ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಮ್ಮ ಎರಡನೇ ಬಜೆಟ್ ಮಂಡಿಸಿದ್ದು 5 ರಿಂದ 7.5 ಲಕ್ಷವರೆಗೂ ಆದಾಯ ಹೊಂದಿರುವವರ ತೆರಿಗೆಯನ್ನು ಶೇ.20ರಿಂದ ಶೇ.10ಕ್ಕೆ ಇಳಿಸಿದ್ದಾರೆ. ಅದೇ ಸಂದರ್ಭದಲ್ಲಿ ಹಲವಾರು ಪ್ರಮುಖ ಗೃಹೋಪಯೋಗಿ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದಾರೆ. ಇದರೊಂದಿಗೆ ಒಂದು ಕೈಯಲ್ಲಿ ನೀಡಿ ಮತ್ತೊಂದು ಕೈಯಲ್ಲಿ ಕಿತ್ತುಕೊಂಡಿದ್ದಾರೆ. ಗೃಹೋಪಯೋಗಿ ಉತ್ಪನ್ನಗಳು, ವಿದ್ಯುತ್ ಉಪಕರಣಗಳು, ಆಟಿಕೆಗಳು ಸೇರಿದಂತೆ ಪ್ರಮುಖ 22 ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ.2.5ರಿಂದ ಶೇ.70ರವರೆಗೂ ಹೆಚ್ಚಿಸಿದ್ದಾರೆ. ಇದರಿಂದ ಮಧ್ಯಮ ವರ್ಗಕ್ಕೆ ಒಂದು ಕಡೆ ಆದಾಯ ತೆರಿಗೆ ವಿನಾಯಿತಿ ನೀಡಿ ಮತ್ತೊಂದು ರೂಪದಲ್ಲಿ ಅವರ ಕಿಸಿಗೆ ಕತ್ತರಿ ಹಾಕಿದ್ದಾರೆ. ಇದರಿಂದ ಆರ್ಥಿಕತೆ ಚೇತರಿಕೆ ಕಾಣಲು ಮತ್ತಷ್ಟು ಹೆಣಗಾಡುವಂತಾಗಲಿದೆ.
ಕೃಷಿ ಕ್ಷೇತ್ರ ವಿಚಾರದಲ್ಲೂ ಇದೇ ನೀತಿಯನ್ನು ಅನುಸರಿಸಿದ್ದಾರೆ. ಒಂದು ಕಡೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಸಾಲ ನೀಡುವುದಾಗಿ ಹೇಳಿದ್ದಾರೆ. ಮತ್ತೊಂದು ಕಡೆ ರಸಗೊಬ್ಬರ, ರಾಸಾಯನಿಕಗಳು, ಪೆಟ್ರೋಲಿಯಂ ಉತ್ಪನ್ನಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿತಗೊಳಿಸಿದ್ದಾರೆ. ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದಾಗಿ ಎನ್‍ಡಿಎ-1ರಿಂದಲೂ ಹೇಳಲಾಗುತ್ತಿದೆ. ಆದರೂ 2020-21ರ ಬಜೆಟ್‍ನಲ್ಲಿ ಈ ಕುರಿತು ಪ್ರಸ್ತಾಪ ಇಲ್ಲ.

ಈ ಯೋಜನೆಯನ್ನು 2022ಕ್ಕೆ ಮುಂದೂಡಲಾಗಿದೆ. ಹೀಗಾಗಿ ಕೃಷಿ ಕ್ಷೇತ್ರ ಚೇತರಿಕೆ ಕಾಣಲು ಇನ್ನೆಷ್ಟು ವರ್ಷಗಳು ಕಾಯಬೇಕೋ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ರೈತರ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದರೆ ‘ಕಿಸಾನ್ ರೈಲ್’ ಪರಿಚಯಿಸುವ ಪ್ರಸ್ತಾಪ ಮಾಡಿರುವುದು. ಇದರಿಂದ ಬೇಗ ಕೊಳೆಯುವ ಕೃಷಿ ಉತ್ಪನ್ನಗಳನ್ನು ಶೀಘ್ರದಲ್ಲಿ ಇತರೆಡೆಗಳಿಗೆ ಸಾಗಣೆ ಮಾಡಲು ಸಹಕಾರಿಯಾಗಲಿದೆ. ಈ ಕ್ರಮ ಕೃಷಿ ವಲಯದಲ್ಲಿ ತುಸು ಆಶಾವಾದವನ್ನು ಮೂಡಿಸಿದೆ.
ಈ ಬಜೆಟ್‍ನಲ್ಲಿ ಅಂದಾಜು 22.46 ಲಕ್ಷ ಕೋಟಿ ಆದಾಯ ನಿರೀಕ್ಷಿಸಿದ್ದು 30.4 ಲಕ್ಷ ಕೋಟಿ ವೆಚ್ಚ ತೋರಿಸಲಾಗಿದೆ. ಇದರೊಂದಿಗೆ ವಿತ್ತೀಯ ಕೊರತೆ 7.96 ಲಕ್ಷ ಕೋಟಿಗೆ ಏರಿದಂತಾಗಿದೆ. ಕಳೆದ ಜುಲೈನಲ್ಲಿ ಸಭೆಯೊಂದರಲ್ಲಿ ಮಾತನಾಡಿದ್ದ ಹಣಕಾಸು ಸಚಿವರು ವಿತ್ತೀಯ ಕೊರತೆಯನ್ನು ಒಟ್ಟಾರೆ ಜಿಡಿಪಿಯ ಶೇ.3.3ಕ್ಕೆ ಇಳಿಸಲಾಗುವುದು ಎಂದು ಹೇಳಿದ್ದರು. ಆದರೆ ಬಜೆಟ್‍ನಲ್ಲಿ ಈ ಪ್ರಮಾಣವನ್ನು ಶೇ.3.8ಕ್ಕೆ ಏರಿಸಿದ್ದಾರೆ.
ಈ ವಿತ್ತೀಯ ಕೊರತೆಯನ್ನು ತುಂಬಿಸುವ ಸ್ಪಷ್ಟ ಯೋಜನೆಗಳನ್ನು ಬಜೆಟ್‍ನಲ್ಲಿ ಪ್ರಸ್ತಾಪಿಸಿಲ್ಲ. ಇದಕ್ಕಾಗಿ ಮತ್ತೆ ಆರ್‍ಬಿಐನ ಸಾರ್ವಭೌಮ ನಿಧಿ, ಎಲ್‍ಐಸಿಯಂತಹ ಲಾಭದಾಯಕ ಸಾರ್ವಜನಿಕ ಸಂಸ್ಥೆಗಳಲ್ಲಿನ ಬಂಡವಾಳ ವಾಪಸಾತಿಗೆ ಮುಂದಾಗಿದ್ದಾರೆ. ಇದು ದೇಶದ ಸಾರ್ವಜನಿಕ ಕ್ಷೇತ್ರದ ಮೇಲೆ ಕೇಂದ್ರ ಸರ್ಕಾರ ಮತ್ತೊಂದು ಗಂಭೀರ ದಾಳಿಗೆ ಮುಂದಾಗಿರುವುದನ್ನು ತೋರಿಸುತ್ತದೆ. ಈಗಾಗಲೆ ಬಿಎಸ್‍ಎನ್‍ಎಲ್ ಮುಚ್ಚಿದ್ದು 90 ಸಾವಿರ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಇದರ ಜೊತೆಗೆ ಇನ್ನಷ್ಟು ಸಂಸ್ಥೆಗಳು ಇದೇ ದಾರಿಯನ್ನು ಹಿಡಿಯಲಿವೆ. ಬಂಡವಾಳ ವಾಪಸಾತಿ ಪ್ರಮಾಣ ಕಳೆದ ಆರ್ಥಿಕ ವರ್ಷದಲ್ಲಿ 65 ಸಾವಿರ ಕೋಟಿ ಗುರಿ ಹೊಂದಿದ್ದರೆ, ಈ ಸಾಲಿನಲ್ಲಿ ಈ ಮೊತ್ತವನ್ನು 1.20 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ.
ಆಹಾರ, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಲಾಗಿದ್ದು ಇದರಿಂದ ಆಹಾರ ಉತ್ಪನ್ನಗಳು ಸೇರಿದಂತೆ ಪ್ರತಿಯೊಂದು ಸರಕುಗಳ ದರಗಳು ಏರಿಕೆ ಕಾಣಲಿವೆ. ಇದರೊಂದಿಗೆ ಹಣದುಬ್ಬರ ತನ್ನಿಂತಾನೆ ಹೆಚ್ಚಲಿದೆ. ಮತ್ತೊಂದು ಕಡೆ ಅತ್ಯಂತ ಪ್ರಮುಖ ಗ್ರಾಹಕ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಿರುವುದು ಜನಸಾಮಾನ್ಯರ ಜೀವನವನ್ನು ದುಸ್ತರಗೊಳಿಸಲಿದೆ. ಇದು ಬಡವರ ಬದುಕಿನ ಮೇಲೆ ಹಣಕಾಸು ಸಚಿವರು ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಆಗಿದೆ.
ರಸ್ತೆ, ಆಸ್ಪತ್ರೆ, ಶಿಕ್ಷಣ, ನೀರಾವರಿಯಂತಹ ಮೂಲಸೌಕರ್ಯಗಳಿಗೆ ಸಾರ್ವಜನಿಕ ವೆಚ್ಚದಲ್ಲಿ ತುಸು ಏರಿಕೆ ಮಾಡಲಾಗಿದೆ. 2019-20ರಲ್ಲಿ 3.48 ಲಕ್ಷ ಕೋಟಿ ಇದ್ದದ್ದು ಈ ಸಾಲಿನಲ್ಲಿ 4.12 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಒಂದು ಅಂದಾಜಿನ ಪ್ರಕಾರ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ. ಇದಕ್ಕೆ ಹೋಲಿಸಿದರೆ ಈ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ.

ದೇಶದ ಮುಂದಿನ ಅತಿದೊಡ್ಡ ಸವಾಲು ನಿರುದ್ಯೋಗ, ಕೃಷಿ, ಕೈಗಾರಿಕೆ, ಮೂಲಸೌಕರ್ಯ ಮತ್ತಿತರ ಪ್ರಮುಖ ಕ್ಷೇತ್ರಗಳ ಹಿನ್ನಡೆ. ತಾವು ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈ ಕುರಿತು ಬಜೆಟ್‍ನಲ್ಲಿ ಯಾವುದೇ ಪ್ರಸ್ತಾವನೆ ಮಾಡಿಲ್ಲ. ದೇಶದ ಜನಸಂಖ್ಯೆಯಲ್ಲಿ ಬಹುತೇಕರು ದುಡಿಯುವ ವಯಸ್ಸಿನವರು. ಅಗಾಧವಾದ ಈ ಮಾನವ ಸಂಪನ್ಮೂಲವನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಯಾವುದೇ ರೂಪುರೇಷೆಗಳನ್ನು ಪ್ರಸ್ತಾಪಿಸಿಲ್ಲ.
ಇದರ ಜೊತೆಗೆ ಸಾಮಾನ್ಯ ಜನರ ಖರೀದಿ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಯಾವುದೇ ಮುನ್ನೋಟ ಮತ್ತು ದೂರದೃಷ್ಟಿ ಈ ಬಜೆಟ್‍ನಲ್ಲಿ ಇಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಕಡಿತಗೊಳಿಸಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ದರಗಳು ತನ್ನಿಂತಾನೆ ಏರಲಿವೆ. ಇದು ಇತರೆ ಎಲ್ಲ ಉತ್ಪನ್ನಗಳ ದರ ಏರಿಕೆಗೆ ದಾರಿ ಮಾಡಿಕೊಡಲಿದೆ. ಆಗ ಹಣದುಬ್ಬರ ತೀವ್ರವಾಗಿ ಏರಲಿದೆ. ಈಗಾಗಲೆ ಬಜೆಟ್‍ನಲ್ಲಿ ಹಲವಾರು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನೂ ಹೆಚ್ಚಿಸಿರುವುದು ಜನಸಾಮಾನ್ಯರ ಮೇಲಿನ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ.