ನಸೀಮಾ ಬಾನು 40, 50ರ ದಶಕಗಳ ಹಿಂದಿ ಸಿನಿಮಾ ತಾರೆ. ಅವರ ಪತಿ ಮಿಯಾನ್ ಎಹ್ಸಾನ್-ಉಲ್-ಹಕ್ ಚಿತ್ರನಿರ್ಮಾಪಕರು. ಈ ದಂಪತಿಯ ಪುತ್ರಿಯೇ ಸಾಯಿರಾ ಬಾನು. ಹುಟ್ಟಿದ್ದು 1944, ಆಗಸ್ಟ್ 23ರಂದು. ಸಾಯಿರಾ ಸಿನಿಮಾ ಪ್ರವೇಶಕ್ಕೆ ಕಾರಣವಾಗಿದ್ದು ನಟಿ ಆಶಾ ಪರೇಖ್. ನಟಿ ಆಶಾ ಶಿಫಾರಸಿನ ಮೇರೆಗೆ ನಿರ್ದೇಶಕ ಸುಬೋಧ್ ಮುಖರ್ಜಿ ತಮ್ಮ `ಜಂಗ್ಲೀ’ ಚಿತ್ರಕ್ಕೆ ಸಾಯಿರಾ ಅವರನ್ನು ಆಯ್ಕೆ ಮಾಡಿದರು. ಶಮ್ಮಿ ಕಪೂರ್ ಹೀರೋ ಆಗಿದ್ದ ಈ ಚಿತ್ರದ ನಾಯಕಿಯಾದಾಗ ಸಾಯಿರಾಗೆ ಹದಿನೇಳು ವರ್ಷ.
ಸಾಯಿರಾ ನಾಯಕಿಯಾಗಿ ನಟಿಸಿದ ಚೊಚ್ಚಲ ಚಿತ್ರ ಸೂಪರ್ – ಡ್ಯೂಪರ್ ಹಿಟ್ ಎನಿಸಿಕೊಂಡಿತು. ಚಿತ್ರದ ಉತ್ತಮ ನಟನೆಗೆ ಅವರು ಫಿಲ್ಮ್‌ಫೇರ್ ಗೌರವಕ್ಕೆ ಪಾತ್ರರಾದರು. ಮುಂದೆ ಸಾಯಿರಾ `ಶಾದಿ’, `ಬ್ಲಫ್ ಮಾಸ್ಟರ್’, `ಏಪ್ರಿಲ್ ಫೂಲ್’, `ಆಯೀ ಮಿಲನ್ ಕಿ ಬೇಲಾ’, `ಶಾಗಿರ್ಡ್’, `ಝುಕ್ ಗಯಾ ಆಸ್ಮಾನ್’, `ಅಮಾನ್’ ಚಿತ್ರಗಳಲ್ಲಿ ಗೆಲುವಿನ ನಗೆ ಬೀರಿದರು. ಸಿನಿಮಾ ಜೀವನದ ಉತ್ತುಂಗದಲ್ಲಿದ್ದಾಗ ಸಾರಿಯಾ ಹೆಸರು ನಟ ರಾಜೇಶ್ ಖನ್ನಾ ಜೊತೆ ಥಳುಕು ಹಾಕಿಕೊಂಡಿತ್ತು. ಇಬ್ಬರೂ ಮದುವೆಯಾಗುತ್ತಾರೆ ಎನ್ನುವವರೆಗೆ ವದಂತಿ ಹರಡಿದ್ದು ಹೌದು. ಆದರೆ ಎಲ್ಲಾ ಊಹಾಪೋಹಗಳನ್ನು ಸುಳ್ಳು ಮಾಡಿದ ಸಾಯಿರಾ ನಟ ದಿಲೀಪ್ ಕುಮಾರ್‌ರನ್ನು (1966) ವರಿಸಿದರು. ಆಗ ಸಾಯಿರಾಗೆ 22 ಮತ್ತು ದಿಲೀಪ್ ಕುಮಾರ್‌ಗೆ 44 ವರ್ಷ!





ಮದುವೆ ನಂತರ ಸಾಯಿರಾ ಬಾನು ಪಾತ್ರಗಳ ಆಯ್ಕೆಯಲ್ಲಿ ಅತಿಯಾದ ಎಚ್ಚರಿಕೆ ವಹಿಸಿದರು. ಅವರಿಗೆ ಗೌರವಯುತ ನಟಿ ಎಂದು ಕರೆಸಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಕ್ರಮೇಣ ನಾಯಕಿಯರ ಸ್ಪರ್ಧೆಯಿಂದ ಹಿಂದೆ ಸರಿದರು. ದಿಲೀಪ್ ಕುಮಾರ್ ಅವರೊಂದಿಗಿನ `ಗೀತಾ’, `ಸಾಜಿನಾ’, `ಬೈರಾಗ್’ ಮತ್ತು ಹೃಷಿಕೇಶ್ ಮುಖರ್ಜಿ ಅವರ `ಚೈತಾಲಿ’ ಚಿತ್ರಗಳು ಸಾಧಾರಣ ಯಶಸ್ಸು ಕಂಡವು. ದಾಂಪತ್ಯದಲ್ಲಿ ಬಿರುಕು ಉಂಟಾಗಬಹುದಾದ ಕೆಲವು ವದಂತಿಗಳಿಂದಾಗಿ 1976ರಲ್ಲಿ ಸಾಯಿರಾ ಚಿತ್ರರಂಗಕ್ಕೆ ವಿದಾಯ ಹೇಳಿದರು.
ಹತ್ತಾರು ಚಿತ್ರಗಳೊಂದಿಗೆ ಸಾಯಿರಾ ಇಂದಿಗೂ ಹಿಂದಿ ಚಿತ್ರರಸಿಕರಿಗೆ ನೆನಪಾಗುತ್ತಾರೆ. ಮನೋಜ್ ಕುಮಾರ್ ಅವರ `ಪೂರಬ್ ಪಶ್ಚಿಮ್’ ಚಿತ್ರದಲ್ಲಿನ ಅವರ ಅನಿವಾಸಿ ಭಾರತೀಯ ಯುವತಿಯ ಪಾತ್ರ ಮೋಹಕವಾಗಿತ್ತು. `ಪಡೋಸನ್’, `ಆದ್ಮಿ ಔರ್ ಇನ್ಸಾನ್’, `ವಿಕ್ಟೋರಿಯಾ ನಂ.203′, `ಸಾಜಿಶ್’, `ಜಮೀರ್’, `ರೇಶಮ್ ಕಿ ದೋರಿ’, `ಹೇರಾ ಫೇರಿ’ ಚಿತ್ರಗಳಲ್ಲಿ ಸಾಯಿರಾ ಪಾತ್ರಗಳು ಗಮನ ಸೆಳೆಯುತ್ತವೆ. ಅವರು ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ `ಫೈಸ್ಲಾ’ (1988).