ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಮಾನವ ಸಂತಾನಾಭಿವೃದ್ಧಿಯಲ್ಲಿ ಮಾತ್ರವಲ್ಲದೆ ಜಗದ ಜೀವಜಾಲದ ಮುಂದುವರಿಕೆಯ ಮೂಲಧಾತು ವೀರ್ಯಾಣು. ಜೀವ ಸೃಷ್ಟಿಯ ಮೂಲ ಈ ವೀರ್ಯಾಣು ಎಂದು ಮನುಷ್ಯ ಕಂಡುಕೊಂಡು ಬರೋಬ್ಬರಿ ಸರಿಸುಮಾರು 350 ವರ್ಷಗಳಾಗಿವೆ. ವಿಪರ್ಯಾಸವೆಂದರೆ; ಈ ಮೂರೂವರೆ ಶತಮಾನ ಕಾಲವೂ ನಮ್ಮದೇ ಹುಟ್ಟಿನ ಮೂಲವಾದ ಈ ವೀರ್ಯಾಣು ನಮ್ಮನ್ನೇ ಮೂರ್ಖರನ್ನಾಗಿಸುತ್ತಲೇ ಬಂದಿದೆ!
ಹೌದು, ವೀರ್ಯಾಣುವಿನ ಕುರಿತ ಹೊಸ ಸಂಶೋಧನೆ ಈ ಶತಮಾನಗಳ ಮೂರ್ಖತನದ ಮೇಲೆ ಬೆಳಕು ಚೆಲ್ಲಿದೆ. ಆಂಟೊನಿ ವ್ಯಾನ್ ಲೀವ್ಯುನ್ಹಾಕ್ ಎಂಬಾತ 17ನೇ ಶತಮಾನದಲ್ಲಿ ರೂಪಿಸಿದ ಜಗತ್ತಿನ ಮೊದಲ ಮೈಕ್ರೋಸ್ಕೋಪ್, ಮನುಷ್ಯನಿಗೆ ಸೂಕ್ಷ್ಮಾಣು ಜೀವ ಲೋಕದ ಪರಿಚಯ ನೀಡಿತು. ಆತ ತನ್ನ ಅದೇ ಮೈಕ್ರೋಸ್ಕೋಪ್ ಬಳಸಿ 1677ರಲ್ಲಿ ವೀರ್ಯಾಣು ಸೇರಿದಂತೆ ಮಾನವ ಜೀವಕೋಶ ಮತ್ತಿತರ ಹಲವು ಸೂಕ್ಷ್ಮ ರಚನೆಗಳನ್ನು ಕಂಡುಹಿಡಿದ. ಆತ ಅಂದು ವಿರ್ಯಾಣುವನ್ನು ‘ಲಿವಿಂಗ್ ಅನಿಮಾಲ್ಕ್ಯೂಲ್’ ಎಂದು ಹೆಸರಿಸಿ ‘ಅದಕ್ಕೊಂದು ಬಾಲವಿದ್ದು, ಅದು ಈಜುವಾಗ ಹಾವಿನಂತೆ ಬಳಕುತ್ತದೆ, ನೀರಿನ ಈಲ್ ಮೀನಿನಂತೆ ವೀರ್ಯಾಣು ಸಾಗುತ್ತದೆ’ ಎಂದು ವಿವರಿಸಿದ್ದ. ಅವತ್ತಿನಿಂದ ಇವತ್ತಿನವರೆಗೆ ಮೈಕ್ರೋಸ್ಕೋಪ್ ನಲ್ಲಿ, ಜೀವ ವಿಜ್ಞಾನದಲ್ಲಿ, ವೈದ್ಯ ವಿಜ್ಞಾನದಲ್ಲಿ ಸಾವಿರಾರು ಬದಲಾವಣೆಗಳಾದರೂ, ಕ್ರಾಂತಿಕಾರಕ ಸಂಶೋಧನೆಗಳಾದರೂ, ವೀರ್ಯಾಣುವಿನ ಚಲನೆಯ ವಿಷಯದಲ್ಲಿ ಮಾತ್ರ ಆತ ಹೇಳಿದ್ದೇ ಸತ್ಯವಾಗಿತ್ತು ಮತ್ತು ಅದನ್ನೇ ಎಲ್ಲರೂ ನಂಬಿಕೊಂಡುಬಂದಿದ್ದರು!
ಎಷ್ಟರಮಟ್ಟಿಗೆ ಎಂದರೆ, ಸಂತಾನ ಸಮಸ್ಯೆಯ ವಿಷಯದಲ್ಲಿ ವೈದ್ಯಕೀಯವಾಗಿ ಬಹಳ ಮಖ್ಯವಾಗುವುದು ವೀರ್ಯಾಣು ಮತ್ತು ಅಂಡಾಣುಗಳ ಆರೋಗ್ಯ ಮತ್ತು ಸ್ಥಿರತೆ. ಆ ವಿಷಯ ನಿರ್ಣಯಿಸಲು ನೆರವಾಗುವುದು ವೀರ್ಯಾಣುವಿನ ಚಲನೆ ವೇಗ ಮತ್ತು ಚುರುಕುತನ. ಜಗತ್ತಿನ ಸಂತಾನ ಸಮಸ್ಯೆಯ ಪೈಕಿ ಶೇ.50ರಷ್ಟು ಸಮಸ್ಯೆಯ ಮೂಲ ಇರುವುದು ಪುರುಷರ ವೀರ್ಯಾಣುವಿಗೆ ಸಂಬಂಧಿಸಿದಂತೆಯೇ. ಹಾಗಾಗಿ ವೀರ್ಯಾಣುವಿನ ಸಂಖ್ಯೆ ಮತ್ತು ಅದರ ಸಕ್ರಿಯತೆಯ ಮೇಲೆ ಬಹುತೇಕ ದಂಪತಿಗಳ ಭವಿಷ್ಯದ ಪೀಳಿಗೆಯ ಭವಿಷ್ಯವೇ ನಿರ್ಧಾರವಾಗುತ್ತದೆ. ಆದರೆ, ವೀರ್ಯಾಣುವಿನ ಚುರುಕುತನ ನಿರ್ಧಾರಿಸುವ ಅಂಶಗಳಲ್ಲಿ ಅದರ ಚಲನೆ ಕ್ರಮ ಮತ್ತು ವೇಗ ಕೂಡ ಮುಖ್ಯವಾದುದು. ವಿಚಿತ್ರವೆಂದರೆ; ಈ ಮುನ್ನೂರೈವತ್ತು ವರ್ಷ ಕಾಲವೂ ನಮ್ಮ ವಿಜ್ಞಾನ, ವೈದ್ಯಕೀಯ ಜಗತ್ತು ವೀರ್ಯಾಣುಗಳು, ಆಂಟೊನಿ ವ್ಯಾನ್ ಹೇಳಿದಂತೆ ಈಜುತ್ತವೆ ಎಂದೇ ನಂಬಿಕೊಂಡು ಬಂದಿತ್ತು. ಹಾಗೆ ‘ಈಜುವ’ ಅದರ ಸ್ವಭಾವ, ವೇಗದ ಮೇಲೆ ಅದರ ಬಲಿಷ್ಟತೆ, ದೌರ್ಬಲ್ಯಗಳನ್ನು ಅಳೆಯಲಾಗುತ್ತಿತ್ತು!
ಆದರೆ, ಈಗ ಬ್ರಿಸ್ಟಾಲ್ ವಿಶ್ವವಿದ್ಯಾಲಯದ ಹರ್ಮೆಸ್ ಗಡೆಲಾ ಮತ್ತು ಅವರ ತಂಡ 3 ಡಿ ಮೈಕ್ರೋಸ್ಕೋಪ್ ಬಳಸಿ ನಡೆಸಿದ ವೀರ್ಯಾಣು ಚಲನೆಯ ಅಧ್ಯಯನ ಬೇರೆಯದೇ ಸತ್ಯವನ್ನು ತೆರೆದಿಟ್ಟಿದೆ. ಆ ಅಧ್ಯಯನದ ಪ್ರಕಾರ, ವೀರ್ಯಾಣು ಅಂಡಾಣುವಿನೊಂದಿಗೆ ಸಂಪರ್ಕ ಸಾಧಿಸಲು ಚಲಿಸುವ ರೀತಿ ಈಜುವುದಲ್ಲ. ಬದಲಾಗಿ ಅದು ಸ್ಪಿನ್(ಏಕ ಕಾಲಕ್ಕೆ ಉರುಟುರುಟಾಗಿ ಸುತ್ತುತ್ತಾ, ಮುಂದೆ ಚಲಿಸುವುದು) ಮಾಡುತ್ತಾ ಮುಂದೆ ಚಲಿಸುತ್ತದೆ. ಸೆಕೆಂಡಿಗೆ 20 ಕ್ಕಿಂತ ಹೆಚ್ಚು ಬಾರಿ ಸ್ಪಿನ್ ಮಾಡುವ ವೀರ್ಯಾಣುವಿನ ಬಾಲ, ಈ ಮೊದಲು ತಿಳಿದಂತೆ ಎರಡೂ ಕಡೆ ಬೀಸದೆ, ಕೇವಲ ಒಂದು ಕಡೆ ಮಾತ್ರ ಬೀಸುತ್ತದೆ. ಆದರೂ, ಇದ್ದಲ್ಲಿಯೇ ಸುತ್ತುಹಾಕುವ ಬದಲು ಅದು ಮುಂದೆ ಚಲಿಸಲು ಅದರ ಸ್ಪಿನಿಂಗ್ ಸಹಾಯಕವಾಗಿದೆ. ವೀರ್ಯಾಣುವಿನ ದೇಹದ ಸ್ಪಿನ್ನಿಂಗ್ ಕೇವಲ 3 ಡಿ ಮೈಕ್ರೋಸ್ಕೋಪ್ ನಲ್ಲಿ ಮಾತ್ರ ಕಾಣುತ್ತದೆ ವಿನಃ, ಈಗ ಸಾಮಾನ್ಯವಾಗಿ ಬಳಕೆಯಲ್ಲಿರುವ 2 ಡಿ ಮೈಕ್ರೋಸ್ಕೋಪಿನಲ್ಲಿ ಅದು ಕಾಣಿಸದು.
ಹಾಗಾಗಿ, ಈಗ ವೈದ್ಯಕೀಯ ಲಾಬುಗಳಲ್ಲಿ ವೀರ್ಯಾಣುವಿನ ಕ್ಷಮತೆ ಅಳೆಯಲು ಬಳಸುವ ಅದರ ಚಲನೆಯ ವೇಗ ಮತ್ತು ಚುರುಕುತನದ ಕುರಿತ ಮಾನದಂಡಗಳು ಕೂಡ ಬದಲಾಗಬೇಕಿದೆ. ಈಜುತ್ತಾ ಚಲಿಸುವ ರೀತಿಗೂ, ಸ್ಪಿನ್ ಮಾಡುತ್ತಾ ಚಲಿಸುವ ರೀತಿಗೂ ಮೂಲಭೂತವಾಗಿ ವ್ಯತ್ಯಾಸ ಇರುವುದರಿಂದ ಆ ವಿಧಾನಗಳಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕಿದೆ. ಅಂದರೆ, ಪುರುಷರ ವೀರ್ಯಾಣು ಕ್ಷಮತೆ ಮತ್ತು ಸಂತಾನಶಕ್ತಿಯ ನಿರ್ಧಾರಕ ಅಂಶಗಳಲ್ಲಿ ಕೂಡ ಈ ಸಂಶೋಧನೆಯಿಂದಾಗಿ ಕ್ರಾಂತಿಕಾರಕ ಬದಲಾವಣೆಗಳಾಗಲಿವೆ. ವೀರ್ಯದ ಗುಣಮಟ್ಟದ ನಿರ್ಧಾರದಲ್ಲಿ ಕೂಡ ಬದಲಾವಣೆಯಾಗಬೇಕಿದೆ ಎಂದು ಹರ್ಮೆಸ್ ಗಡೆಲಾ ಹೇಳಿದ್ದಾರೆ.
ಸಂತಾನ ಸೃಷ್ಟಿಗೆ ಒಂದು ಹಿಮಾಲಯ ಪರ್ವತವನ್ನೇ ಏರಿದಷ್ಟು ಶ್ರಮಿಸಬೇಕಾದ ವೀರ್ಯಾಣು(ಅದರ ಗಾತ್ರ ಮತ್ತು ಕ್ರಮಿಸುವ ದೂರದ ಲೆಕ್ಕದಲ್ಲಿ), ಈ ಮೊದಲು ಅಂದುಕೊಂಡಂತೆ ಸರಾಗವಾಗಿ ಈಜಿ ಸಾಗುವುದಿಲ್ಲ; ಬದಲಾಗಿ ಸ್ಪಿನ್ ಮಾಡುತ್ತಾ ಉರುಳುರುಳಿ ಸಾಗುತ್ತದೆ ಎಂದರೆ, ಅದರ ಆ ಪಯಣ ಇನ್ನೆಷ್ಟು ಶ್ರಮದಾಯಕವಲ್ಲವೆ? ಒಂದು ಜೀವ ಸೃಷ್ಟಿಯ ಹಿಂದಿನ ಆ ಬಡಪಾಯಿ ವೀರ್ಯಾಣುವಿನ ಶ್ರಮವನ್ನು ನಿಖರವಾಗಿ ಗುರುತಿಸುವ ಪ್ರಯತ್ನ ಕೊನೇ ಪಕ್ಷ ಈಗಲಾದರೂ ಆಯಿತಲ್ಲ ಎಂದು ಗಂಡು ಹೈಕಳು ನಿಟ್ಟುಸಿರು ಬಿಡಬಹುದು! ಹಾಗಾಗಿ ಈಗ ಬದುಕು ಎಂದರೆ ಈಸಬೇಕು, ಇದ್ದು ಜೈಸಬೇಕು ಅಲ್ಲ; ಉರುಳಬೇಕು, ಉರುಳುರುಳಿ ಏಳಬೇಕು!