ತಹಶೀಲ್ದಾರ್ ಎಂದರೆ ಒಂದು ತಾಲೂಕಿನ ದಂಡಾಧಿಕಾರಿ. ಆದರೆ ಒಂದು ತಾಲೂಕಿನ ನ್ಯಾಯ ಅನ್ಯಾಯಗಳನ್ನು ಬಗೆಹರಿಸಬೇಕಾದ ತಹಶೀಲ್ದಾರ್ ಒಬ್ಬರು ಇಡೀ ರಾತ್ರಿ ಬೀದಿಯಲ್ಲಿ ಕಳೆದಿದ್ದಾರೆ ಎಂದರೆ ನೀವು ನಂಬಲೇ ಬೇಕು. ಇಡೀ ಮನೆಯನ್ನು ಖಾಲಿ ಮಾಡಿಸಿ ಸಾಮಗ್ರಿ ಸಮೇತ ಬೀದಿಯಲ್ಲೇ ಕಳೆಯುವಂತೆ ಮಾಡಲಾಗಿದೆ. ಇದು ಬಿಜೆಪಿ ಶಾಸಕರ ಕುಮ್ಮಕ್ಕು ಎನ್ನುವುದು ನೇರ ಆರೋಪ.
ಬೆಳಗಾವಿ ಜಿಲ್ಲೆ ರಾಯಭಾಗದ ತಹಶೀಲ್ದಾರ್ ಅವರನ್ನು ರಾತ್ರೋರಾತ್ರಿ ಸರ್ಕಾರಿ ವಸತಿ ಶಾಲೆಯಿಂದ ಖಾಲಿ ಮಾಡಿಸಿ ಬೀದಿಗೆ ನಿಲ್ಲಿಸಿದ್ದಾರೆ. ರಾಯಭಾಗ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಒತ್ತಡ ಹಾಕಿ ತಹಶೀಲ್ದಾರ್ ಅವರಿಗೆ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ. ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ, ರಾಣಿ ಚೆನ್ನಮ್ಮ ವಸತಿ ಶಾಲೆಯ ಕ್ವಾಟ್ರಸ್ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಮೊದಲು ಪ್ರವಾಸಿ ಮಂದಿರದಲ್ಲಿ ವಾಸವಿದ್ದ ತಹಶೀಲ್ದಾರ್, ಕರೋನಾ ಸೋಂಕಿತರ ಕ್ವಾರಂಟೈನ್ ಮಾಡಿದ್ದರಿಂದ ವಾಸ್ತವ್ಯ ಬದಲಿಸಿದ್ದರು. ಇದೀಗ ಶಾಸಕ ದುರ್ಯೋಧನ ಐಹೊಳೆ ತಹಶೀಲ್ದಾರ್ ಅವರನ್ನು ಏಕಾಏಕಿ ಕ್ವಾಟ್ರಸ್ನಿಂದ ಖಾಲಿ ಮಾಡಿಸಿ ರಾತ್ರೀ ಪೂರ್ತಿ ಬೀದಿಯಲ್ಲಿ ಕಾಲಕಳೆಯುವ ಪರಿಸ್ಥಿತಿ ತಂದಿದ್ದಾರೆ.
ನಿಮ್ಮನ್ನ ಹೊರ ಹಾಕಿಸೋಕೆ ಶಾಸಕರ ಕೈವಾಡವಿದೆ. ನನಗೆ DO ಫೋನ್ ಮಾಡಿದ್ದರು ಖಾಲಿ ಮಾಡಿಸಲೇಬೇಕು ಎಂದು ಹೇಳಿದ್ದಾರೆ ಎಂದು ಪ್ರಿನ್ಸಿಪಾಲ್ ನೇರವಾಗಿಯೇ ತಹಶೀಲ್ದಾರ್ಗೆ ತಿಳಿಸಿದ್ದಾರೆ. ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಜೊತೆ ಪ್ರಿನ್ಸಿಪಾಲ್ ಕಿರಣ್ ಮಾತನಾಡಿದ್ದು, ಸಂಪೂರ್ಣ ಘಟನೆಯ ವಿವರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶಾಸಕರು ಒತ್ತಡ ಹೇರಿದ್ದ ವಿಷಯ ಪ್ರಸ್ತಾಪವನ್ನು ಸ್ವತಃ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರೇ ತಿಳಿಸಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಿನ್ಸಿಪಾಲ್ ಕಿರಣ್ ಮತ್ತು ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಸಂಭಾಷಣೆ ಸಾರಾಂಶ ಹೀಗಿದೆ. ತಹಶೀಲ್ದಾರ್ಗೆ ಮಂಗಳವಾರ ರಾತ್ರಿ ಕರೆ ಮಾಡಿದ ಪ್ರಿನ್ಸಿಪಾಲ್ ಕಿರಣ್ ಸಾರ್ ನಮಸ್ತೆ ಎಂದು ಶುರು ಮಾಡುತ್ತಾರೆ.
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಕಿರಣ್ ಕುಮಾರ್ ಹೇಳಿ ಏನ್ ಸಮಾಚಾರ
ಕಿರಣ್, ಪ್ರಿನ್ಸಿಪಾಲ್: ಏನಿಲ್ಲಾ ಸರ್, ಡಿಒ ಮೇಡಂ ವಸ್ತುಗಳನ್ನು ತೆಗೆದಿಡಿ, ಸಾಮಗ್ರಿ ಶಿಫ್ಟ್ ಮಾಡಿಸಿ ಎಂದಿದ್ದಾರೆ
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಫಾಲಿ ಗೌಡ್ರಾ..? ನಾನು ಫೋನ್ ಮಾಡಿದ್ದೆ.. ತೆಗೀಲಿಲ್ಲ.
ಕಿರಣ್, ಪ್ರಿನ್ಸಿಪಾಲ್: ಅವರು ಹೇಳಿದ್ರು ಸಾರ್, ನಾನು ಫೋನ್ ತಗೊಂಡಿಲ್ಲ, MLA ಬಾಯಿಗೆ ಬಂದ್ಹಾಗೆ ಬೈಯ್ತಿದ್ದಾರಂತೆ
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಅವರಿಗೆ ಬೈಯ್ತಾ ಇದ್ದಾರಂತಾ? MLA ಬೈಯ್ತಾ ಇದ್ದಾರಂತಾ?
ಕಿರಣ್, ಪ್ರಿನ್ಸಿಪಾಲ್: ಹೌದು ಸಾರ್.. ಹಂಗೇನೋ ಅಂದ್ರು..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಯಾಕೆ..? ಲೇಡಿ ಅಲ್ವಾ ಪಾಪಾ ಅವರು.. ಲೇಡಿ ಆಫೀಸರ್ಗೆ ಹಂಗೆ ಯಾರಾದ್ರೂ ಬೈಯ್ತಾರಾ..? ಇದು ಸರ್ಕಾರದ ಆಸ್ತಿ ಅಲ್ವಾ..? ರಾತ್ರೋರಾತ್ರಿ ತೆಗೀಬೇಕು ಅಂದ್ರೆ ನಾವೇನು ಅಪರಾಧ ಮಾಡಿದ್ದೀವಾ..?
ಕಿರಣ್, ಪ್ರಿನ್ಸಿಪಾಲ್: ಇಲ್ಲಾ ಸರ್, ಬಟ್ ಅವರು, ನೀನಾದ್ರೂ ಮಾಡಪ್ಪಾ ಖಾಲಿ ಮಾಡಿಸು, ಸಾಮಗ್ರಿ ಹೊರಗಿಡು ಅಂತಾ ಹೇಳ್ತಾರೆ… ಏನ್ಮಾಡೋದು?
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಸಾಮಾಗ್ರಿ ಹೊರಗಿಡಬೇಕಂತಾ? ಇವಾಗೇನು? ನಾವೇನು MLA ಮನೆಯಲ್ಲಿ ಇಟ್ಟಿದ್ದೀವಾ? ನಮ್ಮ ಸಾಮಗ್ರಿಗಳನ್ನ..? ಅವರಿಗೇನಾದ್ರೂ ಸಮಸ್ಯೆ ಆಗ್ತಿದ್ಯಾ? ಇವಾಗ ನಾನು ಇಲ್ಲಿಗೆ ಬಂದು 3 ತಿಂಗಳು ಆಯ್ತಲ್ಲ.. ಅವಾಗಲೇ ಚಕಾರ ಎತ್ತಬಹುದಿತ್ತಲ್ಲಾ?
ಕಿರಣ್, ಪ್ರಿನ್ಸಿಪಾಲ್: ಹೌದು ಸಾರ್..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಈಗ ನಾವು ಮನೆಯನ್ನೂ ಬೇರೆ ಹುಡುಕಿ ಆಗಿದೆ. ಈಗ ಶಿಫ್ಟ್ ಮಾಡಲಿಕ್ಕೆ ಒಂದು ದಿನ ತಡೆದುಕೊಳ್ಳೋಕೆ ಆಗಲ್ವಾ ಅವರಿಗೆ? ಇಟ್ ಈಸ್ ಎ ಕ್ವಶ್ಚನ್ ಆಫ್ ಟ್ವೆಲ್ವ್ ಅವರ್ಸ್..!
ಕಿರಣ್, ಪ್ರಿನ್ಸಿಪಾಲ್: ಹೌದು ಸಾರ್, ಬಟ್ ಇವರು.. ಏನ್ ಸಾರ್ ಇವ್ರು ತುಂಬಾನೇ ಹರಾಸ್ಮೆಂಟ್ ಮಾಡ್ತಾರೆ.. ನಮ್ಮ ಮೇಡಂ ಅವರಿಗೇ ಫೋನ್ ಮಾಡ್ತಾರೆ, ನನಗೂ ಫೋನ್ ಮಾಡ್ತಾರೆ. ಹಿಂಗಾಗಿದೆ..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ನಾನ್ ಹೇಳೋದು ಬೆಳಗ್ಗಾದ್ರೆ ಅದನ್ನು ತೆಗೆದುಕೊಂಡು ಹೋಗಬಹುದು.
ಕಿರಣ್, ಪ್ರಿನ್ಸಿಪಾಲ್: ನಾನು ಹೇಳಿದ್ದೀನಿ, ಬೆಳಗ್ಗೆ ಆಗಲಿ ಸಾರ್ ಅಂತಾ ಹೇಳಿದ್ರೂನೂ ಕೇಳಲಿಲ್ಲ
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಈಗ ನಮ್ಮ ಮನೆ ರೆಡಿಯಾಗಿದೆ, ನಾನೇನು ಗತಿಗೆಟ್ಟು ಇಲ್ಲಿ ಬಂದಿಲ್ಲ. ಇದು ನಮ್ಮ ಜಿಲ್ಲೆ, ನಮ್ಮ ತಾಲೂಕು ಗೊತ್ತಾಯ್ತಾ..?
ಕಿರಣ್, ಪ್ರಿನ್ಸಿಪಾಲ್: ಸಾರ್, ಆ ರೀತಿ ನಿಮ್ಮನ್ನು ಯಾವತ್ತೂ ನೋಡಿಲ್ಲ..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಎಂಎಲ್ಎ ಅವರಿಗೆ ಯಾಕೆ ಅಷ್ಟೊಂದು ನಮ್ಮ ಮೇಲೆ ಕೋಪ. ಅವರಿಗೆ ಯಾಕೆ ಅಷ್ಟೊಂದು ಕೆಟ್ಟ ಬುದ್ಧಿ ಬಂದಿದೆ.
ಕಿರಣ್, ಪ್ರಿನ್ಸಿಪಾಲ್: ಗೊತ್ತಿಲ್ಲ ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಅವರ ಮನೆಯಲ್ಲಿ ಇದ್ದಿದ್ರೆ ಅವರಿಗೆ ಅದು ಸಮಸ್ಯೆ, ಬಿಡಪ್ಪ ಅವರ ಮನೆಯಲ್ಲಿ ಇದ್ದೀವಿ ಎನ್ನಬಹುದಿತ್ತು.
ಕಿರಣ್, ಪ್ರಿನ್ಸಿಪಾಲ್: ಹೌದು ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಈಗ ಇವರು ಡಿಸ್ಟ್ರಿಕ್ಟ್ ಲೆವೆಲ್ ಆಫೀಸರ್ ಅಲ್ವಾ, ಕೊಟ್ಟಿದ್ದು ನಿಜ ಇದೆ. ಒಂದು ಸ್ವಲ್ಪ ಕಾಲಾವಕಾಶ ಕೊಡಬಹುದು ಎಂದು ಹೇಳಬಹುದಿತ್ತಲ್ಲ.
ಕಿರಣ್, ಪ್ರಿನ್ಸಿಪಾಲ್: ಇವ್ರು ಲಾಸ್ಟ್ ವೀಕ್ನಿಂದ ಹೇಳ್ತಾ ಇದ್ದಾರಂತೆ ಸಾರ್..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ನಮಗೇನು ಹೇಳಿಲ್ಲಾ ಬಿಡಿ..
ಕಿರಣ್, ಪ್ರಿನ್ಸಿಪಾಲ್: ರಾಜು ಎನ್ನುವರಿಗೆ ನಾನು ಫೋನ್ ಮಾಡಿ ಹೇಳಿದ್ದೆ ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ನನಗೆ ಒಂದು ಸಲ ಫೋನ್ ಮಾಡಿ ಹೇಳಿದ್ರು, ನಾನು ಮೇಡಂಗೆ ಹೇಳಿದ್ದೆ. ಅವರು ಕನ್ವಿಯೆನ್ಸ್ ಆದ್ರು. ನಾನೊಂದು ಮನೆ ನೋಡಿದ್ದೀನಿ. ಯಾಕಂದ್ರೆ ಇದೆಲ್ಲಾ ನನ್ನ ಸ್ವಂತ ಐಟಂಗಳು ಇದೆಲ್ಲಾ, ನಾವು ಇದನ್ನೆಲ್ಲಾ ಎಂದಿದ್ದಕ್ಕೆ ಆಯ್ತು ಬಿಡಿ ಅಂದಿದ್ರು.
ಕಿರಣ್, ಪ್ರಿನ್ಸಿಪಾಲ್: ಬಟ್ ಇವಾಗ ಅವರು ಡೈಲಿ ಟೆನ್ ಟೆನ್ ಟೈಮ್ಸ್ ಕಾಲ್ ಮಾಡ್ತಿದ್ದಾರೆ ಅಂತಾ ಮೇಡಂ ಹೇಳ್ತಿದ್ದಾರೆ ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಒಕೆ ಇದು.. ಎಂಎಲ್ಎ ಅವರ ಆದೇಶನಾ?
ಕಿರಣ್, ಪ್ರಿನ್ಸಿಪಾಲ್: ಮೇ ಬಿ ಸಾರ್, ಹಾಗೆ.. ಹಾಗೆ ಸರ್..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಎಂಎಲ್ಎ ಅವರ ಆದೇಶನಾ..? ಅಥವಾ ಇಲಾಖೆ ನಿರ್ಧಾರನಾ..?
ಕಿರಣ್, ಪ್ರಿನ್ಸಿಪಾಲ್: ನಮ್ ಜೆಡಿ ಮೇಡಂ ಹೇಳ್ತಿದ್ದಾರೆ ಸರ್..
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಅಲ್ಲಾ ಜೆಡಿ ಮೇಡಂ ಅವರಿಗೆ ಪ್ರೆಶರ್ ತಂದಿದ್ದು ಯಾರು..?
ಕಿರಣ್, ಪ್ರಿನ್ಸಿಪಾಲ್: ಇವ್ರು ಎಂಎಲ್ಎ ಅವರೇ ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಎಂಎಲ್ಎ ಅವರಿಗೆ ಅಧಿಕಾರಿಗಳು ಅಂದ್ರೆ ಕಾಲು ಕಸ ಅಂದ್ಹಾಗೆ ಆಯ್ತು
ಕಿರಣ್, ಪ್ರಿನ್ಸಿಪಾಲ್: ಕಾಲ್ ಕಸ ಸಾರ್, ಅದಕ್ಕಿಂತನೂ ಕೇವಲ ಸಾರ್
ಚಂದ್ರಕಾಂತ ಭಜಂತ್ರಿ, ತಹಶೀಲ್ದಾರ್: ಓ ಮೈ ಗಾಡ್..ನಮಗೆ ಗೊತ್ತಿರಲಿಲ್ಲವೇ ಇದು.. ಈ ರಾಯಭಾಗದಲ್ಲಿ ಅಧಿಕಾರಿಗಳಿಗೆ ಈ ಮಟ್ಟದಲ್ಲಿ ಕೇವಲವಾಗಿ ನೋಡ್ತಾರೆ ಎನ್ನುವುದು ನಮ್ಮನ್ನ ಟ್ರೀಟ್ ಮಾಡಿದಾಗಲೇ ಗೊತ್ತಾಗಿದ್ದು.
ಬಿಜೆಪಿ ಶಾಸಕ ದುರ್ಯೋಧನ ಏನೆನ್ನುತ್ತಾರೆ..?
ರಾತ್ರೋರಾತ್ರಿ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಅವರನ್ನ ಬೀದಿಗೆ ತಳ್ಳಿದ ವಿಚಾರದ ಬಗ್ಗೆ ಬೆಳಗಾವಿ ರಾಯಭಾಗ ನಿವಾಸದಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ, ತಹಶೀಲ್ದಾರ್ ಅವರು ರಾತ್ರಿಪೂರ್ತಿ ಬೀದಿಯಲ್ಲಿ ಕಳೆದಿರುವುದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಹಾಗಾಗಿ ವೈದ್ಯರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಖಾಲಿ ಮಾಡಿಸಿದ್ದಾರೆ. ನಾನು ಯಾರಿಗೂ ಒತ್ತಡ ಹೇರಿಕೆ ಮಾಡಿ ಮನೆ ಖಾಲಿ ಮಾಡಿಸಿಲ್ಲ. ನನ್ನ ಮೇಲೆ ತಹಶೀಲ್ದಾರ್ ಸುಳ್ಳು ಆರೋಪ ಮಾಡಿದ್ದಾರೆ. ಕರೋನಾ ಸಂದರ್ಭದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅವರ ಇಲಾಖೆ ಸಿಬ್ಬಂದಿಗಳೇ ನನ್ನ ಗಮನಕ್ಕೆ ತಂದಿದ್ದರು. ಹಾಗಾಗಿ ನಾನು ಸಿಎಂಗೆ ಪತ್ರ ಬರೆದು ವರ್ಗಾವಣೆ ಮಾಡಲು ಕೇಳಿಕೊಂಡಿದ್ದೆ. ನನಗೂ ಅವರಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದಿದ್ದಾರೆ.
ಆದರೆ, ಕಂಕಣವಾಡಿ ಜಮೀನು ವಿಚಾರದ ಬಗ್ಗೆ ತಹಶೀಲ್ದಾರ್ ಅವರು ಶಾಸಕರ ಸೂಚನೆಯನ್ನು ಪಾಲಿಸಲಿರಲಿಲ್ಲ. ಅದೇ ಕಾರಣಕ್ಕೆ ತಹಶೀಲ್ದಾರರನ್ನು ವರ್ಗಾವಣೆ ಮಾಡಿಸಿದ್ದಾರೆ ಎನ್ನಲಾಗಿದೆ. ಜುಲೈ 10 ರಂದು ವರ್ಗಾವಣೆ ಆಗಿದೆ. ಆದರೆ ಕೆಲವೇ ದಿನಗಳಲ್ಲಿ ತಹಶೀಲ್ದಾರ್ ಅವರು ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇದರಿಂದ ಕುಪಿತಗೊಂಡ ಶಾಸಕ ದುರ್ಯೋಧನ ಐಹೊಳೆ ವಾಸ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ. ಜೊತೆಗೆ ಬಾಡಿಗೆ ಮನೆಗೆ ಹೋಗಲು ಮುಂದಾಗಿದ್ದರಿಂದ ಬಾಡಿಗೆಗೂ ಮನೆ ಕೊಡದಂತೆ ಮಾಡಿದ್ದಾರೆ. ಒಟ್ಟಾರೆ, ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ತಹಶೀಲ್ದಾರ್ರಿಗೆ ತೊಂದರೆ ನೀಡುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ.