ಅಕ್ಟೋಬರ್- ನವೆಂಬರ್‌ನಲ್ಲಿ ನಡೆಯಬೇಕಾಗಿದ್ದ ಐಸಿಸಿ ಟಿ-20 ವಿಶ್ವಕಪ್ ಪಂದ್ಯಗಳು ನಿಗದಿಪಡಿಸಿದ ಸಂಧರ್ಭದಲ್ಲಿ ನಡೆಯುವ ಮುನ್ಸೂಚನೆಯಿಲ್ಲ, ಕರೋನಾ ಸಾಂಕ್ರಮಿಕ ಕ್ರಿಕೆಟ್ ಲೋಕದಲ್ಲೂ ತನ್ನ ಪರಿಣಾಮ ಬೀರಿದೆ ಎಂದು ಆಸ್ಟ್ರೇಲಿಯಾ ಮಾಜಿ ಕಪ್ತಾನ ಮಾರ್ಕ್ ಟೇಲರ್ ಅಭಿಪ್ರಾಯಿಸಿದ್ದಾರೆ.
ಅಲ್ಲದೆ ವಿಶ್ವಕಪ್ ಹಾಗೂ ಭಾರತದ ಐಪಿಎಲ್ ಎರಡೂ ಒಟ್ಟಿಗೇ ಶುರುವಾದರೆ ಆಸ್ಟ್ರೇಲಿಯಾದ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸುವ ಸಾಧ್ಯತೆ ಇದೆಯೆಂದು ಅನಿಸಿಕೆ ವ್ಯಕ್ತಪಡಿಸಿರುವ ಟೇಲರ್, ವಿಶ್ವಕಪ್ ವೇಳಾಪಟ್ಟಿಯ ಕುರಿತು ಐಸಿಸಿ ಶೀಘ್ರವಾಗಿ ತೀರ್ಮಾನ ಕೈಗೊಳ್ಳಬೇಕೆಂದು ಹೇಳಿದ್ದಾರೆ.
ಐಸಿಸಿ ಬೋರ್ಡ್ ಮೀಟಿಂಗ್ ಮೇ 28 ರಂದು ನಡೆಯಲಿದ್ದು, ಕೋವಿಡ್-19 ಸಾಂಕ್ರಾಮಿಕ ರೋಗ, ಟಿ-20 ವಿಶ್ವಕಪ್ ವೇಳಾಪಟ್ಟಿ ಮುಂತಾದ ವಿಷಯಗಳ ಚರ್ಚೆ ನಡೆಯಲಿದೆ.
ಈ ವಾರದಲ್ಲಿ ನಡೆಯುವ ಸಭೆಯಲ್ಲಿ ನಿರ್ಧಾರ ಕೈಗೊಂಡರೆ ಅನುಕೂಲವಾಗಲಿದೆ, ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬಹುದೆಂದು ಹೇಳಿದ್ದಾರೆ.
ಕ್ರಿಕಟ್ ಆಸ್ಟ್ರೇಲಿಯಾದ ಮುಖ್ಯಸ್ಥ ಕೆವಿನ್ ರಾಬರ್ಟ್ಸ್ ಆಗಸ್ಟರವರೆಗೆ ವಿಶ್ವಕಪ್ ಕುರಿತಾದ ಖಚಿತ ಮಾಹಿತಿ ಬರಲಾರದೆಂದು ಅಭಿಪ್ರಾಯಿಸಿದ್ದಾರೆ.
ವಿಶ್ವದ ವಿವಿಧ ತಂಡಗಳು ಹಾಗೂ ಆಟಗಾರರು ವಿಶ್ವಕಪ್ ಕುರಿತಾದ ನಿಶ್ಚಿತ ನಿಲುವಿಗಾಗಿ ಕಾಯುತ್ತಿದ್ದಾರೆ. ವಿಶ್ವಕಪ್ ವೇಳಾಪಟ್ಟಿ ಬರುವಲ್ಲಿವರೆಗೆ ಬಿಸಿಸಿಐ ಐಪಿಎಲ್‌ಗೆ ಹೊಸ ದಿನಾಂಕಗಳನ್ನು ನಿರ್ಧರಿಸುವುದಿಲ್ಲ ಎಂದು ಗಾಯಕ್‌ವಾಡೆ ಹೇಳಿದ್ದರು.