ಲಡಾಕ್ ನ ಗಲ್ವಾನ್ ಕಣಿವೆ ಸೇರಿದಂತೆ ಭಾರತ ಮತ್ತು ಚೀನಾ ಗಡಿಯುದ್ದಕ್ಕೂ ಸದ್ಯ ಉಂಟಾಗಿರುವ ಚೀನೀ ಆಕ್ರಮಣ ಮತ್ತು ಸೇನಾ ಸಂಘರ್ಷ ಇದೀಗ ಹಲವು ಆಯಾಮದ ಚರ್ಚೆಗಳಿಗೆ ಎಡೆ ಮಾಡಿದೆ.
ಜೂನ್ 15ರ 20 ಮಂದಿ ಭಾರತೀಯ ಯೋಧರ ಧಾರುಣ ಹತ್ಯೆ, ಹತ್ತು ಯೋಧರ ಬಂಧನ ಮತ್ತು 70ಕ್ಕೂ ಹೆಚ್ಚು ಮಂದಿಯ ಮೇಲಿನ ಹಲ್ಲೆಯಂತಹ ಭಾರತೀಯ ಸೇನಾ ಇತಿಹಾಸದಲ್ಲೇ ಭೀಕರ ಯುದ್ಧರಹಿತ ಸಾವು-ನೋವಿನ ಘಟನೆ ಬಳಿಕ ಭಾರತ – ಚೀನಾ ಗಡಿಯಲ್ಲಿ ನಿಜವಾಗಿಯೂ ನಡೆದದ್ದು ಏನು ಮತ್ತು ಏಕೆ ಎಂಬ ಕುರಿತ ಪ್ರಶ್ನೆಗಳು ಎದ್ದಿವೆ. ಜೊತೆಗೆ ದೇಶದ ಸಮಗ್ರತೆ ಮತ್ತು ಸಾರ್ವಭೌಮತೆ ರಕ್ಷಣೆಯ ವಿಷಯದಲ್ಲಿ ಯಾವುದೇ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಉಗ್ರವಾಗಿ ಪ್ರತಿಪಾದಿಸುವ ರಾಷ್ಟ್ರೀಯವಾದವನ್ನೇ ತನ್ನ ಚುನಾವಣಾ ಗೆಲುವಿನ ಮಾಯಾದಂಡವಾಗಿ ಮಾಡಿಕೊಂಡಿರುವ ಒಂದು ಪಕ್ಷ ಅಧಿಕಾರದಲ್ಲಿರುವಾಗ ಮತ್ತು ದೇಶರಕ್ಷಣೆಯ ಐಕಾನ್ ಎನಿಸಿಕೊಂಡಿರುವ ವ್ಯಕ್ತಿಯೊಬ್ಬರು ಅಧಿಕಾರದ ದಂಡ ಹಿಡಿದಿರುವಾಗ ಭಾರತೀಯ ಸೇನೆ ಮತ್ತು ದೇಶದ ಪಾಲಿಗೆ ತೀರಾ ಮುಜುಗರದ ಇಂತಹ ವಿದ್ಯಮಾನ ನಡೆದಿದ್ದಾದರೂ ಹೇಗೆ? ಎಂಬ ಪ್ರಶ್ನೆ ಕೂಡ ವ್ಯಾಪಕ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.
Also Read: ಚೀನಾ-ಭಾರತ ಗಡಿ ಬಿಕ್ಕಟ್ಟು; ಸೂಕ್ತ ಮಾಹಿತಿ ನೀಡುತ್ತಿಲ್ಲವೇಕೆ ಕೇಂದ್ರ ಸರಕಾರ!?
ಹಾಗಾದರೆ ನಿಜಕ್ಕೂ ಚೀನಾದ ಆಕ್ರಮಣ ಮತ್ತು ಭಾರತೀಯ ಯೋಧರ ಹೇಯ ಹತ್ಯೆಗೆ ಏನು ಕಾರಣ ಎಂಬ ನೆಲೆಯಲ್ಲಿ ಇಡೀ ವಿದ್ಯಮಾನವನ್ನು ವಿಶ್ಲೇಷಿಸಿದರೆ ಕಾಣುವ ವಾಸ್ತವಾಂಶಗಳು ಬೇರೆಯೇ. ಗಲ್ವಾನ್ ಕಣಿವೆ ಸೇರಿದಂತೆ ಚೀನಾದ ಗಡಿಯುದ್ದಕ್ಕೂ ಕಳೆದ ಒಂದೂವರೆ ತಿಂಗಳಿನಿಂದ ಚೀನಾ ಪಡೆಗಳು ನಡೆಸುತ್ತಿರುವ ಗಡಿ ಉಲ್ಲಂಘನೆ ಮತ್ತು ಅತಿಕ್ರಮಣದ ಪ್ರಯತ್ನಗಳು ಖಂಡಿತವಾಗಿಯೂ 1962ರ ಇತಿಹಾಸದ ಪುನರಾವರ್ತನೆಯಂತೆಯೇ ಇವೆ. ಅಂದಿನ ನೆಹರು ಸರ್ಕಾರ, ಚೀನಾದ ಆ ಆಕ್ರಮಣದ ಹಿಂದಿನ ಹುನ್ನಾರವನ್ನು ಅರಿಯುವಲ್ಲಿ ವಿಫಲವಾಯಿತು ಮತ್ತು ಅದಕ್ಕೆ ಸರಿಯಾದ ಸೇನಾ ಕಾರ್ಯಾಚರಣೆಯ ಪ್ರತ್ಯುತ್ತರ ನೀಡುವಲ್ಲಿಯೂ ವಿಫಲವಾಯಿತು ಎಂಬುದು ಇತಿಹಾಸ. ಆದರೆ, ಅರ್ಧ ಶತಮಾನದ ಹಿಂದಿನ ಭಾರತದ ಸೇನಾ ಬಲ ಮತ್ತು ರಾಜತಾಂತ್ರಿಕ ಪ್ರಾಬಲ್ಯಕ್ಕೆ ಹೋಲಿಸಿದರೆ ಇಂದು ದೇಶ ಸಂಪೂರ್ಣ ಬೇರೆಯದೇ ಸ್ಥಿತಿಯಲ್ಲಿದೆ ಮತ್ತು ಅದರ ಅರಿವು ಸ್ವತಃ ಚೀನಾಕ್ಕೂ ಇದೆ ಎಂಬುದು ರಹಸ್ಯವೇನಲ್ಲ.
ಅರ್ಧಶತಮಾನದ ಭಾರತದ ಬದಲಾಗ ಸೇನಾ ಮತ್ತು ರಾಜತಾಂತ್ರಿಕ ಪ್ರಾಬಲ್ಯ ಮತ್ತು ಅನುಕೂಲತೆಗಳ ಹೊರತಾಗಿಯೂ ಪ್ರಧಾನಿ ಮೋದಿ ಅವರ ಆಡಳಿತ ಚೀನಾದ ತಿಂಗಳುಗಳ ಪೂರ್ವತಯಾರಿ ಮತ್ತು ಯೋಜಿತ ಆಕ್ರಮಣ ಮತ್ತು ಗಡಿ ಉಲ್ಲಂಘನೆಯ ಪ್ರಯತ್ನವನ್ನು ಮತ್ತು ಅದರ ಹಿಂದಿನ ತಂತ್ರಗಾರಿಕೆಯನ್ನು ಅರಿಯುವಲ್ಲಿ ವಿಫಲವಾಯಿತು ಏಕೆ? ಎಂಬುದು ಈಗ ಕೇಳಿಕೊಳ್ಳಲೇಬೇಕಾದ ಪ್ರಶ್ನೆ.
Also Read: ಚೀನಾ ಸೈನಿಕರು ಭಾರತ ಗಡಿ ಪ್ರವೇಶಿಸಿಲ್ಲವೆಂದು ಸ್ಪಷ್ಟಪಡಿಸಿ- ರಾಹುಲ್ ಗಾಂಧಿ

ಹಾಗೆ ನೋಡಿದರೆ; ಅತ್ತ ಚೀನಾ ಹೀಗೆ ದಶಕಗಳ ಬಳಿಕ ಭಾರತದ ಮೇಲೆ ಹೀಗೆ ಮುಗಿ ಬೀಳಲು ಪ್ರಮುಖ ಕಾರಣ; ಜಮ್ಮು-ಕಾಶ್ಮೀರದ ವಿಷಯದಲ್ಲಿ ಭಾರತ ಸರ್ಕಾರ ಕಳೆದ ವರ್ಷ ತೆಗೆದುಕೊಂಡು ಪ್ರಮುಖ ನಿರ್ಧಾರ. ಜಮ್ಮು- ಕಾಶ್ಮೀರದಿಂದ ಲಡಾಕ್ ಪ್ರತ್ಯೇಕಗೊಳಿಸಿ ಅದನ್ನು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿದ ಗೃಹ ಸಚಿವ ಅಮಿತ್ ಶಾ ಅವರ ಕ್ರಮ ಮತ್ತು ಅದಕ್ಕೂ ಮುನ್ನ ಅವರು ಅಕ್ಸಾಯ್ ಚಿನ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವಿಷಯದಲ್ಲಿ ಮಾಡಿದ ಘೋಷಣೆ ಚೀನಾವನ್ನು ಆತಂಕಕ್ಕೀಡುಮಾಡಿತ್ತು. ಅಕ್ಸಾಯ್ ಚಿನ್ ಪ್ರದೇಶವನ್ನು ಮುಕ್ತಗೊಳಿಸುವ ಮತ್ತು ಪಾಕ್ ಆಕ್ರಮಿತ ಕಾಶ್ಮೀರವನ್ನು ಪುನಃ ದೇಶದ ಸ್ವಾಧೀನಕ್ಕೆ ಪಡೆಯುವ ಕುರಿತ ಆ ಹೇಳಿಕೆಯ ಬೆನ್ನಲ್ಲೇ ಜಮ್ಮು-ಕಾಶ್ಮೀರದಿಂದ ಲಡಾಕ್ ಪ್ರತ್ಯೇಕಗೊಳಿಸಿ ಅದಕ್ಕೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಲಾಯಿತು. ಇದರಿಂದಾಗಿ ಗಡಿ ನಿಯಂತ್ರಣ ರೇಖೆ(ಎಲ್ ಒಸಿ) ಮತ್ತು ವಾಸ್ತವಿಕ ಗಡಿ ರೇಖೆ(ಎಲ್ ಎಸಿ)ಗಳ ವಿಷಯದಲ್ಲಿ ಸದ್ಯದ ವಾಸ್ತವಿಕ ಸ್ಥಿತಿ ತಲೆಕೆಳಗಾಗಲಿದೆ. ಅಕ್ಸಾಯ್ ಚಿನ್ ಪ್ರದೇಶದಲ್ಲಿ ತಾನು ಹೊಂದಿರುವ ಪರೋಕ್ಷ ಅಧಿಕಾರ ಕಳೆದುಕೊಳ್ಳಬೇಕಾಗಬಹುದು ಎಂಬುದು ಚೀನಾ ಆತಂಕಕ್ಕೆ ಕಾರಣ. ಜೊತೆಗೆ ಪಿಒಕೆಯನ್ನು ವಾಪಸು ತನ್ನ ಸ್ವಾಧೀನಕ್ಕೆ ಪಡೆಯುವ ಹೇಳಿಕೆ ಕೂಡ ಆ ಭಾಗದಲ್ಲಿ ತಾನು ನಿರ್ಮಿಸುತ್ತಿರುವ ಪಾಕ್ ಸಂಪರ್ಕದ ಚೀನಾ-ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಯೋಜನೆಗೂ ಅಡ್ಡಿಯಾಗಬಹುದು ಎಂಬುದು ಕೂಚ ಚೀನಾವನ್ನು ಚಿಂತೆಗೀಡುಮಾಡಿತ್ತು.
Also Read: ಗಡಿಯಲ್ಲಿ ಸಂಘರ್ಷ ಏರ್ಪಡುತ್ತಿದ್ದರೂ ಚೀನಾ ಕಂಪೆನಿಗಳಿಗೆ ಮಣೆ ಹಾಕಿದ ಮೋದಿ ಸರಕಾರ..!
ಆ ಚಿಂತೆಯನ್ನು ದೂರಮಾಡಿಕೊಳ್ಳುವ ತಂತ್ರವಾಗಿ ಚೀನಾ ಹೂಡಿದ ಪ್ರತಿತಂತ್ರವೇ ಈಗಿನ ಈ ಗಲ್ವಾನ್ ಕಣಿವೆಯ ಬಿಕ್ಕಟ್ಟು. ಭಾರತ ಮಾತನಾಡಿ ಕೆಟ್ಟಿತು. ಚೀನಾ ಮಾತನಾಡದೆ ಮಾಡಿ ತೋರಿತು ಎಂಬಂತಹ ಸ್ಥಿತಿ ಈಗಿನದ್ದು. ಅಧಿಕಾರದ ಚುಕ್ಕಾಣಿ ಹಿಡಿದಿರುವ ಒಂದು ಪಕ್ಷ ದೇಶದ ಗಡಿ, ಸಮಗ್ರತೆ ಮತ್ತು ಸರಹದ್ದಿನ ರಕ್ಷಣೆಯಂತಹ ವಿಷಯದಲ್ಲಿ ಆಡುವುದಕ್ಕಿಂತ ಮಾಡಿ ತೋರಿಸುವುದು ಮುಖ್ಯ. ಆದರೆ, ಈಗಿನ ಬಿಜೆಪಿ ಸರ್ಕಾರ ಮತ್ತು ಅದರ ಇಬ್ಬರು ಅಧಿನಾಯಕರ ಪಾಲಿಗೆ ದೇಶದ ಗಡಿ, ಸೇನೆ ಮತ್ತು ರಾಷ್ಟ್ರೀಯವಾದ ಎಂಬುದು ಕೇವಲ ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಯ ಆಧಾರಸ್ತಂಭಗಳಾಗಿ ಉಳಿದಿಲ್ಲ. ಅವು ಪ್ರತಿ ಚುನಾವಣೆಯಲ್ಲೂ ಇವಿಎಂ(ಮತಪೆಟ್ಟಿಗೆ) ಪೆಟ್ಟಿಗೆಯ ಮೇಲಿನ ಕಮಲದ ಗುರುತಿನ ಕಡೆ ಮತದಾರನ ಬೆರಳು ಸೆಳೆಯುವ ಮಾಯಾವಿ ತಂತ್ರಗಳಾಗಿಯೂ ಬಳಕೆಯಾಗುತ್ತಿವೆ. ಹಾಗಾಗಿ ಗಡಿ- ಸೇನೆ-ದೇಶಪ್ರೇಮದ ವಿಷಯದಲ್ಲಿ ಮಾಡುವುದಕ್ಕೆ ಮುನ್ನ ಹೇಳುವುದು, ಭಾರೀ ಪ್ರಚಾರ ನೀಡುವುದು, ಆ ಹೇಳಿಕೆಗಳನ್ನು ತಮ್ಮ ಟ್ರೋಲ್ ಪಡೆ ಮೂಲಕ ಟ್ರೆಂಡ್ ಮಾಡಿಸುವುದು, ಮನೆ-ಮನೆಗೆ ತಲುಪಿಸುವುದು ರಾಜಕೀಯ ತಂತ್ರಗಾರಿಕೆಯ ಮುಖ್ಯಭಾಗ. ಹಾಗಾಗಿ ಭದ್ರತೆ, ಸುರಕ್ಷತೆಯಂತಹ ಸೂಕ್ಷ್ಮ ಸಂಗತಿಗಳನ್ನು ರಾಜಕೀಯ ದಾಳವಾಗಿ ಪರಿವರ್ತಿಸಿದ ಪ್ರತಿಫಲ ಇದು ಎಂಬ ವ್ಯಾಖ್ಯಾನಗಳು ಕೂಡ ಕೇಳಿಬರುತ್ತಿವೆ.
ಆದರೆ, ಅದೇ ಹೊತ್ತಿಗೆ ಮತ್ತೊಂದು ಬದಿಯಲ್ಲಿ ಚೀನಾ ತನ್ನ ಹಿತಕ್ಕೆ ಭಾರತದ ಹೆಜ್ಜೆಗಳು ಅಡ್ಡಿಯಾಗಬಹುದು ಎನಿಸಿದ ಕೂಡಲೇ ಆ ಬಗ್ಗೆ ಢಾಣಾಡಂಗುರ ಸಾರುವ ಬದಲಾಗಿ ತೆರೆಮರೆಯಲ್ಲೇ ತಂತ್ರಗಳನ್ನು ಹೆಣೆದು ಗಲ್ವಾನ್ ಸೇರಿದಂತೆ ಗಡಿಯುದಕ್ಕೂ ಐದಾರು ಕಡೆ ಗಡಿ ಉಲ್ಲಂಘಿಸಿ ಸುಮಾರು 60 ಚ.ಕಿಮೀ ಭಾರತದ ಗಡಿಯೊಳಕ್ಕೆ ನುಸುಳಿ ಹೊಸ ಗಡಿ ಗುರುತಿಸಿ ಆ ಭೂಭಾಗವನ್ನು ತನ್ನದೆಂದು ಘೋಷಿಸಿಕೊಂಡಿದೆ. ಗಲ್ವಾನಾದಲ್ಲಂತೂ ವಾಸ್ತವಿಕ ಗಡಿ ರೇಖೆಯನ್ನು ಕೂಡ ಮೀರಿ ಭಾರತದ ಭೂಭಾಗವನ್ನು ವಶಪಡಿಸಿಕೊಂಡಿದೆ. ಹೊಸ ಗಡಿ ಶಿಬಿರಗಳನ್ನು ನಿರ್ಮಾಣ ಮಾಡಿದೆ ಎಂದು ಸ್ವತಃ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರೇ ಅಧಿಕೃತವಾಗಿ ದೃಢಪಡಿಸಿದ್ದಾರೆ. ಆ ಮೂಲಕ ಅಕ್ಸಾಯ್ ಚಿನ್ ಪ್ರದೇಶದ ಮೇಲೆ ತನ್ನ ಸಂಪೂರ್ಣ ಅಧಿಕಾರ ಸ್ಥಾಪಿಸಲು ದಾಳ ಹೂಡಿದೆ. ವಾಸ್ತವವಾಗಿ ಗಲ್ವಾನ್ ದಾಳಿಯ ಉದ್ದೇಶ ಗಲ್ವಾನ್ ಕಣಿವೆಯನ್ನು ಮಾತ್ರ ತನ್ನ ಕೈವಶ ಮಾಡಿಕೊಳ್ಳುವುದಲ್ಲ; ಬದಲಾಗಿ ಅಲ್ಲಿ ಪಟ್ಟು ಬಿಗಿ ಮಾಡಿ, ಅಕ್ಸಾಯ್ ಚಿನ್ ಮತ್ತು ಪಿಒಕೆ ಭಾಗದಲ್ಲಿ ಭಾರತವನ್ನು ಹಿಮ್ಮೆಟ್ಟಿಸುವುದು ಮತ್ತು ಆ ಮೂಲಕ ತನ್ನ ಮಹತ್ವಾಕಾಂಕ್ಷಿ ಚೀನಾ-ಪಾಕಿಸ್ತಾನ ಎಕಾನಮಿಕ್ ಕಾರಿಡಾರ್ ಯೋಜನೆಗೆ ಇರುವ ಆತಂಕ ನಿವಾರಿಸಿಕೊಳ್ಳುವುದು ಚೀನಾದ ತಂತ್ರಗಾರಿಕೆ ಎನ್ನಲಾಗುತ್ತಿದೆ.
Also Read: ಭಾರತ-ಚೀನಾ ಗಡಿ ವಿವಾದ: ಭಾರತದ ನಿಲುವಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ವಿರೋಧ ಪಕ್ಷಗಳು

ಮತ್ತು ಈ ತಂತ್ರಗಾರಿಕೆಯನ್ನು ಅದು ಬಹಳ ಗೌಪ್ಯವಾಗಿಯೇ, ಯಾವುದೇ ವೀರಾವೇಶದ ಹೇಳಿಕೆಗಳಿಲ್ಲದೆ ಮುಗುಮ್ಮಾಗಿಯೇ ರಹಸ್ಯ ಕಾರ್ಯಸೂಚಿಯಂತೆ ಜಾರಿಗೊಳಿಸುತ್ತಿದೆ. ಹಾಗಾಗಿಯೇ ಭಾರತದ ಗಡಿಯೊಳಕ್ಕೆ ನುಗ್ಗಿ ವಿವಾದಿತ ಪ್ರದೇಶವನ್ನಷ್ಟೇ ಅಲ್ಲದೆ, ಇತರೆ ಭೂಭಾಗವನ್ನೂ ಆಕ್ರಮಿಸಿದ್ದರೂ ಚೀನಾ ಸರ್ಕಾರವಾಗಲೀ, ಅದರ ಮಾಧ್ಯಮಗಳಾಗಲೀ ಯಾವುದೇ ಪರಾಕ್ರಮದ ಹೇಳಿಕೆಗಳನ್ನು ನೀಡುತ್ತಿಲ್ಲ. ಜೂನ್ 16ರ ಸೇನಾ ಸಂಘರ್ಷವನ್ನು ಕೂಡ ಅಲ್ಲಿನ ಮಾಧ್ಯಮ ದೇಶಪ್ರೇಮ, ರಾಷ್ಟ್ರೀಯವಾದದ ಅಮಲಿನಲ್ಲಿ ಅತಿರಂಜಿತವಾಗಿ ವರದಿ ಮಾಡಿಲ್ಲ ಎಂಬುದು ಗಮನಾರ್ಹ. ಅದು ಚೀನಾದ ವರಸೆ.
ಹಾಗಾಗಿ, ಭಾರತದ ಸರ್ಕಾರ ಮತ್ತು ಆಡಳಿತ ಪಕ್ಷಗಳು ಗಡಿಯಲ್ಲಿನ ಆತಂಕಕಾರಿ ಬೆಳವಣಿಗಳನ್ನು ಈಗಲೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದಲ್ಲಿ ನೋಡುತ್ತಿದ್ದರೆ, ಮತಬ್ಯಾಂಕ್ ರಾಜಕಾರಣದ ದೃಷ್ಟಿಯಲ್ಲಿಯೇ ಘಟನೆಯನ್ನು ವ್ಯಾಖ್ಯಾನಿಸುವ ಪ್ರಯತ್ನ ಮಾಡುತ್ತಿದ್ದರೆ, ಅತ್ತ ಚೀನಾ ಲಡಾಕ್ ಕಣಿವೆಯಲ್ಲಿ ಸದ್ದಿಲ್ಲದೆ ಒಳನುಗ್ಗಿ ಹೊಸ ಗಡಿಕಲ್ಲು ನೆಟ್ಟು ಕೂತಿದೆ. ಗಲ್ವಾನಾ ಕಣವೆಯ 60 ಚ.ಕಿ.ಮೀ ಭೂಭಾಗ ಭಾರತದ ಕೈತಪ್ಪಿಹೋಗುವ ಅಂಚಿನಲ್ಲಿದೆ!