ಬೆಂಗಳೂರಿನಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್(ಮಾದಕ ವಸ್ತು) ಜಪ್ತಿಯಾದ ಬಳಿಕ ಒಬ್ಬೊಬ್ಬರ ಬುಡಕ್ಕೆ ಬಿಸಿ ಬೀಳುತ್ತಿದೆ. ಈ ನಡುವೆ ಸ್ಯಾಂಡಲ್‌ವುಡ್‌ನಲ್ಲಿ ಮಾದಕ ವ್ಯಸನಿಗಳು ಇದ್ದಾರೆಂದು ನಟ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆ ಕೊಟ್ಟ ಬಳಿಕ ಚಿತ್ರರಂಗದಲ್ಲಿ ತಲ್ಲಣ ಶುರುವಾಗಿದೆ. ಇಂದ್ರಜಿತ್ ಹೇಳಿಕೆ ದಾಖಲಿಸಿಕೊಂಡ ಬಳಿಕ 10 ರಿಂದ 15 ಮಂದಿ ಚಿತ್ರನಟ, ನಟಿಯರನ್ನು ವಿಚಾರಣೆ ಮಾಡಲು ಸಿಸಿಬಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಮೊದಲಿಗೆ ಮೂವರು ನಟಿಯರ ಜಾಡು ಹಿಡಿದಿರುವ ಪೊಲೀಸರು, ಆ ನಟಿಮಣಿಯರ ಆಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದರಲ್ಲಿ ನಟಿ ರಾಗಿಣಿ ಆಪ್ತ ರವಿಶಂಕರ್, ನಟಿ ಸಂಜನಾ ಗಲ್ರಾಣಿ ಆಪ್ತ ರಾಹುಲ್ ಹಾಗೂ ನಟಿ ಶರ್ಮಿಳಾ ಮಂಡ್ರೆ ಆಪ್ತ ಕಾರ್ತಿಕ್ ರಾಜ್ ಪ್ರಮುಖರಾಗಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರ್‌ಟಿಒ ಕಚೇರಿಯಲ್ಲಿ ದ್ವಿತಿಯ ದರ್ಜೆ ಸಹಾಯಕ (SDA) ಆಗಿರುವ ನಟಿ ರಾಗಿಣಿ ಆಪ್ತ ರವಿಶಂಕರ್‌ನನ್ನು ಪೊಲೀಸರು ಬುಧವಾರ ಸಂಜೆ ಕಚೇರಿಯಿಂದಲೇ ಬಂಧಿಸಿ ಕರೆತಂದಿದ್ದರು. ಆ ಬಳಿಕ ನಡೆದ ತೀವ್ರ ವಿಚಾರಣೆ ನಡೆಸಿದರೂ ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿರಲಿಲ್ಲ. ಅಂತಿಮವಾಗಿ ಪೊಲೀಸರು ರವಿಶಂಕರ್ ಮೊಬೈಲ್ ಪರಿಶೀಲನೆ ಮಾಡಿದಾಗ ಕಾರ್ತಿಕ್ ರಾಜ್ ನಡುವೆ ನಿರಂತರ ಸಂಪರ್ಕ ಹೊಂದಿರುವುದು ಪತ್ತೆಯಾಯಿತು. ಈ ಬಗ್ಗೆ ಪ್ರಶ್ನಿಸಿದಾಗ ನಿರಂತರ ಸಂಪರ್ಕದಲ್ಲಿದ್ದ ಕಾರ್ತಿಕ್ ರಾಜ್ ಮಾಹಿತಿ ಬಹಿರಂಗವಾಯ್ತು. ಸ್ಯಾಂಡಲ್‌ವುಡ್‌ನಲ್ಲಿ ಯಾರೆಲ್ಲಾ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿಯನ್ನು ಕಾರ್ತಿಕ್ ರಾಜ್ ಬಳಿ ಕೇಳಬೇಕು ಎಂದಿದ್ದ. ರವಿಶಂಕರ್ ಕೊಟ್ಟ ಮಾಹಿತಿಯಂತೆ ಬುಧವಾರ ರಾತ್ರಿಯೇ ಕಾರ್ತಿಕ್ ರಾಜ್ ವಶಕ್ಕೆ ಪಡೆಯಲು ಸಿಸಿಬಿ ಪೊಲೀಸರು ಮುಂದಾಗಿದ್ದರು. ಆದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕಾರ್ತಿಕ್ ರಾಜ್ ತಪ್ಪಿಸಿಕೊಂಡಿದ್ದ. ಆದರೂ ಪಟ್ಟು ಬಿಡದ ಸಿಸಿಬಿ ಪೊಲೀಸರು ಗುರುವಾರ ಬೆಳಗ್ಗೆ ಕಾರ್ತಿಕ್ ರಾಜ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತನಾಗಿರುವ ಕಾರ್ತಿಕ್ ರಾಜ್ ನಟಿ ಶರ್ಮಿಳಾ ಮಾಂಡ್ರೆ ಆಪ್ತ ಸ್ನೇಹಿತ ಎನ್ನುವುದು ಗೊತ್ತಾಗಿದೆ. ಈತನಿಗೆ ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರ ಜೊತೆ ಸಂಪರ್ಕವಿದೆ ಎನ್ನಲಾಗಿದೆ. ಕಾರ್ತಿಕ್ ರಾಜ್ ಒಬ್ಬ ಹೋಟೆಲ್ ಉದ್ಯಮಿಯಾಗಿದ್ದು, ನಗರದ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ವಾಸವಾಗಿದ್ದು, ಕೋರಮಂಗಲದಲ್ಲಿ ಮಲ್ಟಿಸ್ಟಾರ್ ಹೋಟೆಲ್ ನಡೆಸುತ್ತಿದ್ದಾನೆ. ಕಾರ್ತಿಕ್ ರಾಜ್ ತಂದೆ ಓರ್ವ ವೈದ್ಯರಾಗಿದ್ದು, ಕಾರ್ತಿಕ್ ರಾಜ್ ಗೆ ಪಾರ್ಟಿಗಳು ಎಂದರೆ ಬಲು ಮೋಹ ಎನ್ನಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಟಿ ರಾಗಿಣಿ ಆಪ್ತ ರವಿಶಂಕರ್, ನಟಿ ಶರ್ಮಿಳಾ ಮಾಂಡ್ರೆ ಆಪ್ತ ಕಾರ್ತಿಕ್ ರಾಜ್ ಬಳಿಕ ಸಂಜನಾ ಗಲ್ರಾಣಿ ಆಪ್ತ ರಾಹುಲ್‌ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಜನಾ ಆಪ್ತ ರಾಹುಲ್ ಹಾಗೂ ಕಾರ್ತಿಕ್ ರಾಜ್ ನ ವಿಚಾರಣೆ ನಡೆಸುತ್ತಿದ್ದರೂ ರಾಹುಲ್ ಮಾತ್ರ ಯಾರೊಬ್ಬರ ಹೆಸರನ್ನೂ ಬಾಯಿ ಬಿಟ್ಟಿಲ್ಲ. ಕಾರ್ತಿಕ್ ರಾಜ್ ಪರಿಚಯ ಎಂದಷ್ಟೇ ಹೇಳುತ್ತಿರುವ ರಾಹುಲ್, ಬೇರೆ ಯಾರ ಹೆಸರನ್ನು ಹೇಳುತ್ತಿಲ್ಲ. ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಕೂಡ ಸುಮಾರು 1 ಗಂಟೆಗಳ ಕಾಲ ವಿಚಾರಣೆ ಮಾಡಿ ಪ್ರಾಥಮಿಕ ಮಾಹಿತಿ ಪಡೆದು ಸಿಸಿಬಿ ಕಚೇರಿಯಿಂದ ವಾಪಸ್ ಆಗಿದ್ದು, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವಿಚಾರಣೆ ನಡೆಸುತ್ತಿದ್ದಾರೆ.
ಯಲಹಂಕದ ಜ್ಯುಡಿಷಿನಲ್ ಲೇಔಟ್ ನಲ್ಲಿರುವ ರಾಗಿಣಿ ಅಪಾರ್ಟ್ ಮೆಂಟ್ ಗೆ ಶುಕ್ರವಾರ ಬೆಳಿಗ್ಗೆ ಸಿಸಿಬಿ ಪೊಲೀಸರಿಂದ ದಾಳಿ ಆಗಿದೆ. ರವಿಶಂಕರ್ ಬಂಧನದ ಹಿನ್ನೆಲೆಯಲ್ಲಿ ರಾಗಿಣಿ ಮನೆ ಮೇಲೆ ದಾಳಿ ನಡೆಸಲು ನ್ಯಾಯಾಲಯದಿಂದ ಡ್ರಗ್ಸ್ ಕೇಸ್ ವಿಚಾರವಾಗಿ ಸಿಸಿಬಿ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದಿದ್ದರು.