ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ 76 ಯೋಧರು ಚೇತರಿಸಿಕೊಳ್ಳುತ್ತಿರುವುದಾಗಿ ಭಾರತೀಯ ಸೇನೆ ಹೇಳಿರುವುದಾಗಿ NDTV ವರದಿ ಮಾಡಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಕಳೆದ ಸೋಮವಾರ (ಜೂನ್ 15) ತಡರಾತ್ರಿ ನಡೆದ ಕಾದಾಟದಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿ, 76 ಮಂದಿ ಗಾಯಗೊಂಡಿದ್ದರು. ಈ ರೀತಿ ಗಾಯಗೊಂಡ ಯೋಧರನ್ನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಆದರೆ ಸದ್ಯ NDTV ವೆಬ್ ಸೈಟ್ ನೀಡಿರುವ ವರದಿ ಪ್ರಕಾರ, ಎಲ್ಲಾ 76 ಯೋಧರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಅನ್ನೋ ಸಮಾಧಾನ ತರುವ ಸುದ್ದಿಯನ್ನ ಬಿತ್ತರಿಸಿದೆ.
ಲಡಾಖ್ ನ ಲೇಹ್ ಆಸ್ಪತ್ರೆ ದಾಖಲಾದ 18 ಮಂದಿ ಯೋಧರು ಮುಂದಿನ 15 ದಿನಗಳಲ್ಲಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಉಳಿದ 56 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಅವರು ವಾರದೊಳಗಾಗಿ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವನ್ನ ಭಾರತೀಯ ಸೇನೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಅಂತಾ NDTV ವರದಿ ಮಾಡಿದೆ. ಕಳೆದ ಸೋಮವಾರ ರಾತ್ರಿ ಚೀನಾ ಸೈನಿಕರು ಕ್ರೂರ ರೀತಿಯಲ್ಲಿ ವರ್ತಿಸಿ ಕಬ್ಬಿಣದ ರಾಡ್, ತಂತಿ ಸುತ್ತಿದ್ದ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಭಾರತೀಯ ಯೋಧರ ಪ್ರತಿರೋಧದಿಂದಾಗಿ ಚೀನಾದ 45 ರಷ್ಟು ಸೈನಿಕರು ಸಾವು-ನೋವು ಕಂಡಿದ್ದಾಗಿ ಭಾರತೀಯ ಸೇನೆ ತಿಳಿಸಿತ್ತು. ಆದರೂ ಗಡಿಯಲ್ಲಿ ಇನ್ನೂ ಉದ್ವಿಗ್ನ ಸ್ಥಿತಿ ಮುಂದುವರೆದಿದ್ದು, ಭಾರತ ರಾಜತಾಂತ್ರಿಕ ಸಂಬಂಧಕ್ಕೂ ಒತ್ತು ನೀಡುತ್ತಿದೆ.
ಈ ಮಧ್ಯೆ ಹಲವು ಸೈನಿಕರು ಚೀನಾ ವಶದಲ್ಲಿರುವುದಾಗಿ ರಾಷ್ಟ್ರೀಯ ಆಂಗ್ಲ ದೈನಿಕಗಳು ವರದಿ ಬಿತ್ತರಿಸಿದ್ದವು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆಯ ಅಧಿಕಾರಿಗಳು, “ಗಡಿ ಸಂಘರ್ಷದಲ್ಲಿದ್ದ ಎಲ್ಲಾ ಸೈನಿಕರ ಮಾಹಿತಿ ಕಲೆ ಹಾಕಲಾಗಿದ್ದು, ಯಾವೊಬ್ಬ ಸೈನಿಕನೂ ಚೀನಾ ವಶದಲ್ಲಿಲ್ಲ” ಅನ್ನೋದನ್ನ ಸ್ಪಷ್ಟಪಡಿಸಿದೆ. ಇನ್ನು ಗಡಿ ಸಂಘರ್ಷ ಶಮನಗೊಳಿಸಲು ಮೇಜರ್ ಜನರಲ್ ನೇತೃತ್ವದಲ್ಲಿ ಮಾತುಕತೆ ಮುಂದುವರೆದಿದ್ದು, ಎರಡನೇ ಸುತ್ತಿನ ಮಾತುಕತೆಯಲ್ಲೂ ಸಂಧಾನ ಸಫಲವಾಗಿಲ್ಲ.