ಎಲ್ಲರ ನಿರೀಕ್ಷೆಯಂತೆ ಪ್ರಸಕ್ತ ವಿತ್ತೀಯ ವರ್ಷದ (2019-20) ದ್ವಿತೀಯ ತ್ರೈಮಾಸಿಕದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ.4.5ಕ್ಕೆ ಕುಸಿದಿದೆ. ಕಳೆದ ಆರೂವರೆ ವರ್ಷಗಳಲ್ಲೇ ಅತಿ ಕನಿಷ್ಠ ಬೆಳವಣಿಗೆ ಇದಾಗಿದೆ. ಮೊದಲ ತ್ರೈಮಾಸಿಕದಲ್ಲಿ ಇದು ಶೇ.5ರಷ್ಟಿತ್ತು. ಒಟ್ಟಾರೆ ದೇಶದ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿ ಸಾಗಿದ್ದು, ದ್ವಿತೀಯ ತ್ರೈಮಾಸಿಕದ ಅಂಕಿ ಅಂಶಗಳು ಮುಂಬರುವ ದಿನಗಳಲ್ಲಿ ಇದು ಆರ್ಥಿಕ ಹಿಂಜರಿತವಾಗಿ ಪರಿವರ್ತನೆಗೊಳ್ಳುವ ಮುನ್ಸೂಚನೆ ನೀಡಿವೆ.
ಆತಂಕದ ಸಂಗತಿ ಎಂದರೆ ಜಿಡಿಪಿ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಕಳೆದ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇ.7.6ರಷ್ಟಿದ್ದ ಜಿಡಿಪಿ, ಮೂರನೇ ತ್ರೈಮಾಸಿಕದಲ್ಲಿ ಶೇ. 6ಕ್ಕೆ, ನಾಲ್ಕನೇ ತ್ರೈಮಾಸಿಕದಲ್ಲಿ ಶೇ.5.8ಕ್ಕೆ ಮತ್ತು ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ.5ಕ್ಕೆ ಇಳಿದು ಈಗ ತ್ವರಿತವಾಗಿ ಶೇ.4.5ಕ್ಕೆ ಕುಸಿದಿದೆ. ಪ್ರಕಟಿತ ಅಂಕಿಅಂಶಗಳ ಪ್ರಕಾರ ಪ್ರಸಕ್ತ ವಿತ್ತೀಯ ವರ್ಷದ ಪೂರ್ವಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಶೇ.4.7ರಷ್ಟಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ವಿತ್ತೀಯ ವರ್ಷದ ಒಟ್ಟಾರೆ ಜಿಡಿಪಿಯು ಶೇ.5ಕ್ಕಿಂತ ಕೆಳಕ್ಕೆ ಕುಸಿಯುವ ಅಪಾಯ ಇದೆ. 2018-19ರಲ್ಲಿ ಒಟ್ಟಾರೆ ಜಿಡಿಪಿ ಶೇ.6.8ರಷ್ಟಿತ್ತು. ಆ ಪ್ರಮಾಣದಲ್ಲಿ ಶೇ.5ಕ್ಕೆ ಕೆಳಕ್ಕೆ ಕುಸಿಯುವುದೆಂದರೆ ಅದು ಆರ್ಥಿಕ ಹಿಂಜರಿತದ ಮುನ್ಸೂಚನೆಯೇ ಸರಿ.
ಗ್ರಾಹಕರ ವಲಯದಲ್ಲಿನ ಬೇಡಿಕೆ ಕುಸಿತ, ಉತ್ಪಾದನಾ ವಲಯದಲ್ಲಿನ ಮಂದಗತಿ, ಸುಧೀರ್ಘ ಅವಧಿಯ ಮುಂಗಾರು ಮಳೆಯು ಜಿಡಿಪಿ ಕುಸಿತಕ್ಕೆ ಕಾಣವೆಂದು ಸರ್ಕಾರ ಹೇಳಿದೆ. ಆದರೆ, ಅಪನಗದೀಕರಣ ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಸರಕು ಮತ್ತು ಸೇವಾ ತೆರಿಗೆ ಯೋಜನೆಯ ಪ್ರತಿಫಲವಾಗಿ ದೇಶದ ಆರ್ಥಿಕತೆ ಕುಸಿತದತ್ತಾ ಸಾಗಿದೆ. ಅಪನಗದೀಕರಣದ ವ್ಯತಿರಿಕ್ತ ಪರಿಣಾಮಗಳು ಅಲ್ಪವಧಿ ಅಥವಾ ಮಧ್ಯಮಾವಧಿಗೆ ಸೀಮಿತವಾಗಿಲ್ಲ. ಸುಧೀರ್ಘ ಅವಧಿಯವರೆಗೆ ಇರುತ್ತವೆ. ಅದು ಜಿಡಿಪಿ ಅಂಕಿಅಂಶಗಳಲ್ಲಿ ಪ್ರತಿಬಿಂಬಿತವಾಗುತ್ತಿವೆ.
ಈ ತಿಂಗಳಲ್ಲಿ ಬಿಡುಗಡೆಯಾಗಿರುವ ಬೃಹದಾರ್ಥಿಕತೆ ಅಂಕಿಅಂಶಗಳು ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿರುವುದನ್ನು ಪ್ರತಿಬಿಂಬಿಸಿದ್ದವು. ಕೈಗಾರಿಕಾ ಉತ್ಪಾದನೆ ಸೆಪ್ಟೆಂಬರ್ ತಿಂಗಳಲ್ಲಿ ಶೇ.4.3ಕ್ಕೆ ಕುಸಿದು, ಕಳೆದ ಏಳು ವರ್ಷಗಳಲ್ಲೇ ಅತಿ ಕನಿಷ್ಠಮಟ್ಟದ ಬೆಳವಣಿಗೆಯನ್ನು ದಾಖಲಿಸಿತ್ತು. ತಯಾರಿಕಾ ವಲಯ, ಗಣಿ, ವಿದ್ಯುತ್ ವಲಯದಲ್ಲಿನ ಕುಸಿತವು ಇದಕ್ಕೆ ಕಾರಣವಾಗಿತ್ತು.
ಜಿಡಿಪಿ ಶೇ.4.5ಕ್ಕೆ ಕುಸಿಯಲು ಪ್ರಮುಖ ಕಾರಣ ಎಂದರೆ ವಿದ್ಯುತ್, ಕಬ್ಬಿಣ, ರಿಫೈನರಿ ಉತ್ಪನ, ಕಚ್ಚಾ ತೈಲ, ಕಲ್ಲಿದ್ದಲು, ಸಿಮೆಂಟ್, ನೈಸರ್ಗಿಕ ಅನಿಲ ಮತ್ತು ರಸಗೊಬ್ಬರ ಉದ್ಯಮ- ಈ ಎಂಟು ವಲಯಗಳನ್ನು ಒಳಗೊಂಡ ಮೂಲಭೂತ ಕೈಗಾರಿಕಾ ಸೂಚ್ಯಂಕವು ಸೆಪ್ಟೆಂಬರ್ ತಿಂಗಳಲ್ಲಿ ಶೇ.5.4ಕ್ಕೆ ಕುಸಿದಿದೆ. ಜುಲೈನಲ್ಲಿ ಶೇ.2.7ರಷ್ಟು ಇದ್ದದ್ದು ಆಗಸ್ಟ್ ನಲ್ಲಿ ಶೇ.-0.5 ಮತ್ತು ಸೆಪ್ಟೆಂಬರ್ ನಲ್ಲಿ ಶೇ. -5.4ಕ್ಕೆಕುಸಿದಿದೆ. ಅಕ್ಟೋಬರ್ ತಿಂಗಳಲ್ಲಿ ಎಂಟು ವಲಯಗಳ ಪೈಕಿ ಆರು ವಲಯಗಳಲ್ಲಿ ಕುಸಿತ ದಾಖಲಿಸಿವೆ. ಕಲ್ಲಿದ್ದಲು ಉತ್ಪಾದನೆ ಶೇ.17.6ರಷ್ಟು, ಕಚ್ಚಾ ತೈಲ ಶೇ.5.1, ನೈಸರ್ಗಿಕ ಅನಿಲ ಶೇ.5.7ರಷ್ಟು ಕುಸಿದಿದೆ. ಸಿಮೇಂಟ್ ಉತ್ಪಾದನೆ ಶೇ.7.7 ಕಬ್ಬಿಣ ಶೇ.1.6 ಮತ್ತು ವಿದ್ಯುತ್ ಇತ್ಪಾದನೆ ಶೇ.12.4ರಷ್ಟು ಕುಸಿತ ದಾಖಲಿಸಿವೆ. ಧನಾತ್ಮಕ ಬೆಳವಣಿಗೆ ದಾಖಲಿಸಿರುವ ಒಂದ ವಲಯ ಎಂದರೆ ರಸಾಯನಿಕ ಗೊಬ್ಬರ ಉತ್ಪಾದನೆ. ಅಕ್ಟೋಬರ್ ನಲ್ಲಿ ಶೇ.11.8ರಷ್ಟು ಬೆಳವಣಿಗೆ ದಾಖಲಿಸಿದೆ.

ಜಿಡಿಪಿ ಕುಸಿತ ತಡೆಯಲು ದೇಶದಲ್ಲಿ ನಿಧಾನಗತಿಯಲ್ಲಿ ಸಾಗಿರುವ ಆರ್ಥಿಕ ಚಟುವಟಿಕೆಗಳಿಗೆ ತ್ವರಿತವಾಗಿ ಚೇತರಿಕೆ ನೀಡಬೇಕಿದೆ. ಪ್ರಸಕ್ತ ಹಣದುಬ್ಬರ ಶೇ.4ರ ಆಜುಬಾಜಿನಲ್ಲೇ ಇರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ. ಜತೆಗೆ ಕಡಿತ ಮಾಡಿದ ಬಡ್ಡಿದರದ ಲಾಭವು ನೇರವಾಗಿ ಗ್ರಾಹಕರಿಗೆ ತಲುವುವಂತೆ ಮಾಡಬೇಕಿದೆ. ಕಳೆದ ಐದು ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್ಬಿಐ ಸತತವಾಗಿ 135 ಅಂಶಗಳಷ್ಟು (ಶೇ.1.35) ಬಡ್ಡಿದರ (ರೆಪೊದರ) ಕಡಿತ ಮಾಡಿದೆ. ಪ್ರಸ್ತುತ ರೆಪೊದರ ಶೇ.5.15ಕ್ಕೆ ಇಳಿದೆ. ಡಿಸೆಂಬರ್ ತಿಂಗಳ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ವೇಳೆ ಆರ್ಬಿಐ 25 ಅಂಶಗಳಷ್ಟು ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ಇದೆ.
ಆರ್ಬಿಐ ಬಡ್ಡಿದರ ಕಡಿತ ಮಾಡುವುದರ ಜತೆಗೆ ದೇಶದಲ್ಲಿರುವ ನಗದು ಕೊರತೆ ಬಿಕ್ಕಟ್ಟನ್ನು ಪರಿಹರಿಸಲು ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮೀಣ ಪ್ರದೇಶ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿನ ಜನರು ಬಹುತೇಕ ಬ್ಯಾಂಕೇತರ ಹಣಕಾಸುಸಂಸ್ಥೆಗಳನ್ನೇ ಸಾಲಕ್ಕಾಗಿ ಅವಲಂಬಿಸಿದ್ದಾರೆ. ಆದರೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ನಗದು ಕೊರತೆ ಬಿಕ್ಕಟ್ಟು ಎದುರಿಸುತ್ತಿವೆ. ಸಾರ್ವಜನಿಕ ವಲಯದ ಬ್ಯಾಂಕುಗಳು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಿವೆ. ಈ ಸಮಸ್ಯೆ ಬಗೆಹರಿಸುವ ಜತೆಗೆ ಕೇಂದ್ರ ಸರ್ಕಾರವು ಉದ್ಯೋಗ ಸೃಷ್ಟಿಸುವ ನಿರ್ಮಾಣ ವಲಯ, ಉತ್ಪಾದಕ ವಲಯಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕಿದೆ. ಉದ್ಯೋಗ ಸೃಷ್ಟಿ ಮತ್ತು ಜನರ ಖರೀದಿ ಸಾಮರ್ಥ್ಯ ಹೆಚ್ಚಿಸುವ ಕಾರ್ಯಸಾಧ್ಯ ಯೋಜನೆಗಳಿಂದ ಮಾತ್ರವೇ ದೇಶ ಆರ್ಥಿಕ ಹಿನ್ನಡೆಯತ್ತ ಸಾಗುವುದನ್ನು ತಡೆಯಲು ಸಾಧ್ಯ.
ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದುವರೆಗೆ ತಂದಿರುವ ಯೋಜನೆಗಳಲ್ಲಿನ ಲೋಪಗಳನ್ನು ಒಪ್ಪಿಕೊಳ್ಳುವ ಉದಾರತೆ ಮತ್ತು ತಿದ್ದಿಕೊಳ್ಳುವ ಸೌಜನ್ಯವನ್ನು ತೋರಿಸುವುದು ತುರ್ತು ಅಗತ್ಯವಿದೆ. ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಲಾರಂಭಿಸಿ ವರ್ಷವೇ ಕಳೆದರೂ ಇದುವರೆಗೂ ಅದನ್ನು ನಿರಾಕರಿಸುತ್ತಲೇ ಬಂದಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಒಪ್ಪಿಕೊಂಡಿದ್ದಾರೆ. ಆರಂಭದಲ್ಲೇ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೆ ದೇಶ ಆರ್ಥಿಕತೆ ಇಷ್ಟು ರೋಗಗ್ರಸ್ತವಾಗುತ್ತಿರಲಿಲ್ಲ.
ಜಿಡಿಪಿ ಮತ್ತಷ್ಟು ಕುಸಿಯುವುದನ್ನು ತಡೆಯಲು ಕೇಂದ್ರ ಸರ್ಕಾರವು ಸಾರ್ವಜನಿಕ ಉಪಭೋಗ ವಲಯದ ವೆಚ್ಚದ ಪ್ರಮಾಣವನ್ನು ಹೆಚ್ಚಿಸಬೇಕಿದೆ. ಅದರಿಂದ ಆರ್ಥಿಕ ಚಟುವಟಿಕೆಗಳು ಕೊಂಚ ಚೇತರಿಸಿಕೊಳ್ಳಬಹುದು. ಆದರೆ, ಇದರಿಂದ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಬಜೆಟ್ ನಲ್ಲಿ ಜಿಡಿಪಿಯ ಶೇ.3.3ರಷ್ಟು ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವುದಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಶೇ.3.3ರ ವಿತ್ತೀಯ ಕೊರತೆ ಮಿತಿ ಸಾಧ್ಯವಿಲ್ಲ. ಅದು ಶೇ.3.5 ಅಥವಾ ಶೇ.3.7ರ ಆಜುಬಾಜಿಗೆ ಜಿಗಿಯುವ ಸಾಧ್ಯತೆ ಇದೆ. ವಿತ್ತೀಯ ಕೊರತೆಯು ಹೆಚ್ಚಾದಂತೆ ವಿದೇಶಿ ನೇರ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬಿರುವ ಆಪಾಯ ಇದೆ.