ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು, ವಿಶ್ವಹಿಂದೂ ಪರಿಷತ್ ಹಾಗೂ ಇತರೆ ಬಲಪಂಥೀಯ ಸಂಘಟನೆಗಳ ವಿರುದ್ಧ ಇರುವ ಪ್ರಕರಣಗಳನ್ನು ಹಿಂಪಡೆಯಲು ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದಾಗಿದೆ. ಒಟ್ಟು 46 ಪ್ರಕರಣಗಳನ್ನು ಹಿಂಪಡೆಯಲು ರಾಜ್ಯ ಬಿಜೆಪಿ ಸರ್ಕಾರ ಚಿಂತಿಸಿದೆ.
ಮಾರ್ಚ್ 5ರಂದು ಬಿಜೆಪಿ ಸರ್ಕಾರ ಹೀಗೊಂದು ಮನವಿಯನ್ನು ರಾಜ್ಯಪಾಲರಿಗೆ ಮಾಡಿತ್ತು. ಆದರೆ ಬಿಜೆಪಿ ಸರ್ಕಾರದ ಈ ನಡೆಗೆ ರಾಜ್ಯ ಪೊಲೀಸ್ ಇಲಾಖೆ ಮತ್ತು ರಾಜ್ಯ ಕಾನೂನು ಇಲಾಖೆ ಆಕ್ಷೇಪ ಎತ್ತಿದೆ. ಬಿಜೆಪಿ ಹಿಂಪಡೆಯಲು ಮುಂದಾದ 46 ಪ್ರಕರಣಗಳ ಪೈಕಿ ಕೆಲವು ಪ್ರಕರಣಗಳು ಬಿಜೆಪಿ ಹಿರಿಯ ನಾಯಕ ಸಂಜಯ್ ಪಾಟೀಲ್ ವಿರುದ್ಧವೂ ಇವೆ. ಈ ಎಲ್ಲಾ ಪ್ರಕರಣಗಳು ಕೂಡ 2014ರಿಂದ 2018ರ ಅವಧಿಯಲ್ಲಿ ದಾಖಲಾಗಿರುವಂತದ್ದು. ಈ ವೇಳೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು.
ಯಾವಾಗ ಕಾಂಗ್ರೆಸ್ ಟಿಪ್ಪು ಸುಲ್ತಾನ್ ರನ್ನು ಸ್ವಾತಂತ್ರ್ಯ ಹೋರಾಟಗಾರ ಅಂದುಬಿಟ್ಟಿತೋ, ಆಗಲೇ ಬಿಜೆಪಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಂತಾದ ಬಲಪಂಥೀಯ ಸಂಘಟನೆಗಳು ವೀರಾವೇಷಕ್ಕೆ ಒಳಗಾದವು. ಟಿಪ್ಪು ಸುಲ್ತಾನ್‌ರ ಸ್ವಾತಂತ್ರ್ಯ ಹೋರಾಟವನ್ನು ಮರೆಮಾಚಿ 18ನೇ ಶತಮಾನದಲ್ಲಿ ಟಿಪ್ಪು ಸುಲ್ತಾನ್ ಸಾಮೂಹಿಕ ಹತ್ಯೆ, ಹಿಂಸಾಚಾರ ಮತ್ತು ದೇವಸ್ಥಾನ ದರೋಡೆ ನಡೆಸಿದ್ದಾರೆ ಎಂಬ ವಿಚಾರವನ್ನಷ್ಟೇ ಮುಂದಿಟ್ಟುಕೊಂಡು ಬಹುಸಂಖ್ಯಾತರ ಭಾವನೆಗಳನ್ನ ಕೆಣಕಿದರು. ಪರಿಣಾಮ ರಾಜ್ಯದ ಅಲ್ಲಲ್ಲಿ ಕೋಮು ಗಲಭೆಗಳಾದವು.
18ನೇ ಶತಮಾನದಲ್ಲಿ ಮೈಸೂರನ್ನು ಆಳಿದ್ದ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತನ್ನದೇ ಆದ ಇತಿಹಾಸ ಬರೆದ ಟಿಪ್ಪು ಸುಲ್ತಾನ್ ನಾಡಿನ ಹೆಮ್ಮೆ. ಇವರ ಜಯಂತಿಯನ್ನು 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರಂಭಿಸಿತು. ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಬಿಜೆಪಿ ಸೇರಿದಂತೆ ಹಲವು ಬಲಪಂಥೀಯ ಸಂಘಟನೆಗಳು ಟಿಪ್ಪು ಸುಲ್ತಾನ್ ರನ್ನು ಅವಹೇಳನಾಕಾರಿಯಿಗಿ ಬಿಂಬಿಸಿದರು. ಅಲ್ಲದೇ ಇವರ ಜಯಂತಿಯನ್ನು ಆಚರಿಸಲು ಆದೇಶ ಹೊರಡಿಸಿದ ಸಿದ್ದರಾಮಯ್ಯನವರ ಮೇಲೆ ವಾಗ್ದಾಳಿ ಮಾಡಿದರು. ಅಲ್ದೇ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತು. ಅದ್ರಲ್ಲೂ ಕೊಡಗಿನಲ್ಲಿ ನಡೆದ ಪ್ರತಿಭಟನೆ, ಗಲಭೆಯಾಗಿ ಪರಿವರ್ತನೆಗೊಂಡು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತನೊಬ್ಬ ಗಲಭೆಯಲ್ಲಿ ಅಸುನೀಗಿದನು. ಇದು ಪ್ರಕರಣವನ್ನು ಮತ್ತಷ್ಟು ಕಾವೇರುವಂತೆ ಮಾಡಿತು.
ಈ ವೇಳೆ ಹಿಂದುತ್ವವಾದಿ ಸಂಘಟನೆಗಳು ನಡೆಸಿದ ದ್ವೇಷ ಭಾಷಣದ ಕಾರಣಕ್ಕೆ ಇಡೀ ರಾಜ್ಯ ಹೊತ್ತಿ ಉರಿದಿತ್ತು. ಅಲ್ಪಸಂಖ್ಯಾತರ ಮೇಲೆ ಅಲ್ಲಲ್ಲಿ ಹಲ್ಲೆಗಳಾದವು. ಹೀಗೆ ದಾಖಲಾದ ಪ್ರಕರಣಗಳಲ್ಲಿ ಕೆಲವು ಜಾಮೀನು ರಹಿತ ಮತ್ತು 7 ವರ್ಷ ಶಿಕ್ಷೆಗೆ ಗುರಿಪಡಿಸುವ ಪ್ರಕರಣಗಳಿವೆ.
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಸಿದ್ದರಾಮಯ್ಯ ಸರ್ಕಾರ ಪ್ರತಭಟನಾಕಾರರ ಮತ್ತು ದ್ವೇಷ ಭಾಷಣ ಮಾಡಿದ ನಾಯಕರ ಮೇಲೆ ಕೇಸು ಜಡಿಯಿತು. ಈಗ ಆ ಪ್ರಕರಣಗಳನ್ನು ಸಿಆರ್‌ಪಿಸಿ 321ರ ಅನ್ವಯ ಹಿಂಪಡೆಯಬೇಕು ಎಂದು ಬಿಎಸ್‌ವೈ ಸರ್ಕಾರ ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡಿ ಎಂದು ರಾಜ್ಯಪಾಲ ವಜುಭಾಯಿವಾಲರಿಗೆ ಮನವಿ ಮಾಡಿಕೊಂಡಿದೆ. ಆದರೆ ಇದು ಕಾನೂನು ರೊಟೀನ್ ನಿಯಮಗಳಿಗೆ ವಿರುದ್ಧ ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್ ಅವರು ಆಕ್ಷೇಪ ಎತ್ತಿದ್ದಾರೆ.
ನಮ್ಮ ಇಲಾಖೆ ಈ ರೀತಿಯಾದ ಅರ್ಜಿಗಳನ್ನು ದಿನಂಪ್ರತಿ ಸ್ವೀಕರಿಸುತ್ತಿದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಹಿಂಪಡೆದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿ, ಅಪರಾಧಿಗಳನ್ನು ಕಳುಹಿಸಿ ಕೊಡಲು ಸಾಧ್ಯವಿಲ್ಲ. ನಮ್ಮ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತ ಮನವಿ ಇದು. ಹೀಗಾಗಿ ಇದನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟ ಪಡಿಸಿದೆ.
2015ರ ಬಳಿಕ ನವೆಂಬರ್ 10ರಂದು ಟಿಪ್ಪು ಜಯಂತಿಯ ಸಮಯದಲ್ಲಿ ಬಲಪಂಥೀಯ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸೋದು ವಾಡಿಕೆಯಾಗಿದೆ. ಈ ವೇಳೆ ಎಲ್ಲವೂ ಕೋಮು ಗಲಭೆಗಳಾಗಿವೆ. ಇದನ್ನ ಹತೋಟಿಗೆ ತೆಗೆದುಕೊಳ್ಳಲು ಕರ್ಫ್ಯೂ ಹೇರಲಾಗುತ್ತದೆ. ಆದರೂ ಪ್ರತಿಭಟನಾಕಾರರು ದೊಂಬಿ ಎಬ್ಬಿಸಿ, ವಿಧ್ವಂಸಕ ಕೃತ್ಯ ಎಸಗಿ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟು ಮಾಡೋದು ಒಂದು ಚಾಳಿಯಾಗಿದೆ.
2017, ನವೆಂಬರ್ 10ರಂದು ಬೆಳಗಾವಿಯಲ್ಲಿ ಬಿಜೆಪಿ ನಾಯಕ ಸಂಜಯ್ ಪಾಟಿಲ್ ಟಿಪ್ಪು ಜಯಂತಿ ಆಚರಿಸಿದ ಹಿನ್ನೆಲೆ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಯದ್ವಾತದ್ವಾ ತರಾಟೆಗೆ ತೆಗೆದುಕೊಂಡು ಸಾರ್ವಜನಿಕವಾಗಿ ತೇಜೋವಧೆ ಮಾಡಿದರು. ಓರ್ವ ದೇಶದ್ರೋಹಿಯ ಜಯಂತಿಯನ್ನು ಸಿದ್ದರಾಮಯ್ಯನವರು ಆಚರಿಸುತ್ತಿದ್ದಾರೆ. ಹೀಗಾಗದರೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಸಿದ್ದರಾಮಯ್ಯನವರು ಅವರ ಡಿಎನ್‌ಯ ಯನ್ನು ಸಾಬೀತು ಮಾಡಲಿ. ಅವರ ಜಾತಿ ಯಾವುದು ಧರ್ಮ ಎಂಬುವುದನ್ನು ಮೊದಲು ಜನರಿಗೆ ತಿಳಿಸಲಿ. ಟಿಪ್ಪು ಜಯಂತಿ ಆಚರಿಸುವ ಮೂಲಕ ಹಿಂದೂಗಳಿಗೆ ಅನ್ಯಾಯ ಎಸಗುತ್ತಿದ್ದಾರೆ ಎಂದು ಬಹಿರಂಗ ಸಭೆಯಲ್ಲಿ ವಾಗ್ದಾಳಿ ನಡೆಸಿದರು. ಅಲ್ಲದೇ ಟಿಪ್ಪು ಸುಲ್ತಾನ್ ಮೈಸೂರಿನ ಹುಲಿಯಲ್ಲ, ಮೈಸೂರಿನ ಇಲಿ ಎಂದು ಅವರನ್ನೂ ಅವಹೇಳನ ಮಾಡಿದ್ದರು.
ಈ ರೀತಿಯ ದ್ವೇಷ ಭಾಷಣ ಮತ್ತು ಮುಖ್ಯಮಂತ್ರಿಗಳನ್ನು ಬಹಿರಂಗವಾಗಿ ತೇಜೋವಧೆ ಮಾಡಿದ ಕಾರಣಕ್ಕೆ ಅಂದು ಸಂಜಯ್ ಪಾಟೀಲ್ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 153 (ಎ)ರ ಅಡಿಯಲ್ಲಿ ಕೇಸು ದಾಖಲಾಗಿತ್ತು. ಇದು ಕೂಡ ಯಡಿಯೂರಪ್ಪ ಸರ್ಕಾರ ಹಿಂಪಡೆಯಲು ಮುಂದಾಗಿರುವ 46 ಪ್ರಕರಣಗಳ ಪೈಕಿ ಒಂದಾಗಿದೆ. ಈ ಘಟನೆಗೂ ಕೆಲವೇ ಕೆಲವು ದಿನಗಳ ಮುಂಚಿತವಾಗಿಯಷ್ಟೇ ಸಂಜಯ್ ಪಾಟಿಲ್ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಯೂನಿಟ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇದರ ಹೊರತಾಗಿ ಕಳೆದ ಟಿಪ್ಪು ಜಯಂತಿ ಆಚರಣೆಯ ವೇಳೆಗೆ ಬೆಳಗಾವಿ, ವಿಜಯಪುರ, ಹಾಸನ, ಮಂಡ್ಯ, ಕೊಡಗು, ಚಿತ್ರದುರ್ಗ, ಬೆಂಗಳೂರು, ಉತ್ತರಕನ್ನಡ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದರು. ಈ 46 ಪ್ರಕರಣಗಳ ಪೈಕಿ ಕೊಡಗು ಜಿಲ್ಲೆಯಲ್ಲೇ 18 ಕೇಸುಗಳಿವೆ.
ಕಳೆದ ಜುಲೈನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೆ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. ಟಿಪ್ಪು ಸುಲ್ತಾನ್ ರ ಯಶೋಗಾಥೆ ರಾಜ್ಯದ ಜನರಿಗೆ ತಲುಪದಿರಲಿ ಎಂಬುವುದು ಇದರ ಮೂಲ ಉದ್ದೇಶವಾಗಿತ್ತು. ಆದರೆ, ಬಿಎಸ್‌ವೈ ಸರ್ಕಾರದ ಈ ನಡೆಯನ್ನು ಪ್ರಶ್ನಿಸಿ ಬಿಲಾಲ್ ಅಲಿ ಶಾ ಎಂಬವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದರ ಪೂರ್ವ ಪರ ವಿಚಾರಿಸಿದ ನ್ಯಾಯಪೀಠ ಈ ಬಗ್ಗೆ ತೀರ್ಪು ಹೊರಹಾಕದೆ ಈ ಪ್ರಕರಣದ ತೀರ್ಪನ್ನು ಹಾಗೇ ಕಾಯ್ದಿರಿಸಿಕೊಂಡಿದೆ. ಹೀಗಾಗಿ ಟಿಪ್ಪು ಜಯಂತಿ ರದ್ದುಗೊಳಿಸುವ ಬಿಜೆಪಿ ಆದೇಶ ತಾತ್ಕಾಲಿಕವಾಗಿ ರದ್ದಾಯಿತು. ಕೋರ್ಟಿನ ತೀರ್ಪು ಬಂದ ಬಳಿಕವಷ್ಟೇ ಟಿಪ್ಪು ಜಯಂತಿ ವಿಚಾರದಲ್ಲಿ ಅಂತಿಮ ನಿರ್ಧಾರ ಗೊತ್ತಾಗಲಿದೆ. ಈತನ್ಮಧ್ಯೆ, ರಾಜ್ಯ ಬಿಜೆಪಿ ಈ ಸಂಬಂಧ ದಾಖಲಾದ 46 ಪ್ರಕರಣಗಳನ್ನು ವಜಾಗೊಳಿಸಲು ಕಸರತ್ತು ನಡೆಸುತ್ತಿದೆ.