ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ವಿವರವನ್ನು ಮರೆಮಾಚಿದ ಕಾರಣಕ್ಕೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪಿ ಸಿ ಮೋಹನ್ ವಿರುದ್ದ ವಿಚಾರಣೆ ಮುಂದುವಾರೆಸಲು ರಾಜ್ಯ ಹೈಕೋರ್ಟ್ ನಿರ್ದೇಶನ ನೀಡಿದೆ.
ದೇವನಹಳ್ಳಿ ತಾಲೂಕಿನಲ್ಲಿರು ಶೃಂಗೇರಿ ಶಾರದಾ ಶಿವಗಂಗ ಮಠಕ್ಕೆ ಸಂಬಂಧಿಸಿದ ಸುಮಾರು 4.4 ಎಕರೆ ಭೂಮಿಯನ್ನು ಕಾನೂನು ಬಾಹಿರವಾಗಿ ಅತಿಕ್ರಮಿಸಿ, ಒಟ್ಟು 44 ಎಕರೆಯಷ್ಟು ಕೃಷಿಯೇತರ ಭೂಮಿಯನ್ನು ಅದೇ ಪ್ರದೇಶದಲ್ಲಿ ಪಿ ಸಿ ಮೋಹನ್ ಅವರು ಹೊಂದಿದ್ದರು. ಇದರ ಒಟ್ಟು ಮೊತ್ತ ಸುಮಾರು ರೂ. 33 ಕೋಟಿಗಿಂತಲೂ ಹೆಚ್ಚದೆ ಎಂದು ಅಂದಾಜಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಈ ವಿಚಾರವನ್ನು 2014 ಹಾಗೂ 2019ರ ಲೋಕಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಟಿ ಆರ್ ಆನಂದ್ ಎಂಬವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಪಿಸಿ ಮೋಹನ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಮೋಹನ್ ಅವರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಾನ್ ಮೈಕಲ್ ಕುನ್ಹಾ ಅವರು ಸದ್ಯಕ್ಕೆ ಇರುವಂತಹ ದಾಖಲೆಗಳು ಅರ್ಜಿದಾರರ ವಿರುದ್ದ ವಿಚಾರಣೆ ನಡೆಸಲು ಸಾಕಾಗುತ್ತವೆ ಎಂದು ಹೇಳಿ, ಪಿ ಸಿ ಮೋಹನ್ ಅವರ ಅರ್ಜಿಯನ್ನು ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
2013ರ ಮಾರ್ಚ್ 30ರಂದು ರೂ. 33.66 ಕೋಟಿ ಮೊತ್ತವನ್ನು ಪಾವತಿಸಿ ಪಿ ಸಿ ಮೋಹನ್ ಅವರ ಸಹಭಾಗಿತ್ವದ ಪಿ ಸಿ ರಿಯಾಲ್ಟಿ ಎಂಬ ಕಂಪೆನಿಯು 42.14 ಎಕರೆ ಜಮೀನನ್ನು ಖರೀದಿಸಿತ್ತು. ಈ ಜಮೀನು ಸಹಭಾಗಿತ್ವದಲ್ಲಿ ಖರೀದಿಸಿದ್ದಾದರೂ, ಅದು ಕಂಪೆನಿ ಕಾಯ್ದೆ ಅಡಿಯಲ್ಲಿ ಖರೀದಿಸಲಾಗಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
1959ರಲ್ಲಿ ಮೈಸೂರು ಸಂಸ್ಥಾನದಿಂದ ಒಟ್ಟು 208.2 ಎಕರೆ ಭುಮಿಯನ್ನು ಶೃಂಗೇರಿ ಮಠಕ್ಕೆ ನೀಡಲಾಗಿತ್ತು. ಜೋಡಿ ಲಕ್ಷ್ಮೀಪುರ ಹಳ್ಳಿಯಲ್ಲಿ ಸರ್ವೇ ನಂಬರ್ 2-9, 11-39 ಮತ್ತು 56ರ ಅಡಿಯಲ್ಲಿ ಬರುವ ಜಮೀನು ಇದಾಗಿತ್ತು. 1965ರಲ್ಲಿ ಮುಜರಾಯಿ ಇಲಾಖೆಯು ಈ ಸಂಪೂರ್ಣ ಜಮೀನನ್ನು ವಾಯುಪಡೆ ಅಧಿಕಾರಿಗಳ ಕೃಷಿ ಮತ್ತು ವಸತಿ ಕೋ-ಓಪರೇಟಿವ್ ಸೊಸೈಟಿಗೆ ನೀಡಿತ್ತು, ಎಂದು 2019 ಸೆಪ್ಟೆಂಬರ್‌ನಲ್ಲಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.

ಆದರೆ, 1968ರಲ್ಲಿ ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದ ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಆ ಜಮೀನು ಸಂಪೂರ್ಣವಾಗಿ ಮಠದ ಸುಪರ್ದಿಗೆ ಸೇರಿದ್ದು. ಅದರ ಮಾರಾಟದ ಹಕ್ಕುಗಳು ಕೂಡಾ ಮಠಕ್ಕೇ ಸೇರಿವೆ ಎಂದು ಹೇಳಿದ್ದರು. ಇದರ ಹೊರತಾಗಿಯೂ, ಮುಜರಾಯಿ ಇಲಾಖೆ ವಾಯುಪಡೆ ಅಧಿಕಾರಿಗಳ ಕೃಷಿ ಮತ್ತು ವಸತಿ ಕೋ-ಓಪರೇಟಿವ್ ಸೊಸೈಟಿಗೆ ಈ ಜಮೀನನ್ನು ಮಾರಾಟ ಮಾಡಿತ್ತು.
ಇಲ್ಲಿ ಗಮನಿಸಬೇಕಾದ ಕುತೂಹಲಕಾರಿ ಸಂಗತಿ ಏನೆಂದರೆ, ಇಂತಹ ಒಂದು ಕೋ-ಓಪರೇಟಿವ್ ಸೊಸೈಟಿ ಅಧಿಕೃತವಾಗಿ ನೋಂದಣಿಯಾಗಿಲ್ಲ ಎಂದು ಸಹಕಾರಿ ಇಲಾಖೆ ಸ್ಪಷ್ಟನೆ ನೀಡಿದೆ.
ಈ ಜಮೀನಿನಲ್ಲಿ ಸರ್ವೇ ನಂ. 56ರ ಅಡಿಯಲ್ಲಿ ಬರುವ 4.4 ಎಕರೆ ಭೂಮಿಯನ್ನು ಪಿ ಸಿ ಮೋಹನ್ ಅವರು ಖರೀದಿಸಿದ್ದರು.
ಹಿಂದುತ್ವ ಮತ್ತು ಮಠಗಳ ಹೆಸರಿನಲ್ಲಿ ಪ್ರತೀ ಬಾರಿ ಮತ ಕೇಳುವ ಬಿಜೆಪಿಯ ನಾಯಕರೇ ಮಠದ ಆಸ್ತಿಯನ್ನು ಕಬಳಿಸಲು ಯತ್ನಿಸಿರುವುದು ದುರದೃಷ್ಟಕರ.