ಉಪ ಚುನಾವಣೆ ಹತ್ತಿರ ಬರುತ್ತಿದ್ದಂತೇ, ರಾಜಕೀಯ ನಾಯಕರ ವಾಕ್ಸಮರದ ಕಾವು ಏರುತ್ತಲೇ ಇದೆ. ಅದರಲ್ಲೂ ವಿಪಕ್ಷ ನಾಯ ಸಿದ್ದರಾಮಯ್ಯ ಮತ್ತು ಹೆಚ್ ಡಿ ಕುಮಾರಸ್ವಾಮಿಯವರ ನಡವಿನ ಕೆಸರೆರಚಾಟ ಇನ್ನೂ ಮುಂದುವರಿದಿದೆ.
ಇಂದು ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿರುವ ಸಿದ್ದರಾಮಯ್ಯ, ಚುನಾವಣೆ ಹತ್ತಿರ ಬಂದಾಗ ಕುಮಾರಸ್ವಾಮಿಯವರು ಕಣ್ಣೀರು ಸುರಿಸುವುದು ಸಾಮಾನ್ಯ ಎಂದು ರಾಜ್ಯದ ಜನರಿಗೆ ತಿಳಿದಿದೆ ಎಂದಿದ್ದಾರೆ. ಸರಿಯಾಗಿ ಆಡಳಿತ ನಡೆಸಿದ್ದರೆ ಯಾರೂ ಪಕ್ಷ ಬಿಟ್ಟು ಹೋಗುತ್ತಿರಲಿಲ್ಲ. ಕುಣಿಯೋಕೆ ಬಾರದವಳು ನೆಲ ಡೊಂಕು ಅಂದಳಂತೆ ಹಾಗಾಯ್ತು ಇವರ ಕತೆ, ಎಂದು ಕುಮಾರಸ್ವಾಮಿ ಅವರನ್ನು ಲೇವಡಿ ಮಾಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ದವೂ ಹರಿಹಾಯ್ದಿರುವ ಸಿದ್ದರಾಮಯ್ಯ ಅವರನ್ನು ಅಧಿಕ ಪ್ರಸಂಗಿ ಎಂದು ಜರೆದಿದ್ದಾರೆ.
“ಹೆಚ್ ಡಿ ದೇವೇಗೌಡರಿಗೆ ನನ್ನಿಂದ ತೊಂದರೆಯಾಗಿದ್ದರೆ ಅವರು ಮಾತನಾಡುತ್ತಾರೆ. ಅವರ ಪರವಾಗಿ ಮಾತನಾಡುವ ಅಧಿಕಪ್ರಸಂಗತನ ಈ ನಳಿನ್ ಕುಮಾರ್ ಕಟೀಲ್ ಗೆ ಯಾಕೆ? ಅವರ ಪಕ್ಷದ ಶಾಸಕನೇ ಯಡಿಯೂರಪ್ಪ ಬದಲಾಗುತ್ತಾರೆ ಎಂದು ಹೇಳ್ಕೊಂಡಿದ್ದಾರೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವ ಧೈರ್ಯ ಈ ಕಟೀಲ್‌ಗಿಲ್ಲ,” ಎಂದು ಹೇಳಿದ್ದಾರೆ.
ಚುನಾವಣೆಗೆ ಸಿದ್ದ:
ರಾಜ್ಯದ ಬಿಜೆಪಿ ಸರ್ಕಾರದ ವಿರುದ್ದ ತಮ್ಮ ವಾಗ್ದಾಳಿ ಮುಂದುವರೆಸಿರುವ ಸಿದ್ದರಾಮಯ್ಯ, ರಾಜ್ಯದ ಬಿಜೆಪಿ ಸರ್ಕಾರ ಆಂತರಿಕ ಬಿಕ್ಕಟ್ಟಿನಿಂದ ಪತನಗೊಂಡರೆ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ನಾವಾಗಿ ಈ ಸರ್ಕಾರವನ್ನು ಉರುಳಿಸಲು ಹೋಗುವುದಿಲ್ಲ. ಅಡ್ಡಮಾರ್ಗದಿಂದ ಅಧಿಕಾರಕ್ಕೆ ಬಂದಿರುವ ಈ ಬಿಜೆಪಿ ಸರ್ಕಾರ ಬಹಳ ದಿನ ಉಳಿಯಲು ಸಾಧ್ಯ ಇಲ್ಲ, ಎಂದಿದ್ದಾರೆ.
“ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿರುವುದು ವ್ಯರ್ಥ. ಯಾವ ಅಧಿಕಾರಿಗಳು ಹೋಗಿ ಪ್ರವಾಹದಿಂದ ಉಂಟಾದ ನಷ್ಟದ ಸರ್ವೇ ಮಾಡಿದ್ದಾರೆ? ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ದಾಖಲಿಸಿಕೊಂಡಿದ್ದಾರೆ? ಜನರನ್ನು ಭೇಟಿ ಮಾಡಿ ಅವರಿಂದ ಮಾಹಿತಿ ಪಡೆಯುವ ಬದಲು ಎಲ್ಲೋ ದೂರದಲ್ಲಿ ಸಭೆ ಮಾಡಿದರೆ ಏನು ಉಪಯೋಗ?” ಎಂದು ಟೀಕಿಸಿದ್ದಾರೆ.
ಇನ್ನು ಶಿಕ್ಷಕರ ನೇಮಕಾತಿಯ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಿಗೆ ಒಂದು ಲಕ್ಷಕ್ಕೂ ಅಧಿಕ ಶಿಕ್ಷಕರು, ಉಪನ್ಯಾಸಕರು, ಅತಿಥಿ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿತ್ತು. ಈಗಿನ ಬಿಜೆಪಿ ಸರ್ಕಾರ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
“ನಮ್ಮ ಸರ್ಕಾರ 7905 ಪ್ರಾಥಮಿಕ ಶಾಲಾ ಶಿಕ್ಷಕರು, 1689 ಪ್ರೌಢಶಾಲಾ ಶಿಕ್ಷಕರು ಮತ್ತು ಹತ್ತು ಸಾವಿರ ಪದವೀಧರ ವಿಷಯವಾರು ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕ ಮಾಡಿತ್ತು. 2008 ರಿಂದ 2013ರ ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೇವಲ 5032 ಶಿಕ್ಷಕರನ್ನು ಮಾತ್ರ ನೇಮಕಾತಿ ಮಾಡಿತ್ತು,” ಎಂದಿದ್ದಾರೆ.
ಮುಂದುವರೆದು, 2016ರ ಜುಲೈ ತಿಂಗಳಿಂದ ಜಾರಿಯಾಗುವಂತೆ ಆರನೇ ವೇತನ ಆಯೋಗ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದರಿಂದಾಗಿ ಶಿಕ್ಷಕರು-ಉಪನ್ಯಾಸಕರು ಸೇರಿದಂತೆ ಎಲ್ಲ ಸರ್ಕಾರಿ ನೌಕರರ ಪಿಂಚಣಿ, ಭತ್ಯೆ ಸೇರಿದಂತೆ ಒಟ್ಟು ವೇತನದ ಶೇಕಡಾ 30ರಷ್ಟು ಏರಿಕೆಯಾಗಿದೆ. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ವಾರ್ಷಿಕ ರೂ. 10,200 ಕೋಟಿ ಹೊರೆ ಬಿದ್ದಿತ್ತು. ಶಿಕ್ಷಕರ ಸಂಬಳ-ಸೌಲಭ್ಯಗಳ ವಿಚಾರದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೆಲ್ಲಾ ಉದಾರವಾಗಿ ನಡೆದುಕೊಂಡಿದೆ. ಶಿಕ್ಷಕರ ಬಡ್ತಿ, ಅತಿಥಿ ಶಿಕ್ಷಕರ ಸಂಬಳ ಏರಿಕೆ ಮಾಡಿದ್ದೆವು. ಹೆರಿಗೆ ರಜೆಯನ್ನು ಮೂರರಿಂದ ಆರು ತಿಂಗಳಿಗೆ ಏರಿಕೆ ಮಾಡಿದ್ದೆವು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜ್ ಸ್ಥಾಪನೆಯ ನಿರ್ಧಾರ ಮಾಡಿದ್ದೆವು, ಎಂದು ಹೇಳಿದ್ದಾರೆ.