ಪ್ರಧಾನಿ ಮೋದಿ ನಿರರ್ಗಳ ಮಾತುಗಾರ, ಇಂಗ್ಲಿಷ್ ಪದಗಳ ತಪ್ಪು ಉಚ್ಛಾರಣೆಯಿಂದ ಹಲವು ಬಾರಿ ನಗೆಪಾಟಲಿಗೀಡಾಗಿದ್ದರೂ, ಹಿಂದಿಯಲ್ಲಿ ಚಾಕಚಕ್ಯತೆಯ ಮಾತುಗಾರಿಕೆ ಕೌಶಲ್ಯವಿರುವವರು. ಮಾತುಗಾರಿಕೆಯೇ ತನ್ನ ಬಲ ಎಂದು ಅರ್ಥ ಮಾಡಿಕೊಂಡ ಬಳಿಕ ಮಾತನಾಡಲು ಸಿಗುವ ಯಾವ ಅವಕಾಶವನ್ನು ಕೈಚೆಲ್ಲಲಿಲ್ಲ. ಚೀನಾ ಭಾರತದ ಮೇಲೆ ದಾಳಿ ನಡೆಸಿದ ಸಂಧರ್ಭದಲ್ಲಿ ಮಾತನಾಡಲು ಹಿಂಜರಿದಿದ್ದರೂ ಉಳಿದಂತೆ ಯಾವತ್ತೂ ತನ್ನ ಮಾತುಗಳಿಗೆ ಕಡಿವಾಣ ಹಾಕಿದವರಲ್ಲ. ಕೆಲಸ ಮಾಡದಿದ್ದರೂ ತನ್ನ ಭಾಷಣವೇ ದೇಶದ ಹೊಟ್ಟೆ ತುಂಬಿಸುತ್ತದೆಯೆಂಬ ಭ್ರಮೆಯಲ್ಲಿರುವಂತೆ ʼಮನ್ ಕಿ ಬಾತ್ʼ ಮೂಲಕ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಬಂದಿದ್ದಾರೆ.
ಪ್ರಧಾನಿ ಮೋದಿಯ ಈ ಬಾರಿಯ ಮನ್ ಕಿ ಬಾತ್ ವ್ಯಾಪಕ ಆಕ್ರೋಶಕ್ಕೆ ಒಳಗಾಗಿದೆ. ದೇಶದ ಜ್ವಲಂತ ಸಮಸ್ಯೆಗಳಿಗೆ ಬೆನ್ನುಹಾಕಿ ಮೋದಿ ಕ್ಲೀಷೆಯೆನಿಸುವಂತಹ ಭಾಷಣ ಮಾಡಿದ್ದಾರೆ. ಕರೋನಾ ನಿಯಂತ್ರಣದಲ್ಲಿನ ವೈಫಲ್ಯ, ಅಂತರಾಷ್ಟ್ರೀಯ ಗಡಿ ಬಿಕ್ಕಟ್ಟು, ಜಿಎಸ್ಟಿ ಅನ್ಯಾಯ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಮೊದಲಾದ ಸಾಲು ಸಾಲು ಸಮಸ್ಯೆಗಳನ್ನು ಭಾರತ ಎದುರಿಸುತ್ತಿರುವಾಗ ಮೋದಿ, ದೇಶೀ ತಳಿಯ ನಾಯಿ, ಮಕ್ಕಳ ಆಟಿಕೆಯ ಕುರಿತಂತೆ ಪೇಲವ ಭಾಷಣ ಮಾಡಿದ್ದಾರೆ.
ಅಲ್ಲದೆ, NEET/JEE ಪರೀಕ್ಷೆಗಳ ಕುರಿತಂತೆ ಗೊಂದಲಗಳಲ್ಲಿರುವ ದೇಶದ ವಿದ್ಯಾರ್ಥಿ ಸಮೂಹ ಈ ಬಾರಿಯ ಮೋದಿ ʼಮನ್ ಕಿ ಬಾತ್ʼ ನಲ್ಲಿ ತಮ್ಮ ಗೊಂದಲಗಳಿಗೆ ಉತ್ತರವನ್ನು ನಿರೀಕ್ಷಿಸಿದ್ದರು. ಆದರೆ ಮೋದಿ ಮಕ್ಕಳ ಆಟಿಕೆಯ ಕುರಿತಂತೆ ಭಾಷಣ ಮಾಡಿ ವಿದ್ಯಾರ್ಥಿಗಳ ಆಕ್ರೋಶಕ್ಕೂ ತುತ್ತಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ ʼ NEET/JEE ವಿದ್ಯಾರ್ಥಿಗಳು ಪರೀಕ್ಷಾ ಕುರಿತು ಚರ್ಚೆ ಬಯಸಿದರೆ, ಪ್ರಧಾನಿ ಆಟಿಕೆಯ ಮೇಲೆ ಚರ್ಚೆʼ ಮಾಡಿದ್ದಾರೆಂದು ಟೀಕಿಸಿದ್ದಾರೆ. ರಾಹುಲ್ ಗಾಂಧಿಯ ಟೀಕೆ ಸಮಂಜಸವಾದದ್ದೇ. ಅದಕ್ಕೆ ಪೂರಕವೆಂಬಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಮೋದಿ ಭಾಷಣದ ವಿರುದ್ಧ ಮುಗಿಬಿದ್ದಿದ್ದಾರೆ.
ಮೋದಿಯ ಮನ್ ಕಿ ಬಾತ್ ಆಗಸ್ಟ್ ಸಂಚಿಕೆಯನ್ನು ಆಗಸ್ಟ್ 30 ರಂದು ಭಾರತೀಯ ಜನತಾ ಪಾರ್ಟಿಯ (Bharatiya Janata Party) ಅಧಿಕೃತ ಫೇಸ್ಬುಕ್ ಪೇಜ್, ಯೂಟ್ಯೂಬ್ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಗಿತ್ತು. ಮನ್ ಕಿ ಬಾತ್ ಪ್ರಸಾರಗೊಳ್ಳುತ್ತಿದ್ದಂತೆಯೇ ಮೋದಿ ಭಾಷಣದ ವಸ್ತುಗಳನ್ನು ನೋಡಿ ಜನರು ನಿರಾಸೆಗೊಂಡಿದ್ದಾರೆ. ವಿದ್ಯಾರ್ಥಿಗಳ ನಿರೀಕ್ಷೆಯ ಕಣ್ಣುಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯೂಟ್ಯೂಬ್ ಬಳಕೆದಾರರು ಮೋದಿ ಭಾಷಣಕ್ಕೆ Dislike ಬಟನ್ ಅಮುಕಿದ್ದಾರೆ. ನೋಡ ನೋಡುತ್ತಿದ್ದಂತೆಯೇ ಮೆಚ್ಚುಗೆ ಸೂಚಿಸಿದವರಿಗಿಂತ ಅಸಮ್ಮತಿ ವ್ಯಕ್ತ ಪಡಿಸಿದವರ ಸಂಖ್ಯೆಯೇ ಹೆಚ್ಚಾಗುತ್ತಾ ಸಾಗಿದೆ. ಮರುದಿನ ಮಧ್ಯಾಹ್ನ ಅಂದರೆ ಆಗಸ್ಟ್ 31 ರ ಅಪರಾಹ್ನದ ಹೊತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದವರ ಸಂಖ್ಯೆ 54 ಸಾವಿರ ತಲುಪಿದೆ, ಅಸಮ್ಮತಿ ವ್ಯಕ್ತಪಡಿಸಿ Dislike ಮಾಡಿದವರ ಸಂಖ್ಯೆ ಬರೋಬ್ಬರಿ 4 ಲಕ್ಷಗಳನ್ನು ತಲುಪಿದೆ. 73 ಸಾವಿರಗಳಷ್ಟು ಕಮೆಂಟ್ ಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗಳ ಕುರಿತಂತೆ ಚರ್ಚಿಸುವಂತೆ ಕೇಳಿದರೆ, ವಿದ್ಯಾಭ್ಯಾಸ ಮುಗಿಸಿದವರು ಉದ್ಯೋಗಗಳನ್ನು ಕೇಳಿದ್ದಾರೆ.
ದೇಶದಲ್ಲಿ ಮೋದಿ ವಿರೋಧಿ ಅಲೆ ಆರಂಭದ ಮುನ್ಸೂಚನೆ:
2014 ರಲ್ಲಿ ಭಾರೀ ಆಶ್ವಾಸನೆಗಳ ಮೂಲಕ ಬಹುಮತ ಪಡೆದು ಸರ್ಕಾರ ರಚಿಸಿದ ಮೋದಿ ಹಾಗೂ ಬಿಜೆಪಿ ತನ್ನ ಪ್ರಣಾಳಿಕೆಯ ಆಶ್ವಾಸನೆಗಳನ್ನು ಈಡೇರಿಸಿರಲಿಲ್ಲ. ಅಚ್ಛೇದಿನ್, ಮೇಕ್ ಇನ್ ಇಂಡಿಯಾ, ಸ್ವಚ್ಛ್ ಭಾರತ್, ಕಪ್ಪು ಹಣ ಮರಳಿ ತರುವ ಕುರಿತಂತೆ ಸಾಲು ಸಾಲು ಕನಸುಗಳನ್ನು ಭಾವನಾತ್ಮಕವಾಗಿ ಬಿತ್ತಿದ ಮೋದಿ ಯಾವುದನ್ನೂ ಪರಿಣಾಮಕಾರಿಯಾಗಿ ಪೂರ್ತಿಗೊಳಿಸಿರಲಿಲ್ಲ. ಅದಾಗ್ಯೂ ʼಹಿಂದುತ್ವʼ ಅವರನ್ನು ಕೈ ಹಿಡಿದಿತ್ತು. ಅಭಿವೃದ್ಧಿಗಿಂತ ಹೆಚ್ಚಾಗಿ ಸಿದ್ಧಾಂತಗಳಿಗೇ ಜೋತುಬಿದ್ದವರ ಮತ ನಿರ್ಣಾಯಕವಾಗಿ ಮೋದಿಯನ್ನು ಗೆಲ್ಲಿಸಿತ್ತು. ಇದಕ್ಕೊಂದು ಸ್ಪಷ್ಟ ಉದಾಹರಣೆ ಕನ್ನಡ ಖಾಸಗಿ ಚಾನೆಲ್ ಒಂದರ 2019 ರ ಚುನಾವಣಾ ಪೂರ್ವ ಸಮೀಕ್ಷೆಯ ವೇಳೆ ಕರಾವಳಿ ಮೂಲದ ಸಾಮಾನ್ಯ ವ್ಯಕ್ತಿಯೊಬ್ಬರ ಹೇಳಿಕೆ. ಆ ವ್ಯಕ್ತಿ ಮುಗ್ಧವಾಗಿ “ಜನ ಸಾಮಾನ್ಯರಿಗೆ ಪ್ರಯೋಜನ ಆಗಬೇಕೆಂದರೆ ಕಾಂಗ್ರೆಸ್ ಸರ್ಕಾರ ಬರಬೇಕು, ಆದರೆ ನನ್ನ ವೋಟ್ ಬಿಜೆಪಿಗೆ(ಮೋದಿಗೆ)” ಎಂದಿದ್ದರು.
ಇದನ್ನು ಗಮನಿಸುವುದಾದರೆ ಮೋದಿಯನ್ನು ಅಭಿವೃದ್ಧಿ ಹರಿಕಾರನೆಂದು ನಂಬಿದ ಜನರೇ ಈಗ ಮೋದಿಯನ್ನು ಅಭಿವೃದ್ಧಿಗಾಗಿ ಗೆಲ್ಲಿಸುತ್ತಿಲ್ಲ, ಬದಲಾಗಿ ಅಭಿಮಾನಕ್ಕಾಗಿ ಗೆಲ್ಲಿಸುತ್ತಿದ್ದಾರೆ. ವಿಷ್ಣುವಿನ ಹನ್ನೊಂದನೇ ಅವತಾರ, ಭಾರತಕ್ಕಾಗಿ ದೇವರೇ ಹುಟ್ಟಿಬಂದಿರುವುದು ಮೊದಲಾದ ಭಾವುಕ ಮಾತುಗಳು ದೇಶದ ಬಹುಸಂಖ್ಯಾತರನ್ನು ಮೋದಿಯೆಡೆಗೆ ಸೆಳೆದು ನಿಲ್ಲಿಸುವಂತೆ ಮೋದಿ ಪಿಆರ್ ತಂಡ/ ಬಿಜೆಪಿ ಐಟಿ ಸೆಲ್ ಹಾಗೂ ಕೆಲವು ಖಾಸಗೀ ಸುದ್ದಿ ಚಾನೆಲ್ಗಳು ಮಾಡಿದೆ. ಚುನಾವಣಾ ಪೂರ್ವ ಮೋದಿ ವಿರುದ್ಧ ಎಷ್ಟೇ ಟೀಕೆ ಬಂದರೂ, ಅಪನಂಬಿಕೆ ಹುಟ್ಟಿಕೊಂಡಿದ್ದರೂ ಎರಡನೇ ಅವಧಿಗೆ ಮೋದಿ ಇನ್ನೂ ಪ್ರಚಂಡ ಮತಗಳಿಸಿ ಗೆದ್ದು ಬಂದಿದ್ದರು.
ಬಿಜೆಪಿ ಯೂಟ್ಯೂಬ್ ಚಾನೆಲ್ ವೀಡಿಯೋಗೆ ನಾಲ್ಕು ಲಕ್ಷ ಡಿಸ್ಲೈಕ್ ಬಂದಿರುವುದು ಮೋದಿ ವಿರೋಧಿ ಅಲೆ ಶುರುವಾಗಿದೆ ಎಂಬುವುದಕ್ಕೆ ಉದಾಹರಣೆಯಾಗದು. ಹಿಂದುತ್ವ ಎಂಬುವುದು ನಶೆಯಂತೆ ಭಾರತವನ್ನು ಆವರಿಸಿದೆ. ಅಮಲು ಪದಾರ್ಥಗಳು ಸ್ವಂತ ಶರೀರಕ್ಕೆ ಹಾನಿಕಾರಕ ಎಂದು ಸ್ವಯಂ ಬಳಸುವವನಿಗೆ ಗೊತ್ತಾದರೂ ಅದರಿಂದ ತಕ್ಷಣಕ್ಕೆ ಹೊರಬರಲು ಸಾಧ್ಯವಾಗುವುದಿಲ್ಲ. ಅಸಹನೆಯನ್ನೇ ಉಸಿರಾಗಿಸಿಕೊಂಡ, ಧ್ವೇಷವನ್ನೇ ರಕ್ತದಲ್ಲಿ ಬೆರೆಸಿಕೊಂಡ ಮಂದಿಗೆ, ಮೋದಿ ಅಥವಾ ಬಿಜೆಪಿ ಎಷ್ಟು ಅಪಾಯಕಾರಿ ಎಂಬುದು ಅರಿವಾದರೂ ಅದರಿಂದ ಹೊರಬರಲಾಗುತ್ತಿಲ್ಲ. ಮೋದಿ ವಿರೋಧಿ ಅಲೆಯ ವಾಸ್ತವಾಂಶ ಅರಿವಾಗುವುದು ಯೂಟ್ಯೂಬ್ ಡಿಸ್ಲೈಕ್ ಗಳಲ್ಲ, ಬದಲಾಗಿ EVM ಡಿಸ್ಲೈಕ್ಗಳಲ್ಲಿ..!