ನಂಜನಗೂಡಿನ ತಾಲೂಕು ವೈದ್ಯಾಧಿಕಾರಿ ಡಾ. ನಾಗೇಂದ್ರ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಜಿಲ್ಲಾ ಪಂಚಾಯತ್ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸದ್ಯಕ್ಕೆ, ಮೈಸೂರು ಜಿಲ್ಲಾಧಿಕಾರಿಯಾದ ಅಭಿರಾಮ್ ಜಿ ಶಂಕರ್ ಅವರಿಗೆ ಹೆಚ್ಚಿನ ಹೊಣೆಯಾಗಿ ಜಿಲ್ಲಾ ಪಂಚಾಯತ್ ಸಿಇಒ ಆಗಿ ನೇಮಿಸಲಾಗಿದೆ.
ಡಾ. ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬರುತ್ತದ್ದಂತೆಯೇ, ಪ್ರಶಾಂತ್ ಕುಮಾರ್ ವಿರುದ್ದ ಪ್ರತಿಭಟನೆಗಳು ನಡೆದಿದ್ದವು. ಜಿಲ್ಲಾಧಿಕಾರಿ ಕಚೇರಿ ಎದುರು ನಾಗೇಂದ್ರ ಅವರ ಶವವನ್ನು ಇಟ್ಟು ಪ್ರತಿಭಟನೆಯನ್ನು ನಡೆಸಲಾಗಿತ್ತು.
ಪ್ರತಿಭಟನೆಗಳು ನಡೆಯುತ್ತಿದ್ದಂತೆಯೇ, ಸ್ಥಳಕ್ಕಾಗಮಿಸಿ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಅವರ ವಿರುದ್ದ ನಾಗೇಂದ್ರ ಅವರ ಸಹೋದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಡಾ. ನಾಗೇಂದ್ರ ಅವರಿಗೆ 50 ಲಕ್ಷ ರೂ. ಪರಿಹಾರದ ಜೊತೆಗೆ ಅವರ ಮಡದಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ಸರ್ಕಾರ ನೀಡಿತ್ತು.