ಈ ತಿಂಗಳ ಆರಂಭದಲ್ಲಿ ಚೀನಾದ ಗಡಿಯ ಸಮೀಪವಿರುವ ಹಳ್ಳಿಗಳಿಂದ ನಾಪತ್ತೆಯಾಗಿದ್ದ ಐವರನ್ನು ಬೇಟೆಗಾರರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶನಿವಾರ ಬೆಳಿಗ್ಗೆ ಚೀನಾದ ಭೂಪ್ರದೇಶದಲ್ಲಿ ಹಸ್ತಾಂತರ ನಡೆದ ನಂತರ, ಬೇಟೆಗಾರರು ಭಾರತದ ಕಡೆಗೆ ತಲುಪಿ, ಮಧ್ಯಾಹ್ನ ಕಿಬಿತು ಗಡಿ ಪೋಸ್ಟ್ ಮೂಲಕ ಅರುಣಾಚಲ ಪ್ರದೇಶವನ್ನು ಪ್ರವೇಶಿಸಿದ್ದಾರೆ.
“ಕೋವಿಡ್-19 ಪ್ರೋಟೋಕಾಲ್ ಪ್ರಕಾರ ವ್ಯಕ್ತಿಗಳನ್ನು ಈಗ 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿರಿಸಿ ಬಳಿಕ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು” ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಐದು ಜನರನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿದು “ಸಂಪೂರ್ಣವಾಗಿ ಸಂತೋಷವಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ ಮತ್ತು ಸರ್ಕಾರ ಮತ್ತು ಸೈನ್ಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ.
“ಅರುಣಾಚಲ ಪ್ರದೇಶದ ಯುವಕರನ್ನು ನಮ್ಮ ಕಡೆ ಹಸ್ತಾಂತರಿಸುವಂತೆ ಚೀನಾದ ಪಿಎಲ್‌ಎ ಭಾರತೀಯ ಸೇನೆಗೆ ಧೃಡಪಡಿಸಿದೆ. ಹಸ್ತಾಂತರಿಸುವಿಕೆಯು ನಾಳೆ ಯಾವಾಗ ಬೇಕಾದರೂ ನಡೆಯುವ ಸಾಧ್ಯತೆಯಿದೆ” ಎಂದು ಕೇಂದ್ರ ಸಚಿವ ಕಿರೆನ್ ರಿಜಿಜು ಶುಕ್ರವಾರ ಟ್ವೀಟ್ ಮಾಡಿದ್ದರು.
ಸೆಪ್ಟೆಂಬರ್ 2 ರಂದು ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಸಮೀಪ ಬೇಟೆಗೆ ತೆರಳಿದ್ದ ಅರುಣಾಚಲ ಪ್ರದೇಶದ ಐವರು ಬೇಟೆಗಾರರು ನಾಪತ್ತೆಯಾಗಿದ್ದರು. ದಾರಿ ತಪ್ಪಿ ಚೀನಾದ ಕಡೆಗೆ ಹೋಗಿರಬಹುದೆಂದು ಅಂದಾಜಿಸಲಾಗಿತ್ತು. ಭಾರತೀಯ ಸೇನೆಯ ಅವಿರತ ಶ್ರಮದ ಬಳಿಕ ಬೇಟೆಗಾರರು ಚೀನಾದ ವಶದಲ್ಲಿರುವುದು ತಿಳಿದುಬಂದಿತ್ತು. ಸೆಪ್ಟೆಂಬರ್ 8 ರಂದು ಆರಂಭದಲ್ಲಿ ಭಾರತದ ಐವರು ತಮ್ಮ ಸುಪರ್ದಿಯಲ್ಲಿರುವುದನ್ನು ಚೀನಾ ಒಪ್ಪಿಕೊಂಡಿತ್ತು.