗಳಿಗೆ ಕನ್ನಡ-ತುಳುವನ್ನೇ ಅನಿವಾರ್ಯವಾಗಿ ಬಳಸಿ, ಅದನ್ನು ಉಳಿಸುವುದಕ್ಕೆ ಕಾರಣನಾಗುತ್ತಾನೆ. ಆದರೆ, ಮಾಹಿತಿ ಸ್ಫೋಟದ ಈ ಯುಗದಲ್ಲಿ ಆತ ಕಾಣುವ ಹೊಸ ವಿಷಯಗಳಿಗೆ, ವಸ್ತುಗಳಿಗೆ ಸ್ವಂತ ಭಾಷೆಯಲ್ಲಿ ಹೆಸರುಗಳಿಲ್ಲದಾಗ, ಅಭಿವ್ಯಕ್ತಿಯಿಲ್ಲದಾಗ ಆತ ಪರಕೀಯ ಪದಗಳನ್ನು ಬಳಸುವುದು ಅನಿವಾರ್ಯವಾಗುತ್ತದೆ. ಆದುದರಿಂದ ಟ್ರ್ಯಾಕ್ಟರ್, ಟಿಲ್ಲರ್, ಹಲ್ಲರ್, ಬ್ರೀಡರ್ ಇತ್ಯಾದಿ ಪದಗಳಿಂದ ಹಿಡಿದು, ಪೈಪ್, ಬ್ರಷ್ ತನಕ ನೂರಾರು ಪರಕೀಯ ಪದಗಳು ಆತನ ಮಾತಿನಲ್ಲಿ ಬರುತ್ತವೆ. ಇದನ್ನು ನಿಲ್ಲಿಸಲು ಸಾಧ್ಯವೆ? ಗದ್ದೆ ಉಳುವ ಯಂತ್ರ, ಭತ್ತದ ಹೊಟ್ಟು ತೆಗೆಯುವ ಯಂತ್ರ ಇತ್ಯಾದಿ ಪದಗಳನ್ನು ಆತ ಬಳಸಬೇಕೆಂದು ನಿರೀಕ್ಷಿಸುವುದು ಸರಿಯೆ? ಗದ್ದೆ ಉಳುವ ಯಂತ್ರವಾದ ಟ್ರ್ಯಾಕ್ಟರ್ ಇಂದು, ಕ್ವಾರಿಗಳಲ್ಲಿ ಕಂಪ್ರೆಸರ್ ಆಗಿ, ಟ್ರೇಲರ್ ಜೊತೆ ಸೇರಿ ಸಾಗಾಟದ ವಾಹನವಾಗಿಯೂ ಬಳಕೆಯಾಗುತ್ತದೆ! ಅದು ಬರೇ ಉಳುವ ಯಂತ್ರವಲ್ಲ.
ಇನ್ನೊಂದು ಉದಾಹರಣೆ ಕೊಡುವುದಾದರೆ, ಕನ್ನಡ ಮಾತೃಭಾಷೆಯಾಗಿರುವ ಒಬ್ಬ ವ್ಯಕ್ತಿ ಇಂಗ್ಲೀಷ್ ಮಾಧ್ಯಮದಲ್ಲಿ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕಲಿತು ಒಂದು ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ಸೇರಿಕೊಳ್ಳುತ್ತಾನೆ. ತನ್ನ ಜೀವನದ ಬಹುತೇಕ ಸಮಯವನ್ನು ಕೆಲಸದಲ್ಲಿಯೇ ಕಳೆಯುವ ಆತ, ಹೆಚ್ಚಿನ ಕಾಲ ತನ್ನ ವೃತ್ತಿ ಸಂಬಂಧಿ ಚಿಂತನೆಯನ್ನು ಇಂಗ್ಲೀಷಿನಲ್ಲಿಯೇ ನಡೆಸುತ್ತಾನೆ. ಹೊರರಾಜ್ಯ, ಹೊರದೇಶಗಳ ಸಹೋದ್ಯೋಗಿಗಳೊಂದಿಗೆ ಇಂಗ್ಲೀಷ್‍ನಲ್ಲಿಯೇ, ಹಿಂದಿಯಲ್ಲಿಯೋ ವ್ಯವಹರಿಸುತ್ತಾನೆ. ಆತನ ಮದುವೆಯೂ ಹೊರರಾಜ್ಯದ ಸಹೋದ್ಯೋಗಿಯೊಂದಿಗೆ ನಡೆಯುತ್ತದೆ ಎನ್ನಿ. ಆಕೆಯೊಂದಿಗೂ ಪರಭಾಷೆಯಲ್ಲಿಯೇ ವ್ಯವಹರಿಸುತ್ತಾನೆ. ಆಗ ಆತನ ಮಾತೃಭಾಷೆ ಮತ್ತು ಆಕೆಯ ಮಾತೃಭಾಷೆ ಎಲ್ಲಿಗೆ ಹೋಗುತ್ತದೆ? ಅವರ ಮಕ್ಕಳು ಯಾವ ಭಾಷೆ ಮಾತನಾಡುತ್ತಾರೆ? ಅವರ ಮಾತೃಭಾಷೆ ಏನಾಗುತ್ತದೆ? ಭಾಷೆ ಉಳಿಸಲು ಇಂತಹ ಉದ್ಯೋಗ ಮಾಡಬೇಡಿ, ಬೇರೆ ರಾಜ್ಯದವರನ್ನು ಮದುವೆಯಾಗಬೇಡಿ ಇತ್ಯಾದಿ ಹೇಳಲು ಸಾಧ್ಯವೆ?
ಇಂತದ್ದೇ ಕಾರಣಗಳಿಂದ ಬೆಂಗಳೂರಿನಂತಹ ನಗರಗಳಲ್ಲಿ ಇಂಗ್ಲೀಷ್, ಹಿಂದಿ ಸಹಿತ ಬೇರೆ ಬೇರೆ ಭಾಷೆಗಳು ಸೇರಿರುವಂತಹ ಮಿಶ್ರಭಾಷೆಗಳು ಹುಟ್ಟಿಕೊಳ್ಳುತ್ತಿವೆ. ಜೊತೆಗೆ ಎಲ್ಲವನ್ನೂ ಚುಟುಕುಗೊಳಿಸುವ, ವ್ಯಾಕರಣವಿಲ್ಲದ ಇಂಟರ್ನೆಟ್ ಭಾಷೆಯೂ ಸೇರಿಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ತಡೆಯಲು ಸಾಧ್ಯವಿದೆಯೆ?
ತುಳು, ಕನ್ನಡವೂ ಸೇರಿದಂತೆ ಪ್ರಾದೇಶಿಕ ಭಾಷೆಗಳಿಗೆ ಇಂಗ್ಲೀಷ್‍ನಿಂದ ಅಪಾಯವಿದೆ ಎಂದು ಹೇಳುವುದಾದರೆ, ಅದು ಇನ್ನೊಂದು ಪ್ರಾದೇಶಿಕ ಭಾಷೆಯಾದ ಹಿಂದಿಯಿಂದಲೂ ಇದೆ. ಅದಕ್ಕೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿ ಭಾರತದುದ್ದಗಲಕ್ಕೂ ಸಂಪರ್ಕಭಾಷೆಯಾಗಿ ಹೇರುವ ಪ್ರಯತ್ನ ನಡೆಯುತ್ತಿದೆ. ಜನರು ಹೆಚ್ಚುಹೆಚ್ಚಾಗಿ ಇಂಗ್ಲಿಷ್ ಮಾಧ್ಯಮಗಳಿಗೆ ಮಕ್ಕಳನ್ನು ಏಕೆ ಕಳಿಸುತ್ತಿದ್ದಾರೆ ಎಂಬುದಕ್ಕೆ ಪ್ರಾಮಾಣಿಕ ಉತ್ತರ ಕಂಡುಕೊಳ್ಳಬೇಕಾಗಿದೆ.
ಇವುಗಳಲ್ಲಿ ಬಹುಮುಖ್ಯ ಕಾರಣವೆಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತರೆ ಉನ್ನತ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳು ಹೆಚ್ಚಿವೆ ಎಂಬುದಾಗಿದೆ. ಈ ಹಿನ್ನೆಲೆಯಲ್ಲಿ ತುಳು, ಕನ್ನಡ ಭಾಷೆಗಳನ್ನು ಉಳಿಸಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕಾಗಿದೆ. ಆ ಭಾಷೆಗಳನ್ನು ಮಾತ್ರ ಬಲ್ಲವರಿಗೂ ಉದ್ಯೋಗಾವಕಾಶಗಳೂ, ಜೀವನಾವಕಾಶಗಳೂ ತೆರೆದುಕೊಳ್ಳಬೇಕಾಗುತ್ತದೆ. ಹಿಂದಿ ಹೊರತುಪಡಿಸಿ ಉಳಿದೆಲ್ಲಾ ಭಾರತೀಯ ಭಾಷಿಕರ ಸಮಸ್ಯೆಯೆಂದರೆ, ಹಾಗೆ ಆಗುತ್ತಲೇ ಇಲ್ಲ.