ಭಾರತದ ವಾಯುಸೇನೆಗೆ ಐದು ರಫೇಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಿವೆ. ಫ್ರಾನ್ಸ್ ದೇಶದ ಡಸ್ಸಾಲ್ಟ್ ಏವಿಯೇಷನ್ ಸಿದ್ಧಪಡಿಸಿರುವ ಈ ಐದು ಯುದ್ದ ವಿಮಾನಗಳು ಸದ್ಯದ ಪರಿಸ್ಥಿತಿಯಲ್ಲಿ ಭಾರತದ ವಾಯುಪಡೆಗೆ ಒಂದಷ್ಟು ಬಲ ತಂದುಕೊಡಲಿವೆ. ಹಾಗಂತ ಐದು ಯುದ್ಧ ವಿಮಾನಗಳು ಸೇರ್ಪಡೆಯಾದ ತಕ್ಷಣವೇ ಭಾರತಕ್ಕೆ ನೆರೆ ರಾಷ್ಟ್ರಗಳಿಂದ ಯುದ್ಧಭೀತಿ ಇಲ್ಲವೆಂದೇನೂ ಅಲ್ಲ ಅಥವಾ ನೆರೆ ರಾಷ್ಟ್ರಗಳನ್ನು ಮೀರಿಸುವ ಯುದ್ಧ ವಿಮಾನಗಳು ಇವು ಎಂದೇನೂ ಅಲ್ಲ.
ಐದು ಯುದ್ಧ ವಿಮಾನಗಳ ಸೇರ್ಪಡೆಯನ್ನು ಮೋದಿ ಸರ್ಕಾರವು ಪ್ರತಿಬಿಂಬಿಸುತ್ತಿರುವ ರೀತಿ ಮತ್ತು ಅದನ್ನು “ಸರ್ಕಾರಿ ಪರ” ಮಾಧ್ಯಮಗಳು ಬಿತ್ತಿರಿಸುತ್ತಿರುವ ರೀತಿಯನ್ನು ನೋಡಿದರೆ, ಭಾರತ ನೆರೆಯ ಅರ್ಧ ಡಜನ್ ರಾಷ್ಟ್ರಗಳ ವಿರುದ್ಧ ಯುದ್ಧ ಮಾಡಿ ಗೆದ್ದ ಸಂ“ಭ್ರಮೆ”ಯಲ್ಲಿರುವಂತಿದೆ. ಇದು ಮೋದಿ ಸರ್ಕಾರದ ವೈಫಲ್ಯವನ್ನು ಮರೆ ಮಾಚುವ ತಂತ್ರ! ಯುದ್ಧ ವಿಮಾನ ಖರೀದಿಯನ್ನು ಸಂಭ್ರಮಿಸುವುದೇ ತಪ್ಪು.
ಸಂಭ್ರಮಿಸಬೇಕಾದ್ದು ಯಾವಾಗ? “ಮೇಕ್ ಇನ್ ಇಂಡಿಯಾ” ಎಂಬ ಘೋಷಣೆ ಮಾಡಿ ಅದರ ಪ್ರಚಾರಕ್ಕಾಗಿ ಸಾವಿರಾರು ಕೋಟಿ ರುಪಾಯಿ ವೆಚ್ಚ ಮಾಡಿದ ಮೋದಿ ಸರ್ಕಾರವು, ಇದೇ ರಫೇಲ್ ಯುದ್ಧ ವಿಮಾನವನ್ನು ಭಾರತದ ಹೆಮ್ಮೆಯ ಹಿಂದೂಸ್ತಾನ್ ಏರೋನಾಟಿಕ್ಸ್ (ಎಚ್ಎಎಲ್) ನಲ್ಲಿ ಸಿದ್ಧಪಡಿಸಲು ವ್ಯವಸ್ಥೆ ಮಾಡಿದ್ದರೆ ನಿಜಕ್ಕೂ ಸಂಭ್ರಮಿಸಬಹುದಿತ್ತು. ಆದರೆ, ಮೋದಿ ಸರ್ಕಾರ ಭಾರತದ ಹೆಮ್ಮೆ ಎಚ್ಎಎಲ್(HAL) ಅನ್ನು ತೀರಾ ನಿರ್ಲಕ್ಷ್ಯ ಮಾಡಿದೆ. ಬದಲಿಗೆ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್(Reliance Defence) ಕಂಪನಿಗೆ ಅನುಕೂಲ ಮಾಡಿಕೊಟ್ಟಿದೆ.

ಸಂಭ್ರಮಿಸಲು ಯುದ್ಧ ವಿಮಾನಗಳೇನೂ ಪುಕ್ಕಟ್ಟೆ ಬರುತ್ತಿವೆಯೇ? ಖಂಡಿತಾ ಇಲ್ಲ. ಯುಪಿಎ ಸರ್ಕಾರ ಅವಧಿಯಲ್ಲಿ ಯುದ್ಧ ವಿಮಾನಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಿದ್ದಾಗ ಇದ್ದ ಪ್ರತಿ ಯುದ್ಧ ವಿಮಾನಗಳ ಖರೀದಿ ದರವು 540 ಕೋಟಿ ರುಪಾಯಿಗಳಾಗಿತ್ತು. ಆದರೆ, ಮೋದಿ ಸರ್ಕಾರವು 1,670 ಕೋಟಿ ರುಪಾಯಿಗಳಿಗೆ ಖರೀದಿ ಮಾಡಿದೆ. ಇದು ವಿವಿಧ ಮಾಧ್ಯಮಗಳಲ್ಲಿ ಲಭ್ಯವಿರುವ ಅಂಕಿಅಂಶ. ಮೋದಿ ಸರ್ಕಾರ ರಫೇಲ್ ಡೀಲ್ ಅನ್ನು ದೇಶದ ‘ಸುರಕ್ಷತಾ ದೃಷ್ಟಿ’ಯಿಂದ ಗೌಪ್ಯವಾಗಿಟ್ಟಿದೆ.
ವಾಸ್ತವವಾಗಿ ಯುಪಿಎ ಸರ್ಕಾರ ಖರೀದಿಸಬಯಸಿದ್ದ ಯುದ್ಧವಿಮಾನಗಳ ಸಂಖ್ಯೆಯು 126. ನಮ್ಮ ದೇಶದ ಗಡಿಯ ವ್ಯಾಪ್ತಿ ವಿಸ್ತಾರದ ಹಿನ್ನೆಲೆಯಲ್ಲಿ 126 ಯುದ್ಧ ವಿಮಾನಗಳ ಅಗತ್ಯ ಖಂಡಿತಾ ಇದೆ. ಆದರೆ, ಮೋದಿ ಸರ್ಕಾರ ಈ ಯುದ್ಧ ವಿಮಾನಗಳ ಖರೀದಿ ದರವನ್ನು ಮೂರುಮುಕ್ಕಾಲು ಪಟ್ಟು ಹಿಗ್ಗಿಸಿ, ಯುದ್ಧ ವಿಮಾನಗಳ ಸಂಖ್ಯೆಯನ್ನು ನಾಲ್ಕನೇ ಒಂದು ಭಾಗಕ್ಕೆ ಕುಗ್ಗಿಸಿದೆ. ಈ ಲೆಕ್ಕದಲ್ಲಿ ಮೋದಿ ಸರ್ಕಾರಕ್ಕೆ ಯುದ್ಧ ವಿಮಾನ ಖರೀದಿಯಲ್ಲಿನ ಆಸಕ್ತಿಯು ದೇಶದ ಸುರಕ್ಷತೆಗಿಂತಲೂ ಅವುಗಳ ಖರೀದಿ ದರವನ್ನು ಹಿಗ್ಗಿಸುವ ಮತ್ತು ಯುದ್ಧವಿಮಾನಗಳ ಸಂಖ್ಯೆಯನ್ನು ಕುಗ್ಗಿಸುವಲ್ಲೇ ಹೆಚ್ಚು ಇದ್ದಂತಿರುವುದು ಸ್ಪಷ್ಟ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಷ್ಟಕ್ಕೂ ದೇಶದಲ್ಲಿ ಕೊರೊನಾ ಸೋಂಕಿತರ 15 ಲಕ್ಷ ದಾಟಿ, ವಿಶ್ವದಲ್ಲೇ ಅತ್ಯಂತ ಕಳಪೆ ನಿರ್ವಹಣೆ ಮಾಡುತ್ತಿರುವ ದೇಶವೆಂದು ಜಾಗತಿಕವಾಗಿ ಅಣಕಕ್ಕೀಡಾಗಿರುವ ಈ ಸಂದರ್ಭದಲ್ಲಿ, ದೇಶದ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಮೋದಿ ಸರ್ಕಾರದ ಉದ್ದೇಶ. ಹೀಗಾಗಿ ಕೇವಲ ಐದು ಯುದ್ಧ ವಿಮಾನಗಳ ಖರೀದಿಯನ್ನು ವಿಜಯೋನ್ಮಾದದಿಂದ ಸಂಭ್ರಮಿಸಲಾಗುತ್ತಿದೆ. ಇದು ಹೇಗಿದೆ ಎಂದರೆ, ರೇಸ್ ಗಾಗಿ ಕಾರು ಖರೀದಿಸಿದ ವ್ಯಕ್ತಿಯೊಬ್ಬ ರೇಸ್ ಗಿಂತ ಮುಂಚಿತವಾಗಿಯೇ ರೇಸ್ ಗೆದ್ದಂತೆ ಸಂಭ್ರಮಿಸಿದಂತಿದೆ.
ಈ ಹಿಂದೆ ವಾಜಪೇಯಿ ಸರ್ಕಾರದ ಹೊತ್ತಿನಲ್ಲಿ ಯಾವುದಕ್ಕೂ ಪಾಕಿಸ್ತಾನದ ಜತೆ ಸಮೀಕರಿಸಲಾಗುತ್ತಿತ್ತು. ಆದರೆ, ಯುಪಿಎ ಸರ್ಕಾರದ ಎರಡು ಅವಧಿಯ ಒಂದು ದಶಕದ ಆಡಳಿತದಲ್ಲಿ ಭಾರತ ಸರ್ವಾಂಗೀಣವಾಗಿ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಭಾರತವನ್ನು ಅಮೆರಿಕ, ರಷ್ಯಾ, ಚೀನಾ, ಜಪಾನ್, ಜರ್ಮನಿ, ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳ ಜತೆಗೆ ಹೋಲಿಸಲಾಗುತ್ತಿದೆ. ಆದರೆ, ಮೋದಿ ಸರ್ಕಾರ ಮತ್ತು ಸರ್ಕಾರದ ಪರವಾಗಿರುವ ಮಾಧ್ಯಮಗಳು ರಫೇಲ್ ಯುದ್ಧ ವಿಮಾನವನ್ನು ಪಾಕಿಸ್ತಾನದಲ್ಲಿರುವ ಜೆಎಫ್-17 ಜತೆಗೆ ಹೋಲಿಸಲಾಗುತ್ತಿದೆ. ಜೆಎಫ್-17 (ಪಿಎಸಿ ಜೆಎಫ್-17 ಥಂಡರ್) ಚೀನಾದ ಚೀನಾದ ಚೆಂಗ್ಡು ಏರ್ಕ್ರಾಫ್ಟ್ ಕಾರ್ಪೋರೆಷನ್ ಪಾಕಿಸ್ತಾನದ ಪಾಕಿಸ್ತಾನ್ ಏರೋನಾಟಿಕಲ್ ಕಾಂಪ್ಲೆಕ್ಸ್ (ಪಿಎಸಿ) ನಲ್ಲಿ ಸಿದ್ಧಪಡಿಸಿದ ಯುದ್ಧ ವಿಮಾನ.
ವಾಸ್ತವವಾಗಿ ಭಾರತ ಮುಂದೆಂದಾದರೂ ಯುದ್ಧ ಮಾಡಬೇಕಾಗಬಹುದಾದ ರಾಷ್ಟ್ರವೆಂದರೆ ಅದು ಚೀನಾ. ಪಾಕಿಸ್ತಾನದ ಜತೆ ಹೋಲಿಕೆ ಮಾಡಿಕೊಳ್ಳುವುದು, ಪಾಕಿಸ್ತಾನದ ಯುದ್ಧ ವಿಮಾನಗಳ ಜತೆ ಹೋಲಿಸಿ, ನಮ್ಮ ಯುದ್ಧ ವಿಮಾನಗಳು ಮೇಲ್ಮೇಯನ್ನು ಮೆರೆಯುವುದು ಸಹ ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನ. ಮೋದಿ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ಅನಿವಾರ್ಯ ಬಂದಾಗಲೆಲ್ಲ ಈ ಕೆಲಸ ಮಾಡುತ್ತಲೇ ಇದೆ.
ರಫೇಲ್ ಯುದ್ಧ ವಿಮಾನಕ್ಕೆ ಸರಿಯಾದ ಹೋಲಿಕೆಯೆಂದರೆ ಚೀನಾದ ಬಳಿ ಇರುವ ಸುಕೋಯ್-35. ಅತ್ಯಾಧುನಿಕ ತಂತ್ರಜ್ಞಾನದ ಮಲ್ಟಿರೋಲ್ ಮಲ್ಟಿಪರ್ಪಸ್ ಫೈಟರ್ ಜೆಟ್. ರಷ್ಯಾ ನಿರ್ಮಿತ ಯುದ್ಧವಿಮಾನ. ಇದು 4++ ಜನರೇಷನ್ ತಂತ್ರಜ್ಞಾನಹೊಂದಿದೆ. ಭಾರತದ ರಫೇಲ್ 4+ ಜನರೇಷನ್. 2015ರಿಂದಲೇ ಚೀನಾವು ಸುಖೋಯ್-35 ಯುದ್ಧ ವಿಮಾನಗಳನ್ನು ಸಂಗ್ರಹಿಸತೊಡಗಿದೆ. ಆರಂಭದಲ್ಲಿ 4 ಮತ್ತು 2017ರಲ್ಲಿ ಹತ್ತು ಮತ್ತು ಈ ವರ್ಷದಲ್ಲಿ ಹತ್ತು ಸುಖೋಯ್-35 ಯುದ್ಧವಿಮಾನಗಳನ್ನು ಪಡೆದುಕೊಂಡಿದೆ. ಆದರ ಬಳಿ ಈಗ 24 ಯುದ್ಧ ವಿಮಾನಗಳಿವೆ. ಮತ್ತಷ್ಟು ಯುದ್ಧ ವಿಮಾನಗಳು ಬರುವ ದಿನಗಳಲ್ಲಿ ಸೇರ್ಪಡೆಯಾಗಲಿವೆ. ಆ ಲೆಕ್ಕದಲ್ಲಿ ಭಾರತದಲ್ಲಿ ಸದ್ಯಕ್ಕೆ ಇರುವ ರಫೇಲ್ ಸಂಖ್ಯೆ ಕೇವಲ 5. ಅದು ಈಗಷ್ಟೇ ಸೇನೆಗೆ ಸೇರ್ಪಡೆಯಾಗಿವೆ. ಈ ಹಂತದಲ್ಲಿ ಅವುಗಳನ್ನು ಭಾರತೀಯ ಸೈನಿಕರು ಪಳಗಿಸಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ.
ಡಿಫೆನ್ಸ್ ಅಪ್ಡೇಟ್ ಡಾಟ್ಇನ್ ಮಾಹಿತಿ ಪ್ರಕಾರ, ಸುಕೋಯ್- 35 ಯುದ್ಧ ವಿಮಾನದ ಸಾರ್ಮರ್ಥ್ಯಕ್ಕೆ ಹೋಲಿಸಿದರೆ, ಭಾರತದ ರಫೇಲ್ ಸರಿಸಾಟಿಯಾಗಿ ನಿಲ್ಲಬಲ್ಲದು. ವಾಯು ಪ್ರಾಬಲ್ಯ, ಪ್ರತಿದಾಳಿ, ವೈಮಾನಿಕ ವಿಚಕ್ಷಣ, ಭೂಸಂಪರ್ಕ ಸಮನ್ವಯತೆ, ಆಳಸಮುದ್ರ ದಾಳಿ, ಯುದ್ಧಹಡಗುಗಳ ಮೇಲಿನ ದಾಳಿ, ಪರಮಾಣು ಯುದ್ಧೋಪಕರಣ ಪತ್ತೆ ಹಚ್ಚುವುದು ಮತ್ತು ನಾಶಪಡಿಸುವುದು ಸೇರಿದಂತೆ, ಶತ್ರು ಯುದ್ಧ ವಿಮಾನಗಳ ಕಣ್ತಪ್ಪಿಸಿ ದಾಳಿ ಮಾಡಿ ವಾಪಾಸಾಗುವ ಚಾಕಚಕ್ಯತೆ ಈ ಎಲ್ಲದರಲ್ಲೂ ಶ್ರೇಷ್ಠತೆ ಮೆರೆಯುವ ರಫೆಲ್ ‘ಒಮ್ನಿರೋಲ್’ ಫೈಟರ್ ಜೆಟ್.
ತಾಂತ್ರಿಕ ಪರಿಣತಿಯಲ್ಲಿ ಉಭಯ ಯುದ್ಧ ವಿಮಾನಗಳು ಶ್ರೇಷ್ಠತೆಗೆ ಹೆಸರಾದವೇ. ಶಬ್ಧವೇದಿ ವೇಗದ ಹಾರಾಟ, ಕ್ಷಿಪ್ರ ಗುರಿ, ತ್ವರಿತ ದಾಳಿ, ವೈರಿ ಶೋಧ, ಪ್ರತಿದಾಳಿ, ಸುರಕ್ಷತಾ ನೆಲಸ್ಪರ್ಶ- ಈ ಆರಂಶಗಳು ಯುದ್ಧ ವಿಮಾನಗಳ ಶ್ರೇಷ್ಠತೆಯನ್ನು ನಿರ್ಧರಿಸುತ್ತವೆ. ಸುಕೋಯ್-35 ಮತ್ತು ರಫೇಲ್ ಈ ಎರಡೂ ಯುದ್ಧ ವಿಮಾನಗಳೂ ಈ ಆರಂಶಗಳಲ್ಲೂ ಶ್ರೇಷ್ಠತೆ ಮೆರೆಯುತ್ತವೆ.

ಸೂಕ್ಷ ತಾಂತ್ರಿಕ ಅಂಶಗಳಲ್ಲಿ ಒಂದೊಂದು ಅಂಶಗಳಲ್ಲಿ ಒಂದೊಂದು ಅತಿಶ್ರೇಷ್ಠತೆ ಮೆರೆಯುತ್ತವೆ. ಉದಾಹರಣೆಗೆ ರಫೆಲ್ ನಲ್ಲಿ ಅವಳಡಿಸಿರುವ ಆರ್ಬಿಇ2-ಎಎ ಆಕ್ಟಿವ್ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರೆ (ಎಇಎಸ್ಎ) ರಾಡಾರ್ 200 ಕಿ.ಮೀ. ವ್ಯಾಪ್ತಿಯವರೆಗೂ ಶತ್ರು ದೇಶದ ಯುದ್ಧವಿಮಾನಗಳನ್ನು ಪತ್ತೆ ಹಚ್ಚುವ ಸಾಮಾರ್ಥ್ಯಹೊಂದಿದೆ. ಸ್ಪೆಕ್ರ್ಟ್ರಾ ವ್ಯವಸ್ಥೆಯು 200 ಕಿಮೀ ದೂರದಲ್ಲಿರುವ ಶತ್ರುವಿನ ಮೇಲೆ ಕರಾರುವಕ್ಕಾಗಿ ದಾಳಿ ಮಾಡಲಿದೆ. ಇದು ಬಹುದೂರದ ಶತ್ರುದಾಳಿಯ ಸಾಧ್ಯತೆಯ ನಿಖರ ಮುನ್ಸೂಚನೆ ನೀಡುತ್ತದೆ. ಎಲ್ಲಕ್ಕೂ ಮಿಗಿಲಾಗಿ ಹಾರುತ್ತಲೇ ಗೌಪ್ಯವಾಗಿ ಜಿಗಿಯುವ, ಶತ್ರುದೇಶದ ರಡಾರ್ ಗಳಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಹೊಂದಿದೆ. ಎಂಬಿಡಿಎ ಬಿವಿಆರ್ಎಎಎಂ ಉಲ್ಕಾವ್ಯವಸ್ಥೆಯನ್ನು ಹೊಂದಿರುವ ರಫೇಲ್ 100 ಕಿಮೀ ವ್ಯಾಪ್ತಿಯಲ್ಲಿನ ತನ್ನ ಶತ್ರುವಿಗೆ ಗೊತ್ತಾಗುವ ಮುನ್ನವೇ ಕ್ಷಣಮಾತ್ರದಲ್ಲಿ ಮಿಂಚಿನಂತೆ ದಾಳಿ ಮಾಡುವ ಸಾಮರ್ಥ್ಯಹೊಂದಿದೆ. ಕಾಸ್ಮೊಮೋಲ್ಸ್ಕ್-ಆನ್-ಅಮುರ್ ಏರ್ಕ್ರಾಫ್ಟ್ ಪ್ರೊಡಕ್ಷನ್ ಅಸೋಸಿಯೇಷನ್ (ಕೆಎನ್ಎಎಪಿಒ) ಸಿದ್ಧಪಡಿಸಿರುವ ಸುಕೋಯ್ 35 ಸ್ಯಾಟರ್ನ್ ಎಎಲ್-41ಎಫ್1ಎಸ್ ಟರ್ಬನ್ ಎಂಜಿನ್ ಹೊಂದಿದೆ. ಇದು ಈಗಾಗಲೇ ವಾಯುಯುದ್ಧದಲ್ಲಿ ಪಾರಮ್ಯ ಮೆರೆದಿರುವ ಸುಕೋಯ್-57, ಸುಕೋಯ್-27 ಸುಕೋಯ್-30 ಯುದ್ಧವಿಮಾನಗಳಲ್ಲಿ ಬಳಕೆಯಾಗಿದ್ದು, ಮತ್ತಷ್ಟು ತಂತ್ರಜ್ಞಾನವನ್ನು ಉತ್ತಮಪಡಿಸಲಾಗಿದೆ. ಪಿಫ್ತ್ ಜನರೇಷನ್ ಟೆಕ್ನಾಲಜಿ ಬಳಕೆ ಮಾಡಿಕೊಂಡಿರುವ ಸುಕೋಯ್ -35 ಏಕಕಾಲಕ್ಕೆ ದೂರವ್ಯಾಪ್ತಿಯ ಶತ್ರುವಿಮಾನಗಳನ್ನು ಪತ್ತೆ ಹಚ್ಚಿದಾಳಿ ಮಾಡುವ ಚಾಕಚಕ್ಯತೆ ಹೊಂದಿದೆ. ರಫೇಲ್ ಗಿಂತಲೂ ಹೆಚ್ಚು ದೊಡ್ಡದಾದ, ಹೆಚ್ಚು ಉದ್ದದ ರೆಕ್ಕೆಗಳನ್ನು ಹೊಂದಿರುವ ಸುಕೋಯ್-35 ಸಹಜವಾಗಿಯೇ ರಫೇಲ್ ಗಿಂತಲೂ ಹೆಚ್ಚಿನ ಸಾಮರ್ಥ್ಯದ ಮಿಸೈಲ್ ಗಳನ್ನು ಹೊತ್ತೊಯ್ಯುವ, ಹಾರಿಸುವ ಶಕ್ತಿಹೊಂದಿದೆ. ಬ್ರಹ್ಮೋಸ್ ಮತ್ತು ಕೆಎಚ್-14 ಮಾಸ್ಕಿಟ್ ನಂತಹ ದೊಡ್ಡದಾದ ಆಂಟಿಷಿಪ್ ಮಿಸೈಲ್ ಗಳನ್ನು ಹಾರಿಸಬಲ್ಲದು. ಆದರೆ, ಈ ಭಾರಿ ಗಾತ್ರವೇ ಸುಕೋಯ್-35ಗೆ ಹಿನ್ನಡೆಯಾಗಿದೆ. ನೆಲದಾಳಿ, ಭೂಸಂಪರ್ಕ ಮತ್ತಿತರ ಅಂಶಗಳಲ್ಲಿ ರಫೇಲ್ ದೇ ಮೇಲುಗೈ. ಸುಕೋಯ್-35 ಗೆ ಹೋಲಿಸಿದರೆ ಗೌಪ್ಯದಾಳಿ ಮಾಡುವ ಹೆಚ್ಚಿನ ಸಾಮರ್ಥ್ಯಹೊಂದಿರುವ ರಫೇಲ್, ಸುಕೋಯ್ ಗಿಂತಲೂ ದುಬಾರಿ. ನಿರ್ವಹಣೆ ವಿಷಯಕ್ಕೆ ಬಂದಾಗ, ರಫೇಲ್ ನಿರ್ವಹಣಾ ವೆಚ್ಚ ಸ್ವಲ್ಪ ಕಡಿಮೆಯೇ. ಒಂದು ಗಂಟೆಯ ಹಾರಾಟಕ್ಕೆ ರಫೇಲ್ ಗೆ ತಗಲುವ ವೆಚ್ಚವು 21 ಲಕ್ಷ ರುಪಾಯಿಗಳಾದರೆ, ಸುಕೋಯ್-35 ಹಾರಾಟ ವೆಚ್ಚವು 28 ಲಕ್ಷ ರುಪಾಯಿಗಳು.
ಈ ವಾಸ್ತವಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ಈಗಾಗಲೇ 24 ಯುದ್ಧ ವಿಮಾನಗಳನ್ನು ಹೊಂದಿರುವ ಮುಂದಿನ ವರ್ಷ ಅಷ್ಟೇ ಪ್ರಮಾಣದಲ್ಲಿ ಹೊಸ ಯುದ್ಧ ವಿಮಾನ ಸೇರ್ಪಡೆಗೊಳಿಸಲಿರುವ ಚೀನಾದ ಸಾಮರ್ಥ್ಯವು ಹೆಚ್ಚಿದೆ. ಅಷ್ಟಕ್ಕೂ ಮೋದಿ ಸರ್ಕಾರವು 126 ಯುದ್ಧ ವಿಮಾನಗಳನ್ನೇನು ಖರೀದಿಸುತ್ತಿಲ್ಲ. ಖರೀದಿಸುತ್ತಿರುವುದು ಕೇವಲ 36 ಯುದ್ಧ ವಿಮಾನಗಳು. ಸುಕೋಯ್-35 ಮತ್ತು ರಫೇಲ್ ಸಮಾನ ಸಾಮರ್ಥ್ಯದ ಯುದ್ಧ ವಿಮಾನಗಳ ಎಂದು ಪರಿಗಣಿಸಿದರೂ, ಸಂಖ್ಯೆಗಳ ಲೆಕ್ಕದಲ್ಲಿ ಚೀನಾ ದಾಪುಗಾಲು ಹಾಕಿದೆ. ಮೋದಿ ಸರ್ಕಾರ ಉಳಿದ 31 ರಫೇಲ್ ಯುದ್ಧ ವಿಮಾನ ಖರೀದಿಸುವ ಹೊತ್ತಿಗೆ ಚೀನಾದ ಸಂಗ್ರಹದಲ್ಲಿ ಸುಯೋಯ್ 35 ಸಂಖ್ಯೆ ದುಪ್ಪಟ್ಟಾಗಿರುತ್ತದೆ.
ಅದೇನೇ ಇರಲಿ, ಚೀನಾ ದೇಶವು ಭಾರತದ ಗಡಿಯೊಳಗೆ ನುಸುಳಿ, ನಿರ್ಮಾಣ ಕಾರ್ಯದಲ್ಲಿ ತೊಡಗಿ ಘೋಷಿತ ಗಡಿ ಒಪ್ಪಂದಗಳು ಹಾಗೂ ಶಿಷ್ಟಾಚಾರಗಳನ್ನು ಮುರಿದು ನಯವಂಚನೆ ಮಾಡಿದೆ. ರಾಜತಾಂತ್ರಿಕರು, ಸೇನಾಧಿಕಾರಿಗಳ ಹಲವು ಸುತ್ತುಗಳ ಸಮಾಲೋಚನೆಗಳ ನಂತರ ಚೀನಾವು ಭಾರತದ ಗಡಿಯಿಂದ ದೂರ ಸರಿಯಲು ಒಪ್ಪಿದೆ ಮತ್ತು ಹಿಂದಡಿ ಇಟ್ಟಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಭಾರತದೊಳಗೆ ಯಾರೂ ನುಸುಳಿಲ್ಲ ಎಂದು ಪ್ರೈಮ್ ಟೈಮ್ ನಲ್ಲಿ ಸುಳ್ಳು ಹೇಳಿ ಮುಜುಗರಕ್ಕೀಡಾಗಿರಿಂದ ಹೋಗಿದ್ದ ಮಾನವು, ಈಗ ರಫೇಲ್ ಯುದ್ಧ ವಿಮಾನಗಳ ಮೂಲಕ ವಾಪಾಸಾಗುತ್ತಿದೆಯೇ? ಇದು ಬಿಲಿಯನ್ ಡಾಲರ್ ಪ್ರಶ್ನೆ!?