ವಿಶ್ವದ ದೊಡ್ಡಣ್ಣ ಎಂದೇ ಬಿಂಬಿಸಿಕೊಳ್ಳುವ ಅಮೆರಿಕ ಒಂದು ಅವಕಾಶವಾದಿ ರಾಷ್ಟ್ರ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ಲಾಭವಿಲ್ಲದೆ ಯಾವುದೇ ಕೆಲಸಕ್ಕೆ ಮುಂದಾಗದ, ಎಲ್ಲಿಯೂ ದುಡ್ಡು ಬಿಚ್ಚದ ಅಮೆರಿಕ ಇದೀಗ ಯಾರ ತಲೆಯ ಮೇಲೆ ಕೈ ಇಟ್ಟಿದೆ ಗೊತ್ತಾ? ಸಾಕ್ಷಾತ್ ಭಾರತದ ಮೇಲೆ ಎಂಬುದು ನಂಬಲು ಅಸಾಧ್ಯವಾದರೂ ನಂಬಲೇಬೇಕಾದ ಪರಿಸ್ಥಿತಿ.
ಮೊನ್ನೆ ಮೊನ್ನೆಯಷ್ಟೇ ಗುಜರಾತ್‌ನ ಮೊಟೇರಾ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರ ಎದುರು ಆಯೋಜಿಸಿದ್ದ ಸಮಾರಂಭದಲ್ಲಿ ಅಮೆರಿಕಾ-ಭಾರತ ಭಾಯಿ ಭಾಯಿ ಎಂದಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಕ್ಷರಶಃ ಭಾರತಕ್ಕೆ ನೇರಾ ನೇರ ಬೆದರಿಕೆ ಒಡ್ಡಿದ್ದಾರೆ. ಅದಕ್ಕೆ ಕಾರಣ ಕರೋನಾ ಎಂದು ಬೇರೆ ಬಿಡಿಸಿ ಹೇಳಬೇಕಿಲ್ಲ.
ಕರೋನಾ ಎಂಬ ಮಹಾಮಾರಿ ವಿಶ್ವದಾದ್ಯಂತ ಸುಮಾರು 78 ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದಿದೆ. ಇಟಲಿ ಎಂಬ ಶ್ರೀಮಂತ ರಾಷ್ಟ್ರ ಕರೋನಾ ಹೊಡೆತಕ್ಕೆ ಸಂಪೂರ್ಣ ಜರ್ಜರಿತವಾಗಿದೆ. ಇನ್ನೂ ವಿಶ್ವದಲ್ಲೇ ಅತ್ಯುತ್ತಮ ವೈದ್ಯಕೀಯ ಸೌಲಭ್ಯವನ್ನು ಹೊಂದಿರುವ ಅಮೆರಿಕದಲ್ಲೂ ಸರಾಸರಿಯಾಗಿ ಒಂದು ದಿನಕ್ಕೆ ಸಾವಿರ ಹೆಣವನ್ನು ಈ ಕರೋನಾ ಬೀಳಿಸುತ್ತಿದೆ ಎಂದರೆ ಸುಮ್ಮನೆ ಮಾತಲ್ಲ. ಅಲ್ಲದೆ, ಅಮೆರಿಕದಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎನ್ನಲಾಗುತ್ತಿದೆ.
ಆದರೆ, ಕರೋನಾ ದಾಳಿಯಿಂದ ಹಣ್ಣು ಹಣ್ಣಾಗಿರುವ ಅಮೆರಿಕ ಆಂತರಿಕವಾಗಿ ತೀವ್ರ ನಷ್ಟ ಅನುಭವಿಸಿದೆ. ಈ ನಡುವೆಯೂ ಅಮೆರಿಕ ಸೋಮವಾರ ಭಾರತಕ್ಕೆ ಕರೋನಾ ವಿರುದ್ಧದ ಹೋರಾಟಕ್ಕೆ 20ಕೋಟಿ ಹಣ ನೆರವು ನೀಡಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕದ ಈ ನಡೆ ಸಾಕಷ್ಟು ಕುತೂಹಲಕ್ಕೂ ಕಾರಣವಾಗಿತ್ತು. ಆದರೆ, ಅಮೆರಿಕದ ನಿಜ ಬಣ್ಣ ಇಂದು ಬದಲಾಗಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮಾಡಿ ಇಲ್ಲವೇ ಪರಿಣಾಮ ಎದುರಿಸಿ; ಟ್ರಂಪ್ ಎಚ್ಚರಿಕೆ
ಕರೋನಾ ವೈರಸ್‌ಗೆ ಎಲ್ಲಾ ರಾಷ್ಟ್ರಗಳು ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆಯೇ ಹೊರತು ಯಾವ ರಾಷ್ಟ್ರವೂ ಈವರೆಗೆ ನಿರ್ದಿಷ್ಟ ಔಷಧಿ ಕಂಡು ಹಿಡಿದಿಲ್ಲ. ಆದರೆ, ಶಂಕಿತ ಕರೋನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸುವಂತೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು ಕಳೆದ ಸೋಮವಾರ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.
ಅಲ್ಲದೆ, ಇತ್ತೀಚೆಗೆ COVID-19 ಚಿಕಿತ್ಸೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಕೆಲಸ ನಿರ್ವಹಿಸುತ್ತವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ನಂತರ ಈ ಔಷಧಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿತ್ತು.
ಹೀಗಾಗಿ ಕಳೆದ ಹಲವು ವಾರಗಳಿಂದ ಕರೋನಾ ಪೀಡಿತ ವ್ಯಕ್ತಿಗಳಿಗೆ ಆರಂಭದ ಹಂತದಿಂದಲೂ ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನೇ ಎಲ್ಲಾ ರಾಷ್ಟ್ರದಲ್ಲೂ ಬಳಸಲಾಗುತ್ತಿ0ದೆ. ಹೀಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಔಷಧಿಗೆ ಬೇಡಿಕೆ ಹೆಚ್ಚಾಗಿದ್ದು, ಅಮೆರಿಕಕ್ಕೂ ಈ ಔಷಧಿ ತುರ್ತಾಗಿ ದೊಡ್ಡ ಮಟ್ಟದಲ್ಲಿ ಅಗತ್ಯತೆ ಇದೆ.
ಇದೇ ಕಾರಣಕ್ಕೆ ಅಮೆರಿಕ ಮುಂಬಾಗಿಲಿನಿಂದ ಭಾರತಕ್ಕೆ ನೆರವು ನೀಡುವಂತೆ ನೀಡಿ ಹಿಂಬಾಗಿಲಿನಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಅಮೆರಿಕಕ್ಕೆ ರಫ್ತುಮಾಡಿ ಇಲ್ಲವೇ ಪರಿಣಾಮ ಎದುರಿಸಿ ಎಂದು ಎಚ್ಚರಿಕೆ ನೀಡಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತ ನಿಲ್ಲಿಸಿದ್ದ ಭಾರತ:
ಇಡೀ ವಿಶ್ವದಲ್ಲೇ ಮಲೇರಿಯಾ ಮತ್ತು ಡೆಂಗ್ಯೂ ರೋಗಗಳಿಂದ ಅತಿಹೆಚ್ಚು ಜನ ಸಾಯುವ ರಾಷ್ಟ್ರಗಳ ಪೈಕಿ ಭಾರತಕ್ಕೆ ಅಗ್ರಸ್ಥಾನವಿದೆ. ಇದೇ ಕಾರಣಕ್ಕೆ ಈ ರೋಗಕ್ಕೆ ಅವಶ್ಯಕವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನೂ ಭಾರತ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರವಾಗಿದೆ. ಈ ನಡುವೆ ಭಾರತದಲ್ಲೂ ಸಹ 5 ಸಾವಿರಕ್ಕೂ ಮಿಕ್ಕ ಜನರಿಗೆ ಕರೋನಾ ಸೋಂಕು ತಗುಲಿದೆ. ಅಲ್ಲದೆ150 ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. ಅಲ್ಲದೆ, ಈ ಸೋಂಕು ಸಾಮೂಹಿಕವಾಗಿ ಹರಡಿರುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಕಳೆದ ವಾರ ಭಾರತ ಕೇಂದ್ರ ಸರ್ಕಾರ ದೇಶೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಮಲೇರಿಯಾ ರೋಗವನ್ನು ತಡೆಯುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಗಳ ರಫ್ತಿನ ಮೇಲೆ ಕೇಂದ್ರ ಸರ್ಕಾರ ಸಂಪೂರ್ಣ ನಿರ್ಬಂಧ ಹೇರಿತ್ತು.
ಭಾರತದಲ್ಲೂ ಕರೋನಾ ಪೀಡಿತರ ಸಂಖ್ಯೆ ಅಧಿಕವಾಗಿದ್ದು ಕೇಂದ್ರ ಈ ನಡೆ ಅವಶ್ಯಕವಾಗಿತ್ತು. ಆದರೆ, ಇದೀಗ ಆ ಕಡೆಯಿಂದ ಅಮೆರಿಕ ಇದೀಗ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಅಮೆರಿಕಕ್ಕೆ ತುರ್ತು ರಫ್ತು ಮಾಡಿ ಇಲ್ಲವೇ ಪರಿಣಾಮ ಎದುರಿಸಿ ಎಂದು ನೇರಾನೇರ ಎಚ್ಚರಿಕೆ ನೀಡಿದೆ.
ಅಮೆರಿಕ ಎಚ್ಚರಿಕೆ ನೀಡಿದ ಬೆನ್ನಿಗೆ ಇಂದು ಕೇಂದ್ರ ವಿದೇಶಾಂಗ ಸಚಿವಾಲಯ ಕೋವಿಡ್-19 ಚಿಕಿತ್ಸೆಯಲ್ಲಿ ಬಳಸಬಹುದಾದ ಕೆಲವು ಔಷಧಗಳ ಮೇಲಿನ ರಫ್ತು ನಿರ್ಬಂಧವನ್ನು ತೆಗೆದುಹಾಕಿದೆ. ಈ ಕುರಿತು ಮಂಗಳವಾರ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯ ”ಪ್ಯಾರೆಸಿಟಮಾಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಮಾನವೀಯ ಆಧಾರದ ಮೇಲೆ ನೆರೆಯ ರಾಷ್ಟ್ರಗಳಿಗೆ ಸೂಕ್ತ ಪ್ರಮಾಣದಲ್ಲಿ ರಫ್ತು ಮಾಡಲು ಭಾರತ ನಿರ್ಧರಿಸಿದೆ” ಎಂದು ತಿಳಿಸಿದೆ.
ಅಲ್ಲದೆ, “ಯಾವುದೇ ಜವಾಬ್ದಾರಿಯುತ ಸರ್ಕಾರದಂತೆ ಸ್ವಂತ ಪ್ರಜೆಗಳ ಅವಶ್ಯಕತೆಗಾಗಿ ಸಾಕಾಗುವಷ್ಟು ಹೈಡ್ರೋಕ್ಲೋರಿಕ್ವೀನ್ ಔಷಧಿಯನ್ನು ದೇಶದಲ್ಲಿ ದಾಸ್ತಾನು ಮಾಡಲಾಗಿದೆ ಮಾಧ್ಯಮಗಳು ಈ ಕುರಿತು ಅನಗತ್ಯ ವಿವಾದ ಸೃಷ್ಟಿಸುವ ಅಗತ್ಯ ಇಲ್ಲ” ಎಂದು ಸ್ಪಷ್ಟೀಕರಣ ನೀಡಿದೆ. ಆದರೆ ನೆರೆಯ ರಾಷ್ಟ್ರಗಳ ಕರೋನಾ ಪೀಡಿತರ ಮೇಲೆ ಕಳೆದ ವಾರ ಇಲ್ಲದ ದಯೇ ಪ್ರೀತಿ ಈ ವಾರ ಇದ್ದಕ್ಕಿದ್ದಂತೆ ಹುಟ್ಟಿದ್ದು ಹೇಗೆ? ಏಕೆ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾನು ಅತ್ಯಂತ ವರ್ಚಸ್ವಿ ನಾಯಕ ಎಂದು ಎಲ್ಲೆಡೆ ಬಿಂಬಿಸಿಕೊಳ್ಳಲು ಹೆಣಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಒಂದೇ ಒಂದು ಬೆದರಿಕೆಗೆ ಬೆಚ್ಚಿದರಾ? ಎಂಬುದಕ್ಕೆ ಅವರೇ ಉತ್ತರಿಸಬೇಕಿದೆ.
ಅಲ್ಲಿಯವರೆಗೆ ಹೈಡ್ರೋಕ್ಲೋರಿಕ್ವೀನ್ ಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಔಷಧಿ ರಫ್ತಿಗೆ ನಿರ್ಬಂಧ ಹೇರಿದ್ದು ಮತ್ತು ದಿಢೀರ್ ನಿರ್ಬಂಧ ತೆರವುಗೊಳಿಸಿದ್ದು ಚಿದಂಬರ ರಹಸ್ಯವೇ ಸರಿ.