ವಿಚಾರವಾದಿ ಆನಂದ್ ತೇಲ್ತುಂಬ್ಡೆಗೆ ಜೂನ್ 5ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆದಿದೆ. ಏಪ್ರಿಲ್ 14ರಂದು ರಾಷ್ಟ್ರೀಯ ವಿಶೇಷ ತನಿಖಾ ದಳ ಆನಂದ್ ತೇಲ್ತುಂಬ್ಡೆ ಅವರನ್ನ ಎಲ್ಘಾರ್ ಪರಿಷಧ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತ್ತು. ಹತ್ತು ದಿನಗಳ ವಿಚಾರಣೆಯ ಬಳಿಕ ಏಪ್ರಿಲ್ 25ರಂದು ಎನ್‌ಐಎ ವಿಶೇಷ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿ, ತಲೋಜ ಜೈಲಿಗೆ ಕಳುಹಿಸಿತ್ತು.
ಎನ್‌ಐಎ ಸಿಬ್ಬಂದಿಯೊಬ್ಬರಿಗೆ ಕರೋನಾ ವೈರಸ್ ಪಾಸಿಟಿವ್ ಬಂದಿದ್ದ ಹಿನ್ನೆಲೆ ಆನಂದ್ ತೇಲ್ತುಂಬ್ಡೆಯವರನ್ನ ಜೈಲಿನಲ್ಲೇ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಈ ಹಿನ್ನೆಲೆ ಮೇ 15ರಂದು ತೇಲ್ತುಂಬ್ಡೆ ಪರ ವಕೀಲರು, ತನ್ನ ಕಕ್ಷಿದಾರನಿಗೆ ಸೂಕ್ತ ವೈದ್ಯಕೀಯ ನಿಗಾ ನೀಡಬೇಕಾಗಿ ವಿಶೇಷ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿ ನ್ಯಾಯಾಲಯ ಆನಂದ್ ತೇಲ್ತುಂಬ್ಡೆ ಅವರ ಆರೋಗ್ಯದ ಬಗೆಗಿನ ವರದಿಯನ್ನು ಕೇಳಿತ್ತು.
ರಾಷ್ಟ್ರೀಯ ವಿಶೇಷ ತನಿಖಾ ದಳ ತೇಲ್ತುಂಬ್ಡೆಯವರಿಗೆ ಮಾವೋಯಿಸ್ಟ್‌ಗಳ ಜೊತೆ ನಂಟಿದೆ ಎಂದು ಹೇಳಿತ್ತು. ಅಲ್ಲದೆ ಸಮಾಜ ಬಾಹಿರ ಚಟುವಟಿಕೆ ನಡೆಸುವ ಸಂಘಟನೆಗಳ ಬಳಿಯಿಂದ ಹಣವನ್ನೂ ಪಡೆದಿದ್ದರು ಎಂದು ನ್ಯಾಯಾಲಯದ ಮುಂದೆ ಹೇಳಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡಿತ್ತು. ಇದಾಗಿ ಏಪ್ರಿಲ್ 25ರಂದು ನ್ಯಾಯಾಂಗ ಬಂಧನ ವಿಧಿಸಿತ್ತು. ಈಗ ಮತ್ತೆ ಜೂನ್5ರ ವರೆಗೆ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿದೆ.
