ಲಾಕ್‌ಡೌನ್ ಘೋಷಣೆಯಾದ ಬಳಿಕ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೊರಟು ಹೋಗಿದ್ದರು. ಆದರೀಗ, ಕೊರೋನಾ ತುಸು ಕಡಿಮೆಯಾದ ಕಾರಣ ಕೇಂದ್ರ ಸರ್ಕಾರ ಅನ್‌ಲಾಕ್ ಜಾರಿಗೊಳಿಸಿದ ಪರಿಣಾಮ ಎಲ್ಲಾ ವಲಸೆ ಕಾರ್ಮಿಕರು ಮತ್ತೀಗ ಬೆಂಗಳೂರಿನಂತಹ ದೊಡ್ಡ ನಗರಗಳಿಗೆ ಕೆಲಸಕ್ಕಾಗಿ ವಾಪಸ್ಸಾಗಿದ್ದಾರೆ.
ತೀವ್ರ ಕೊರೋನಾ ಕಾರಣಕ್ಕೆ ಜಾರಿಗೊಳಿಸಿದ್ದ ಲಾಕ್ಡೌನ್ನಿಂದಾಗಿ ತಿಂಗಳುಗಟ್ಟಲೆ ಕೆಲಸ ಇಲ್ಲದೆ ಹಣವೂ ಇಲ್ಲದೆ ಸಿಕ್ಕಿಕೊಂಡು ಪರದಾಡುತ್ತಿದ್ದ ಕಾರ್ಮಿಕರಿಗೆ ತಮ್ಮ ಊರಿನ ಮುಖ ನೋಡಲು ಸರ್ಕಾರ ಅನುವು ಮಾಡಿಕೊಟ್ಟಿತು. ಆದರೆ, ಊರಿಗೆ ಹೋದ ಜನರಿಗೆ ಅಲ್ಲಿ ಮಾಡಲು ಕೆಲಸ ಇಲ್ಲದೆ ಅತ್ತ ಧರಿ ಇತ್ತ ಪುಲಿ ಎಂಬಂಥ ಸಂದರ್ಭ ಬಂದೊದಗಿತ್ತು. ಎಲ್ಲಾ ಕಾರ್ಮಿಕರಿಗೂ ಅವರವರ ಊರಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವುದಾಗಿ ಸರ್ಕಾರ ಕೊಟ್ಟ ಭರವಸೆ ಬಹುತೇಕ ಕಡೆ ನೆನೆಗುದಿಯಲ್ಲೇ ಉಳಿಯಿತು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತ, ದೇಶಾದ್ಯಂತ ಲಾಕ್‌ಡೌನ್ ನಿಯಮ ಸಡಿಲಿಕೆಯಿಂದಾಗಿ ಮತ್ತೆ ಉದ್ಯಮ ವಲಯ ತೆರೆದುಕೊಂಡಿತು. ಕಾರ್ಖಾನೆಗಳು, ಕಟ್ಟಡ ನಿರ್ಮಾಣ ಚಟುವಟಿಕೆ ಗರಿಗೆದರಿದವು. ಕಾರ್ಮಿಕರಿಗೆ ಕೈತುಂಬ ಕೆಲಸ ಸಿಗುವ ಅವಾಕಶಗಳು ಬಂದವು. ಹೋಟೆಲ್ ಉದ್ಯಮವೂ ತೆರೆದುಕೊಂಡವು. ಹೀಗಾಗಿ ಬೇರೆ ವಿಧಿ ಇಲ್ಲದೆ ದುಡಿಮೆ ನಂಬಿ ಬದುಕುವ ಜನ ಈಗ ಮತ್ತೆ ಮಹಾ ನಗರಗಳಿಗೆ ಮರಳಿದ್ದಾರೆ.
ಶೇಕಡ ನೂರಕ್ಕೆ ಎಂಬತ್ತರಷ್ಟು ಜನ ಮತ್ತೆ ಮಹಾ ನಗರಗಳಿಗೆ ಮರಳಿದ್ದಾರೆ. ಊರಲ್ಲಿ ಕೆಲಸ ಸಿಗದ ಕಾರಣ ಇಲ್ಲಾದರೂ ಕೆಲಸ ಸಿಗಲಿದೆ ಎಂದು ಆಗಮಿಸಿದ್ದಾರೆ. ಈಗೀಗ ದೇಶಾದ್ಯಂತ ಎಲ್ಲಾ ಕ್ಷೇತ್ರಗಳು ಸುಧಾರಿಸಿಕೊಳ್ಳುತ್ತಿರುವ ಕಾರಣ ಎಲ್ಲರಿಗೂ ಕೆಲಸ ಇಲ್ಲಂದತಾಗಿದೆ. ಹೀಗಾಗಿ ಕೆಲಸಕ್ಕಾಗಿ ಮತ್ತೆ ದೊಡ್ಡ ನಗರಗಳಿಗೆ ಬಂದ ಕಾರ್ಮಿಕರು ಇಂದು ಪ್ರತಿದಿನದ ಊಟ-ಒಪ್ಪತ್ತಿಗೆ ಪರದಾಡುತ್ತಿದ್ದಾರೆ.
ಲಾಕ್ ಡೌನ್ ಸಡಿಲಿಕೆಯಾಗಿ ವ್ಯಾಪಾರ, ಉದ್ಯಮ, ವಹಿವಾಟುಗಳೆಲ್ಲವೂ ಸಹಜ ಸ್ಥಿತಿಗೆ ನಿಧಾನವಾಗಿ ಮರಳುತ್ತಿರುವಾಗ ಈ ಕೂಲಿ ಕಾರ್ಮಿಕರು ಊಟ-ತಿಂಡಿ, ಸಂಪಾದನೆಗಾಗಿ ಪರದಾಡುತ್ತಿದ್ದಾರೆ. ಒಂದು ರಾಷ್ಟ್ರ ಒಂದು ರೇಷನ್ ಕಾರ್ಡು ಕೂಡ ಈ ಕೂಲಿ ಕಾರ್ಮಿಕರಿಗೆ ಅಷ್ಟೊಂದು ಪ್ರಯೋಜನವಾಗಿಲ್ಲ.
ಲಾಕ್ ಡೌನ್ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡು ಯೋಜನೆಯಡಿ 24 ರಾಜ್ಯಗಳನ್ನು ಸೇರಿಸಿದೆ. ಆದರೂ ಕೂಡ ಹಲವು ಕೂಲಿ ಕಾರ್ಮಿಕರಿಗೆ ಇದರ ಫಲ ಸಿಗುತ್ತಿಲ್ಲ. ಹೀಗಿರುವಾಗ ಹೇಗೆ ಜೀವ ಮಾಡೋದು ಎಂದು ಹಲವು ವಲಸೆ ಕಾರ್ಮಿಕರು ಆತ್ಮಹತ್ಯೆಯ ದಾರಿಯಿಡಿದ ನೂರಾರು ಪ್ರಕರಣಗಳಿವೆ.