ಜೆಎನ್ ಯು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ನಡೆದ ಭೀಕರ ಹಲ್ಲೆಯನ್ನು ಖಂಡಿಸಿ ವಿಶ್ವದಾದ್ಯಂತದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಈ ಮೂಲಕ ಜೆಎನ್ ಯು ಪ್ರಕರಣ ವಿಶ್ವದೆಲ್ಲೆಡೆ ಪ್ರತಿಧ್ವನಿಸತೊಡಗಿದೆ.
ಜೆಎನ್ ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆ ಮತ್ತು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಮತ್ತು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ ಹಾಗೂ ಪೊಲೀಸರು ವಿದ್ಯಾರ್ಥಿಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ವಿಶ್ವದೆಲ್ಲೆಡೆಯ ವಿಶ್ವವಿದ್ಯಾಲಯಗಳು ಆಕ್ರೋಶ ವ್ಯಕ್ತಪಡಿಸಿವೆ.
ಇಂತಹ ಹಲ್ಲೆಗಳು ಮತ್ತು ದೌರ್ಜನ್ಯಗಳನ್ನು ನಡೆಸುವ ಮೂಲಕ ಸರ್ಕಾರ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸಿಎಎ-ಎನ್ಆರ್ ಸಿ ಅಥವಾ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಇದರಿಂದಾಗುವ ಅನ್ಯಾಯವನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ನ್ಯಾಯ ಕೇಳಲು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸುವಂತಹ ಪರಿ ಬರಬಾರದು. ಆದರೆ, ಸರ್ಕಾರ ಪೊಲೀಸರನ್ನು ಬಿಟ್ಟು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ ಎಂದು ವಿಶ್ವದ ವಿವಿಧೆಡೆ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವರ್ಗ ಆಕ್ರೋಶ ವ್ಯಕ್ತಪಡಿಸಿದೆ.
ಜೆಎನ್ ಯುನಲ್ಲಿ ಹಾಸ್ಟೆಲ್ ಶುಲ್ಕವನ್ನು ಹೆಚ್ಚಳ ಮಾಡಿದ್ದರಿಂದ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವಿದ್ಯಾರ್ಥಿ ಚಳವಳಿಯನ್ನು ಹತ್ತಿಕ್ಕಲು ಪೊಲೀಸರು ಮತ್ತು ವಿವಿಯ ಭದ್ರತಾ ಪಡೆಗಳು ಯತ್ನಿಸುತ್ತಿವೆ. ಆದರೆ, ಇದಕ್ಕೆ ಜಗ್ಗದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿ ಸಮೂಹದೊಂದಿಗೆ ಮಾತುಕತೆಗೆ ಮುಂದಾಗುತ್ತಿಲ್ಲ. ಹೀಗಾಗಿ ಕಳೆದ ಎರಡು ತಿಂಗಳಲ್ಲಿ ವಿಶ್ವವಿದ್ಯಾಲಯ ರಣಾಂಗಣವಾಗಿ ಮಾರ್ಪಟ್ಟಿದೆ. ವಿದ್ಯಾರ್ಥಿಗಳ ಹೋರಾಟದ ಕಸುವು ಹೆಚ್ಚಾಗುತ್ತಿದೆಯೇ ಹೊರತು ಕಡಿಮೆಯಾಗುವ ಲಕ್ಷಣಗಳಿಲ್ಲ. ಇದಕ್ಕೆ ಪ್ರಮುಖ ಕಾರಣ ಕೇಂದ್ರ ಸರ್ಕಾರದ ಹಠಮಾರಿತನ.
ಯುಕೆಯಲ್ಲಿ ಲಂಡನ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಇದರ ವಿರುದ್ಧ ಪ್ರತಿಭಟನೆಗಳು ಜೋರಾಗಿ ನಡೆದಿವೆ. ದೇಶದ ಜನತೆ ಪೌರತ್ವ ಕಾನೂನು ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು ವಿರೋಧಿಸಿಯಾಗಿದೆ. ಆದಾಗ್ಯೂ ಸರ್ಕಾರ ಈ ಬಗ್ಗೆ ಕಠಿಣ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ಇನ್ನು ಜೆಎನ್ ಯು, ಜಾಮಿಯಾ ಮತ್ತು ಎಎಂಯುಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿರುವುದು ಖಂಡನೀಯವಾಗಿದೆ. ಮೊದಲು ವಿದ್ಯಾರ್ಥಿಗಳು, ನಂತರ ಶಿಕ್ಷಕರು, ನಂತರ ವೈದ್ಯರು, ನಂತರ ಪುಸ್ತಕಗಳು ಎಂದು ಸಾರುವ ಪ್ಲೇಕಾರ್ಡ್ ಹಿಡಿದ ಪ್ರತಿಭಟನಾಕಾರರು ಭಾರತೀಯ ವಿವಿಗಳ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ಆಕ್ಸ್ ಫರ್ಡ್ ನ 74 ಸ್ಕಾಲರ್ ಗಳು ಮುಸ್ಲಿಂ ವಿರೋಧಿಯಾಗಿರುವ ಸಿಎಎಯನ್ನು ವಾಪಸ್ ಪಡೆಯಬೇಕು ಮತ್ತು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಭಾರತ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಅಲ್ಲಿವ ವಿದ್ಯಾರ್ಥಿ ಸಮೂಹ, ಭಾರತೀಯ ವಿವಿಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಅಮಾನುಷ ಹಲ್ಲೆ ಅಕ್ಷಮ್ಯ. ಇಂತಹ ಘಟನೆಗಳ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.
ಅಮೇರಿಕಾದಲ್ಲಿಯೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ. ನ್ಯೂಯಾರ್ಕ್, ಲಾಸ್ ಏಂಜಲೀಸ್, ಬಾಲ್ಟಿಮೋರ್, ವಾಷಿಂಗ್ಟನ್ ಮತ್ತು ಫಿಲಿಡೆಲ್ಫಿಯಾದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮೂಹ ಪ್ರತಿಭಟನೆ ನಡೆಸಿ ಭಾರತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ನ್ಯೂಯಾರ್ಕ್ ನಲ್ಲಿ ಪ್ರತಿಭಟನಾಕಾರರು ‘New York Stands With JNU’ ಎಂಬ ಘೋಷಣೆಯೊಂದಿಗೆ ಜೆಎನ್ ಯು ವಿದ್ಯಾರ್ಥಿಗಳಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ.
ಜನರ ವಿರೋಧದ ನಡುವೆಯೂ ಸಿಎಎ, ಎನ್ಆರ್ ಸಿಯನ್ನು ಬಲವಂತವಾಗಿ ಜಾರಿಗೆ ತರುತ್ತಿರುವ ಮೋದಿ-ಶಾಗೆ ಧಿಕ್ಕಾರ, ಸಂಘಿ ಹಿಂಸಾಚಾರಕ್ಕೆ ಧಿಕ್ಕಾರ ಇದರಿಂದ ಆಜಾದಿ ಬೇಕು ಎಂಬೆಲ್ಲಾ ಘೋಷಣೆಗಳನ್ನು ಕೂಗತ್ತಾ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಸರ್ಕಾರದ ದುರಾಡಳಿತದ ವಿರುದ್ಧ ದ್ವನಿ ಎತ್ತಿರುವ ಭಾರತೀಯ ವಿದ್ಯಾರ್ಥಿ ಸಮೂಹದೊಂದಿಗೆ ನಾವಿದ್ದೇವೆ ಎಂದು ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ.
ಕೃಪೆ: ದಿ ವೈರ್