ತನ್ನನ್ನು ಟೀಕಿಸಿ ರಾಜಿನಾಮೆ ನೀಡಿದವರನ್ನು ವಿಚಾರಣೆಯ ಇಕ್ಕಳಕ್ಕೆ ಸಿಕ್ಕಿಸುವ ಕೇಂದ್ರ ಸರ್ಕಾರ, ಆಡಳಿತ ಪಕ್ಷವನ್ನು ಸೇರಲೆಂದು ಸೇವೆಯನ್ನು ತ್ಯಜಿಸುವ ಐ.ಎ.ಎಸ್- ಐ.ಪಿ.ಎಸ್. ಅಧಿಕಾರಿಗಳಿಗೆ ಸುಸ್ವಾಗತದ ನಡೆಮುಡಿ ಹಾಸತೊಡಗಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಇಕ್ಕುವ ಕೇಂದ್ರದ ಈ ಧೋರಣೆ ಇತ್ತೀಚಿನ ಹಲವು ಐ.ಎ.ಎಸ್-ಐಪಿಎಸ್ ರಾಜೀನಾಮೆ ಪ್ರಕರಣಗಳಲ್ಲಿ ಒಡೆದು ತೋರಿದೆ.
ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಐ.ಎ.ಎಸ್. ಸೇವೆಗೆ ರಾಜಿನಾಮೆ ಸಲ್ಲಿಸಿದ ‘ತಪ್ಪಿಗಾಗಿ’ ಅವಿಧೇಯತೆ, ವಿಳಂಬ ತಂತ್ರ ಮುಂತಾದ ಅಪಾದನೆಗಳ ಪಟ್ಟಿಯನ್ನು (ಚಾರ್ಜ್ ಶೀಟ್) ಕಣ್ಣನ್ ಗೋಪಿನಾಥನ್ ಅವರಿಗೆ ನೀಡಿದೆ. ಕಣ್ಣನ್ ಗೋಪಿನಾಥನ್ ಅಷ್ಟೇ ಅಲ್ಲ, ಅವರಿಗೆ ಮುನ್ನ ರಾಜಿನಾಮೆ ಸಲ್ಲಿಸಿ ತಮ್ಮದೇ ರಾಜಕೀಯ ಪಕ್ಷ ಪ್ರಕಟಿಸಿದ ಜಮ್ಮು-ಕಾಶ್ಮೀರದ ಐ.ಎ.ಎಸ್. ಅಧಿಕಾರಿ ಶಾಹ್ ಫೈಸಲ್ ಹಾಗೂ ಆನಂತರ ರಾಜಿನಾಮೆ ಸಲ್ಲಿಸಿದ ಕರ್ನಾಟಕ ಕಾಡರ್ ಐ.ಎ.ಎಸ್. ಅಧಿಕಾರಿ ಶಶಿಕಾಂತ ಸೆಂಥಿಲ್ ಅವರ ರಾಜಿನಾಮೆಗಳನ್ನೂ ಕೇಂದ್ರ ಸರ್ಕಾರ ಈವರೆಗೆ ಅಂಗೀಕರಿಸಿಲ್ಲ.
ಸರ್ಕಾರದ ನಡೆಗಳನ್ನು ಒಪ್ಪದಿದ್ದುದೇ ಈ ‘ಕಿರುಕುಳ’ದ ಹಿಂದಿನ ಕಾರಣ. ಫೈಸಲ್ ರಾಜಿನಾಮೆ ನೀಡಿ ಹತ್ತು ತಿಂಗಳುಗಳೇ ಉರುಳಿವೆ. ಪೂರ್ಣಾವಧಿ ರಾಜಕಾರಣಿಯಾಗಿದ್ದರೂ ತಾಂತ್ರಿಕವಾಗಿ ಅವರು ಈಗಲೂ ಕೇಂದ್ರ ಸರ್ಕಾರದ ಉದ್ಯೋಗಿ. ಕರ್ನಾಟಕ ಕಾಡರ್ ನ ಕೆ. ಅಣ್ಣಾಮಲೈ ಅವರು ಐ.ಪಿ.ಎಸ್.ಗೆ ಇತ್ತೀಚೆಗೆ ಸಲ್ಲಿಸಿದ್ದ ರಾಜಿನಾಮೆ ಯಾವುದೇ ತಕರಾರಿಲ್ಲದೆ ಅಂಗೀಕಾರ ಆಗಿದೆ. ಅಣ್ಣಾಮಲೈ ಬಿಜೆಪಿ ಸೇರುವ ಇರಾದೆಯನ್ನು ಖಾಸಗಿಯಾಗಿ ವ್ಯಕ್ತಪಡಿಸಿದ್ದುಂಟು. ರಾಜಿನಾಮೆಯನ್ನು ಇಂತಿಷ್ಟೇ ದಿನಗಳೊಳಗಾಗಿ ಅಂಗೀಕರಿಸಬೇಕು ಎಂಬ ನಿಯಮವೇನೂ ಇಲ್ಲ. ಆದರೆ ಸಿವಿಲ್ ಸರ್ವೀಸ್ ಮಾರ್ಗಸೂಚಿಯ ಪ್ರಕಾರ ಇಷ್ಟವಿಲ್ಲದಿರುವ ಅಧಿಕಾರಿಯನ್ನು ಹಿಡಿದಿಟ್ಟುಕೊಳ್ಳುವುದು ಸರ್ಕಾರದ ಹಿತದೃಷ್ಟಿಯಿಂದ ಸರಿಯಲ್ಲ.
ಹಿಂದುತ್ವದ ಶಕ್ತಿಗಳು ಭಾರತೀಯ ಮುಸ್ಲಿಮರನ್ನು ಕಡೆಗಣಿಸುತ್ತಿರುವ ಮತ್ತು ಕಾಶ್ಮೀರದಲ್ಲಿ ಹತ್ಯೆಗಳು ಅಡೆತಡೆಯಿಲ್ಲದೆ ನಡೆದಿರುವುದನ್ನು ಪ್ರತಿಭಟಿಸಿ ಫೈಸಲ್ ರಾಜಿನಾಮೆ ಸಲ್ಲಿಸಿದ್ದರು. ಗೋಪಿನಾಥನ್ ಮತ್ತು ಫೈಸಲ್ ಇಬ್ಬರೂ ಸೇವಾ ನಡತೆಯನ್ನು ಉಲ್ಲಂಘಿಸಿದ್ದಾರೆಂದು ವಿಚಾರಣೆಗಳು ನಡೆದಿದ್ದು, ಗೋಪಿನಾಥನ್ ಕಳೆದ ಆಗಸ್ಟ್ 26ರಿಂದ ಕರ್ತವ್ಯಕ್ಕೆ ಗೈರು ಹಾಜರಾಗಿ ತಮ್ಮ ಕೆಲಸವನ್ನು ನಿರ್ಲಕ್ಷಿಸಿದ್ದಾರೆಂದು ಪರಿಗಣಿಸಲಾಗಿದೆ. ರಾಜಿನಾಮೆ ಅಂಗೀಕಾರ ಪ್ರಕ್ರಿಯೆ ನಾಲ್ಕೈದು ತಿಂಗಳು ಹಿಡಿಯುವುದು ಸಾಧಾರಣ ಸಂಗತಿ. ಆದರೆ ಕಣ್ಣನ್ ಗೋಪಿನಾಥನ್ ಮತ್ತು ಶಶಿಕಾಂತ್ ಸೆಂಥಿಲ್ ಅವರು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಪ್ರತ್ಯಕ್ಷ-ಪರೋಕ್ಷವಾಗಿ ಟೀಕಿಸಿರುವ ಕಾರಣ ಅವರ ರಾಜಿನಾಮೆಗಳ ಅಂಗೀಕಾರ ಸಲೀಸಾಗಿ ಆಗುವ ಸೂಚನೆಗಳಿಲ್ಲ.
ಕಾಶ್ಮೀರದಲ್ಲಿ ಸರ್ಕಾರದ ಕ್ರಮ ಕುರಿತ ತಮ್ಮ ಭ್ರಮನಿರಸನವನ್ನು ಗೋಪಿನಾಥನ್ ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಬಹುತ್ವ ಜನತಂತ್ರದ ಅಡಿಪಾಯಗಳು ಹಿಂದೆಂದೂ ಇಲ್ಲದ ರೀತಿಯಲ್ಲಿ ಕದಲುತ್ತಿರುವಾಗ ನಾಗರಿಕ ಸೇವೆಯಲ್ಲಿ ಮುಂದುವರೆಯುವುದು ಅನೈತಿಕ ಎಂದು ಸೆಂತಿಲ್ ಹೇಳಿದ್ದರು.
ಕೇಂದ್ರ ಸರ್ಕಾರಕ್ಕೆ ಬೇಕಾದವರಾದರೆ ಅವರ ರಾಜಿನಾಮೆಯನ್ನು ಯಾವುದೇ ತಕರಾರಿಲ್ಲದೆ ಸಲೀಸಾಗಿ ಅಂಗೀಕರಿಸಲಾಗುತ್ತದೆ. ಬೇಡವಾದವರಾದರೆ ವಿಚಾರಣೆ, ಕಿರುಕುಳ, ವಿಳಂಬದ ತಂತ್ರವನ್ನು ಪ್ರಯೋಗಿಸಲಾಗುತ್ತದೆ ಎಂಬುದು ಐ.ಎ.ಎಸ್. ವಲಯಗಳಲ್ಲೇ ಜನಜನಿತ ಮಾತು. ಒಡಿಶಾ ಕಾಡರ್ ಗೆ ಸೇರಿದ ಮತ್ತೊಬ್ಬ ಐ.ಎ.ಎಸ್. ಅಧಿಕಾರಿ ಅಪರಾಜಿತಾ ಸಾರಂಗಿ ಕೂಡ ಕಳೆದ ವರ್ಷ ಬಿಜೆಪಿ ಸೇರಲೆಂದು ಸೇವೆಗೆ ರಾಜಿನಾಮೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಕೆಲವೇ ದಿನಗಳಲ್ಲಿ ಅವರಿಗೆ ‘ನೋ ಅಬ್ಜೆಕ್ಷನ್ ಸರ್ಟಿಫಿಕೇಟ್’ ನೀಡಿತ್ತು. ಭುವನೇಶ್ವರದಿಂದ ಸ್ಪರ್ಧಿಸಿ ಅವರು ಲೋಕಸಭೆಗೆ ಆಯ್ಕೆಯೂ ಆದರು. 2005ರ ತಂಡದ ಛತ್ತೀಸಗಢ ಐ.ಎ.ಎಸ್. ಅಧಿಕಾರಿ ಒ.ಪಿ.ಚೌಧರಿ ಕಳೆದ ವರ್ಷ ಬಿಜೆಪಿ ಸೇರಲೆಂದು ಸೇವೆಗೆ ರಾಜಿನಾಮೆ ಸಲ್ಲಿಸಿದ್ದರು. ಅವರ ರಾಜಿನಾಮೆ ಎರಡೇ ದಿನಗಳಲ್ಲಿ ಅಂಗೀಕಾರ ಆಗಿತ್ತು. ಅದಾದ ಕೆಲವೇ ದಿನಗಳಲ್ಲಿ ಆತ ಬಿಜೆಪಿ ಸೇರಿಯೂ ಬಿಟ್ಟರು. ಛತ್ತೀಸಗಢ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ರಮಣಸಿಂಗ್ ಮತ್ತು ಅಮಿತ್ ಶಾ ಇಬ್ಬರೂ ಇವರ ಪರವಾಗಿ ಪ್ರಚಾರ ನಡೆಸಿದ್ದರು. ಆದರೆ ಕಾಂಗ್ರೆಸ್ ಪ್ರತಿಸ್ಪರ್ಧಿಯ ಎದುರು 17 ಸಾವಿರ ಮತಗಳಿಂದ ಸೋತರು. ಬಿಜೆಪಿ ಕೂಡ ಅಧಿಕಾರ ಕಳೆದುಕೊಂಡಿತು.
ಮೋದಿಯವರ ಮಂತ್ರಿಮಂಡಲದ ಸದಸ್ಯರಾಗಿರುವ ಸತ್ಯಪಾಲ್ ಸಿಂಗ್ ಅವರು ಮುಂಬಯಿ ಪೊಲೀಸ್ ಆಯುಕ್ತ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಉತ್ತರಪ್ರದೇಶದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದವರು. ಅವರ ರಾಜಿನಾಮೆ ಕೂಡ ಯಾವ ಆತಂಕವೂ ಇಲ್ಲದೆ ಅಂಗೀಕಾರವಾಗಿತ್ತು. ಕೇಂದ್ರದ ಕಾಶ್ಮೀರ ನಡೆಯ ವಿರುದ್ಧ ಉಸಿರೆತ್ತಿದ್ದ ಕಣ್ಣನ್ ಗೋಪಿನಾಥನ್ ಅವರನ್ನು ಇದೀಗ ವಿಚಾರಣೆಯ ಇಕ್ಕಳಕ್ಕೆ ಸಿಕ್ಕಿಸಲಾಗುತ್ತಿದೆ.
ಚಾರ್ಜ್ ಶೀಟ್ ನಲ್ಲಿ ಏನಿದೆ?
ಕಳೆದ ಆಗಸ್ಟ್ 23ರಂದು ರಾಜಿನಾಮೆ ಸಲ್ಲಿಸುವ ಸಂದರ್ಭದಲ್ಲಿ ಗೋಪಿನಾಥನ್ ಅವರು ಕೇಂದ್ರಾಡಳಿತ ಪ್ರದೇಶವಾದ ದಮನ್-ದಿಯು ಮತ್ತು ದಾದ್ರಾ ನಗರ ಹವೇಲಿಯ ವಿದ್ಯುಚ್ಛಕ್ತಿ ಕಾರ್ಯದರ್ಶಿಯಾಗಿದ್ದರು. ಅನುಮತಿಯಿಲ್ಲದೆ ತಮ್ಮ ಕಾರ್ಯಸ್ಥಾನವನ್ನು ಬಿಟ್ಟಿದ್ದು, ಸರ್ಕಾರದ ನೀತಿ ನಿರ್ಧಾರಗಳ ಕುರಿತು ಮುದ್ರಣ, ಎಲೆಕ್ಟ್ರಾನಿಕ್ ಸಮೂಹ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅನಧಿಕೃತವಾಗಿ ಮಾತಾಡುತ್ತಿರುವ ಆಪಾದನೆಯನ್ನೂ ಪಟ್ಟಿಯಲ್ಲಿ ಕಾಣಿಸಲಾಗಿದೆ. ಸರ್ಕಾರದ ನೀತಿ ನಿರ್ಧಾರಗಳ ಇಂತಹ ಟೀಕೆಯು ವಿದೇಶಗಳೂ ಸೇರಿದಂತೆ, ಇತರೆ ಸಂಸ್ಥೆಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಗಳನ್ನು ಮುಜುಗರಕ್ಕೆ ಈಡು ಮಾಡುತ್ತವೆ ಎಂದೂ ದೂರಲಾಗಿದೆ.
ದಮನ್ ದಿಯು- ದಾದ್ರಾ ನಗರ ಹವೇಲಿಯಲ್ಲಿ ಭೂಗತ ವಿದ್ಯುತ್ ತಂತಿಗಳನ್ನು ಎಳೆಯುವ ಮತ್ತು ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕೆಲಸದಲ್ಲಿ ವಿಳಂಬ ಉಂಟು ಮಾಡಿದ್ದೀರಿ. ಕೇರಳದ ಪ್ರವಾಹಪೀಡಿತ ಪ್ರದೇಶಗಳಿಗೆ ನೀಡಿದ ಭೇಟಿಯ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಿಲ್ಲ, ಸಾರ್ವಜನಿಕ ಆಡಳಿತದಲ್ಲಿ ನಾವೀನ್ಯತೆಗಾಗಿ ನೀಡುವ ಪ್ರಧಾನಮಂತ್ರಿ ಪ್ರಶಸ್ತಿಗಳಿಗೆ ನಿಗದಿತ ಅವಧಿಯ ಒಳಗಾಗಿ ನಾಮಕರಣಗಳನ್ನು ಸಲ್ಲಿಸಿಲ್ಲ ಹಾಗೂ ಕೆಲ ಸಂದರ್ಭಗಳಲ್ಲಿ ತಮ್ಮನ್ನು ನಿಯಂತ್ರಿಸುವ ಅಧಿಕಾರಿಯನ್ನು ಕಡೆಗಣಿಸಿ ಕಡತಗಳನ್ನು ನೇರವಾಗಿ ಆಡಳಿತಾಧಿಕಾರಿಗೆ ಸಲ್ಲಿಸಿರುವ ಆಪಾದನೆಗಳನ್ನು ಗೋಪಿನಾಧನ್ ಮೇಲೆ ಹೊರಿಸಲಾಗಿದೆ.
ಆದರೆ ಗೋಪಿನಾಥನ್ ಸೇವೆಯನ್ನು ಅತ್ಯುತ್ತಮವೆಂದು ಅವರ ಮೇಲಧಿಕಾರಿಗಳು ಒಪ್ಪಿಕೊಂಡಿದ್ದರೆನ್ನಲಾಗಿದೆ. 2017-18ರ ಸಾಲಿನ ಸೇವಾ ಮೌಲ್ಯಮಾಪನದ ವಾರ್ಷಿಕ ವರದಿಯಲ್ಲಿ ಆಡಳಿತಾಧಿಕಾರಿಯವರು 2018ರ ಡಿಸೆಂಬರ್ 24ರಂದು ತಮಗೆ ಹತ್ತು ಅಂಕಗಳಲ್ಲಿ 9.95 ಅಂಕಗಳನ್ನು ನೀಡಿದ್ದು, ಅದನ್ನು ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿಯವರು ಒಪ್ಪಿದ್ದಾರೆ ಎಂದು ಗೋಪಿನಾಥನ್ ಸಮರ್ಥಿಸಿಕೊಂಡಿದ್ದಾರೆ. ಈ ಆಕ್ಷೇಪಗಳಿಗೆ ಸಂಬಂಧಿಸಿದಂತೆ ರಾಜಿನಾಮೆಯ ಜೊತೆ ಜೊತೆಗೇ ಸಮಜಾಯಿಷಿ ಬರೆದಿದ್ದೆ. ರಾಜಿನಾಮೆ ಅಂಗೀಕರಿಸುವ ಬದಲು ಚಾರ್ಜ್ ಶೀಟ್ ಕಳಿಸಿದ್ದಾರೆ. ಏನು ಕಾರಣವೋ ಗೊತ್ತಿಲ್ಲ. ಪ್ರಧಾನಮಂತ್ರಿ ಪ್ರಶಸ್ತಿಗೆ ಅರ್ಜಿ ಹಾಕಿಕೊಳ್ಳಲಿಲ್ಲವೆಂದು ಅಧಿಕಾರಿಯ ಮೇಲೆ ಚಾರ್ಜ್ ಶೀಟ್ ಹಾಕಿರುವುದನ್ನು ಹಿಂದೆಂದೂ ಕೇಳಿಲ್ಲ ಎಂದೂ ಅವರು ಪ್ರತಿಕ್ರಿಯಿಸಿದ್ದಾರೆ.