ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದೆ.
ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಂಘ ಪ್ರತಿಭಟನೆ ನಡೆಸಿದ್ದು, ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಕಡಿಮೆ ತೋರುತ್ತಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಬ್ಬಿನ ಎಫ್ ಆರ್ ಪಿ ದರ ರೈತರಿಗೆ ಅನ್ಯಾಯವಾಗಿದೆ, ಕಬ್ಬಿಗೆ ನ್ಯಾಯಯುತ ದರ ನಿಗದಿಪಡಿಸಬೇಕು, ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಕಡಿಮೆ ತೋರುತ್ತಿರುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಠಿಣ ಆದೇಶ ಹೊರಡಿಸಬೇಕು, ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರ ಕಡ್ಡಾಯವಾಗಿ ಜಾರಿಯಾಗಬೇಕು ಮೊದಲಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ದಾರೆ.
ಬಳಿಕ ಕುರಬೂರು ಶಾಂತಕುಮಾರ್ ನೇತೃತ್ವದಲ್ಲಿ ಪದಾಧಿಕಾರಿಗಳು ಕಬ್ಬು ಅಭಿವೃದ್ಧಿ ಆಯುಕ್ತರಾದ ಅಕ್ರಂಪಾಷ, ಹಾಗೂ ವಾಣಿಜ್ಯ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಕುಮಾರ್ ನಾಯಕ್ ರವರ ಭೇಟಿ ಮಾಡಿ ತಮ್ಮ ಸಮಸ್ಯೆಗಳ ಕುರಿತಂತೆ ಚರ್ಚಿಸಿದ್ದಾರೆ.
ಅಲ್ಲದೆ, ಕಾರ್ಮಿಕ ಹಾಗೂ ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರರನ್ನು ಭೇಟಿಯಾಗಿ ತಮ್ಮ ಅಹವಾಲು ಸಲ್ಲಿಸಿದ್ದಾರೆ. ಈ ವೇಳೆ, ಇದೇ ತಿಂಗಳ 20 ರೊಳಗಾಗಿ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಚರ್ಚಿಸಿ, ತೀರ್ಮಾನ ಕೈಗೊಳ್ಳಲು ಮುಖ್ಯಮಂತ್ರಿಗಳ ಸಮಯ ಕೆಳಲಾಗಿದೆ ಎಂದು ಸಚಿವರು ಭರವಸೆ ನೀಡಿರುವುದಾಗಿ ಸಂಘ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.
ಪ್ರತಿಭಟನೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ಉಪಾಧ್ಯಕ್ಷ ಸುರೇಶ್ ಪಾಟೀಲ್, ರಮೇಶ್ ಹೂಗಾರ್, ತೇಜಸ್ವಿ ಪಟೇಲ್, ಹತ್ತಳ್ಳಿ ದೇವರಾಜ್, ಗುರುಸಿದ್ದಪ್ಪ, ಬಸವರಾಜ ಪಾಟೀಲ್, ರಾಮೇಗೌಡ ಮಂಡ್ಯ ವೆಂಕಟೇಶ್, ಕುಮಾರ್ ಶಿವಕುಮಾರ್, ರಾಮಚಂದ್ರ ಮೊದಲಾದವರು ಭಾಗಿಯಾಗಿದ್ದರು.
Also Read: ಕರ್ನಾಟಕ ನೆರೆ ಪರಿಸ್ಥಿತಿ; ಕೇಂದ್ರ ಸರ್ಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಿ- ಕುರಬೂರು ಶಾಂತಕುಮಾರ್