ಜುಲೈ 7ರ ಕರ್ನಾಟಕ ರಾಜ್ಯದ ಕೋವಿಡ್ ಅಂಕಿಸಂಖ್ಯೆಯಂತೆ ರಾಜ್ಯದಲ್ಲಿ 1,498 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಬೆಂಗಳೂರು ಒಂದರಲ್ಲೇ 800 ಪ್ರಕರಣಗಳು ಬೆಳಕಿಗೆ ಬಂದಿವೆ. ರಾಜ್ಯಾದ್ಯಂತ 571 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ, 15 ಜನರು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದ್ದಾರೆ. ಸೋಂಕಿನ ಪ್ರಮಾಣ ಕಳೆದ ಮೂರ್ನಾಲ್ಕು ದಿನಗಳ ಹಿಂದಿನ ಲೆಕ್ಕಾಚಾರಗಳಿಗೆ ಹೋಲಿಕೆ ಮಾಡಿದರೆ ಸೋಂಕಿನ ಪ್ರಮಾಣ ಸ್ವಲ್ಪ ಕುಸಿದಂತೆ ಕಾಣಿಸಿದರೂ 279 ಜನರು ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಆತಂಕದ ಜೊತೆಗೆ ಮತ್ತೊಂದು ಆತಂಕ ಎಂದರೆ ರಾಜಕಾರಣಿಗಳಿಗೆ ಸೋಂಕಿನ ಭೀತಿ ಎದುರಾಗಿದೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ಗೆ ಕರೋನಾ ಸೋಂಕು ದೃಢಪಟ್ಟಿರುವುದು ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ದೊಡ್ಡ ತಲೆನೋವು ತರಿಸಿದೆ. ಕಳೆದ ಗುರುವಾರ ವಿಧಾನಸೌಧದಲ್ಲಿ ಅಂಬರೀಷ್ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಸಭೆ ನಡೆದಿತ್ತು. ಸಿಎಂ ನೇತೃತ್ವದಲ್ಲಿ ನಡೆದ ಆ ಸಭೆಯಲ್ಲಿ ಸಂಸದೆ ಸುಮಲತಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಹಾಸ್ಯನಟ ದೊಡ್ಡಣ್ಣ ಸೇರಿದಂತೆ ಹಲವಾರು ಜನರು ಭಾಗಿಯಾಗಿದ್ದರು.
ವಿಧಾನ ಪರಿಷತ್ನ ಬಿಜೆಪಿ ಸದಸ್ಯ ಪ್ರಾಣೇಶ್ ಹಾಗೂ ಅವರ ಪತ್ನಿಗೆ ಸೋಂಕು ಆವರಿಸಿದ್ದು, ಡಿಸಿಎಂ ಆರ್ ಅಶೋಕ್ ಅವರಿಗೆ ಕರೋನಾ ಭೀತಿ ಎದುರಾಗಿದೆ. ಆರ್ ಅಶೋಕ್ ಹುಟ್ಟುಹಬ್ಬದ ದಿನ ಪರಿಷತ್ ಸದಸ್ಯ ಪ್ರಾಣೇಶ್ ಜೊತೆಯಲ್ಲೇ ಇದ್ದರು ಎನ್ನಲಾಗಿದೆ. ಇನ್ನೂ ಪ್ರವಾಸೋದ್ಯಮ ಸಚಿವ ಸಿಟಿ ರವಿ ಅವರ ಆಪ್ತರಿಗೂ ಕರೋನಾ ಸೋಂಕು ದೃಢಪಟ್ಟಿದೆ. ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡನಿಗೂ ಸೋಂಕು ಇರುವುದು ಖಚಿತವಾಗಿದೆ. ಈ ಇಬ್ಬರು ಮುಖಂಡರು ಸಚಿವ ಸಿ ಟಿ ರವಿ ಜೊತೆ ಓಡಾಡಿದ್ದರು ಎನ್ನಲಾಗಿದ್ದು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ
ಕುಣಿಗಲ್ ಶಾಸಕ ರಂಗನಾಥ್ ಅವರಿಗೆ ಕರೋನಾ ಸೋಂಕು ಖಚಿತವಾಗಿದೆ. ವಿಷಯ ಅಂದರೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅದ್ಧೂರಿಯಾಗಿ ಪದಗ್ರಹಣ ಮಾಡಿದ ಕಾರ್ಯಕ್ರಮದಲ್ಲಿ ಶಾಸಕ ರಂಗನಾಥ್ ಭಾಗಿಯಾಗಿದ್ದರು. ಅಂದಿನ ಕಾರ್ಯಕ್ರಮದಲ್ಲಿ ಸಾಕಷ್ಟು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಅಂದು ಕುಣಿಗಲ್ ಶಾಸಕ ರಂಗನಾಥ್ ಯಾರನ್ನು ಭೇಟಿ ಮಾಡಿದ್ದಾರೆಯೋ..? ಯಾರಿಗೆಲ್ಲಾ ಸೋಂಕು ಹಬ್ಬುತ್ತದೆಯೋ ಎನ್ನುವ ಆತಂಕ ಮನೆ ಮಾಡಿದೆ. ಡಿ.ಕೆ ಶಿವಕುಮಾರ್ ಅವರಿಗೆ ರಂಗನಾಥ್ ಸಂಬಂಧಿಯಾಗಿದ್ದು, ಡಿ.ಕೆ ಶಿವಕುಮಾರ್ ಕುಟುಂಬಸ್ಥರನ್ನು ಭೇಟಿಯಾಗಿದ್ದರೇ ಎನ್ನುವ ಅನುಮಾನವನ್ನೂ ಮೂಡಿಸುತ್ತಿದೆ.
ಬೆಂಗಳೂರು ನಗರದ ಪ್ರಥಮ ಪ್ರಜೆಯಾಗಿರುವ ಮೇಯರ್ ಗೌತಮ್ ಕುಮಾರ್ ಜೈನ್ಗೆ ಕರೋನಾ ಭೀತಿ ಎದುರಾಗಿದೆ. ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಆಪ್ತ ಸಹಾಯಕನಿಗೆ ಸೋಂಕು ಬಂದಿದೆ. ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಪ್ತ ಸಹಾಯಕನ ಜೊತೆ ಮೇಯರ್ ಗೌತಮ್ ಕುಮಾರ್ ಜೈನ್ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಹಾಗಾಗಿ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ಗೂ ಆತಂಕ ಶುರುವಾಗಿದೆ. ಮೇಯರ್ ಗೌತಮ್ ಕುಮಾರ್ ಜೈನ್ ಕೂಡ ಹೋಂ ಕ್ವಾರಂಟೈನ್ ಆಗುವ ಸಾಧ್ಯತೆ ಹೆಚ್ಚಾಗಿದೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಮಾಡಿರುವ ಮತ್ತೊಂದು ಎಡವಟ್ಟು ಎಂದರೆ ಸಂಸದೆ ಸುಮಲತಾ ಜೂನ್ 28 ರಿಂದ ಜುಲೈ 3 ರ ತನಕ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ ಚೆಕ್ ವಿತರಣೆ ಮಾಡಿದ್ದರು. ಆತಂಕದ ವಿಚಾರ ಎಂದರೆ ಸುಮಲತಾ ಆ ಕಾರ್ಯಕ್ರಮದಲ್ಲಿ ಮಾಸ್ಕ್ ಸಹ ಹಾಕಿರಲಿಲ್ಲ. ಸಚಿವರಾದ ಎಸ್ ಟಿ ಸೋಮಶೇಖರ್, ಕೆ ಸಿ ನಾರಾಯಣಗೌಡ, ಶಾಸಕ ಎಂ ಶ್ರೀನಿವಾಸ್, ಮಂಡ್ಯ ಜಿಲ್ಲಾಧಿಕಾರಿ ಸೇರಿ ಹಲವಾರು ಜನರು ಭಾಗಿಯಾಗಿದ್ದರು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರವಲ್ಲದೆ ಸಾಕಷ್ಟು ನಾಗರಿಕರಿಗೂ ಆತಂಕ ಮನೆ ಮಾಡಿದೆ.
ಇಷ್ಟು ದಿನ ಮಾಡಿದ ರಂಪಾಟಕ್ಕೆ ಬೀಳುತ್ತಾ ಬ್ರೇಕ್..?
ಸ್ವತಃ ಆರೋಗ್ಯ ಸಚಿವರಾದ ಶ್ರೀರಾಮುಲು ಸೇರಿದಂತೆ ಸಾಕಷ್ಟು ರಾಜಕಾರಣಿಗಳು ಕರೋನಾ ಸಂಕಷ್ಟ ಕಾಲದಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತು ವರ್ತಿಸಿದ್ದಾರೆ. ಸಾಕಷ್ಟು ಜನರನ್ನು ಸೇರಿಸಿಕೊಂಡು ಸಭೆ ಸಮಾರಂಭ ಮಾಡಿದ್ದಾರೆ. ಹೋಮಾಲೆ, ಹಣ್ಣಿನ ಮಾಲೆಯನ್ನು ಹಾಕಿಕೊಂಡು ರಾಜಕೀಯ ಅಂಧ ದರ್ಬಾರ್ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿ ನಡೆಸಿದ ರ್ಯಾಲಿಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು. ಯಾವ ಕೇಸ್ ಬೇಕಾದರೂ ಹಾಕಿಕೊಳ್ಳಿ ಎಂಬ ಉತ್ತರವನ್ನು ಡಿ ಕೆ ಶಿವಕುಮಾರ್ ನೀಡಿದ್ದರು.
ಈಗಾಗಲೇ ಸಾಕಷ್ಟು ಜನರಿಗೆ ಸೋಂಕು ಖಚಿತವಾಗಿದ್ದು, ಮತ್ತಷ್ಟು ಜನರು ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಈಗಲಾದರೂ ರಾಜಕಾರಣಿಗಳು ತಮ್ಮ ಹುಚ್ಚಾಟವನ್ನು ಬಿಟ್ಟು ಸೋಂಕಿಗೆ ಲಸಿಕೆ ಪತ್ತೆಯಾಗುವ ತನಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮನಸ್ಸು ಮಾಡಬೇಕಿದೆ.