ಮರಾಠ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಿ ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡಪರ ಸಂಘಟನೆಗಳ ಒಕ್ಕೂಟ ಡಿಸೆಂಬರ್ 5ಕ್ಕೆ ಬಂದ್‌ಗೆ ಕರೆ ನೀಡಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟ ನೀಡಿರುವ ಬಂದ್‌ಗೆ ಹಲವು ಕನ್ನಡಪರ ಹೋರಾಟಗಾರರು ಬೆಂಬಲ ಸೂಚಿಸಿದ್ದಾರೆ. ಜತೆಗೆ ಹೋಟೆಲ್ ಮಾಲೀಕರ ಸಂಘ, ಟ್ಯಾಕ್ಸಿ ಮಾಲೀಕರ ಸಂಘಟನೆಗಳು ಕೂಡಾ ನೈತಿಕ ಬೆಂಬಲ ಘೋಷಿಸಿವೆ.
ಡಿಸೆಂಬರ್ 5ರಂದು ರಾಜ್ಯಾದ್ಯಂತ ಬಂದ್ ನಡೆಯಲಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ. ರಾಜ್ಯ ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಗೆ ಹೊರಡಿಸಿರುವ ಆದೇಶ ವಿರೋಧಿಸಿ ಟೌನ್ ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೂ ಮೆರವಣಿಗೆ ನಡೆಸಲಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ನಡೆಯಲಿರುವ ಬಂದ್ ಎಲ್ಲರೂ ಬೆಂಬಲ ನೀಡಬೇಕು. ಇದಕ್ಕಾಗಿ ನಾನು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ನಾರಾಯಣ ಗೌಡ ಮನೆಗೆ ಹೋಗಿ ಖುದ್ದು ಬೆಂಬಲ ಕೇಳಲಿದ್ದೇನೆ. ಇಡೀ ರಾಜ್ಯ ಕರೋನಾ ಮತ್ತು ಭೀಕರ ಪ್ರವಾಹದಿಂದ ತತ್ತರಿಸಿರುವಾಗ ಮರಾಠಿಗರ ಅಭಿವೃದ್ದಿಗಾಗಿ ರಾಜ್ಯ ಸರ್ಕಾರ ಮರಾಠಿ ಅಭಿವೃದ್ದಿ ನಿಗಮ ಸ್ಥಾಪನೆಗೆ ಆದೇಶಿಸಿದೆ. ಈ ನಿರ್ಧಾರವನ್ನು ಸಿಎಂ ಬಿಎಸ್ ಯಡಿಯೂರಪ್ಪ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಇನ್ನೊಂದೆಡೆ ಕರ್ನಾಟಕ ಬಂದ್ ಅನ್ನು ತಡೆಯಲು ಸರ್ಕಾರ ಹರಸಾಹಸ ಮಾಡುತ್ತಿದೆ. ಹೀಗಾಗಿ ಕನ್ನಡಪರ ಹೋರಾಟಗಾರರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಎಸಗುತ್ತಿದೆ. ಈ ಬಂದ್ ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಮರಾಠಿ ಅಭಿವೃದ್ದಿ ನಿಗಮ ಸ್ಥಾಪನೆ ಸಂಬಂಧ ಸರ್ಕಾರ ಅಧಿವೇಶನದಲ್ಲಿ ಚರ್ಚೆ ಮಾಡಿಲ್ಲ. ಸರ್ವಪಕ್ಷಗಳ ಸಭೆಯಲ್ಲೂ ಸಮಾಲೋಚಿಸಿಲ್ಲ. ಏಕಾಏಕಿ ಮರಾಠ ಅಭಿವೃದ್ಧಿ ಪ್ರಾಧಿಕಾರ ಘೋಷಣೆ ಮಾಡಿದೆ. ಬಸವ ಕಲ್ಯಾಣ ಚುನಾವಣೆ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದೆಯೇ ಹೊರತು ಬೇರೆ ಯಾವ ಕಾರಣಕ್ಕಾಗಿ ಅಲ್ಲ. ಬಸವಣ್ಣನವರ ನಾಡಿನಲ್ಲಿ ಬಸವಣ್ಣನವರನ್ನೇ ಮರೆತ ಸರ್ಕಾರ ಮರಾಠರ ಓಲೈಕೆಗೆ ಮುಂದಾಗಿರುವುದು ದುರಂತ. ಇದಕ್ಕೆ ತಕ್ಕಪಾಠ ಕಲಿಸುತ್ತೇವೆ ಎಂದು ಕನ್ನಡಪರ ಹೋರಾಟಗಾರರು ಕೆಂಡಕಾರುತ್ತಿದ್ದಾರೆ.
ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ ಮತ್ತು ಪ್ರವೀಣ್ ಶೆಟ್ಟಿ, ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್, ಆದರ್ಶ ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ವೋಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್, ವಕೀಲರ ಸಂಘದ ಕಾರ್ಯದರ್ಶಿ ಗಂಗಾಧರಯ್ಯ, ಕರವೇ ಮುಖ್ಯಸ್ಥ ಎಲ್.ಆರ್. ಶಿವರಾಮೇಗೌಡ ಮತ್ತಿತರರು ಬಂದ್‌ನಲ್ಲಿ ಭಾಗಿಯಾಗಲಿದ್ದಾರೆ.
ಇತ್ತೀಚೆಗೆ ಬೆಳಗಾವಿ ಲೋಕಸಭೆ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ದೃಷ್ಟಿಯಿಟ್ಟುಕೊಂಡು ‘ಮರಾಠ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಮರಾಠಿಗರ ಓಲೈಕೆಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ 50 ಕೋಟಿ ರೂ.ಅನುದಾನ ಮೀಸಲಿಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರಧಾನ ಕಾರ್ಯದರ್ಶಿಯವರಿಗೆ ಸೂಚಿಸಿದ್ದರು.
ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಸದ್ಯದಲ್ಲೇ ಚುನಾವಣೆ ಘೋಷಿಸುವ ಸಾಧ್ಯತೆಗಳಿವೆ. ಚುನಾವಣೆ ಘೋಷಣೆಯಾದ ಬಳಿಕ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗ ಯಾವುದೇ ಭರವಸೆ ನೀಡಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಮರಾಠಿಗರ ಮತಗಳ ಮೇಲೆ ಕಣ್ಣಿಟ್ಟುಕೊಂಡು ಈ ತೀರ್ಮಾನ ಮಾಡಿದೆ.