ರಾಜ್ಯದಲ್ಲಿ ಜೆಡಿಎಸ್ ಸಂಕಷ್ಟದಲ್ಲಿದೆ. ನಾಯಕರ ನಡವಳಿಕೆಗೆ ಬೇಸತ್ತು ಒಬ್ಬೊಬ್ಬರೇ ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಹೋಗುವವರು ಹೋಗಲಿ, ಇರುವವರನ್ನು ಉಳಿಸಿಕೊಂಡು ಪಕ್ಷ ಕಟ್ಟುತ್ತೇವೆ ಎಂದು ನಾಯಕರು ಹೇಳುತ್ತಿದ್ದಾರೆಯೇ ಹೊರತು ಸಮಸ್ಯೆಗಳೇನು ಎಂಬುದನ್ನು ತಿಳಿದು ಅದನ್ನು ಬಗೆಹರಿಸಿ ಪಕ್ಷಕ್ಕೆ ಹಾನಿಯಾಗದಂತೆ ನೋಡಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ ಈ ರೀತಿಯಾದರೂ ನಾಯಕರು ಎಚ್ಚೆತ್ತುಕೊಳ್ಳುಂಡು ಪಕ್ಷ ಗಟ್ಟಿಗೊಳಿಸುವ ಲಕ್ಷಣ ಕಾಣಿಸುತ್ತಿಲ್ಲ. ಬದಲಾಗಿ ತಮ್ಮ ಕುಟುಂಬದ ಕುಡಿಗೆ ಮದುವೆ ಮಾಡಿಸುವುದರ ಜತೆ ಜತೆಗೆ ಅವರ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಲು ಆದ್ಯತೆ ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಅಪಾಯ ಎದುರಾಗುತ್ತಿದ್ದಾಗಲೇ ಜೆಡಿಎಸ್ ನಲ್ಲಿ ಗೊಂದಲ ಆರಂಭವಾಗಿತ್ತು. ಮೂವರು ಶಾಸಕರ ರಾಜೀನಾಮೆ ಬೆನ್ನಲ್ಲೇ ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ದೂರ ಸರಿಯುವ ಮುನ್ಸೂಚನೆ ನೀಡಿದ್ದರು. ಆದರೆ, ಇದಕ್ಕೆ ಕಾರಣಗಳನ್ನು ಹುಡುಕಿ ಗೊಂದಲ ಬಗೆಹರಿಸುವ ಕೆಲಸಕ್ಕೆ ನಾಯಕರಾರೂ ಆಸಕ್ತಿ ತೋರಿಸಲಿಲ್ಲ. ಅದರ ಪರಿಣಾಮ ಈಗ ಒಬ್ಬೊಬ್ಬರೇ ಪಕ್ಷದಿಂದ ದೂರವಾಗುವ ಲಕ್ಷಣ ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಸೆಳೆದುಕೊಳ್ಳಲು ಬಿಜೆಪಿ ಮತ್ತು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿವೆ. ಇದರ ನಡುವೆಯೇ ಪಕ್ಷ ಸಂಘಟನೆಗಿಂತ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯಕ್ಕೆ ಸೂಕ್ತ ಸ್ಥಳ ಆಯ್ಕೆ ಮಾಡುವಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಮುಂದಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಕಾರ್ಯವನ್ನೇ ಇದಕ್ಕೆ ಪಾಯವಾಗಿ ಬಳಸಿಕೊಳ್ಳಲಾಗುತ್ತಿದೆ.
ಹೌದು, ಅರ್ಚಕರಹಳ್ಳಿಯ ಜಾನಪದ ಲೋಕದ ಬಳಿ ಮೈದಾನದಲ್ಲಿ ಏಪ್ರಿಲ್ 17ರಂದು ನಿಖಿಲ್ ಮತ್ತು ರೇವತಿ ಅವರ ವಿವಾಹ ನೆರವೇರಲಿದೆ. ಅದಕ್ಕಾಗಿ ದೇವೇಗೌಡರ ಕುಟುಂಬದ ಸದಸ್ಯರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರು ಶಾಸಕರಾಗಿರುವ ಚನ್ನಪಟ್ಟಣ ಮತ್ತು ರಾಮನಗರ ಕ್ಷೇತ್ರದ ಎಲ್ಲರಿಗೂ ವಿವಾಹ ಆಮಂತ್ರಣ ಮತ್ತು ಉಡುಗೊರೆ ನೀಡಿ ಆಹ್ವಾನಿಸಲಾಗುತ್ತಿದೆ. ಇದನ್ನು ರಾಜಕೀಯವಾಗಿಯೂ ಬಳಸಿಕೊಳ್ಳಲು ನಿರ್ಧರಿಸಿರುವ ದೇವೇಗೌಡರು ಮತ್ತು ಕುಟುಂಬ ಸದಸ್ಯರು, ರಾಮನಗರ ಕ್ಷೇತ್ರವನ್ನು ನಿಖಿಲ್ ಅವರಿಗೆ ಭದ್ರಪಡಿಸಿಕೊಳ್ಳುವ ಕೆಲಸಕ್ಕೂ ಕೈಹಾಕಿದ್ದಾರೆ. ಅಂದರೆ, ಅವರಿಗೆ ಪಕ್ಷ ಸಂಘಟನೆಗಿಂತ ಕುಟುಂಬ ರಾಜಕೀಯವೇ ಪ್ರಮುಖವಾಗಿರುವುದು ಸ್ಪಷ್ಟವಾಗುತ್ತಿದೆ. ಈ ನಡವಳಿಕೆಯೇ ಜೆಡಿಎಸ್ ಗೊಂದಲದಲ್ಲಿ ಮುಳುಗಲೂ ಕಾರಣವಾಗಿದೆ.
ಜೆಡಿಎಸ್ ಪಕ್ಷದ ಪರಿಸ್ಥಿತಿ ಹೇಗಿದೆ?
ಜೆಡಿಎಸ್ ಪರಿಸ್ಥಿತಿ ಬಗ್ಗೆ ಅದರ ಕಾರ್ಯಾಧ್ಯಕ್ಷ ಮಧು ಬಂಗಾರಪ್ಪ ಅವರು ಎರಡು ದಿನಗಳ ಹಿಂದೆ ನೀಡಿದ ಹೇಳಿಕೆಯೇ ಪಕ್ಷ ಯಾವ ಹಂತದಲ್ಲಿದೆ ಎಂಬುದಕ್ಕೆ ಸಾಕ್ಷಿ. ನಾನು ನಿಷ್ಕ್ರಿಯ ಪಕ್ಷದ ನಾಯಕ ಎಂದು ತಮ್ಮನ್ನು ಬಣ್ಣಿಸಿಕೊಂಡ ಮಧು ಬಂಗಾರಪ್ಪ, ನಾನಾಗಿ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ. ಬೇಕಾದರೆ ಅವರೇ ರಾಜೀನಾಮೆ ಕೇಳಬಹುದು. ಇಲ್ಲವೇ ನನ್ನನ್ನು ಹುದ್ದೆಯಿಂದ ತೆಗೆಯಬಹುದು ಎಂದು ಪಕ್ಷದ ನಾಯಕರಿಗೆ ಚಾಟಿ ಬೀಸಿದ್ದಾರೆ. ಮಾತು ಮುಂದುವರಿಸಿದ್ದ ಅವರು, ಪಕ್ಷದ ನಾಯಕರು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಗೊಂದಲ ಬಗೆಹರಿಸದಿದ್ದರೆ ಮುಂದೆ ದೊಡ್ಡ ಅನಾಹುತ ಆಗಬಹುದು ಎಂದೂ ಎಚ್ಚರಿಸಿದ್ದಾರೆ. ಅಲ್ಲದೆ, ನಾನು ಪಕ್ಷ ಬಿಡುವಾಗ ಹೇಳಿ ಹೋಗುತ್ತೇನೆ. ಎಚ್. ವಿಶ್ವನಾಥ್ ಅವರು ಪಕ್ಷ ಬಿಡುವಾಗ ಅವರ ಮನವೊಲಿಸಲು ಯತ್ನಿಸಿದ್ದೆ. ವಿಶ್ವನಾಥ್ ಹಾಗೂ ಕುಮಾರಸ್ವಾಮಿ ಮಧ್ಯೆ ಒಡಕು ತಂದಿಡುವ ಪ್ರಯತ್ನವನ್ನು ಪಕ್ಷದಲ್ಲಿಯೇ ಕೆಲವರು ಮಾಡಿದ್ದರು ಎಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಅಪರಾಧ ಹಿನ್ನೆಲೆಯ ರಮೇಶಗೌಡ ಅಂಥವರನ್ನು ಪರಿಷತ್ ಸದಸ್ಯರಾಗಿ ಮಾಡಬಾರದಿತ್ತು. ಯೋಗ್ಯತೆ ಇಲ್ಲದ ಅವರ ಆಯ್ಕೆ ಯಾರ ನಿರ್ಧಾರ. ಅವರಿಂದ ರಾಜೀನಾಮೆ ಪಡೆದು ಒಳ್ಳೆಯವರಿಗೆ ಕೊಡಲಿ. ಧರ್ಮೇಗೌಡ ಪಕ್ಷ ಬಿಟ್ಟು ಹೋಗಲು ಮುಂದಾಗಿದ್ದರು. ಅವರನ್ನೂ ಪರಿಷತ್ ಸದಸ್ಯ ಮಾಡಬಾರದಿತ್ತು ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಇದು ಮಧು ಬಂಗಾರಪ್ಪ ಅವರೊಬ್ಬರ ಮಾತಲ್ಲ, ಪಕ್ಷದ ಅನೇಕರು ಇದೇ ಅಭಿಪ್ರಾಯ ಹೊಂದಿದ್ದಾರೆ. ಅದರೆ, ಅದನ್ನು ಬಹಿರಂಗವಾಗಿ ಹೇಳುವ ಧೈರ್ಯ ಮಾತ್ರ ಮಾಡುತ್ತಿಲ್ಲ.
ಇನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಭೇಷ್ ಎನಿಸಿಕೊಂಡಿದ್ದ ಜಿ.ಟಿ.ದೇವೇಗೌಡ ಕೂಡ ಒಂದು ಕಾಲನ್ನು ಜೆಡಿಎಸ್ ನಿಂದ ಹೊರಗಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಇನ್ನೂ ಇಬ್ಬರು ಶಾಸಕರು ಬಿಜೆಪಿಯತ್ತ ಬರುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಇನ್ನು ಮೂರ್ನಾಲ್ಕು ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದ್ದು, ಯಾವತ್ತು ಬೇಕಾದರೂ ಅವರು ಆ ಗಾಳಕ್ಕೆ ಸಿಲುಕಿಕೊಳ್ಳಬಹುದು. ಹಾಗೇನಾದರೂ ಆದರೆ ಒಕ್ಕಲಿಗರ ಭದ್ರ ಕೋಟೆಯಲ್ಲೇ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳಬಹುದು.
ಪಕ್ಷ ಹೀಗಾಗಲು ಕಾರಣವೇನು?
ಸಂಘಟನೆ ಬಗ್ಗೆ ತಲೆಕೆಡಿಸಿಕೊಳ್ಳುವ ನಾಯಕರ ಕೊರತೆಯೇ ಜೆಡಿಎಸ್ ಈ ಪರಿಸ್ಥಿತಿಗೆ ಬರಲು ಕಾರಣ. ರಾಜಕೀಯ ಪಕ್ಷ ಎಂದರೆ ಗೊಂದಲಗಳು ಉದ್ಭವವಾಗುವುದು ಸಹಜ. ಅಂತಹ ಸಂದರ್ಭದಲ್ಲಿ ನಾಯಕರಾದವರು ಎಲ್ಲವನ್ನೂ ಸರಿದೂಗಿಸಿಕೊಂಡು ಅಸಮಾಧಾನ ಶಮನಗೊಳಿಸಿ ಪಕ್ಷವನ್ನು ಸರಿದಾರಿಗೆ ತರಬೇಕು. ಆದರೆ, ಜೆಡಿಎಸ್ ನಲ್ಲಿ ಮುಂಚೂಣಿಯಲ್ಲಿರುವ ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಅಂತಹ ಪ್ರಯತ್ನಕ್ಕೆ ಕೈಹಾಕುತ್ತಿಲ್ಲ. ಹೋಗುವವರೆಲ್ಲಾ ಹೋಗಲಿ ಎನ್ನುತ್ತಾ ಅಸಮಾಧಾನಿತರನ್ನು ಮತ್ತೆ ರೊಚ್ಚಿಗೆಬ್ಬಿಸುತ್ತಿದ್ದಾರೆ. ಇನ್ನು ಎಚ್.ಡಿ.ರೇವಣ್ಣ ಅವರು ಹಾಸನ ಬಿಟ್ಟು ಹೊರಬರುತ್ತಿಲ್ಲ. ಹೀಗಿರುವಾಗ ಪಕ್ಷವನ್ನು ಸರಿದಾರಿಗೆ ತರುವವರಾದರೂ ಯಾರು? ಸದ್ಯ ಜೆಡಿಎಸ್ ನಲ್ಲಿ ಯಾರೂ ಈ ಕೆಲಸಕ್ಕೆ ಕೈಹಾಕುತ್ತಿಲ್ಲ. ಇದರ ಪರಿಣಾಮವೇ ದಿನಕಳೆದಂತೆ ಜೆಡಿಎಸ್ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ.
ಇನ್ನು ದೇವೇಗೌಡರ ಕುಟುಂಬ ಸದಸ್ಯರಿಗೆ ಪಕ್ಷ ಎಂದರೆ ಕಾಣಿಸುವುದು ತಮ್ಮ ಕುಟುಂಬದವರು ಮಾತ್ರ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದ ಜೆಡಿಎಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕುಮಾರಸ್ವಾಮಿ ತಮ್ಮ ಪುತ್ರನನ್ನು ಮಂಡ್ಯ ಕ್ಷೇತ್ರದಿಂದ ಕಣಕ್ಕಿಳಿಸಿದರು. ಇದರ ಪರಿಣಾಮ ಪಕ್ಷ ಜಿಲ್ಲೆಯಲ್ಲಿ ಸೋಲು ಕಾಣುವಂತಾಯಿತು. ಪುತ್ರ ಸೋತ ಬಳಿಕ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದರು. ಇದೀಗ ಮಂಡ್ಯದಲ್ಲಿ ತಮ್ಮ ಕುಟುಂಬದ ಬೇರುಗಳನ್ನು ವಿಸ್ತರಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ ಈಗಾಗಲೇ ನೆಲೆ ಗಟ್ಟಿಯಿರುವ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ರಾಜಕೀಯ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ತಮ್ಮ ಕುಟುಂಬ ಕಣದಲ್ಲಿಲ್ಲದಿದ್ದರೂ ಜೆಡಿಎಸ್ ಕೈಹಿಡಿದ ಮಂಡ್ಯ ಜಿಲ್ಲೆಯ ಜನತೆ, ಕಾರ್ಯಕರ್ತರನ್ನು ದೂರವಿಡುತ್ತಿದ್ದಾರೆ. ಇದರ ಪರಿಣಾಮ ನೆರೆಯ ಮೈಸೂರು ಜಿಲ್ಲೆಗೂ ವ್ಯಾಪಿಸುತ್ತಿದ್ದು, ಈ ಎರಡು ಜಿಲ್ಲೆಗಳ ಜೆಡಿಎಸ್ ಶಾಸಕರು ಮತ್ತು ಮುಖಂಡರ ಪೈಕಿ ಕೆಲವರು ಕಾಂಗ್ರೆಸ್ ಮತ್ತು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಪರಿಸ್ಥಿತಿ ಹೀಗಿರುವಾಗ ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಪಕ್ಷ ಸಂಘಟನೆ ಕಷ್ಟವಾಗಬಹುದು. ನಿಖಿಲ್ ಕುಮಾರಸ್ವಾಮಿ ಅವರಿಗೆ ರಾಜಕೀಯ ವೇದಿಕೆ ಸಿದ್ಧಪಡಿಸುವುದು ತಪ್ಪಲ್ಲ. ಆದರೆ, ಆ ಸಂದರ್ಭದಲ್ಲಿ ಇದುವರೆಗೆ ತಮ್ಮ ಕೈಹಿಡಿದಿದ್ದ ಇತರೆ ಕಾರ್ಯಕರ್ತರು ಮತ್ತು ಮುಖಂಡರ ಬಗ್ಗೆಯೂ ಗಮನಹರಿಸಬೇಕು. ಅಸಮಾಧಾನಗೊಂಡಿರುವವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿ ಅವರನ್ನು ಪಕ್ಷದಲ್ಲೇ ಉಳಿಸಿಕೊಂಡು ಸಂಘಟನೆಯ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಆಪರೇಷನ್ ಗಳಿಂದಾಗಿ ತೆನೆ ಹೊತ್ತ ಮಹಿಳೆಯ ಪರಿಸ್ಥಿತಿ ಬಿಗಡಾಯಿಸಬಹುದು.