• Home
  • About Us
  • ಕರ್ನಾಟಕ
Wednesday, July 9, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ತುರ್ತುಪರಿಸ್ಥಿತಿ – ಕಲಿತಿರುವುದೇನು ಕಲಿಯಬೇಕಾದ್ದು ಏನು ?

ನಾ ದಿವಾಕರ by ನಾ ದಿವಾಕರ
July 6, 2025
in Top Story, ದೇಶ, ರಾಜಕೀಯ
0
Share on WhatsAppShare on FacebookShare on Telegram

—-ನಾ ದಿವಾಕರ—–

ADVERTISEMENT

ನಡೆದು ಬಂದ ಹಾದಿಯ ಅವಲೋಕನದಲ್ಲಿ ಆತ್ಮವಿಮರ್ಶೆ ಇಲ್ಲದಿದ್ದರೆ ಭವಿಷ್ಯ ಮಸುಕಾಗುತ್ತದೆ

ಭಾಗ 1

ಸ್ವತಂತ್ರ ಭಾರತದ ಇತಿಹಾಸದಲ್ಲಿ 1975ರ ತುರ್ತುಪರಿಸ್ಥಿತಿ , ಭಾರತ ತನಗೆ ತಾನೇ ಅರ್ಪಿಸಿಕೊಂಡು ಅನುಸರಿಸಿಕೊಂಡು ಬಂದಿದ್ದ ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಹಾದಿಗೆ ಒಂದು ನಿರ್ಣಾಯಕ ತಿರುವು ನೀಡಿದ ಸಂದರ್ಭ. ಈ ನಿರ್ಣಾಯಕ ಗಳಿಗೆ (Watershed moment) ಯನ್ನು ದಾಟಿ, 1977ರಲ್ಲಿ ಭಾರತ ಮತ್ತೆ ಸಾಂವಿಧಾನಿಕವಾಗಿ ಹಳಿಗೆ ಬಂದರೂ ಸಹ, ತದನಂತರ ಭಾರತದ ರಾಜಕಾರಣ ನಡೆದುಬಂದಿರುವ ರೀತಿ, ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ವಹಿಸಿದ ಮಾದರಿ, ಪ್ರಜಾಪ್ರಭುತ್ವದ ವಾರಸುದಾರರಾದ ಜನಸಾಮಾನ್ಯರನ್ನು ಕಂಡ ದೃಷ್ಟಿಕೋನ ಹಾಗೂ ಸಂವಿಧಾನದ ಚೌಕಟ್ಟಿನಲ್ಲೇ ಜಾರಿಗೊಳಿಸಲಾದ ಶಾಸನಗಳನ್ನು ಗಮನಿಸಿದಾಗ 1975ರ ಅನಂತರದ ಭಾರತಕ್ಕೂ ಅದರ ಮುಂಚಿನ ಅವಧಿಯ ಭಾರತಕ್ಕೂ ಮೌಲಿಕವಾಗಿ ಅಪಾರ ವ್ಯತ್ಯಾಸ ಕಂಡುಬರುತ್ತದೆ. ಈ ವ್ಯತ್ಯಾಸಗಳನ್ನು ಪ್ರಜಾಸತ್ತೆಯ ಮೂರು ಸ್ತಂಭಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಲ್ಲಿ ಕಾಣುವಂತೆಯೇ, ನಾಲ್ಕನೆಯ ಸ್ತಂಭ ಎನ್ನಲಾಗುವ ಮಾಧ್ಯಮ ಜಗತ್ತು ಸಂಪೂರ್ಣ ರೂಪಾಂತರಕ್ಕೊಳಗಾಗಿರುವುದು ಸಮಕಾಲೀನ ಸತ್ಯ.

ಈಗ ತುರ್ತುಪರಿಸ್ಥಿತಿ ಎನ್ನುವ ಕರಾಳ ಅಧ್ಯಾಯಕ್ಕೆ 50 ತುಂಬಿದೆ. ಬಿಜೆಪಿ  ಈ ಸಂದರ್ಭವನ್ನು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿದ ಕರಾಳ ಅಧ್ಯಾಯ ಎಂದು ಬಣ್ಣಿಸಿ ದೇಶವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ. ವಾಸ್ತವವಾಗಿ 1975ರಲ್ಲಿ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಮೌಲ್ಯಗಳ ಹತ್ಯೆಯ ಪ್ರಯತ್ನವಾಗಿತ್ತು. ಹತ್ಯೆಯಾದ ಅಥವಾ ಇಲ್ಲವಾಗುವ ಯಾವುದೇ ವಿದ್ಯಮಾನವು ಮರಳಿ ಸ್ಥಾಪನೆಯಾಗುವುದಿಲ್ಲ ಎಂಬ ವೈಚಾರಿಕತೆಯ ನೆಲೆಯಲ್ಲಿ ಯೋಚಿಸಿದಾಗ, 1977ರಲ್ಲಿ ಮರುಸ್ಥಾಪನೆಗೊಂಡ ಈ ಮೌಲ್ಯಗಳು ಭಾರತವನ್ನು ಯಾವ ದಿಕ್ಕಿನಲ್ಲಿ ನಡೆಸಿಕೊಂಡು ಬಂದಿವೆ ಎಂದು ಪರಾಮರ್ಶೆ ಮಾಡಲು ಸಾಧ್ಯವಾಗುತ್ತದೆ. ಈ ಕರಾಳ ಅಧ್ಯಾಯವನ್ನು ಮರಳಿ ನೆನೆಯುವುದು ಭಾರತವನ್ನು, ಸಂವಿಧಾನವನ್ನು ಗೌರವಿಸುವ ಪ್ರತಿಯೊಬ್ಬರ ನೈತಿಕ ಕರ್ತವ್ಯ , ಆದರೆ ಈ ನೆನಪುಗಳ ನಡುವೆ ಆತ್ಮಾವಲೋಕನ ಸಾಧ್ಯವಾಗದಿದ್ದರೆ, ಕೇವಲ ದೋಷಾರೋಪಗಳಲ್ಲಿ ಪರ್ಯವಸಾನ ಹೊಂದುವ ಆತ್ಮವಂಚನೆಯಾಗುತ್ತದೆ.

Kothur Manjunath : ಸುರ್ಜೇವಾಲಾ ಕೇಳಿದ ಪ್ರಶ್ನೆಗೆ ಮೀಟ್ರು ಆಫ್ ಆಗೋಯ್ತು?  #pratidhvani

ಮಿಲೆನಿಯಂ ಡಿಜಿಟಲ್‌ ಯುಗದಲ್ಲಿ

ವರ್ತಮಾನದ ಡಿಜಿಟಲ್‌ ಯುಗದಲ್ಲಿ ಭಾರತ ಮತ್ತೊಂದು ಹೊಸ ಪರ್ವದತ್ತ ಹೊರಳುತ್ತಿರುವಾಗ, ನವ ಉದಾರವಾದ, ಕಾರ್ಪೋರೇಟ್‌ ಮಾರುಕಟ್ಟೆ, ಡಿಜಿಟಲ್‌ ಬಂಡವಾಳಶಾಹಿ ಆರ್ಥಿಕತೆಯ ನೀತಿಗಳು ದೇಶವನ್ನು ಭಿನ್ನ ಹಾದಿಯಲ್ಲಿ ಕರೆದೊಯ್ಯುತ್ತಿರುವಾಗ, ಈ ಚೌಕಟ್ಟಿನಿಂದ ಹೊರಬಂದು ತಳಸಮಾಜದತ್ತ ಮತ್ತು ಮೇಲ್ಪದರದ ಹಿತವಲಯದ ಸಮಾಜದತ್ತ ನೋಡುವ ಅವಶ್ಯಕತೆಯನ್ನು ಮನಗಾಣಬೇಕಿದೆ. ಏಕೆಂದರೆ ತಳಸಮಾಜದಲ್ಲಿ ಪಿತೃಪ್ರಧಾನತೆ, ಸ್ತ್ರೀ ದ್ವೇಷ, ಜಾತಿ ಶೋಷಣೆ, ಅಸ್ಪೃಶ್ಯತೆ, ಅಸಮಾನತೆ, ಬಡತನ ಮತ್ತು  ಮಧ್ಯಕಾಲೀನ ಯುಗದ ನಂಬಿಕೆಗಳು ಮೌಢ್ಯಾಚರಣೆಗಳು ರಾರಾಜಿಸುತ್ತಿರುವುದನ್ನು ಕಾಣಬಹುದು. ಮೇಲ್ಪದರದ/ಸುಶಿಕ್ಷಿತ ಹಿತವಲಯದ ಸಮಾಜದತ್ತ ನೋಡಿದಾಗ, ತಳಸಮಾಜದ ತಲ್ಲಣಗಳಿಗೆ, ನೋವು ಸಂಕಷ್ಟಗಳಿಗೆ ವಿಮುಖವಾಗಿ, ನವ ಉದಾರವಾದದ ಭ್ರಮಾಧೀನತೆಗೆ ಒಳಗಾಗಿ, ಕೋಶೀಕರಣಕ್ಕೊಳಗಾಗಿರುವ (Cellularisation), ಬೌದ್ಧಿಕವಾಗಿ ನಿಷ್ಕ್ರಿಯವಾಗಿರುವ ವಿದ್ಯಮಾನವನ್ನೂ ಕಾಣಬಹುದು.

ದೇಶದ ಮುಖ್ಯವಾಹಿನಿಯ ಮುದ್ರಣ ವಿದ್ಯುನ್ಮಾನ ಮಾಧ್ಯಮಗಳು ಬಹುತೇಕವಾಗಿ ಈ ಮೇಲ್ಪದರದ ಸಮಾಜಕ್ಕೆ ಪೂರಕವಾದ ವಾತಾವರಣವನ್ನು ಬೌದ್ಧಿಕ ನೆಲೆಯಲ್ಲಿ ವ್ಯವಸ್ಥಿತವಾಗಿ ಸೃಷ್ಟಿಸಿ ಪೋಷಿಸುತ್ತಿವೆ. ಹಾಗಾಗಿ ಮಾರುಕಟ್ಟೆ ಆರ್ಥಿಕತೆಯ ಪರಿಣಾಮವಾಗಿ ಶ್ರೀಸಾಮಾನ್ಯರ ಜೀವನ/ಜೀವನೋಪಾಯ, ತಳಸಮಾಜದ ಸಾಮಾಜಿಕ ಬದುಕು, ಸಾಂಸ್ಕೃತಿಕ ವಲಯಗಳು, ಶೈಕ್ಷಣಿಕ/ಬೌದ್ಧಿಕ ಜಗತ್ತು ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದ್ದರೂ, ಆರ್ಥಿಕ ನೀತಿಗಳ ಪರಿಣಾಮವಾಗಿ ಪರಿಸರ, ನೆಲ-ಜಲ-ಅರಣ್ಯ ಸಂಪತ್ತು, ನೈಸರ್ಗಿಕ ಸಂಪನ್ಮೂಲಗಳು ವಿನಾಶದತ್ತ ಸಾಗುತ್ತಿದ್ದರೂ, ಈ ಗಂಭೀರ ಒಳಬಿರುಕುಗಳನ್ನು ಮುಕ್ತವಾಗಿ ಸಾರ್ವಜನಿಕ ಸಂಕಥನದಲ್ಲಿ ಒಳಗೊಳ್ಳುವ ಕ್ಷಮತೆ ಮತ್ತು ವ್ಯವಧಾನವನ್ನೂ ಮಾಧ್ಯಮಗಳು ಕಳೆದುಕೊಂಡಿವೆ. ಸಾಂವಿಧಾನಿಕ ಮೌಲ್ಯಗಳನ್ನು ಆಡಳಿತಾತ್ಮಕ ನೆಲೆಯಲ್ಲಿ, ಆಚರಣಾತ್ಮಕ ಚೌಕಟ್ಟಿನೊಳಗಿಟ್ಟು ಮೌಲ್ಯಮಾಪನ ಮಾಡುವ ಶೈಕ್ಷಣಿಕ/ಬೌದ್ಧಿಕ (Academic) ವಲಯ ಸತ್ವ ಕಳೆದುಕೊಂಡಿದೆ.

ಮತ್ತೊಂದೆಡೆ ಈ ತಲ್ಲಣಗಳಿಗೆ ಸ್ಪಂದಿಸಲೇಬೇಕಾದ, ರಾಜಕೀಯ ಅಧಿಕಾರದ ಕಾರಣಕ್ಕಾಗಿಯಾದರೂ, ಸೂಕ್ಷ್ಮತೆಯಿಂದ ಪ್ರತಿಕ್ರಿಯಿಸಬೇಕಾದ ರಾಜಕೀಯ ಪಕ್ಷಗಳು, ಎಡಪಕ್ಷಗಳನ್ನು ಹೊರತುಪಡಿಸಿ, ಈ ಗಂಭೀರ ಒಳಬಿರುಕುಗಳನ್ನು ಸಾರ್ವಜನಿಕ ಸಂಕಥನದ ಭಾಗವಾಗಿ ಪರಿಗಣಿಸುತ್ತಲೇ ಇಲ್ಲ. ಆಡಳಿತಾರೂಢ ಬೂರ್ಷ್ವಾ ಪಕ್ಷಗಳು (ಬಂಡವಾಳಿಗ ಪಕ್ಷಗಳು) ಈ ಬಿರುಕುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಾ, ಬಳಸಿಕೊಳ್ಳುತ್ತಾ, ಅಪಾರ ಸಂಖ್ಯೆಯ ದುಡಿಯುವ ಜನತೆಯನ್ನು, ರೈತ-ಕಾರ್ಮಿಕ ಸಮುದಾಯಗಳನ್ನು, ರಾಜಕೀಯ ಕಾಲಾಳು ಪಡೆಗಳಾಗಿ ಪರಿವರ್ತಿಸಿ ತಮ್ಮ ಅಧಿಕಾರ ರಾಜಕಾರಣವನ್ನು ವಿಸ್ತರಿಸಿಕೊಳ್ಳುತ್ತಿವೆ. ಈ ಸನ್ನಿವೇಶದಲ್ಲಿ ಅಸಮಾನತೆಗಳ ವಿರುದ್ಧ, ಅನ್ಯಾಯ, ದೌರ್ಜನ್ಯ, ತಾರತಮ್ಯಗಳ ವಿರುದ್ಧ ರೂಪುಗೊಳ್ಳುವ ಜನಾಂದೋಲನಗಳು ಕೆಲವೆಡೆ ರಾಜಕೀಯ ಪ್ರಭಾವಕ್ಕೊಳಗಾಗಿ, ಕೆಲವೊಮ್ಮೆ ಸೈದ್ಧಾಂತಿಕ ವಿಘಟನೆಯ ಕಾರಣದಿಂದ, ತಮ್ಮ ಮೊನಚು ಕಳೆದುಕೊಳ್ಳುತ್ತಿವೆ.

ಹಾಗಾಗಿಯೇ ಪರಿಸರದಿಂದ ಮಾರುಕಟ್ಟೆ ಆರ್ಥಿಕತೆಯವರೆಗೆ, ಶಿಕ್ಷಣವನ್ನೂ ಒಳಗೊಂಡಂತೆ, ಯಾವುದೇ ನೆಲೆಯಲ್ಲೂ ಪರ್ಯಾಯ ಮಾದರಿಗಳು ಹೊರಬರುತ್ತಿಲ್ಲ. ಎಲ್ಲರನ್ನೂ ಒಳಗೊಳ್ಳುವಿಕೆಯ (Inclusiveness) ಉದಾತ್ತ ಚಿಂತನೆಗಳು ರಾಜಕಾರಣದಲ್ಲಿ ಪ್ರಸ್ತುತತೆಯನ್ನೇ ಕಳೆದುಕೊಂಡಿದ್ದರೆ, ಜನಾಂದೋಲನಗಳ ನಡುವೆ ಇಂದಿಗೂ ಸಹ ಹಲವು ಅಡೆತಡೆಗಳನ್ನು ಎದುರಿಸುತ್ತಿವೆ. ತತ್ವ-ಸಿದ್ಧಾಂತಗಳನ್ನು ದಾಟಿ, ಸಮಾಜಮುಖಿಯಾದ ಒಂದು ಪರ್ಯಾಯ ಸಮಾಜ ಮತ್ತು ಆರ್ಥಿಕತೆಯನ್ನು ರೂಪಿಸಬೇಕಾದ ಅನಿವಾರ್ಯತೆ ಹೆಚ್ಚಾಗುತ್ತಿರುವಂತೆಲ್ಲಾ, ಪರ್ಯಾಯ ಚಿಂತನಾಧಾರೆಗಳು ಅಸ್ಮಿತೆ-ಅಸ್ತಿತ್ವದ ನೆಲೆಯಲ್ಲಿ ಸಾಂಘಿಕವಾಗಿ ಶಿಥಿಲವಾಗುತ್ತಿವೆ. ತತ್ಪರಿಣಾಮವಾಗಿ ಸಮಾಜದಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ, ಅತ್ಯಾಚಾರ, ಮಹಿಳಾ-ಜಾತಿ-ಧಾರ್ಮಿಕ ದೌರ್ಜನ್ಯಗಳು, ಅಸಮಾನತೆಯ ನೆಲೆಗಳು, ಸಮಗ್ರತೆಯನ್ನು ಕಳೆದುಕೊಂಡು, ಸಾಪೇಕ್ಷ ನೆಲೆಯಲ್ಲಿ (Relative terms) ಮಾತ್ರವೇ ಚರ್ಚೆಗೊಳಗಾಗುತ್ತಿವೆ.

1975ರ ಅವಲೋಕನದ ಅವಶ್ಯಕತೆ

ಈ ವಿಷಮ ಸನ್ನಿವೇಶದಲ್ಲಿ ತುರ್ತುಪರಿಸ್ಥಿತಿಯನ್ನು ಕುರಿತು ನಡೆಸುವ ಸಾರ್ವಜನಿಕ ಚರ್ಚೆಗಳನ್ನು ಎರಡು ಆಯಾಮಗಳಲ್ಲಿ ನಡೆಸಬೇಕಾಗುತ್ತದೆ. ಮೊದಲನೆಯದು 1975ರ ಪೂರ್ವದ ಭಾರತ, ಎರಡನೆಯದು 1980ರ ನಂತರದ ಜಾಗತೀಕರಣದ ಭಾರತ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ರೂಪಾಂತರ ಹೊಂದಿರುವ ಸಮಾಜವನ್ನು ಭವಿಷ್ಯದ ದೃಷ್ಟಿಕೋನದಿಂದ, ಭೂತಕಾಲದ ಒಳನೋಟದೊಂದಿಗೆ, ವರ್ತಮಾನದ ವಾಸ್ತವತೆಗಳ ನೆಲೆಯಲ್ಲಿ ಮರುವಿಮರ್ಶೆಗೊಳಪಡಿಸಬೇಕಿದೆ. ಜನಸಂಖ್ಯೆಯಲ್ಲಿ ಶೇಕಡಾ 40ರಷ್ಟಿರುವ ʼಮಿಲೆನಿಯಂʼ ಮಕ್ಕಳ ಹಾಗೂ ಮುಂದಿನ ತಲೆಮಾರುಗಳ ದೃಷ್ಟಿಯಿಂದ ಮರುವಿಮರ್ಶೆ/ಪುನರ್‌ ನಿರ್ವಚನೆ ನಡೆಸದೆ ಹೋದರೆ ಇತಿಹಾಸಕ್ಕೆ ಅಪಚಾರವಾಗುವುದಷ್ಟೇ ಅಲ್ಲದೆ ಸಮಕಾಲೀನ ಭಾರತವನ್ನೂ ವಂಚಿಸಿದಂತಾಗುತ್ತದೆ.

ಒಂದು ಕಟು ವಾಸ್ತವವನ್ನು ಒಪ್ಪಲೇಬೇಕೀದೆ. ಅದು ಭಾರತ ಬದಲಾಗಿದೆ-ಬದಲಾಗುತ್ತಿದೆ-ಬದಲಾಗಲಿದೆ. ಈ ಬದಲಾವಣೆಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗಿಟ್ಟು ನೋಡಿದಾಗ, ಸಂವಿಧಾನದ ಮೌಲ್ಯಗಳು ಕ್ರಮೇಣ ಶಿಥಿಲವಾಗುತ್ತಿರುವುದು ಕಾಣುತ್ತದೆ. ಸಂವಿಧಾನ ಬೋಧಿಸುವ ಸಮಾನತೆ, ಭ್ರಾತೃತ್ವ, ಬಹುತ್ವದ ಔದಾತ್ಯಗಳು ತಳಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೋಟದ ಮೂಲಕ ನೋಡಿದಾಗ, ಈ ಸವೆತ ಸ್ಪಷ್ಟವಾಗಿ ಗೋಚರಿಸುತ್ತದೆ. ಬದಲಾವಣೆ ಎಂಬ ಪ್ರಕ್ರಿಯೆ ಸುಧಾರಣೆಯ ಕ್ರಿಯಾಶೀಲತೆಯನ್ನು ಪಡೆಯದೆ ಹೋದರೆ, ಸಮಾಜಗಳು ಪರಿವರ್ತನೆಯ ಹಾದಿಯನ್ನು ಕ್ರಮಿಸಲು ಸಾಧ್ಯವಾಗುವುದಿಲ್ಲ ಎಂಬ ಸಮಾಜಶಾಸ್ತ್ರೀಯ ಸೂತ್ರವನ್ನು ಅನುಸರಿಸುವಾಗ, 1980ರ ನಂತರದ ಭಾರತೀಯ ಸಮಾಜ ತನ್ನ ಶೈಕ್ಷಣಿಕ/ವೈಜ್ಞಾನಿಕ ಪ್ರಗತಿಯ ಹೊರತಾಗಿಯೂ, ವೈಚಾರಿಕ ನೆಲೆಯಲ್ಲಿ ಪ್ರಾಚೀನತೆಯ ಕಡೆ ವಾಲುತ್ತಿರುವುದು ಢಾಳಾಗಿ ಗೋಚರಿಸುತ್ತದೆ.

ಈ ಹಿಮ್ಮುಖ ಚಲನೆಯ ಕಾರಣಗಳನ್ನು ಶೋಧಿಸಿದಾಗ ಅಧಿಕಾರ ರಾಜಕಾರಣದ ವೈರುಧ್ಯಗಳನ್ನು ಗುರುತಿಸಲು ಸಾಧ್ಯವಾದೀತು. ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳು ಸಮಾಜವನ್ನು ಎಲ್ಲ ದಿಕ್ಕುಗಳಲ್ಲೂ ನಿರ್ದೇಶಿಸುತ್ತಿರುವ ಈ ಹೊತ್ತಿನಲ್ಲೂ, ವರ್ತಮಾನದ ಭಾರತ ಕಾಣುತ್ತಿರುವ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮಹಿಳಾ ಸಂಕುಲದ ಅಧೀನತೆ, ಜಾತಿ ಭೇದಗಳು, ಧಾರ್ಮಿಕ ಭಿನ್ನತೆಗಳು, ಶ್ರಮಜೀವಿಗಳ ದುಸ್ಥಿತಿ, ಅಲ್ಪಸಂಖ್ಯಾತರ ಅಭದ್ರತೆ ಹಾಗೂ ಮಾರುಕಟ್ಟೆ ಆರ್ಥಿಕತೆಯ ಜಗನ್ನಾಥರಥಕ್ಕೆ ಸಿಲುಕಿ ಜರ್ಜರಿತವಾಗುತ್ತಿರುವ ತಳಸಮಾಜದ ಬದುಕು ಹಾಗೂ ಇವೆಲ್ಲದರ ಪರಿಣಾಮವಾಗಿ ಸೃಷ್ಟಿಯಾಗುವ ದ್ವೇಷಾಸೂಯೆಗಳ ಸಾಂಸ್ಕೃತಿಕ-ರಾಜಕೀಯ ಸಿದ್ಧಮಾದರಿಗಳು ನಮ್ಮ ಆಲೋಚನಾ ವಿಧಾನವನ್ನು ನಿರ್ದೇಶಿಸುವುದು ಅನಿವಾರ್ಯವಾಗುತ್ತದೆ. ಹಿಂದು-ಮುಸ್ಲಿಂ ಅಥವಾ ಮೇಲ್ಜಾತಿ-ಕೆಳಜಾತಿ, ಪುರುಷ-ಮಹಿಳೆ, ಮಾಲಿಕ-ಶ್ರಮಿಕ ಈ ಸಂಬಂಧಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, 1975ಕ್ಕೂ ಮುಂಚಿನ ಭಾರತ ಪ್ರಗತಿಯ ಹಾದಿಯಲ್ಲಿರುವುದು ಕಂಡರೆ, 2025ರ ಭಾರತ ಪ್ರಾಚೀನತೆಗೆ ಹೊರಳುತಿರುವುದು ಕಾಣುತ್ತದೆ.

ವರ್ತಮಾನದ ಅವಲೋಕನ

1947ರ ಆಗಸ್ಟ್‌ 15ರ ನಡುರಾತ್ರಿ, ಸ್ವತಂತ್ರ-ಸಾರ್ವಭೌಮ ಭಾರತವು, ವಿಧಿಯೊಡನೆ ಅನುಸಂಧಾನ ನಡೆಸಿದಾಗ, 1950ರ ಜನವರಿ 26ರಂದು ಗಣತಂತ್ರ ಭಾರತವು, ವಿಶ್ವದ ಶ್ರೇಷ್ಠ ಸಂವಿಧಾನವನ್ನು ತನಗೆ ತಾನೇ ಅರ್ಪಿಸಿಕೊಂಡಾಗ, ಜನಮಾನಸದಲ್ಲಿ ಮೂಡಿದ್ದ ಭರವಸೆಗಳು ಏಕೆ ಹಂತಹಂತವಾಗಿ ಕುಸಿಯುತ್ತಿವೆ ? ತುರ್ತುಪರಿಸ್ಥಿತಿಯ ದಮನಕಾರಿ ವಾತಾವರಣದಲ್ಲೂ ಉಜ್ವಲ ನಾಳೆಗಳನ್ನು ಕಾಣಲು ಸಾಧ್ಯವಾಗಿದ್ದ ತಳಸಮಾಜಕ್ಕೆ ಇಂದೇಕೆ ಅನಿಶ್ಚಿತ ನಾಳೆಗಳು ಮುಖಾಮುಖಿಯಾಗುತ್ತಿವೆ ? 1970ರಲ್ಲಿ ತೆರೆದುಕೊಂಡ ಮಹಿಳಾ ವಿಮೋಚನೆಯ ಹಾದಿಗಳು, ಶ್ರಮಜೀವಿಗಳ ಸುಭದ್ರ ತಳಪಾಯಗಳು, ಶೋಷಿತ ಜನಸಮುದಾಯಗಳ ಸಮಾನತೆಯ ಆಶಯಗಳು, ಅಲ್ಪಸಂಖ್ಯಾತರ ಸುರಕ್ಷಿತ ಭಾವನೆಗಳು, 2025ರಲ್ಲಿ ಏಕೆ ಶಿಥಿಲವಾಗುತ್ತಿವೆ ? ಈ ನೈತಿಕ ಅವನತಿಗೆ , ಸಾಮಾಜಿಕ ಅಧಃಪತನಕ್ಕೆ ಹಾಗೂ ಸಾಂಸ್ಕೃತಿಕ ಪಾತಾಳ ಕುಸಿತಕ್ಕೆ ಕಾರಣ ಯಾರು ?

ಸಂವಿಧಾನದ ಫಲಾನುಭವಿ ಸಮಾಜದ ವರ್ಗಗಳೋ ? ಇಂದಿಗೂ ಪ್ರಜಾಸತ್ತಾತ್ಮಕ ಹಾದಿಯಲ್ಲೇ ಶಾಸನಸಭೆಗಳಿಗೆ ಆಯ್ಕೆಯಾಗುವ ಜನಪ್ರತಿನಿಧಿಗಳೋ ? ಆಧುನಿಕ ಶಿಕ್ಷಣ ಮತ್ತು ಬೌದ್ಧಿಕ ಸವಲತ್ತುಗಳ ಫಲಾನುಭವಿ ವಾರಸುದಾರರೋ ? ಈ ಜಟಿಲ ಪ್ರಶ್ನೆಗಳು ಎದುರಾದಾಗ ನಾವು ಮತ್ತೆ ಮತ್ತೆ ಗಾಂಧಿ, ಲೋಹಿಯಾ, ಅಂಬೇಡ್ಕರ್‌, ಮಾರ್ಕ್ಸ್‌ ಮೊದಲಾದ ದಾರ್ಶನಿಕರ ಕಡೆಗೆ ಹೊರಳುತ್ತೇವೆ. ಈ ದಾರ್ಶನಿಕರ ಸಿದ್ಧಾಂತಗಳು ಅಥವಾ ಸಾಂಸ್ಕೃತಿಕವಾಗಿ ಇಡೀ ದೇಶವನ್ನು ನಿರ್ದೇಶಿಸಿದ ವಿವೇಕಾನಂದ, ಠಾಗೋರ್‌, ನಾರಾಯಣಗುರು ಮುಂತಾದವರಿಗೆ ಮುಖಾಮುಖಿಯಾಗುತ್ತೇವೆ. ಇವರು ಪ್ರತಿಪಾದಿಸಿದ/ಬೋಧಿಸಿದ ತತ್ವ ಸಿದ್ದಾಂತಗಳು ಭಾರತೀಯ ಸಮಾಜವನ್ನು ಗುರಿ ತಲುಪಿಸುವಲ್ಲಿ ವಿಫಲವಾಗಿದೆಯೇ ಅಥವಾ ಈ ತಾತ್ವಿಕ ನೆಲೆಗಳನ್ನು ಸ್ವಾರ್ಥ ರಾಜಕಾರಣಕ್ಕಾಗಿ, ವ್ಯಕ್ತಿಗತ ಉನ್ನತಿಗಾಗಿ, ವೈಯುಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಿಕೊಂಡು ಬೆಳೆದಿರುವ ಸಮಾಜ, ಇನ್ನೂ ಸಹ ಈ ಸೈದ್ಧಾಂತಿಕ ಒಳಸೂಕ್ಷ್ಮಗಳನ್ನು ಗ್ರಹಿಸಲು ಅರ್ಥೈಸಲು ವಿಫಲವಾಗಿದೆಯೇ ?

ವಿಭಿನ್ನ ಆಯಾಮಗಳಲ್ಲಿ ವಸ್ತುಸ್ಥಿತಿ

ಸಾಮಾಜಿಕ ಮತ್ತು ಸಾಂಸ್ಕೃತಿಕ ಜಗತ್ತಿನ ಅವಲೋಕನ ಮಾಡಿದಾಗ, 1975ರ ಮುಂಚಿನ ಭಾರತದಲ್ಲಿ ಪ್ರಭುತ್ವವನ್ನು, ಆಳ್ವಿಕೆಯನ್ನು ಹಾಗೂ ಸರ್ಕಾರಗಳ ಲೋಪಗಳನ್ನು ವಿಮರ್ಶಾತ್ಮಕವಾಗಿ ನೋಡುವ, ಟೀಕಿಸುವ ಮತ್ತು ವಿರೋಧಿಸುವ ಸಾಂವಿಧಾನಿಕ ಅಭಿವ್ಯಕ್ತಿಗಳಿಗೆ ಹೆಚ್ಚಿನ ಅವಕಾಶ ಮತ್ತು ಸ್ವಾತಂತ್ರ್ಯ ಇದ್ದುದನ್ನು ಗುರುತಿಸಬಹುದು. ಸಾಹಿತ್ಯಿಕ ಕೃತಿಗಳ ಮೂಲಕ, ರಂಗಭೂಮಿ-ಬೀದಿ ನಾಟಕಗಳ ಮೂಲಕ, ಚಲನಚಿತ್ರಗಳ ಮೂಲಕ ಭಿನ್ನ ಸೈದ್ಧಾಂತಿಕ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನಗಳು ಹೇರಳವಾಗಿದ್ದವು. ಈ ಒಂದು ಪರಂಪರೆಯೇ, ರಾಜಕೀಯ ಪ್ರತಿರೋಧಕ್ಕಿಂತಲೂ ಹೆಚ್ಚಾಗಿ, ತುರ್ತುಪರಿಸ್ಥಿತಿಯ ವಿರುದ್ಧ ಜನಾಭಿಪ್ರಾಯ ಮೂಡಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದ್ದುದು ನಿರ್ವಿವಾದ ಅಂಶ. ಈ ಅಭಿವ್ಯಕ್ತಿ ಮತ್ತು ದನಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ತುರ್ತುಪರಿಸ್ಥಿತಿ ಅತ್ಯಂತ ದಮನಕಾರಿ, ಪ್ರಜಾತಂತ್ರ ವಿರೋಧಿ ಆಡಳಿತ ನೀತಿ ಮತ್ತು ಕಾನೂನುಗಳಿಗೆ ಅವಕಾಶ ಕಲ್ಪಿಸಿತ್ತು.

ಮತೀಯ ಅಥವಾ ಧಾರ್ಮಿಕ ನೆಲೆಯಲ್ಲಿ ನೋಡಿದಾಗ, 1970ರ ದಶಕದಲ್ಲಿ ನಾವು ಕಂಡಿದ್ದ ಧಾರ್ಮಿಕ ಸಹಿಷ್ಣುತೆ, ಸಮನ್ವಯದ ಭಾವ, ಕೂಡಿ ಬಾಳುವ ಮನಸ್ಥಿತಿಗೂ ಇಂದಿಗೂ ಅಜಗಜಾಂತರ ವ್ಯತ್ಯಾಸವನ್ನು ಗುರುತಿಸಬಹುದು. ಅಂದು ಪೂಜಾ ಕೇಂದ್ರಗಳು, ಶ್ರದ್ದಾ ಕೇಂದ್ರಗಳು, ಆಧ್ಯಾತ್ಮಿಕ ನೆಲೆಗಳು ಜನಸಾಮಾನ್ಯರ ತಲ್ಲಣಗಳಿಗೆ  ಸ್ಪಂದಿಸುವ ನೆಮ್ಮದಿಯ ತಾಣಗಳಾಗಿ ಅಥವಾ ಸಾಂತ್ವನದ ಆಸರೆಗಳಾಗಿ ಕಾಣುತ್ತಿದ್ದವು. ರಾಮ ಜನರ ಎದೆಯೊಳಗಿದ್ದ, ಬುದ್ಧ ತಳಸಮುದಾಯಗಳ ಪ್ರಜ್ಞೆಯೊಳಗಿದ್ದ, ಪ್ರವಾದಿಗಳು ಜನರ ನಿತ್ಯಬದುಕಿನ ಜಂಜಾಟಗಳ ನಡುವೆ ಸ್ಥಾವರಗಳಲ್ಲಿ ನೆಲೆಗೊಂಡಿದ್ದರು. ಜಾತಿ ವೈರುಧ್ಯ, ಧಾರ್ಮಿಕ ಭಿನ್ನತೆ, ಮತೀಯ ಬೇಲಿಗಳ ನಡುವೆಯೂ ತಳಸಮಾಜದಲ್ಲಿ ಭಾವೈಕ್ಯತೆ ಮನೆ ಮಾಡಿತ್ತು. ಅಂಬೇಡ್ಕರಾದಿಯಾಗಿ ಸ್ವಾತಂತ್ರ್ಯದ ಪೂರ್ವಸೂರಿಗಳ ಸೆಕ್ಯುಲರ್‌ ಆಶಯಗಳಿಗೆ ಸಾಮಾನ್ಯ ಜನರ ನಡುವೆ ಒಂದು ಗೌರವಯುತ ಸ್ಥಾನ ಇತ್ತು.

ಆದರೆ 1980ರ ನಂತರದ ಯುಗದಲ್ಲಿ ಪೂಜಾಸ್ಥಳಗಳು ಸಂಘರ್ಷದ ಕೇಂದ್ರಗಳಾಗಿವೆ, ಮಂದಿರ-ಮಸೀದಿ-ಚರ್ಚುಗಳು ರಾಜಕೀಯ ತತ್ವ ಸಿದ್ದಾಂತಗಳ ನೊಗಭಾರಕ್ಕೆ ಸಿಲುಕಿ ರಾಜಕೀಯ ಅಂಗಳಗಳಾಗಿವೆ. ಆಧ್ಯಾತ್ಮಿಕ ಕೇಂದ್ರಗಳು ಬಂಡವಾಳಶಾಹಿ ಮಾರುಕಟ್ಟೆಯ ಮತ್ತು ಅಧಿಕಾರ ರಾಜಕಾರಣದ ಆಡುಂಬೊಲಗಳಾಗಿವೆ. ವಸತಿ ಬಡಾವಣೆಗಳೂ ಸಹ ಮತೀಯ-ಜಾತಿಗ್ರಸ್ತ ಮನಸ್ಥಿತಿಯನ್ನು ಬಿಂಬಿಸುವ ರೀತಿಯಲ್ಲಿ ನಿರ್ಮಾಣವಾಗುತ್ತಿವೆ. ಒಂದೇ ಬೀದಿಯಲ್ಲಿ ಆಟವಾಡುತ್ತಾ ಬೆಳೆದ ಒಂದು ತಲೆಮಾರು, ಇಂದು ಈ ಬೇಲಿಗಳ ನಡುವೆಯೇ ಮುಂದಿನ ಪೀಳಿಗೆಯನ್ನು ಪೋಷಿಸುತ್ತಾ ಬದುಕುವಂತಾಗಿದೆ. ಸಾಮಾನ್ಯ ಜನರ ಹಿಡಿತಕ್ಕೆ, ಗ್ರಹಿಕೆಗೆ ನಿಲುಕದ ರೀತಿಯಲ್ಲಿ ಈ ಧಾರ್ಮಿಕ-ಆಧ್ಯಾತ್ಮಿಕ ಶ್ರದ್ಧಾಕೇಂದ್ರಗಳು ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟುವ, ದ್ವೇಷ ರಾಜಕಾರಣವನ್ನು ಪೋಷಿಸುವ ನೆಲೆಗಳಾಗಿ ಪರಿವರ್ತನೆಯಾಗಿವೆ. ಈ ಬದಲಾವಣೆಯೇ ವರ್ತಮಾನ ಭಾರತದ ಸಕಲ ಸಮಸ್ಯೆಗಳ ಮೂಲ ಆಗಿರುವುದನ್ನೂ ಸೂಕ್ಷ್ಮವಾಗಿ ಪರಾಮರ್ಶಿಸಬೇಕಿದೆ.

ಆದರೆ ಈ ಕರಾಳ ಯುಗವನ್ನು ದಾಟಿ, ಪ್ರಜಾಪ್ರಭುತ್ವವನ್ನು ಪುನರ್‌ ಸ್ಥಾಪಿಸಲಾದರೂ, 1980ರ ಜಾಗತೀಕರಣ ಯುಗದಲ್ಲಿ, ವಿಶೇಷವಾಗಿ ಹೊಸ ಸಹಸ್ರಮಾನದ ಸಾಂಸ್ಕೃತಿಕ ರಾಜಕಾರಣದ ವಾತಾವರಣದಲ್ಲಿ ಈ ಸಾಂಸ್ಕೃತಿಕ-ಸಾಹಿತ್ಯಿಕ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ ಸತತವಾಗಿ ದಾಳಿಗೊಳಗಾಗುತ್ತಲೇ ಇರುವುದನ್ನೂ ಗುರುತಿಸಬೇಕಿದೆ. ಸಫ್ದಾರ್‌ ಹಷ್ಮಿ ಅವರಂತಹ ಮೇರು ಕಲಾವಿದನ ಹತ್ಯೆ ಒಂದು ನೇರ ನಿದರ್ಶನ. ಮಿಲೆನಿಯಂ ಯುಗದಲ್ಲಿ ಈ ಸಂವಹನ ಮಾಧ್ಯಮಗಳೆಲ್ಲವೂ, ಬಹುಮಟ್ಟಿಗೆ ರಂಗಭೂಮಿಯನ್ನು ಹೊರತುಪಡಿಸಿ, ಬಂಡವಾಳಶಾಹಿ ಮಾರುಕಟ್ಟೆಯ ಪ್ರಭಾವಕ್ಕೊಳಗಾಗಿರುವುದು ಒಂದಾದರೆ, ಮತ್ತೊಂದೆಡೆ ಸಾಂಸ್ಕೃತಿಕ ರಾಜಕಾರಣದ ಪ್ರಭಾವಕ್ಕೊಳಗಾಗಿ ತಮ್ಮ ಸ್ವಂತಿಕೆ-ಸೃಜನಶೀಲತೆಯನ್ನು ಕಳೆದುಕೊಂಡು ಬೆತ್ತಲಾಗಿರುವ ಸನ್ನಿವೇಶವನ್ನೂ ಕಾಣುತ್ತಿದ್ದೇವೆ. ವಂದಿಮಾಗಧ ಪರಂಪರೆಯನ್ನು ಮರಳಿ ಸ್ಥಾಪಿಸುವ ಸಾಂಸ್ಕೃತಿಕ ಪ್ರಯತ್ನಗಳಿಗೆ ವರ್ತಮಾನದ ಸಮಾಜ ಸಾಕ್ಷಿಯಾಗಿದೆ.

ಜನಾಂದೋಲನಗಳ ಅವಲೋಕನ

ತುರ್ತುಪರಿಸ್ಥಿತಿಯನ್ನು ಬಹುಮುಖ್ಯವಾಗಿ ನೆನೆಯಬೇಕಿರುವುದು ಆ ಕರಾಳ ದಿನಗಳಲ್ಲಿ ಜನಾಂದೋಲನಗಳನ್ನು, ಸಾರ್ವಭೌಮ ಜನತೆಯ ಪ್ರತಿರೋಧದ ದನಿಗಳನ್ನು ಹತ್ತಿಕ್ಕುವ ಪ್ರಯತ್ನಗಳಿಗಾಗಿ. ಭಾರತದ ಪ್ರಜಾತಂತ್ರ ಮತ್ತು ಸಂವಿಧಾನವನ್ನು ಸಾಮಾನ್ಯ ಜನರ ನಡುವೆ ಗುರುತಿಸುವ ಒಂದು ಪರಂಪರೆಗೆ ಅಂದು ಧಕ್ಕೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ನೋಡಿದಾಗ , 1975ರ ಮುಂಚಿನ ದಿನಗಳಲ್ಲಿ ರೂಪುಗೊಂಡ ಜನಾಂದೋಲನಗಳು ದಲಿತ-ಮಹಿಳೆ-ಅಲ್ಪಸಂಖ್ಯಾತ-ರೈತಾಪಿ-ಕಾರ್ಮಿಕ-ವಿದ್ಯಾರ್ಥಿ ಯುವ ಸಮೂಹಗಳನ್ನು ಸಂಘಟಿಸುವ ಮತ್ತು ಆಳ್ವಿಕೆಯ ಜನವಿರೋಧಿ ನೀತಿಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಒಂದು ಪರಂಪರೆಯನ್ನು ಸೃಷ್ಟಿಸಿದ್ದವು. 1965-75ರ ದಶಕದಲ್ಲಿ ನಾಡಿನ ಮೂಲೆಮೂಲೆಗಳಲ್ಲೂ ಪ್ರತಿಧ್ವನಿಸಿದ ಈ ಹೋರಾಟಗಳನ್ನು ಪ್ರಧಾನವಾಗಿ ದಲಿತ ಚಳುವಳಿ, ಮಹಿಳಾ ಆಂದೋಲನ ಮತ್ತು ಕಾರ್ಮಿಕ ಸಂಘಟನೆಗಳ ಹೋರಾಟಗಳಲ್ಲಿ ಗುರುತಿಸಬಹುದು. ಈ ಹೋರಾಟಗಳು ಭವಿಷ್ಯ ಭಾರತದ ಪ್ರಜಾಪ್ರಭುತ್ವಕ್ಕೆ ಬುನಾದಿಯಾಗಿ ಪರಿಣಮಿಸಿದ್ದವು. ಈ ಧ್ವನಿಗಳನ್ನು ಹತ್ತಿಕ್ಕುವ ತುರ್ತುಪರಿಸ್ಥಿತಿ ಸಹಜವಾಗಿಯೇ ಜನಾಕ್ರೋಶಕ್ಕೆ ಮಣಿಯಬೇಕಾಯಿತು.

ಆದರೆ 1980ರ ನಂತರದ ಜಾಗತೀಕರಣ ಯುಗದತ್ತ ಹೊರಳಿದಾಗ ನಮಗೆ ಕಾಣುತ್ತಿರುವುದೇನು ? ಈ ನವ ಯುಗದಲ್ಲಿ ಯಾವುದೇ ಜನಪರ ಹೋರಾಟಗಳೂ ತಾರ್ಕಿಕ ಅಂತ್ಯ ತಲುಪಲು ಸಾಧ್ಯವಾಗಿಲ್ಲ. ಹೋರಾಟದ ದನಿಗಳು ವ್ಯವಸ್ಥೆಯೊಳಗೆ ಲೀನವಾಗಿರುವುದನ್ನು, ಆಳ್ವಿಕೆಯೊಡನೆ ರಾಜಿಯಾಗಿರುವುದನ್ನು ಗುರುತಿಸುತ್ತಲೇ ಮತ್ತೊಂದೆಡೆ ಪ್ರತಿರೋಧದ ದನಿಗಳನ್ನೇ ಹತ್ತಿಕ್ಕುವ ಕರಾಳ ಶಾಸನಗಳು ಇಂದಿಗೂ ಬಳಕೆಯಾಗುತ್ತಿರುವುದನ್ನು ಕಾಣುತ್ತಿದ್ದೇವೆ. 1970ರಲ್ಲಿ ಕಂಡಂತಹ ಜನಾಂದೋಲನಗಳ ಏಕೀಕರಣದ ಅಥವಾ ಕ್ರೋಢೀಕರಣದ ನೆಲೆಗಳೆಲ್ಲವೂ ಛಿದ್ರವಾಗಿದ್ದು, ಎಲ್ಲ ಸ್ತರ-ವಲಯಗಳಲ್ಲೂ ಸಾಂಘಿಕ ವಿಘಟನೆ ಹೆಚ್ಚಾಗಿರುವುದನ್ನು 80ರ ದಶಕದಿಂದಲೇ ಗುರುತಿಸಬಹುದು. ಅದೇ ತತ್ವ ಸಿದ್ಧಾಂತಗಳು ಇಂದಿಗೂ ಧ್ವನಿಸುತ್ತಿದ್ದರೂ ಅವುಗಳಿಂದ ರೂಪುಗೊಳ್ಳಬೇಕಾದ ಕ್ರಾಂತಿಕಾರಕ ಪರಿವರ್ತನೆಯ ದನಿಗಳು ಕ್ರಮೇಣ ಉಡುಗಿಹೋಗುತ್ತಿವೆ ಅಥವಾ ಸರ್ಕಾರಗಳ ಕರಾಳ ಶಾಸನಗಳಿಗೆ ತುತ್ತಾಗಿ ಅಪ್ರಸ್ತುತವಾಗುತ್ತಿವೆ. ನವ ಉದಾರವಾದ-ಸಾಂಸ್ಕೃತಿಕ ರಾಜಕಾರಣದ ಅಪಾಯಗಳ ಹೊರತಾಗಿಯೂ, ಒಂದು ಸಮಗ್ರ ಜನಾಂದೋಲನವನ್ನು ಕಟ್ಟಲು ಸಾಧ್ಯವಾಗಿಲ್ಲ ಎನ್ನುವುದು ವಾಸ್ತವ. ದೆಹಲಿಯ ರೈತ ಮುಷ್ಕರ ಒಂದು ಅಪವಾದ ಎನ್ನಬಹುದು. ಇದು ಜನಾಂದೋಲನಗಳ ಸಾಂಘಿಕ ವೈಫಲ್ಯವೇ ಅಥವಾ ಸೈದ್ಧಾಂತಿಕ ಹಿನ್ನಡೆಯೇ ಅಥವಾ ಆಳ್ವಿಕೆಯ ದಬ್ಬಾಳಿಕೆಯೇ ಎನ್ನುವುದು ಚರ್ಚೆಗೊಳಗಾಗಬೇಕಾದ ಅಂಶ.

ಮೌಲ್ಯ ಮತ್ತು ನೈತಿಕತೆಯ ನೆಲೆಯಲ್ಲಿ

ಕೊನೆಯದಾಗಿ ಸಾಂವಿಧಾನಿಕ ನೈತಿಕತೆ ಮತ್ತು ಮೌಲ್ಯಯುತ-ನೈತಿಕ ರಾಜಕಾರಣದ ಪ್ರಶ್ನೆ. ಈ ಎರಡೂ ಉದಾತ್ತ ಲಕ್ಷಣಗಳು ಬಹುಶಃ ತುರ್ತುಪರಿಸ್ಥಿತಿಯ ಜೊತೆಗೇ ಅವಸಾನ ಹೊಂದಿರುವುದಕ್ಕೆ ಸಾಕ್ಷಿಯೇ ಬೇಕಿಲ್ಲ ಎನ್ನಬಹುದು. ಒಂದು ಜನಾಂದೋಲನ ನಡೆಯುತ್ತಿದ್ದರೆ ಕೂಡಲೇ ಹೋರಾಟಗಾರರ ಬಳಿ ಧಾವಿಸುವ, ಅವರ ಕುಂದುಕೊರತೆಗಳನ್ನು ಆಲಿಸುವ, ಆಶ್ವಾಸನೆ ನೀಡುವ ಒಂದು ರಾಜಕೀಯ ನಾಯಕತ್ವ ನೆಹರೂ ಅವರಿಂದ  ಇಂದಿರಾಗಾಂಧಿಯವರೆಗೂ ಕಾಣಬಹುದಾಗಿತ್ತು. ನಾಟಕಕಾರ ಸಫ್ದಾರ್‌ ಹಷ್ಮಿ ಹತ್ಯೆಗೀಡಾದಾಗ, ದುಷ್ಕೃತ್ಯ ಎಸಗಿದವರು ಆಡಳಿತಾರೂಢ ಕಾಂಗ್ರೆಸ್‌ ಪಕ್ಷದೊಡನೆ ಸಂಪರ್ಕ ಹೊಂದಿರುವುದಾಗಿ ಆರೋಪವಿದ್ದರೂ ಸಹ, ಪ್ರಧಾನಿ ರಾಜೀವ್‌ ಗಾಂಧಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಕಲಾವಿದನನ್ನು ಭೆಟ್ಟಿಯಾಗಿ, ಸಂತೈಸಲು ತಮ್ಮ ಸಚಿವರನ್ನು ಕಳುಹಿಸುತ್ತಾರೆ. 2025ರ ಸಂದರ್ಭದಲ್ಲಿ ಇದು ಊಹಿಸಲಸಾಧ್ಯ. ಈ ಮೌಲ್ಯಗಳ ಅವನತಿಯನ್ನು, ನೈತಿಕತೆಯ ಅಧಃಪತನವನ್ನು, ಮಾನವೀಯ ಸ್ಪರ್ಶದ ಕ್ಷಾಮವನ್ನು ಹೇಗೆ ಬಣ್ಣಿಸುವುದು ? ತುರ್ತುಪರಿಸ್ಥಿತಿಯ ಕಹಿ ಅನುಭವಗಳು ಇವುಗಳನ್ನು ಸಾಂಸ್ಥಿಕ ಮೌಲ್ಯಗಳಾಗಿ  ಪರಿವರ್ತಿಸಲು ನೆರವಾಗಬೇಕಿತ್ತಲ್ಲವೇ ?  ಆದರೆ ಭಾರತ ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ.

Pradeep Eshwar : ನೀನು ಏನ್ ಕಡ್ದು ಕಟ್ಟೆ ಹಾಕಿದ್ದೀಯಾ  ? #pratidhvani

ಈ ಚಾರಿತ್ರಿಕ ಒಳನೋಟದ ಮುಖಾಂತರ ತುರ್ತುಪರಿಸ್ಥಿತಿಯನ್ನು ಹಾಗೂ ವರ್ತಮಾನದ ಸ್ಥಿತಿಗತಿಗಳನ್ನು ಪರಾಮರ್ಶಿಸಿದಾಗ, 1975ರಲ್ಲಿ ಆಡಳಿತಾತ್ಮಕವಾಗಿ ಕವಲೊಡೆದ ಭಾರತ ಎರಡು ಭಿನ್ನ ಯುಗಧರ್ಮಗಳಿಗೆ ಸಾಕ್ಷಿಯಾಗಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಆಶಯಗಳನ್ನು ಭಿನ್ನ ದಿಕ್ಕುಗಳಿಗೆ ಕೊಂಡೊಯ್ದ ನಿರ್ಣಾಯಕ ಗಳಿಗೆಯಾಗಿ ನಮಗೆ ತುರ್ತುಪರಿಸ್ಥಿತಿ ಕಾಣುತ್ತದೆ. ವರ್ತಮಾನದ ಆಳ್ವಿಕೆಗಳಲ್ಲಿ ಕಾಣಲಾಗುತ್ತಿರುವ ತಲ್ಲಣಗಳಿಗೆ, ಒಳಬಿರುಕುಗಳಿಗೆ, ಸವಾಲುಗಳಿಗೆ ಆಡಳಿತಾತ್ಮಕ ನೆಲೆಯಲ್ಲಿ ತುರ್ತುಪರಿಸ್ಥಿತಿ ಹೇಗೆ ಕಾರಣವಾಗಿರಬಹುದು ಎನ್ನುವುದು ರಾಜಕೀಯ ನೆಲೆಯಲ್ಲಿ, ಸಂವಿಧಾನದ ಚೌಕಟ್ಟಿನಲ್ಲಿ ಚರ್ಚೆಗೊಳಗಾಗಬೇಕಾದ ವಿಷಯ. ತುರ್ತುಪರಿಸ್ಥಿತಿಯ ಅವಧಿಯನ್ನು ಪ್ರಜಾಪ್ರಭುತ್ವದ ಹತ್ಯೆಯ ಗಳಿಗೆ ಎಂದು ಬಣ್ಣಿಸುವಾಗ, 2025ರ ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಎಷ್ಟು ಜೀವಂತಿಕೆಯಿಂದ ಉಸಿರಾಡುತ್ತಿವೆ ಎಂದು ಅವಲೋಕನ ಮಾಡುವುದು ಆತ್ಮವಿಮರ್ಶೆಯ ಹಾದಿಯಾಗುತ್ತದೆ.

ಈ ಬದಲಾವಣೆಗೆ ತುರ್ತುಪರಿಸ್ಥಿತಿಯ ವಿಷಗಳಿಗೆಗಳು ಕಾರಣವಾಯಿತೇ ? ಅಥವಾ ತುರ್ತುಪರಿಸ್ಥಿತಿಯ ಆಳ್ವಿಕೆಯ ಮಾದರಿ ತಳಸಮಾಜದ ಜನಸಾಮಾನ್ಯರನ್ನು ಸಾಂವಿಧಾನಿಕವಾಗಿ ಜಾಗೃತಗೊಳಿಸಿದೆಯೇ ? ಇಲ್ಲವಾದರೆ ಏಕೆ ? ಅಥವಾ ಈ ಮಾದರಿಯೇ ಜಾಗತೀಕರಣ/ಡಿಜಿಟಲ್ ಯುಗದ ಆಳ್ವಿಕೆಗಳಿಗೆ, ಪಕ್ಷಾತೀತವಾಗಿ ಮಾರ್ಗದರ್ಶಕ ಮಾದರಿಯಾಗಿ ಪರಿಣಮಿಸಿತೇ ? ಪ್ರಜಾಸತ್ತಾತ್ಮಕ ಆಳ್ವಿಕೆಯ ಮಾದರಿಯನ್ನೇ ರೂಪಾಂತರಗೊಳಿಸಿದ ಈ ಕರಾಳ ಯುಗದ ರಾಜಕೀಯ ಆಯಾಮಗಳನ್ನು ಮತ್ತು ಪರಿಣಾಮಗಳನ್ನು ಮುಂದೆ ಚರ್ಚಿಸೋಣ.

‌

ಮುಂದುವರೆಯುತ್ತದೆ ,,,,,

-೦-೦-೦-೦-

Tags: Emergencyemergency departmentemergency medicineemergency preparednessemergency requestsemergency stopemergency stop driving testemergency vehicles for kidsemergency vehicles for toddlersemergency vehicles from around the worldemergency vehicles sirens soundsemergency vehicles soundsgood emergency stophow to do an emergency stopkids emergency vehicleslearn emergency vehicleslearning emergency vehicles names and soundswhat to do with ham radio
Previous Post

ಶಿವಮೊಗ್ಗದಲ್ಲಿ ಗಣಪತಿ & ಶೇಷನಾಗ ವಿಗ್ರಹಗಳು ವಿರೂಪ ಕೇಸ್- ಕಾಂಗ್ರೆಸ್ ನಡವಳಿಕೆ ವಿರುದ್ಧ ವಿಜಯೇಂದ್ರ ಕೆಂಡ 

Next Post

ವಿಜಯೇಂದ್ರ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಭಾಗಿ..!

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post

ವಿಜಯೇಂದ್ರ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ಪ್ರತಾಪ್ ಸಿಂಹ ಭಾಗಿ..!

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada